ಓ …ನೀವು ಟೀಚರಾ…

Most read

ಗುರುವೇ ಅರಿವಿನ ಮೂಲ ….. ಗುರುವೆಂದರೆ ದೇವರ ಪ್ರತಿರೂಪ …  ಹಾಗೆ.. ಹೀಗೆ…ಅನ್ನುತ್ತಾರೆ. ಆದರೆ ಇವೆಲ್ಲ ಬರೀ ಬೂಟಾಟಿಕೆ. ಆಧುನಿಕ ಕಾಲದ ಗುರುಗಳು ನಾನಾ ಕಾರಣಗಳಿಂದ ಅನುಭವಿಸುವ ಅಸಾಧಾರಣ ಒತ್ತಡ, ಯಾತನೆ, ಸಮಸ್ಯೆ, ಸಂಕಷ್ಟಗಳ ಬಗ್ಗೆ ಹೊರಗಿನ ಬಹಳ ಮಂದಿಗೆ ಗೊತ್ತಿಲ್ಲ. ಶಿಕ್ಷಕರ ದಿನಾಚರಣೆಯ ಈ ಹೊತ್ತು ಅವೆಲ್ಲವನ್ನೂ ಸಂಕ್ಷಿಪ್ತವಾಗಿ ಹೊರಹಾಕಿದ್ದಾರೆ ಬೆಂಗಳೂರಿನ ಶಿಕ್ಷಕಿ ವೇದಾ ಆಠವಳೆ. ಸಮಸ್ತ ಶಿಕ್ಷಕಿ/ಕ ರಿಗೆ ಶುಭಾಶಯಗಳು.

ಇಲ್ಲ…. ನಾನು ತಮಾಷೆ ಮಾಡ್ತಿಲ್ಲ…. ಗುರುವೇ ಅರಿವಿನ ಮೂಲ ….. ಗುರುವೆಂದರೆ ದೇವರ ಪ್ರತಿರೂಪ …  ಹಾಗೆ.. ಹೀಗೆ…ಅನ್ನುತ್ತಾರೆ. ಆದರೆ ಇವೆಲ್ಲ ಬರೀ ಬೂಟಾಟಿಕೆ ಸ್ವಾಮೀ… ಯಾಕೆಂತ ಹೇಳ್ತೀನಿ ಕೇಳಿ.

ಅವತ್ತು ಒಂದು ಸಮಾರಂಭಕ್ಕೆ ಹೋದವಳು ಹಾಗೆ ಸುಮ್ಮನೆ ಸಭೆಯಲ್ಲಿ ಕೂತಿದ್ದೆ. ಪಕ್ಕದಲ್ಲಿ ಒಂದು 5-6 ವರ್ಷದ ಮಗು ಏನೋ ಹಠ ಮಾಡ್ತಾ ಇತ್ತು. ಸುಮ್ನೆ ಇರಲಾರದೆ ಮಗುವನ್ನು ನೋಡಿ “ಏನೋ ಮರಿ ನಿನ್ ಹೆಸರು?” ಅಂದೆ. ಆ ಮಗುವಿನ ಮೂಡ್ ಏನೋ ಸರಿ ಇರಲಿಲ್ಲ ಅನ್ಸುತ್ತೆ. ಏನೂ ಹೇಳದೆ ಸುಮ್ನೆ ಇತ್ತು. ನನ್ನ ಪರಿಚಿತರು ಅದರ ಅಪ್ಪ-ಅಮ್ಮ ಕೂಡಲೇ “ ಇವರ್ಯಾರು ಗೊತ್ತಾ.. ಟೀಚರ್ರು….. ಹೊಡಿತಾರೆ….ಹಠ ಮಾಡಬಾರದು….” ಅಂತ ಶುರು ಮಾಡಿಬಿಟ್ಟರು. ನಂಗಂತೂ ಅಸಾಧ್ಯ ಕೋಪ ಬಂತು. “ನಮಗೇನೂ ಬೇರೆ ಕೆಲ್ಸ ಇಲ್ವೇನ್ರೀ.. ಹೊಡೆಯುವುದನ್ನ ಬಿಟ್ಟು.. ಇನ್ನೊಂಸಾರಿ ಹೀಗೆಲ್ಲ ಮಕ್ಕಳ ಮುಂದೆ ಅಂದ್ರೆ ಹಲ್ಲುದುರಿಸ್ತೀನಿ” ಅಂತ ಆ ಅಪ್ಪನನ್ನು ದಬಾಯಿಸಬೇಕು ಅನಿಸಿದರೂ ಮುಗುಳ್ನಕ್ಕು ಅಲ್ಲಿಂದ ಜಾಗ ಖಾಲಿ ಮಾಡಿದೆ.. ತಪ್ಪು ತಿಳೀಬೇಡಿ…ಆ ಎಳೆ ಮಗುವಿಗೆ ಟೀಚರ್ ರ ಪರಿಚಯ ಈ ರೀತಿ ಮಾಡಿಕೊಡಬೇಕೇ? ಅನ್ನೋದು ನನ್ನ ಕಳಕಳಿಯ ಪ್ರಶ್ನೆ.

