ಈಗ ಕರ್ನಾಟಕದ ‘..ನಾಥ’ ಯಾರಾಗುತ್ತಾರೆ? ಹೆಚ್ಚು ಶಾಸಕರ ಜೊತೆ ಕಾಂಗ್ರೆಸ್ ಪಕ್ಷವನ್ನು ಒಡೆದು ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ರಚಿಸಬಲ್ಲ ಮೀರ್ ಸಾಧಿಕ್ ಯಾರಾಗಬಹುದು? ಎನ್ನುವುದನ್ನು ಕಂಡು ಹಿಡಿಯುವುದರಲ್ಲಿ ಬಿಜೆಪಿ ನಿರತವಾಗಿದೆ. ಮಹಾರಾಷ್ಟ್ರದ ಅನಿಷ್ಟ ‘.. ನಾಥ’ ಪರಂಪರೆಯನ್ನು ಕರ್ನಾಟಕದಲ್ಲಿ ಮರುಕಳಿಸಲು ಭಾರೀ ಶಡ್ಯಂತ್ರವನ್ನು ರೂಪಿಸಲಾಗುತ್ತಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿರುವ ಬಹುಮತದ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಪತನಗೊಳಿಸಲು ಬಿಜೆಪಿ ಪ್ಲಾನ್ ಸಿದ್ಧವಾಗಿದೆಯಾ? ಮಹಾರಾಷ್ಟ್ರದ ಮಹಾಘಟಬಂಧನ ಸರಕಾರವನ್ನು ಬೀಳಿಸಿದ ಮಾದರಿ ಕರ್ನಾಟಕದಲ್ಲೂ ವರ್ಕೌಟ್ ಆಗುತ್ತಾ? ಹಾಗೊಂದು ಸುದ್ದಿ ಬಿಜೆಪಿ ಪಾಳಯದಲ್ಲೀಗ ಸಂಚಲನವನ್ನು ಸೃಷ್ಟಿಸಿದೆ.
‘ಕರ್ನಾಟಕದ ಸರ್ಕಾರವನ್ನು ಪತನ ಮಾಡಲು ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ಮಹಾರಾಷ್ಟ್ರದ ಸತಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಹೇಳಿದ್ದಾರೆ.
“ಇತ್ತೀಚೆಗೆ ಕರ್ನಾಟಕದ ಸಭೆಯೊಂದರಲ್ಲಿ ಭಾಗವಹಿಸಿದ್ದಾಗ ಕರ್ನಾಟಕದಲ್ಲೂ ‘ನಾಥ’ ಆಪರೇಶನ್ ಮಾಡೋದಿದೆ ಅಂತಾ ಹೇಳಿದ್ರು. ಮಹಾರಾಷ್ಟ್ರದ ಅಘಾಡಿ ಸರಕಾರವನ್ನು ಪತನ ಮಾಡಿದ ನನ್ನ ಅನುಭವ ಬಹಳ ಮುಖ್ಯ ಎಂದರು. ಕರ್ನಾಟಕದ ಸರಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೀತಿದೆ” ಎಂದು ಶಿಂಧೆಯವರು ತಾವು ಮಾಡಿದ ಘನಂಧಾರಿ ಕೆಲಸವನ್ನು ಹೊಗಳಿ ಕೊಂಡರು. …ನಾಥನ ಈ ಮಾತು ಕೇಳಿ ಕರ್ನಾಟಕದಲ್ಲಿ ಮುಳುಗುತ್ತಿರುವ ಬಿಜೆಪಿಗರಿಗೆ ಶಿಂಧೆ ಆಸರೆ ಸಿಕ್ಕಂತಾಯಿತು.
ಹೆಚ್ಚು ಬಹುಮತ ಪಡೆದ ಪಕ್ಷಕ್ಕೆ ಆಳುವ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿ ಕೊಟ್ಟಿದೆ. ಆದರೆ ವಾಮಮಾರ್ಗಗಳಿಂದ ಜನರು ಆಯ್ಕೆ ಮಾಡಿದ ಸರಕಾರಗಳನ್ನೇ ಪತನ ಮಾಡಿ ಅನೈತಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಅಧಿಕಾರವನ್ನು ಹಿಡಿಯುವ ಶಡ್ಯಂತ್ರವನ್ನು ಬಿಜೆಪಿ ಪಕ್ಷ ಮಾಡುತ್ತಲೇ ಬಂದಿದೆ. ಅದಕ್ಕೆ ‘ಆಪರೇಶನ್ ಕಮಲ’ ಎಂದು ನಿರ್ಲಜ್ಜವಾಗಿ ಕರೆದುಕೊಳ್ಳುತ್ತದೆ.
