“ಒಲವೇ ಜೀವನ ಲೆಕ್ಕಾಚಾರ”

Most read

ಬದುಕಿನ ಸಹಜ ದಾರಿಯಾಗಿದ್ದ ಈ ದಾಂಪತ್ಯವನ್ನು ಸಂಕೀರ್ಣಗೊಳಿಸಿದ್ದು ಮಹಾನಗರಗಳೋ? ಆಧುನಿಕತೆಯೋ? ನಾವು-ನೀವುಗಳೋ? ಉತ್ತರಗಳ ಬದಲಾಗಿ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯೇ ಸದ್ಯ ನನ್ನ ಕಣ್ಣ ಮುಂದಿದೆ! ಪ್ರಸಾದ್‌ ನಾಯ್ಕ್‌, ದೆಹಲಿ.

ಹೀಗೊಂದು ಮಡಿವಂತರು ಓದಲೇಬಾರದ ಒಂದು ವಿಚಿತ್ರ ಕತೆ.

ಅಂದು ತಂದೆ ಮತ್ತು ಮಗ ಜೊತೆಯಾಗಿ ಖಾಸಗಿ ಪತ್ತೇದಾರನೊಬ್ಬನ ಬಳಿ ಹೋಗಿದ್ದರು. “ನೋಡಿ ಸಾರ್, ಇವನು ನನ್ನ ದೊಡ್ಡ ಮಗ. ನನಗೆ ಇನ್ನೊಬ್ಬ ಮಗನಿದ್ದಾನೆ. ಇವನಿಗಿಂತ ಚಿಕ್ಕವನು. ಮದುವೆಯ ವಯಸ್ಸಾಗಿದೆ ಅವನಿಗೆ. ಆದರೆ ಈ ಬಗ್ಗೆ ಮಾತಾಡಿದರೆ ಆಸಕ್ತಿಯನ್ನೇ ತೋರಿಸುವುದಿಲ್ಲ. ಕೆಲವೊಮ್ಮೆ ಮದುವೆ ಬೇಡವೇ ಬೇಡ ಅಂತಾನೆ. ಅವನ ಜೊತೆ ನೀವೊಮ್ಮೆ ವಿವರವಾಗಿ ಮಾತಾಡಬೇಕು. ಅವನಿಗೆ ಮದುವೆ ಯಾಕೆ ಬೇಡ ಎಂಬುದನ್ನು ನೀವು ಪತ್ತೆ ಹಚ್ಚಬೇಕು. ದುಡ್ಡಿನ ಬಗ್ಗೆ ಚಿಂತೆಯಿಲ್ಲ. ಆದರೆ ಕೆಲಸವಾಗಬೇಕು. ಇದಿಷ್ಟೇ ನಿಮ್ಮ ಬಳಿ ನನ್ನ ಆಗ್ರಹ”, ಎಂದ ಆ ವೃದ್ಧ ತಂದೆ.

ತಂದೆ ಮತ್ತು ಮಗ ಸ್ಥಿತಿವಂತ ಕುಟುಂಬದಿಂದ ಬಂದವರಾದ್ದರಿಂದ ಅನಗತ್ಯ ಚೌಕಾಸಿ, ಅಧಿಕಪ್ರಸಂಗದ ಮಾತುಗಳಿರಲಿಲ್ಲ. ಹೀಗಾಗಿ ಪತ್ತೇದಾರ ತಡಮಾಡದೆ ಒಪ್ಪಿಕೊಂಡ. ಇಂತಿಂಥ ದಿನದಂದು ಸಮಯವನ್ನು ನಿಗದಿಪಡಿಸಿ ಮಗನನ್ನು ನನ್ನ ಬಳಿ ಕಳಿಸಿ ಅಂದ. ಹೀಗೆ ಪೂರ್ವನಿರ್ಧಾರಿತ ದಿನದಂದು ಮೀಟಿಂಗ್ ಕೂಡ ಆಯಿತು. ಪತ್ತೇದಾರ ಮತ್ತು ವೃದ್ಧನ ಚಿಕ್ಕ ಮಗ ಮಾತ್ರ. ಖಾಸಗಿ ಮಾತುಕತೆ! ಹೀಗೆ ಒಂದೆರಡು ಬಾರಿ ಮಾತಾಡಿದ ನಂತರ ಇದು ಮಾತಾಡಿ ಬಗೆಹರಿಯುವ ಕೆಲಸವಲ್ಲ ಅಂತ ಪತ್ತೇದಾರನಿಗೆ ಖಾತ್ರಿಯಾಯಿತು. ಹೀಗಾಗಿ ತನ್ನ ತಂಡವನ್ನು ಸಿದ್ಧಗೊಳಿಸಿ ಪತ್ತೇದಾರಿಕೆಗೆ ಹಚ್ಚಿದ. ಕೆಲ ವಾರಗಳು ಹೀಗೆ ಕಳೆದು ಹೋದವು. ತಂಡ ಹಾಕಿದ್ದ ಶ್ರಮಕ್ಕೆ ಪ್ರತಿಫಲವೆಂಬಂತೆ ಕೆಲ ಹೊಸ ವಿಚಾರಗಳೂ ಈ ಗುಪ್ತತನಿಖೆಯಲ್ಲಿ ಬೆಳಕಿಗೆ ಬಂದವು.