 ನಿಜ.. ಒಂದಾನೊಂದು ಕಾಲದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಹೊಡೆದು ವಿದ್ಯೆ ಕಲಿಸುವ ಕ್ರಮ ಇತ್ತು. ಆದರೆ ಬೇರೆ ಎಲ್ಲ ಕ್ಷೇತ್ರಗಳಂತೆಯೇ ಶಿಕ್ಷಣಕ್ಷೇತ್ರದಲ್ಲೂ ಅಪಾರ ಬೆಳವಣಿಗೆಗಳು ಆಗಿವೆ. ದೈಹಿಕ ದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಕ್ಕಳನ್ನು ಮಾತಿನಲ್ಲೇ ತಿದ್ದಲು ನಾನಾ ದಾರಿಗಳನ್ನು ಶಿಕ್ಷಕರು ಅನುಸರಿಸುತ್ತಿದ್ದಾರೆ. ಮಕ್ಕಳ ತುಂಟತನ-ಅಹಂಕಾರಗಳನ್ನು ಅತ್ಯಂತ ತಾಳ್ಮೆಯಿಂದ ಎದುರಿಸಿ ಅವರನ್ನು ತಿದ್ದುತ್ತಿದ್ದಾರೆ ಇಂದಿನ ಶಿಕ್ಷಕರು ಗೊತ್ತೇ ನಿಮಗೆ ! (ಎಲ್ಲೋ ಒಬ್ಬಿಬ್ಬರು ಹೊಡೆಯುವ ಟೀಚರ್ ಗಳು ಇರಬಹುದು. ಅಂಥವರು ಈ ವೃತ್ತಿಗೆ ಅನರ್ಹರು ಅಂತ ಹೇಳಬಲ್ಲೆ) ಇಂದು ಮಕ್ಕಳು-ಶಿಕ್ಷಕರ ನಡುವೆ ಸ್ನೇಹಪೂರ್ಣ ಸಂಬಂಧ ಇರಲಿ ಎಂದು ಶಾಲೆಗಳು ಮತ್ತು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಅಲ್ಲದೇ ಇಂದು ಹೆಚ್ಚಿನ ಶಾಲೆಗಳು ನಡೆಯುವುದೇ ಪಾಲಕರು ಕೊಡುವ ಫೀಸ್ ನಿಂದ. ನಿಜ ಹೇಳ್ಬೇಕಂದ್ರೆ ಮಕ್ಕಳೇ ನಮ್ಮ ಅನ್ನದಾತರು. ಅವರಿಗೆ ನಾವು ಹೊಡೆಯಲು ಸಾಧ್ಯವೇ? ಶ್ರೀಮಂತ ಮಕ್ಕಳು ಕಲಿಯುವ ಕೆಲ ಶಾಲೆಗಳಲ್ಲಿ ಶಿಕ್ಷಕರು, ಮಕ್ಕಳ ಸೊಕ್ಕು , ದುರಹಂಕಾರಗಳನ್ನು ಸಹಿಸುತ್ತ ಜಾಣ ಕಿವುಡು-ಜಾಣಕುರುಡು ತೋರಿಸಬೇಕಾದ ಪರಿಸ್ಥಿತಿ ಇದೆ.