ಕಳೆದ ಸಲ ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ಸಮ್ಮಿಶ್ರ ಸರಕಾರ ರಚಿಸಿದ್ದವು. ಆದರೆ ಆಸೆ ಆಮಿಷ ಒತ್ತಡಗಳ ಮೂಲಕ ಈ ಎರಡೂ ಪಕ್ಷಗಳ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಆಪರೇಶನ್ ಕಮಲ ಮಾಡಿದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೇ ಪ್ರಜಾತಂತ್ರದ ಹತ್ಯೆ ಮಾಡಿದಂತಾಗಿತ್ತು. 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕುತಂತ್ರಿ ಬಿಜೆಪಿ ಪಕ್ಷಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಪಾಠವನ್ನು ಕಲಿಸಿದರು. ಆಮಿಷಕ್ಕೊಳಗಾಗಿ ಪಕ್ಷಾಂತರ ಮಾಡಿದ ಬಹುತೇಕ ಶಾಸಕರನ್ನು ಸೋಲಿಸಿದರು. ಅನೈತಿಕ ಆಪರೇಶನ್ ಮಾಡಿದ್ದ ಬಿಜೆಪಿ ಪಕ್ಷವನ್ನು ಹೀನಾಯವಾಗಿ ಹಿಮ್ಮೆಟ್ಟಿಸಿದ್ದರು. ಸರಳ ಬಹುಮತ ಬಂದರೆ ಮತ್ತೆ ಈ ಕಮಲಪಡೆ ಆಪರೇಶನ್ ಮಾಡಿ ಜನಾದೇಶವನ್ನು ಧಿಕ್ಕರಿಸಿ ಸರಕಾರ ಪತನ ಮಾಡಬಹುದು ಎಂದುಕೊಂಡ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ಣ ಬಹುಮತವನ್ನು ದೊರಕಿಸಿಕೊಟ್ಟು 136 ಶಾಸಕರನ್ನು ಆಯ್ಕೆ ಮಾಡಿದರು. ಬಿಜೆಪಿಯನ್ನು ಕೇವಲ 66 ಸೀಟಿಗೆ ಇಳಿಸಿ ವಿರೋಧ ಪಕ್ಷಕ್ಕೆ ತಳ್ಳಿದರು. ಅವಕಾಶವಾದಿ ಜೆಡಿಎಸ್ ಪಕ್ಷಕ್ಕೆ ಕೇವಲ 19 ಸೀಟ್ ಸಿಕ್ಕು ಹೀನಾಯವಾದ ಸೋಲು ದಕ್ಕಿತು.
ಇಷ್ಟಾದರೂ.. ಕಾಂಗ್ರೆಸ್ ಪಕ್ಷ ಜನಾದೇಶ ಪಡೆದು ಅತೀ ಹೆಚ್ಚು ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ಈ ಸರಕಾರ ಮೂರು ತಿಂಗಳಿಗೆ ಬೀಳುತ್ತದೆ, ಆರು ತಿಂಗಳಿಗೆ ಮನೆಗೆ ಹೋಗುತ್ತದೆ, ಒಂಬತ್ತು ತಿಂಗಳಿಗೆ ಒಳಜಗಳದಿಂದಾಗಿ ಪತನ ಗೊಳ್ಳುತ್ತದೆ ಎಂದು ಹೇಳಿಕೆ ಕೊಡುತ್ತಲೇ ಬಂದಿದ್ದಾರೆ. ಅದೆಷ್ಟೇ ಆಮಿಷ ಒಡ್ಡಿದರೂ, ಬೇಕಾದಷ್ಟು ಒತ್ತಡ ಹೇರಿದರೂ ಬಹುಮತದ ಸರಕಾರ ಬೀಳಿಸುವುದು ಸಾಧ್ಯವಿಲ್ಲವೆಂಬುದು ಗೊತ್ತಿದ್ದರೂ ಈ ರೀತಿಯ ಪ್ರಜಾತಂತ್ರ ವಿರೋಧಿ ಮಾತನ್ನು ಬಿಜೆಪಿ ನಾಯಕರು ಸಮಯ ಸಿಕ್ಕಾಗಲೆಲ್ಲಾ ಆಡುತ್ತಾ ಆಳುವ ಪಕ್ಷವನ್ನು ಅತಂತ್ರಗೊಳಿಸುವ ಆತಂಕವನ್ನು ಹುಟ್ಟಿಹಾಕುತ್ತಲೇ ಬಂದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗುತ್ತಾ ಬಂದರೂ ಈ ವರೆಗೂ ಬಿಜೆಪಿ ಜೆಡಿಎಸ್ ನಾಯಕರ ಕನಸು ನನಸಾಗುವ ಯಾವುದೇ ಲಕ್ಷಣಗಳಿಲ್ಲ. ಅದಕ್ಕಾಗಿ ಈಗ ಮಹಾರಾಷ್ಟ್ರದ ಮಹಾ ಮೀರ್ ಸಾಧಿಕ್ ಏಕನಾಥ ಶಿಂಧೆಯ ಮೊರೆ ಹೋಗಿದ್ದಾರೆ. ಸರಕಾರ ಪತನಗೊಳಿಸುವಲ್ಲಿರುವ ಅವರ ಅನುಭವವನ್ನು ಬಳಸಿಕೊಂಡು ಮಹಾರಾಷ್ಟ್ರ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿ ಕರ್ನಾಟಕದ ಸರಕಾರವನ್ನು ಪತನಗೊಳಿಸಿ ಅಧಿಕಾರ ಪಡೆಯಲು ಕಮಲ ಪಡೆ ಉತ್ಸುಕವಾಗಿದೆ.. ನಾಥ ಕುತಂತ್ರದ ಮೊರೆಹೋಗಿದೆ.