ಈ ಯುವಕ ತನ್ನದೇ ನಗರದಲ್ಲಿ ಮಹಿಳೆಯೊಬ್ಬಳನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ತನ್ನ ವಯಸ್ಸಿಗಿಂತ ಸ್ವಲ್ಪ ಹಿರಿಯಳಾಗಿದ್ದಳು ಆಕೆ. ವಾರಕ್ಕೆ ಎರಡು-ಮೂರು ಬಾರಿ ಅಗ್ಗದ ಹೋಟೇಲು ರೂಮುಗಳಿಗೆ ಹೋಗಿ, ನಾಲ್ಕೈದು ತಾಸು ಜೊತೆಯಾಗಿ ಕಳೆದು, ನಂತರ ಆಗಂತುಕರಂತೆ ತಮ್ಮ ದಾರಿ ಹಿಡಿದು ಹೋಗುತ್ತಿದ್ದರು. ಸ್ವಲ್ಪ ಹೆಚ್ಚಿನ ಸಮಯವಿದ್ದರೆ ಕಾಫಿ ಶಾಪುಗಳಲ್ಲೋ, ಶಾಪಿಂಗ್ ಮಾಲುಗಳಲ್ಲೋ ಒಂದರ್ಧ ತಾಸು ಅಡ್ಡಾಡುತ್ತಿದ್ದರು. ಆದರೆ ಬಂದಷ್ಟೇ ವೇಗದಲ್ಲಿ ಮರೆಯಾಗುತ್ತಿದ್ದರು ಕೂಡ. ಅಂತೂ ಈ ಯುವಕನಿಗೆ ಮದುವೆ ಯಾಕೆ ಬೇಡ ಎಂಬ ಪ್ರಶ್ನೆಗೆ ಪತ್ತೇದಾರನಿಗೆ ಉತ್ತರ ಸಿಕ್ಕಂತಾಯಿತು. ಹೀಗೆ ಸಾಕ್ಷ್ಯಗಳನ್ನೆಲ್ಲ ಒಟ್ಟುಗೂಡಿಸಿ, ತನಿಖೆ ಮುಗಿಸಿದ ಖುಷಿಯಲ್ಲಿ ವೃದ್ಧನಿಗೆ ಕರೆ ಮಾಡಿ, ನಾಳೆಯೇ ಆಫೀಸಿಗೆ ಬಂದು ಭೇಟಿಯಾಗಿ ಎಂದು ಆಹ್ವಾನಿಸಿದ. ಇದೆಂಥಾ ನೀರಸ ಕೇಸು, ಸುಮ್ಮನೆ ದುಡ್ಡು ಚೆಲ್ಲಿಬಿಟ್ಟರು… ಕೊಂಚ ಮನಸ್ಸು ಮತ್ತು ಧೈರ್ಯ ಮಾಡಿದರೆ ನನ್ನ ಕೆಲಸವನ್ನು ಯುವಕನ ಮನೆಯವರೇ ಮಾಡಬಹುದಿತ್ತಲ್ಲ ಎಂಬ ಯೋಚನೆಯೊಂದು ಪತ್ತೇದಾರನಿಗೆ ಅಂದು ಬಂದುಹೋಗಿದ್ದೂ ಸತ್ಯ.

ಚಿತ್ರ ಕೃಪೆ : ಗೂಗಲ್

ಮರುದಿನ ವೃದ್ಧ ಬಂದು ಪತ್ತೇದಾರನೆದುರು ಕುಳಿತುಕೊಂಡ. ಪತ್ತೇದಾರ ತಾನು ಕಲೆಹಾಕಿದ ಸಾಕ್ಷ್ಯಗಳನ್ನೆಲ್ಲ ತೋರಿಸಿ ಇಲ್ಲಿದೆ ನೋಡಿ ಅಸಲಿ ಕತೆ ಎಂದು ಹುರುಪಿನಲ್ಲಿ ಹೇಳಿದ. ಆದರೆ ವೃದ್ಧನ ಮುಖದಲ್ಲಿ ಹೆಚ್ಚಿನ ಅಚ್ಚರಿಯೇನೂ ಕಾಣದಿದ್ದಾಗ ಪತ್ತೇದಾರ ದಂಗಾಗಿಬಿಟ್ಟ. “ಈ ಮಹಿಳೆ ಗೊತ್ತಾ ನಿಮಗೆ?”, ಎಂದು ಕೇಳಿದ. “ಹೌದು, ಇವಳು ನನ್ನ ಸೊಸೆ. ಕಳೆದ ಬಾರಿ ನನ್ನ ದೊಡ್ಡ ಮಗ ಬಂದಿದ್ದನಲ್ಲ. ಅವನ ಹೆಂಡತಿ”, ಅಂದ. ವೃದ್ಧನ ಮಾತನ್ನು ಕೇಳಿದ ಪತ್ತೇದಾರನಿಗೆ ಈ ಬಾರಿ ಏನು ಹೇಳುವುದೆಂದೇ ತಿಳಿಯಲಿಲ್ಲ. ಅಂದರೆ ಪ್ರಕರಣವು ತಾನಂದುಕೊಂಡಷ್ಟು ಸರಳವಾಗಿಲ್ಲ ಎಂಬುದು ಆತನಿಗೀಗ ಮನದಟ್ಟಾಗಿತ್ತು.