ಸಾಂದರ್ಭಿಕ ಚಿತ್ರ

“ಟೀಚರ್ ಕೆಲಸ ಆರಾಮ ಬಿಡಿ.. ಯಾವಾಗ್ಲೂ ರಜಾ..” ಇದು ಟೀಚರ್ ಅಂದಾಕ್ಷಣ ಬರುವ ಇನ್ನೊಂದು ಮತ್ಸರಭರಿತ ಟೀಕೆ. ಹೌದು.. ವರ್ಷಕ್ಕೆ ಅರವತ್ತು ದಿನಗಳ ಸಂಬಳ ಸಹಿತ ರಜೆ ಶಿಕ್ಷಕರಿಗಿದೆ. ಜೊತೆಗೆ ಹಬ್ಬ-ವಾರದ ರಜೆ ಬೇರೆ. ಆದರೆ ರಜೆಗೆಂದೇ ಮೀಸಲಾದ ನೂರಾರು ಕೆಲಸಗಳು ನಮಗಿವೆ ಗೊತ್ತೇ?

ಸರಕಾರೀ ಶಾಲೆಗಳ ಬಗ್ಗೆ ನನಗೆ ಅಷ್ಟಾಗಿ ಅರಿವಿಲ್ಲ. ಆದರೆ ಖಾಸಗಿ ಶಾಲೆಗಳ ಬಗ್ಗೆ ಹೇಳಬೇಕಂದ್ರೆ ಇಡೀ ವರ್ಷದ ಪಾಠದ ತಯಾರಿಯನ್ನು ರಜೆಯಲ್ಲಿ ಮಾಡಬೇಕು. ಪಾಠಕ್ಕೆ ಬೇಕಾದ ಸಲಕರಣೆಗಳು, ಚಾರ್ಟ್ ಗಳು, ವರ್ಕ್ ಶೀಟ್, ಲೆಸನ್ ಪ್ಲಾನ್ ಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಶಾಲೆ ಆರಂಭವಾದೊಡನೆ ಅಂದಿನ ಪಾಠ ಅಂದೇ ಮುಗಿಸಬೇಕು. ಪ್ರತಿ ಶಿಕ್ಷಕ/ ಶಿಕ್ಷಕಿಗೂ 150-250 ವಿದ್ಯಾರ್ಥಿಗಳು ಇರುತ್ತಾರೆ. ಪ್ರತಿ ಪಾಠ ಮುಗಿದ ಕೂಡಲೇ ಎಲ್ಲ ಮಕ್ಕಳ ನೋಟ್ ಬುಕ್ ಗಳನ್ನು ರಜಾದಿನದಂದು ತಿದ್ದಿ ಕೊಡಬೇಕು..

ವರ್ಷವಿಡೀ ನಡೆಯುವ ಅಸಂಖ್ಯಾತ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ವಾರದ ರಜೆಗಳಂದು ಟೈಪ್ ಮಾಡಿ ಸಿದ್ಧಗೊಳಿಸಬೇಕು. ನೆನಪಿಡಿ.. ಪ್ರಶ್ನೆ ಪತ್ರಿಕೆ ಕ್ರಿಯೇಟಿವ್ ಆಗಿರಬೇಕು ಎನ್ನುತ್ತದೆ ಶಾಲೆ. ಅದನ್ನು ರಚಿಸಲು ತುಂಬ ಕ್ರಿಯಾಶೀಲತೆ ಬೇಕು. ಹಿಂದಿನಂತೆ ಪಾಠಪುಸ್ತಕದಲ್ಲಿ ಕೊಟ್ಟ ಪ್ರಶ್ನೆಗಳನ್ನು ಕೊಡುವಂತಿಲ್ಲ..