ಭಾರೀ ಬಹುಮತ ಇರುವ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವುದು ಅಸಾಧ್ಯದ ಕೆಲಸ. ಹಿಂದೆ ಮಾಡಿದಂತೆ ಕೆಲವರ ರಾಜೀನಾಮೆ ಕೊಡಿಸಿ ಸರಕಾರ ಬೀಳಿಸುವುದೂ ಅಸಂಭವ. ಅದಕ್ಕಾಗಿ ಬಿಜೆಪಿಗೆ ಈಗ ಇರುವುದು ‘ನಾಥ’ ಮಾದರಿ. ಅಂದರೆ ಏಕನಾಥ ಶಿಂಧೆಯ ಪಕ್ಷ ಒಡೆಯುವ ಮಾದರಿ. ಈಗ ಕರ್ನಾಟಕದ ‘..ನಾಥ’ ಯಾರಾಗುತ್ತಾರೆ? ಹೆಚ್ಚು ಶಾಸಕರ ಜೊತೆ ಕಾಂಗ್ರೆಸ್ ಪಕ್ಷವನ್ನು ಒಡೆದು ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ರಚಿಸಬಲ್ಲ ಮೀರ್ ಸಾಧಿಕ್ ಯಾರಾಗಬಹುದು? ಎನ್ನುವುದನ್ನು ಕಂಡು ಹಿಡಿಯುವುದರಲ್ಲಿ ಬಿಜೆಪಿ ನಿರತವಾಗಿದೆ. ಮಹಾರಾಷ್ಟ್ರದ ಅನಿಷ್ಟ ‘.. ನಾಥ’ ಪರಂಪರೆಯನ್ನು ಕರ್ನಾಟಕದಲ್ಲಿ ಮರುಕಳಿಸಲು ಭಾರೀ ಶಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಮತ್ತೆ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತದೆ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಏಕನಾಥ ಶಿಂಧೆಯನ್ನು ಹುಟ್ಟುಹಾಕಿ ಹಾಲಿ ಸರಕಾರವನ್ನು ಪತನಗೊಳಿಸಿ ಅನೈತಿಕ ಮಾರ್ಗದಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳುವ ಗುರಿ ಬಿಜೆಪಿ ನಾಯಕರದ್ದಾಗಿದೆ. ಆ ಗುರಿಯ ಸಾಕಾರಕ್ಕಾಗಿ ಮಹಾರಾಷ್ಟ್ರದ ಮಹಾದ್ರೋಹಿ ಶಿಂಧೆಯವರ ಪಕ್ಷದ್ರೋಹದ ದಾರಿ ಬಿಜೆಪಿಗೆ ಮಾದರಿಯಾಗಿದೆ. ‘ನಾಥ’ ನ ಅನುಭವವನ್ನು ಎರವಲು ಪಡೆಯಲು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ- ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ
ಪ್ರಜಾಸತ್ತಾತ್ಮಕವಾಗಿ ಜನಮತದ ಮೂಲಕ ಆಯ್ಕೆಯಾದ ಯಾವುದೇ ಸರಕಾರವನ್ನು ಕುತಂತ್ರಗಳಿಂದ ಪತನಗೊಳಿಸುವ ಪ್ರಯತ್ನವೇ ಅನೈತಿಕವಾದದ್ದು. ಹೀಗೆ ಅಕ್ರಮ ಮಾರ್ಗದಲ್ಲಿ ಅಧಿಕಾರ ಹಿಡಿದವರಿಗೆ ತಾತ್ಕಾಲಿಕವಾಗಿ ಗೆಲುವು ಸಿಕ್ಕಬಹುದಾದರೂ ಪ್ರಜ್ಞಾವಂತ ಜನತೆ ಪಾಠ ಕಲಿಸದೇ ಇರಲಾರರು. ಕರ್ನಾಟಕದಲ್ಲಿ ಆಪರೇಶನ್ ಕಮಲದ ಮೂಲಕ ಸಮ್ಮಿಶ್ರ ಸರಕಾರವನ್ನು ಬೀಳಿಸಿ ಬಿಜೆಪಿ ಅಧಿಕಾರ ಗಳಿಸಿತು. ಆದರೆ 104 ಶಾಸಕರ ಬಲವಿದ್ದ ಬಿಜೆಪಿ 2023 ರ ಚುನಾವಣೆಯಲ್ಲಿ 66 ಕ್ಕೆ ಇಳಿಕೆಯಾಯ್ತು. 80 ಶಾಸಕರಿದ್ದ ಕಾಂಗ್ರೆಸ್ 135 ಕ್ಕೆ ಏರಿಕೆ ಆಗಿ ಸರಕಾರ ರಚಿಸಿತು. ಅಂದರೆ ಜನಾದೇಶದ ವಿರುದ್ಧ ಶಡ್ಯಂತ್ರ ಮಾಡಿದವರಿಗೆ ಜನರೇ ಪಾಠ ಕಲಿಸಿ ಹೀನಾಯವಾಗಿ ಸೋಲಿಸುತ್ತಾರೆ ಎಂಬುದು ಈ ಆಪರೇಶನ್ ಎಕ್ಸಪರ್ಟ್ಸ್ ಗಳಿಗೆ ತಿಳಿಯಬೇಕಿದೆ. ಈ ಮಾತಿಗೆ ಕರ್ನಾಟಕದಲ್ಲಿ ಆಪರೇಶನ್ ಕಲೆ ಪ್ರದರ್ಶಿಸಿದ ಬಿಜೆಪಿ ಸೋಲೇ ಮಾದರಿಯಾಗಿದೆ.
ವಿರೋಧ ಪಕ್ಷದ ಕೆಲಸ ಜನಾದೇಶ ಪಡೆದ ಸರಕಾರವನ್ನು ವಾಮ ಮಾರ್ಗಗಳಿಂದ ಪತನಗೊಳಿಸುವುದಲ್ಲ. ಆಳುವ ಸರಕಾರ ದಾರಿ ತಪ್ಪಿದರೆ, ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೆ, ಅಂತವುಗಳ ವಿರುದ್ಧ ದ್ವನಿ ಎತ್ತಿ ಜನತೆಯ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ರಾಜ್ಯ ಅಭಿವೃದ್ದಿ ಪಥದಲ್ಲಿ ಸಾಗುವಂತೆ ಮಾಡುವುದು ಪ್ರತಿಪಕ್ಷದ ನಾಯಕರುಗಳ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವವರತ್ತ ಜನತೆಯ ಚಿತ್ತ ಒಲಿಯುತ್ತದೆ. ಅದು ಬಿಟ್ಟು ಅಧಿಕಾರದ ಹಪಾಹಪಿಯಿಂದ ಆಪರೇಶನ್ ನಂತಹ ಅಕ್ರಮ ಅನೈತಿಕ ಮಾರ್ಗಗಳ ಮೂಲಕ ಬಹುಮತದ ಸರಕಾರವನ್ನು ಪತನಗೊಳಿಸಿ ಅಧಿಕಾರ ಗಳಿಸುವ ಯಾವುದೇ ಪ್ರಯತ್ನಗಳು ಜನರ ವಿರೋಧವನ್ನು ಎದುರಿಸಬೇಕಾಗುತ್ತದೆ. ಜನಾದೇಶವನ್ನು ಪತನಗೊಳಿಸುವ ಪ್ರಯತ್ನದ ಪ್ರತಿಫಲವನ್ನೂ ಪ್ರಜಾತಂತ್ರ ವಿರೋಧಿ ಪಾತಕಿಗಳು ಅನುಭವಿಸಲೇ ಬೇಕಾಗುತ್ತದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇ಼ಷಕರು
ಇದನ್ನೂ ಓದಿ- ಹುಚ್ಚು ದೊರೆಯ ಹತಾಶ ಮುಖಗಳು