“ಈ ನನ್ನ ದೊಡ್ಡ ಮಗ ಇದ್ದಾನಲ್ಲ. ಅವನು ಭಾರೀ ಖದೀಮ. ತಮ್ಮನಿಗೆ ಮದುವೆಯಾಗಿ, ಮಕ್ಕಳಾಗಿ, ಸಂಸಾರ ದೊಡ್ಡದಾದರೆ ಆಸ್ತಿಯಲ್ಲಿ ಅರ್ಧ ಪಾಲು ಅತ್ತ ಹೋಗುತ್ತದೆ ಅನ್ನುವುದು ಅವನ ದೊಡ್ಡ ಚಿಂತೆ. ಹೀಗಾಗಿ ತನ್ನ ಹೆಂಡತಿಯನ್ನೇ ತಮ್ಮನೆಡೆಗೆ ಛೂಬಿಟ್ಟಿದ್ದಾನೆ. ಅವನ ಚಿಕ್ಕಪುಟ್ಟ ಅಗತ್ಯಗಳನ್ನೆಲ್ಲ ನೋಡಿಕೊಂಡು, ಅವನು ಮದುವೆ-ಸಂಸಾರಗಳತ್ತ ವಾಲದಂತೆ ಶಿಸ್ತುಬದ್ಧವಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾನೆ. ಸಹೋದರನ ದಿಕ್ಕು ತಪ್ಪಿಸುತ್ತಿದ್ದಾನೆ. ನನ್ನ ಸೊಸೆಯೂ ಕೂಡ ಇದರಲ್ಲಿ ಪಾಲುದಾರಳು. ಆದರೆ ನನ್ನ ಚಿಕ್ಕ ಮಗನಿಗೆ ಇದ್ಯಾವುದರ ಅರಿವೂ ಇಲ್ಲ. ಇದೆಲ್ಲ ನನಗೆ ಗೊತ್ತಿರಲಿಲ್ಲ ಅಂತಲ್ಲ. ಇವೆಲ್ಲದರ ಬಗ್ಗೆ ಒಂದು ಅಂದಾಜಂತೂ ನನಗಿತ್ತು. ಆದರೆ ನಿಮ್ಮಿಂದ ಸಂಪೂರ್ಣ ಖಾತ್ರಿಯಾಯಿತು ನೋಡಿ. ತುಂಬಾ ಥ್ಯಾಂಕ್ಸ್ ನಿಮಗೆ”, ಎಂದರಂತೆ ಆ ವೃದ್ಧ.

ಅಂದಹಾಗೆ ಇದೊಂದು ಸತ್ಯ ಕತೆ. ಈ ಕತೆಯನ್ನು ಸಂದರ್ಶನವೊಂದರಲ್ಲಿ ಹೇಳಿದವರು ದಿಲ್ಲಿಯ ಖ್ಯಾತ ಪತ್ತೇದಾರರಲ್ಲೊಬ್ಬರಾದ ಬಲದೇವ್ ಪುರಿ.

****

“ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಖುಷಿಯಾಗಿರುತ್ತಾರೆ. ಆದರೆ ಮಹಾನಗರಗಳಿಗೆ ಬಂದಾಕ್ಷಣ ಬದುಕು ಜಟಿಲವಾಗಿಬಿಡುತ್ತದೆ”, ಎಂದು ತಮ್ಮ ಉಪನ್ಯಾಸವೊಂದರಲ್ಲಿ ಹೇಳುತ್ತಿದ್ದರು ವಿಕಾಸ್ ದಿವ್ಯಕೀರ್ತಿ. ಮಹಾನಗರಗಳ ಮೇಲೆ ಇಷ್ಟು ದೊಡ್ಡ ಅಪವಾದವನ್ನು ಏಕಾಏಕಿ ಹೊರಿಸುವುದು ನನ್ನಿಂದಂತೂ ಕಷ್ಟ. ಏಕೆಂದರೆ ಮಹಾನಗರದ ಪ್ರವಾಹದಲ್ಲೇ ನಾನು ನನ್ನ ಬದುಕಿನ ಒಂದೂವರೆ ದಶಕವನ್ನು ಕಳೆದವನು. ಹೀಗಾಗಿ ಬದುಕಿನ ಯಶಸ್ಸನ್ನೆಲ್ಲ ತನ್ನ ಮುಕುಟದ ಕಿರೀಟಕ್ಕೆ ಗರಿಯಂತೆ ಸಿಕ್ಕಿಸಿಕೊಳ್ಳುವ ನನಗೆ, ಸೋಲಿನ ಗಲೀಜನ್ನೆಲ್ಲ ಮಹಾನಗರದ ಮುಖಕ್ಕೆ ಒರೆಸುವುದು ಬಹಳ ಕಷ್ಟದ ಕೆಲಸ. ದಾಂಪತ್ಯನಿಷ್ಠೆಯನ್ನು ಸೇರಿದಂತೆ ಬಹುತೇಕ ಎಲ್ಲಾ ವಿಚಾರಗಳಲ್ಲೂ ಇದು ಸತ್ಯ.