ಇನ್ನು ಉತ್ತರಪತ್ರಿಕೆಗಳನ್ನು ತಿದ್ದಲು ಅಪಾರ ತಾಳ್ಮೆ-ಸಮಯ-ಶಕ್ತಿ ಬೇಕು. ಉದಾ: 8ನೆ ತರಗತಿಯ ಗಣಿತದ ಒಂದು ಪತ್ರಿಕೆ (80 ಅಂಕ) ತಿದ್ದಲು 15 ನಿಮಿಷ ಬೇಕು. ಪ್ರತಿ ಶಿಕ್ಷಕನಿಗೆ ಕಡಿಮೆಯೆಂದರೂ 150-250 ಉತ್ತರಪತ್ರಿಕೆಗಳು ಬರುತ್ತವೆ ಅಂದ್ರೆ ನೀವೆ ಲೆಕ್ಕ ಹಾಕಿ..ಇವನ್ನು ಪರೀಕ್ಷೆ ಮುಗಿದ 5-6 ದಿನಗಳಲ್ಲಿ ತಿದ್ದಿ ಮಕ್ಕಳಿಗೆ ತೋರಿಸ ಬೇಕು. ಫೇಲ್ ಆದವರನ್ನು ಹಿಡಿದು ಮತ್ತೆ ಕಲಿಸಬೇಕು. ಶಾಲೆಯ ಅವಧಿಯಲ್ಲಿ ಪಾಠ ಮಾತ್ರ ಮಾಡಲು ಸಾಧ್ಯ. ಈ ಎಲ್ಲ ಕೆಲಸಗಳನ್ನು ರಜೆ ದಿನಗಳಲ್ಲಿ ಮಾಡಬೇಕು.

ಅದ್ಯಾರೋ ಸತ್ರು.. ಈ ಟೀಚರ್ ಗಳಿಗೆ ರಜಾ.. ಎಂಥ ಅದೃಷ್ಟ ನೋಡ್ರೀ..

ಯಾರಾದರೂ ಸತ್ತರೆ ರಜೆ ಕೊಟ್ಟಾಗ ಅತಿ ಹೆಚ್ಚು ದು:ಖಪಡುವವರು ಶಿಕ್ಷಕರು ಗೊತ್ತೇ ಸ್ವಾಮೀ! ಅನಿರೀಕ್ಷಿತ ರಜೆಯಿಂದ ಉಳಿಯುವ ಅಂದಿನ ದಿನದ ಪಾಠವನ್ನು ಮಾರನೇ ದಿನ ಮಾಡಲೇಬೇಕು ಜೊತೆಗೆ ಆ ದಿನದ್ದು ಕೂಡಾ. ವಿಶೇಷ ಕಾರ್ಯಕ್ರಮಗಳ ತಯಾರಿ ನಡೆಯುತ್ತಿರುವಾಗ, ಪರೀಕ್ಷೆ ಹತ್ತಿರವಿದ್ದಾಗ ಯಾರಾದರೂ ಸತ್ತರೆ ಆಗುವ ತೊಂದರೆಗಳು ಒಂದೆರಡಲ್ಲ. ನಮಗಿಷ್ಟವಿಲ್ಲದ ರಜೆಯನ್ನು ಅನುಭವಿಸುವ ಪಾಡು ಯಾರಿಗೂ ಬೇಡ.