ಮಹಾನಗರಗಳಲ್ಲಿ ಜೀವಂತವಾಗಿರುವ ಮಾನವೀಯ ಸಂಬಂಧಗಳ, ಅದರಲ್ಲೂ ದಾಂಪತ್ಯದಂತಹ ಗಾಢ ಸಂಬಂಧಗಳ ಬಗ್ಗೆ ನನಗಂತೂ ಎಲ್ಲಿಲ್ಲದ ಕುತೂಹಲ ಮತ್ತು ಅಚ್ಚರಿ. ಮದುವೆಯಾಗಿ ಮಧುಚಂದ್ರಕ್ಕೆ ತೆರಳಿದ ನಂತರ ನವವಧುವೊಬ್ಬಳು ಕೆಲ ಕೊಲೆಗಾರರನ್ನು ಸಂಪರ್ಕಿಸಿ, ತನ್ನ ಪತಿಯನ್ನೇ ಪ್ರಪಾತಕ್ಕೆ ತಳ್ಳಿದ ಪ್ರಕರಣವೊಂದು ಇತ್ತೀಚೆಗೆ ಬಹಳ ಸದ್ದು ಮಾಡಿತ್ತು. ಇದರ ಒಂದೆರಡು ತಿಂಗಳ ಹಿಂದಷ್ಟೇ ಯುವತಿಯೊಬ್ಬಳು ತನ್ನ ಪತಿಯನ್ನು ಕೊಂದು, ಅವನ ಅಂಗಾಂಗಗಳನ್ನು ತುಂಡರಿಸಿ, ಸಿಮೆಂಟ್ ತುಂಬಿದ್ದ ಬ್ಯಾರೆಲ್ ಒಂದರಲ್ಲಿ ಅಡಗಿಸಿಟ್ಟು ಅಮಾಯಕಳಂತೆ ನಟಿಸಿದ್ದಳು. ಹಾಗೆ ನೋಡಿದರೆ ಇಂತಹ ಅಪರಾಧಗಳಿಗೆ ಲಿಂಗಭೇದಗಳಿಲ್ಲ. ಇವರೆಲ್ಲ ಹೇಳಿಕೊಳ್ಳಲು ವಿದ್ಯಾವಂತರು. ಆಧುನಿಕ ಮನೋಭಾವದ ಹೊಸ ಪೀಳಿಗೆಯವರು. ಅಸಲಿಗೆ ಅಪರಾಧದ ಹಿನ್ನೆಲೆಯುಳ್ಳವರೂ ಅಲ್ಲ. ಆದರೂ ಬದುಕಿನ ಕೆಲ ಚಿಕ್ಕಪುಟ್ಟ ಅಡಚಣೆಗಳು, ಸೆಳೆತಗಳು ಇವರಿಗೆ ಬಹಳ ಜಟಿಲ ಸಂಗತಿಗಳಾಗಿಬಿಡುತ್ತವೆ. ಎಂಥಾ ಕೊಲೆಗಾರರನ್ನೂ, ರೋಚಕ ಕತೆಗಳನ್ನು ಹೆಣೆಯುವ ಕತೆಗಾರರನ್ನೂ ನಾಚಿಸುವಷ್ಟು ಈ ಮಂದಿ ಮುಂದುವರಿಯುತ್ತಾರೆ.

ಅಷ್ಟಕ್ಕೂ ದಾಂಪತ್ಯ ಅನ್ನುವುದು ಬಹುಷಃ ಈ ಮಟ್ಟಿಗೆ ಯಾವತ್ತೂ ಸಂಕೀರ್ಣವಾಗಿರಲಿಲ್ಲ. ಮಹಾನಗರಗಳೆಂಬುದು ಇಲ್ಲಿ ನೆಪ ಮಾತ್ರ. ಮಹಾನಗರಗಳಿಗೆ ಬಂದ ಮಾತ್ರಕ್ಕೆ ದಾಂಪತ್ಯದ ವ್ಯಾಕರಣವೇನೂ ಬದಲಾಗುವುದಿಲ್ಲ. ದಾಂಪತ್ಯದ ವಿಚಾರಕ್ಕೆ ಬಂದರೆ ಹಳ್ಳಿಗಳಲ್ಲಿರುವಷ್ಟೇ ಸುಖಿ-ದುಃಖಿಗಳು ಮಹಾನಗರಗಳಲ್ಲೂ ಇದ್ದಾರೆ. ಅದೇನು ಅಸಮಾಧಾನಗಳಿದ್ದರೂ, ಇಷ್ಟವಿದ್ದೋ ಇಲ್ಲದೆಯೋ ಸಂಸಾರದ ಬಂಡಿಗಳು ತಮ್ಮ ಪಾಡಿಗೆ ಮುಂದೆ ಸಾಗುತ್ತಲಿರುತ್ತವೆ. ಇರುವ ಒಂದೇ ವ್ಯತ್ಯಾಸವೆಂದರೆ ಮಹಾನಗರಗಳ ನಿವಾಸಿಗಳಿಗೆ ತಮ್ಮ ದಾಂಪತ್ಯದೊಂದಿಗೆ ಹೊಸ ಪ್ರಯೋಗಗಳನ್ನು ಮಾಡಲು ಲಭ್ಯವಿರುವ ಅವಕಾಶ ಮತ್ತು ಆಯ್ಕೆಗಳು. ಅದು ಸರಿಯೋ ತಪ್ಪೋ ಎಂಬುದು ನಂತರದ ಮಾತು. ಆದರೆ ಇವುಗಳು ಅಸ್ತಿತ್ವದಲ್ಲಿವೆ ಎಂಬುದಂತೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಹಾಗಾದರೆ ದಾಂಪತ್ಯವೆನ್ನುವುದು ಬಹಳ ಸರಳವಾದ ಸಂಗತಿಯೇ? ಇದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಇನ್ನು ಮಹಾನಗರಗಳಲ್ಲಿರುವ ನಮ್ಮಂತಹ ಹೊಸ ಪೀಳಿಗೆಯ ಮಂದಿ ಇದನ್ನು ಉದ್ದೇಶಪೂರ್ವಕವಾಗಿ ಸಂಕೀರ್ಣಗೊಳಿಸಿದ್ದೇವೆಯೇ? ಇದ್ದರೂ ಇರಬಹುದು. ಜಗತ್ತಿನ ತರಹೇವಾರಿ ಕ್ಷೇತ್ರಗಳಲ್ಲಿ ಬಂದುಹೋಗುವ ಹಲವಾರು ಟ್ರೆಂಡುಗಳಂತೆ, ಅಸಂಖ್ಯ ಟ್ರೆಂಡುಗಳು ದಾಂಪತ್ಯ ಅಥವಾ ಈ ಛಾಯೆಯುಳ್ಳ ಅನ್ಯ ರೊಮ್ಯಾಂಟಿಕ್ ಸಂಬಂಧಗಳಲ್ಲೂ ಧಾರಾಳವಾಗಿವೆ. ದಿನಗಳೆದಂತೆ ಮಹಾನಗರಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕೆಲವು ಟ್ರೆಂಡುಗಳು ಇಲ್ಲಿವೆ ನೋಡಿ.

ಬ್ರೆಡ್ ಕ್ರಂಬಿಂಗ್ (Breadcrumbing): ಫ್ಲರ್ಟ್ ಮಾಡುವ, ಲೈಂಗಿಕ ಆಸಕ್ತಿಯನ್ನು ತೋರಿಸುವ ಸಂದೇಶಗಳನ್ನು ಕಳಿಸುತ್ತಿರುವುದು. ಆದರೆ ನಿಜಾರ್ಥದಲ್ಲಿ ಸಂಬಂಧಗಳ ಯಾವ ಜಂಜಾಟ-ಜವಾಬ್ದಾರಿಗಳ ಕೂಪದಲ್ಲೂ ಬೀಳದಿರುವಂತೆ ಸುರಕ್ಷಿತ ದೂರವನ್ನು ಕಾದುಕೊಳ್ಳುವ ಎಚ್ಚರಿಕೆಯ ನಡೆ.

ಘೋಸ್ಟಿಂಗ್ (Ghosting): ದಿನರಾತ್ರಿಗಳ ಪರಿವೆಯಿಲ್ಲದೆ ಕರೆ-ಮೆಸೇಜುಗಳೆಂದು ಸದಾ ವ್ಯಸ್ತವಾಗಿದ್ದುಕೊಂಡು, ತನ್ನ ಉದ್ದೇಶ ಸಫಲವಾದ ನಂತರ ಏಕಾಏಕಿ ಮರೆಯಾಗಿಬಿಡುವುದು. 

ಲವ್ ಬಾಂಬಿಂಗ್ (Love Bombing): ಆರಂಭದ ಹಂತದಲ್ಲಿ ವ್ಯಕ್ತಿಯೊಬ್ಬನಿಗೆ ತೀರಾ ಅಚ್ಚರಿ ಅಥವಾ ಸುಸ್ತಾಗುವಷ್ಟು ಪ್ರೀತಿಯ ಭರಪೂರ ಮಳೆಯನ್ನೇ ಸುರಿಸುವುದು. ಅಸಲಿ ಉದ್ದೇಶಗಳಿಗೆ ತಕ್ಕಂತೆ ಮುಂದಿನದ್ದು ಮುಂದೆ ನೋಡೋಣ ಎಂಬ ಉಡಾಫೆಯ ಭಾವ.

ಬೆಂಚಿಂಗ್ (Benching): ತಾನೊಂದು ಸಂಬಂಧದಲ್ಲಿರುವ ಹೊತ್ತಿನಲ್ಲೇ ಒಂದು ಅಥವಾ ಹೆಚ್ಚಿನ ಸಂಬಂಧಗಳನ್ನು ಬ್ಯಾಕ್-ಅಪ್ ನಂತೆ ಇಟ್ಟುಕೊಳ್ಳುವುದು. ಪ್ರೀತಿಯು ಒಂದು ಪಕ್ಷ ಇಲ್ಲಿ ದಕ್ಕದಿದ್ದರೆ, ಬೇರೊಂದು ಖಾತೆ ತನಗಾಗಿ ಹೇಗೋ ಸುರಕ್ಷಿತವಾಗಿದೆ ಎಂಬ “ಒಲವೇ ಜೀವನ ಲೆಕ್ಕಾಚಾರ”.    