ಎಲ್ಲೆಡೆ ಹರಡುತ್ತಿರುವ ಕಾರ್ಪೋರೇಟ್ ಸಂಸ್ಕೃತಿ ಈಗ ಶಾಲೆಗಳಿಗೂ ಕಾಲಿಡಲಾರಂಭಿಸಿದೆ. ಶಿಕ್ಷಕರು ತಮ್ಮ ಪಾಠಪದ್ಧತಿ ಹೇಗೆ ಸ್ಪೆಶಲ್ ಆಗಿ ಮಾಡುತ್ತಾರೆ? ಪಾಠದ ವಿನ: ತಮ್ಮ ವಿಷಯಗಳಲ್ಲಿ ಇನ್ನೇನು ಹೊಸದು ಮಾಡುತ್ತಿದ್ದೇವೆ ? ಕಲಿಯುತ್ತಿದ್ದೇವೆ ? ಎಂದು ವರ್ಷದ ಕೊನೆಯಲ್ಲಿ ತೋರಿಸ ಬೇಕಾಗುತ್ತದೆ. ಇದನ್ನೆಲ್ಲ ಮಾಡದ ಟೀಚರ್ ಗೆ ಮಕ್ಕಳು-ಪಾಲಕರು ಮತ್ತು ಮಾನೇಜ್‌ ಮೆಂಟ್‌ ಬಿಡಿಗಾಸಿನ ಗೌರವವನ್ನೂ ಕೊಡುವುದಿಲ್ಲ. ಶಿಕ್ಷಕರು ತಾವು ಹೊಸದನ್ನು ಮಾಡುತ್ತ, ಮಕ್ಕಳಿಂದ ಮಾಡಿಸುತ್ತ ಇರಬೇಕೆಂದರೆ ಸಾಕಷ್ಟು ಶ್ರಮ ವಹಿಸಲೇ ಬೇಕಾಗುತ್ತದೆ. ಇದನ್ನೆಲ್ಲ ಮಾಡಲು ರಜೆ ಬೇಡವೇ? ಉಂಡಾಡಿಗಳಂಥ ಕೆಲ ಶಿಕ್ಷಕರು ಅಲ್ಲಲ್ಲಿ ಇರುತ್ತಾರೆ. ಅಂಥವರಿಗೆ ಖಾಸಗಿ ಶಾಲೆಗಳಲ್ಲಿ ಭವಿಷ್ಯವಿಲ್ಲ. ಕೆಲವರ್ಷಗಳಲ್ಲಿ ಕೆಲಸ ಬಿಡಬೇಕಾದ ಪರಿಸ್ಥಿತಿ ಅವರಿಗೆ ಬರುತ್ತದೆ. ಇನ್ನು ಸರಕಾರಿ ಶಿಕ್ಷಕರ ಸ್ಥಿತಿ ಇನ್ನೂ ಶೋಚನೀಯ. ಅವರಿಗೆ ಮುಂದಿನ ವರ್ಷ ಶಾಲೆಗೆ ಮಕ್ಕಳು ಸೇರ್ತಾರೋ ಇಲ್ಲವೋ? ಈ ಶಾಲೆ ಮುಚ್ಚಿದರೆ ಏನು ಗತಿ? ಅನ್ನುವ ಚಿಂತೆ!

ಚಿತ್ರ: ದಯಾನಂದ ಟಿ ಕೆ

ಇಲ್ಲಿ ನಾನು 5-10ನೇ ತರಗತಿಯ ಶಿಕ್ಷಕರ ಬಗ್ಗೆ ಹೇಳಿದ್ದೇನೆ. ಹಾಗಂತ ಇತರರು ನಿರುಪಯುಕ್ತರು ಅಂದ್ಕೋಬೇಡಿ. ಮೈಯೆಲ್ಲ ಕಣ್ಣಾಗಿ ಮಕ್ಕಳನ್ನು ನೋಡಿಕೊಳ್ಳುತ್ತ, ತರಗತಿಯ ಎಲ್ಲ ಮಕ್ಕಳಿಗೂ ತಾಯಂದಿರಾಗುವ, ಮಗುವಿಗೆ ಜ್ಞಾನದ -ಜೀವನದ ಪ್ರಥಮ ಪಾಠಗಳನ್ನು ಸಹನೆಯಿಂದ ಕಲಿಸುವ ನರ್ಸರಿ-ಪ್ರಾಥಮಿಕ ಶಿಕ್ಷಕರನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಶಿಕ್ಷಕರಿಗೆ ಸಂಬಳ ತುಂಬ ಕಡಿಮೆ ಇದೆ. ವಿಶೇಷ ಸವಲತ್ತುಗಳು ಇಲ್ಲವೇ ಇಲ್ಲ. ಆದರೆ ಸಮಾಜದ ಉಪೇಕ್ಷೆ, ಅಪಹಾಸ್ಯ ಮಾತ್ರ ಧಾರಾಳವಾಗಿ ಸಿಗುತ್ತದೆ.