ಆರ್ಬಿಟಿಂಗ್ (Orbiting): ವ್ಯಕ್ತಿಯೊಬ್ಬನೊಂದಿಗೆ ನೈಜಜೀವನದಲ್ಲಿ ಸಂಪರ್ಕವಿಟ್ಟುಕೊಳ್ಳದಿದ್ದರೂ ಸೋಷಿಯಲ್ ಮೀಡಿಯಾ ಅಥವಾ ಇತರ ಆಪ್ ಗಳ ಮೂಲಕ ಆಗಾಗ ಒಡನಾಟದಲ್ಲಿದ್ದು, ಸಂಬಂಧವು ನಿಜಾರ್ಥದಲ್ಲಿ ಅಸ್ತಿತ್ವದಲ್ಲಿರುವಂತೆ ಭ್ರಮಾಲೋಕವೊಂದನ್ನು ಸೃಷ್ಟಿಸುವುದು.

ಕಫಿಂಗ್ ಸೀಸನ್ (Cuffing Season): ಇದು ಚಳಿಗಾಲಕ್ಕೆ ಮಾತ್ರ ಸೀಮಿತವಾಗಿರುವ ರೊಮ್ಯಾಂಟಿಕ್ ಸಂಬಂಧ. ಎಲ್ಲೆಡೆ ಇರುವಂತೆ ಇಲ್ಲೂ ಕಡ್ಡಾಯವಾಗಿ “ಸೀಸನಲ್” ಷರತ್ತುಗಳು ಅನ್ವಯ. 

ಸಿಚುವೇಷನ್ ಶಿಪ್ (Situationship): ಆಯಾ ಸಂದರ್ಭಕ್ಕೆ ತಕ್ಕ ಹಾಗೆ ರೊಮ್ಯಾಂಟಿಕ್ ಸಂಬಂಧಗಳಲ್ಲಿ ಮಿಂದೇಳುವುದು. ಆ ಕ್ಷಣಕ್ಕೇನು ಬೇಕೋ, ಅಷ್ಟಕ್ಕೆ ಮಾತ್ರ ಕೊಡುಕೊಳ್ಳುವಿಕೆಗಳು ಸೀಮಿತ.

ನ್ಯಾನೋಶಿಪ್ (Nanoship): ಅತ್ಯಂತ ಚಿಕ್ಕ ಅವಧಿಯ ರೊಮ್ಯಾಂಟಿಕ್ ಸಂಬಂಧಗಳು. ಹೆಚ್ಚೆಂದರೆ ಒಂದು ವಾರ-ಹತ್ತು ದಿನಗಳ ವ್ಯಾಲಿಡಿಟಿ.

ಸಬ್ ಮರೀನಿಂಗ್ (Submarining): ಥೇಟು ಸಬ್-ಮರೀನುಗಳಂತೆ ಹಠಾತ್ತನೆ ಕಾಣಿಸಿಕೊಳ್ಳುವುದು ಮತ್ತು ಅಷ್ಟೇ ವೇಗದಲ್ಲಿ ಮರೆಯಾಗುವುದು. ಮತ್ತದೇ ಕಣ್ಣುಮುಚ್ಚಾಲೆಯ ಅಭ್ಯಾಸವನ್ನು ಪುನರಾವರ್ತಿಸಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುವುದು.

ಸಾಫ್ಟ್ ಲಾಂಚ್ (Soft launch): ತಾನೊಂದು ಹೊಸ ಸಂಬಂಧದಲ್ಲಿದ್ದೇನೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಒಂದಿಷ್ಟು ಮಾತ್ರ ಹೇಳಿಕೊಳ್ಳುವುದು. ಬಿಚ್ಚಿಟ್ಟಿದ್ದು ಕಮ್ಮಿ, ಬಚ್ಚಿಟ್ಟಿದ್ದು ಜಾಸ್ತಿ ಎಂಬಂತೆ ನಿಗೂಢತೆಯ ಲೇಪದೊಂದಿಗೆ ತೋರಿಸಿಕೊಳ್ಳುವುದು.

ಪಾಕೆಟಿಂಗ್ (Pocketing): ತಾನೊಂದು ಗಾಢವಾದ ಸಂಬಂಧದಲ್ಲಿದ್ದರೂ ಆ ವ್ಯಕ್ತಿಯನ್ನು ತನ್ನ ಕುಟುಂಬದಿಂದ ಅಥವಾ ಆಪ್ತರ ವಲಯದಿಂದ ಉದ್ದೇಶಪೂರ್ವಕವಾಗಿ ರಹಸ್ಯವಾಗಿಡುವುದು.

ಕ್ಯಾಟ್ ಫಿಷಿಂಗ್ (Catfishing): ಬೇರೊಬ್ಬರ ಗುರುತನ್ನು ಬಳಸಿಕೊಂಡು ಆನ್ಲೈನ್ ವೇದಿಕೆಗಳಲ್ಲಿ ದುರುದ್ದೇಶಗಳೊಂದಿಗೆ ಪ್ರೇಮ-ಕಾಮದಾಟಗಳನ್ನು ಆಡಿ ವಂಚಿಸುವುದು.