ಗುರುವೆಂದರೆ ಅಜ್ಞಾನದ ಕತ್ತಲೆಯನ್ನು ಹರಿಸುವವನು… ಜ್ಞಾನದ ಮೂಲ ಎಂದೆಲ್ಲ ಹಾಡಿ -ಹೊಗಳಿ- ಗೌರವಿಸಿದ ಕಾಲ ಎಂದೋ ಮುಗಿದಿದೆ. ವಿದ್ಯಾರ್ಥಿ ಮತ್ತು ಪಾಲಕರು ಇಂದು ಶಿಕ್ಷಣ ವ್ಯವಸ್ಥೆಯ ಕೇಂದ್ರದಲ್ಲಿದ್ದಾರೆ. ಖಾಸಗಿ ಶಿಕ್ಷಣದ ಬಗ್ಗೆ ಹೇಳುವುದಾದರೆ ಶಾಲೆ ಅನ್ನೋದು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಸರಕಾರ ಮತ್ತು ಶಿಕ್ಷಣ ತಜ್ಞರು ಸೇರಿ ಶಿಕ್ಷಣ ನೀತಿಯನ್ನು  ರೂಪಿಸುತ್ತಾರೆ. ಉದ್ಯಮಿಗಳು ಶಾಲೆಯ ಕಟ್ಟಡ ನಿರ್ಮಿಸುತ್ತಾರೆ. ಪಾಲಕರು ದುಡ್ಡು ಕೊಡುತ್ತಾರೆ. ಆ ದುಡ್ಡು, ಹಲವಾರು ನಿರೀಕ್ಷೆ ಮತ್ತು ಹಕ್ಕೊತ್ತಾಯಗಳನ್ನು ಹೊತ್ತುಕೊಂಡೇ ಮಕ್ಕಳ ರೂಪದಲ್ಲಿ ಶಾಲೆಗೆ ಬರುತ್ತದೆ.

ಪ್ರತಿಯೊಂದು ಮಗುವೂ ಒಂಟಿಯಾಗಿದ್ದಾಗ ಒಳ್ಳೆಯವನೇ ಆಗಿರುತ್ತಾನೆ. ಆದರೆ ಒಂದು ಗುಂಪಾಗಿ ಮಕ್ಕಳು ಸೇರಿದಾಗ ಬೇರೆಯದೇ ವರ್ತನೆ ಕಾಣುತ್ತದೆ. ಗುಂಪಿನಲ್ಲಿ ಮಕ್ಕಳು ಅತಿ  ಕ್ರೂರಿಗಳಾಗಬಲ್ಲರು, ಕುಹಕ ಆಡಬಲ್ಲರು ಮತ್ತು ಅತಿ ಕೆಟ್ಟ ತಮಾಷೆ ಮಾಡಬಲ್ಲರು. ಅವರೊಂದಿಗಿರುವುದು ‘ಮನೆಯಲ್ಲಿ ನಾನು ಎಲ್ಲರ ಕಣ್ಮಣಿ’ ಎಂಬ ಅಗಾಧ ಆತ್ಮವಿಶ್ವಾಸ ಮತ್ತು ತನ್ನೊಂದಿಗೆ ಅನೇಕರಿದ್ದಾರೆ ಅನ್ನುವ ಭಂಡ ಧೈರ್ಯ.