ಹಾಟ್ ವೈಫಿಂಗ್ (Hotwifing): ಹೆಣ್ಣೊಬ್ಬಳು ತನ್ನ ಪತಿಯ ಸಂಪೂರ್ಣ ಒಪ್ಪಿಗೆಯೊಂದಿಗೆ ಹಲವಾರು ಪುರುಷರೊಂದಿಗೆ ದೈಹಿಕ ಸಂಬಂಧಗಳನ್ನಿಟ್ಟುಕೊಳ್ಳುವುದು.

ಸ್ಲೋ ಫೇಡ್ (Slow fade): ಸಂಬಂಧವನ್ನು ಇನ್ನೇನು ಅಂತ್ಯಗೊಳಿಸುವ ಹೊತ್ತು ಬಂದುಬಿಟ್ಟಾಗ ಹಂತಹಂತವಾಗಿ ಹಿಂದಡಿಯಿಡುತ್ತಾ, ಕೊನೆಗೆ ಸಂಪೂರ್ಣವಾಗಿ ಮರೆಯಾಗುವುದು.

ಹಾಂಟಿಂಗ್ (Haunting): ಮಾಜಿ ಪ್ರೇಮಿಯೊಬ್ಬ ಮುಖತಃ ಭೇಟಿ-ಕರೆ-ಮೆಸೇಜುಗಳ ಮೂಲಕ ಸಂಪರ್ಕದಲ್ಲಿರದಿದ್ದರೂ, ಆನ್ಲೈನ್ ವೇದಿಕೆಗಳಲ್ಲಿ ಆಗಾಗ ಬಂದುಹೋಗುತ್ತಾ ವಿನಾಕಾರಣ ತನ್ನ ಇರುವಿಕೆಯನ್ನು ನಿರಂತರವಾಗಿ ಸಾಬೀತುಪಡಿಸುತ್ತಿರುವುದು.

…ಹೀಗೆ ಬರೆಯುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಇವುಗಳಲ್ಲಿ ಕೆಲವು ಹೆಚ್ಚಿನವರಿಗೆ ಗೊತ್ತಿರಬಹುದು. ಇನ್ನು ಕೆಲವು ಹೊಸತಾಗಿರಲೂಬಹುದು. ಈ ಅಂಕಣವನ್ನು ನೀವು ಓದುತ್ತಿರುವ ಹೊತ್ತಿಗೆ ಇಂತಹ ಇನ್ನೂ ಹತ್ತಾರು ಹೊಸ ಪದಪುಂಜಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದರೂ ಅಚ್ಚರಿಯಿಲ್ಲ. ಏಕೆಂದರೆ ಮಹಾನಗರಗಳ ವರಸೆಯಂತೆ ಇಲ್ಲಿ ಸಂಬಂಧಗಳಿಗೂ ಕೂಡ ರಾಕ್ಷಸ ವೇಗ. ಬೊಗಸೆಯಲ್ಲಿ ಇನ್ನೇನು ನಕ್ಷತ್ರವೊಂದು ಸಿಕ್ಕೇಬಿಟ್ಟಿತು ಅಂತ ಖುಷಿಪಡಲು ಅಣಿಯಾಗುತ್ತಿರುವಾಗ, ಅದೊಂದು ಮಿಂಚುಹುಳ ಮಾತ್ರವಷ್ಟೇ ಎಂಬ ಹತಾಶೆ. ಕೈಯಲ್ಲಿ ಅಮೃತವಿದ್ದರೂ ಗಾಜಿನ ಹಲಗೆಗಳ ಮೇಲೆ ಇಟ್ಟಿರುವ, ಕಣ್ಣುಕೋರೈಸುವ ಬಣ್ಣಬಣ್ಣದ ಪಾನೀಯಗಳತ್ತ ಅಕಾರಣ ಸೆಳೆತ. ಆಹಾರಗಳಲ್ಲಿ ಫಾಸ್ಟ್-ಫುಡ್ ಇರುವಂತೆ ಸಂಬಂಧಗಳಲ್ಲೂ ಒಂದು ಬಗೆಯ “ಫಾಸ್ಟ್-ಫೀಸ್ಟ್” ಹಂಬಲ! 

ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದ ನಮ್ಮ ದೇಶದಲ್ಲಿ ಕ್ರಮೇಣ ವಿಭಕ್ತ ಕುಟುಂಬ (ನ್ಯೂಕ್ಲಿಯರ್ ಫ್ಯಾಮಿಲಿ)ಗಳು ಹುಟ್ಟಿಕೊಂಡವು. ನಂತರ ಗಂಡ-ಹೆಂಡಿರಿದ್ದರೆ ಸಾಕು, ಮಕ್ಕಳು ಬೇಡವೆಂಬ ವಾದಗಳು ಶುರುವಾದವು. ಮಕ್ಕಳ ಲಾಲನೆ-ಪಾಲನೆಗಳು ಹೆಚ್ಚಿನ ಶ್ರಮ-ಖರ್ಚು-ಜವಾಬ್ದಾರಿಗಳನ್ನು ಬೇಡುವುದರಿಂದ ಇದರ ಸಹವಾಸವೇ ಬೇಡವೆಂಬ ಸಮರ್ಥನೆಗಳೂ ಇದರ ಜೊತೆ ಬಂದವು. ಇನ್ನು ಸಂಬಂಧಗಳ ಲೋಕದಲ್ಲಿ ಮತ್ತಷ್ಟು ಹೊಸ ಬೆಳವಣಿಗೆಗಳು, ಆಧುನಿಕ ತಂತ್ರಜ್ಞಾನಗಳು ಹುಟ್ಟಿಕೊಂಡ ನಂತರದಲ್ಲಿ ಸಂಬಂಧಗಳಿಗಿಂತ ಸ್ವ-ಹಿತಾಸಕ್ತಿಯೇ ಮೇಲುಗೈ ಪಡೆದುಕೊಂಡಿತು. ಸುಖ ಮತ್ತು ಸಂತಾನೋತ್ಪತ್ತಿಯೇ ಸಂಬಂಧಗಳ ಮುಖ್ಯ ಉದ್ದೇಶವಾಗಿದ್ದರೆ ಅದಕ್ಕೆ ಹತ್ತಾರು ದಾರಿಗಳಿವೆ; ಕೇವಲ ಇಷ್ಟಕ್ಕೆ ಸಂಗಾತಿಯ ಅವಶ್ಯಕತೆಯೇನಿಲ್ಲವಲ್ಲ ಎಂಬ ಯೋಚನಾಶೈಲಿಗಳೂ ಜನಪ್ರಿಯವಾದವು. ಅವುಗಳು ಅದ್ಹೇಗೋ “ಕೂಲ್” ಎಂಬ ಹಣೆಪಟ್ಟಿಗಳನ್ನೂ ಮುಂದೆ ಪಡೆದುಕೊಂಡವು.

ಸಂಬಂಧಗಳ ಲೋಕದಲ್ಲಿ ಕಳೆದ ಎರಡರಿಂದ ಮೂರು ದಶಕಗಳಲ್ಲಾಗಿರುವ ಈ ಬದಲಾವಣೆಗಳು ಸಾಮಾನ್ಯದ್ದಲ್ಲ. ತೊಂಭತ್ತರ ದಶಕದಲ್ಲಿ ಹುಟ್ಟಿರುವ ನನ್ನಂತಹ ಮಿಲೇನಿಯಲ್ ಮಂದಿ ಇವೆಲ್ಲವನ್ನು ಹತ್ತಿರದಿಂದ ಕಂಡವರು ಕೂಡ. ಇನ್ನು ಮಹಾನಗರಗಳು ಇವುಗಳಿಗೆ ಪ್ರಯೋಗಶಾಲೆಗಳಾಗಿರುವುದರಿಂದ ಈ ಬಗೆಯ ಪ್ರಕರಣಗಳು ಇಲ್ಲಿ ಸದ್ದು ಮಾಡುವುದು ಕೂಡ ಹೆಚ್ಚು. “ವೈವಾಹಿಕ ಸಂಬಂಧಗಳಲ್ಲಿ ವ್ಯಕ್ತಿಯೊಬ್ಬ ಕಳೆದುಕೊಳ್ಳುವ ದೊಡ್ಡ ಸಂಗತಿಯೊಂದಿದ್ದರೆ ಅದು ತನ್ನ ಸ್ವಂತಿಕೆಯನ್ನು”, ಎಂದಿದ್ದರು ಖ್ಯಾತ ನಟ ಮಾಧವನ್. ಅದೇನೇ ಇರಲಿ. ಆದರೆ ಈ ಕಳೆದುಕೊಳ್ಳುವ ಮತ್ತು ಪಡೆದುಕೊಳ್ಳುವ ಲೆಕ್ಕಾಚಾರಗಳಲ್ಲಿ ಬಡವಾಗಿದ್ದು ಮಾತ್ರ ಒಲವು ಅಂತ ಹೇಳುತ್ತಲೇ ಇರುತ್ತವೆ ನಮ್ಮ ನಡುವಿನ ನೈಜ ಕತೆಗಳು.

ಅಷ್ಟಕ್ಕೂ ಬದುಕಿನ ಸಹಜ ದಾರಿಯಾಗಿದ್ದ ಈ ದಾಂಪತ್ಯವನ್ನು ಸಂಕೀರ್ಣಗೊಳಿಸಿದ್ದು ಮಹಾನಗರಗಳೋ? ಆಧುನಿಕತೆಯೋ? ನಾವು-ನೀವುಗಳೋ? ಉತ್ತರಗಳ ಬದಲಾಗಿ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯೇ ಸದ್ಯ ನನ್ನ ಕಣ್ಣ ಮುಂದಿದೆ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತುಮತ್ತುಮುಸ್ಸಂಜೆ ಮಾತುಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- http://“ಮೆಟ್ರೋ ಮಾಯೆಯೂ ಅಭಿಮಾನವೆಂಬ ದೆವ್ವವೂ” https://kannadaplanet.com/illusion-of-the-metro-and-the-devil-of-ambition/

More articles

Latest article