ಇಂಥ ಗುಂಪನ್ನು ದಿನವೂ ತರಗತಿಯಲ್ಲಿ ಎದುರಿಸುವ ಶಿಕ್ಷಕ ಮಾತ್ರ ಏಕಾಂಗಿ. ಅವನ ಜೊತೆ ಇರುವುದು ಕರ್ತವ್ಯದ ಭಾರ, ನೈತಿಕಹೊಣೆ, ಅದ್ಯಾವುದೋ ಕಾಲದಲ್ಲಿ ಮಕ್ಕಳಲ್ಲಿ ಇತ್ತಂತೆ ಎಂದು ನಂಬಿರುವ ಗುರುಭಕ್ತಿ ಮತ್ತು  ಕೆಲವೇ ನಿಮಿಷಗಳಲ್ಲಿ ಅನೇಕ ವಿಷಯಗಳನ್ನು ಕಲಿಸಬೇಕಾದ ಜವಾಬ್ದಾರಿ. ಏನೇ ಆದರೂ ತಾಳ್ಮಗೆಡದೆ ಅಂದಿನ ಕೆಲಸವನ್ನು ಅದೇ ದಿನ ಅಷ್ಟೇ ನಿಮಿಷಗಳಲ್ಲಿ ಮುಗಿಸಲೇಬೇಕು ಎಂಬ ಅಗಾಧ ಮಾನಸಿಕ ಒತ್ತಡ. ಇಷ್ಟೆಲ್ಲಾ ಮಾಡಿದರೂ , ವರ್ಷದ ಕೊನೆಯಲ್ಲಿ ಬರುವ ಸೋಮಾರಿ ಮಕ್ಕಳ ಕಳಪೆ ಫಲಿತಾಂಶಕ್ಕೆ ಕೂಡಾ ಟೀಚರ್ ಹೊಣೆ ಹೊರಬೇಕಾಗುತ್ತದೆ.

ಇತ್ತೀಚೆಗೆ ನಾನು ಊರಿಗೆ ಹೋಗಿದ್ದಾಗ ಒಬ್ಬರು ತಮ್ಮ ಎಂಟು ವರ್ಷದ ಮಗನಿಗೆ “ನೋಡು, ಎಕ್ಸಾಮ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೀದೇ ಇದ್ರೆ ಹೀಗೆ ಹೊಲದಲ್ಲಿ ಕೆಲಸ ಮಾಡ್ಬೆಕಾಗತ್ತೆ” ಅನ್ನುತ್ತಿದ್ದರು. ನೋಡಿ..ರೈತರನ್ನು ನಾವು ಮಕ್ಕಳಿಗೆ ಪರಿಚಯಿಸುವ ಪರಿ ಇದು. ಇನ್ನು ಪೊಲೀಸರಂತೂ ಎಲ್ಲೆಲ್ಲೂ ಹಾಸ್ಯದ ಸರಕುಗಳು. ಪುರೋಹಿತ, ಕೃಷಿ ಮತ್ತು ಅಡುಗೆಯ ವೃತ್ತಿಯಲ್ಲಿರುವ ಗಂಡಿಗೆ ಮದುವೆ ಕಷ್ಟ ಎಂದು ಎಲ್ಲರೂ ಸೇರಿ ನಿರ್ಧರಿಸಿದ್ದೇವೆ. ನಾವ್ಯಾಕೆ ಹೀಗೆ? ಕೆಲ ವೃತ್ತಿಗಳನ್ನು ಗೌರವಿಸಬಾರದು  ಎಂದು ನಮಗೆ ಹೇಳಿಕೊಟ್ಟವರು ಯಾರು?

ಹೋಗ್ಲಿ ಬಿಡಿ.. ನಾವಂತೂ ಹಿಂತಿರುಗಲಾರದಷ್ಟು ದೂರ ಹೋಗಿದ್ದೇವೆ. ಕೊನೇ ಪಕ್ಷ ನಮ್ಮ ಮಕ್ಕಳು ಚೆನ್ನಾಗಿರಲಿ.. ಅವರ ತಲೆಯಲ್ಲಿ ಇದನ್ನೆಲ್ಲ ತುಂಬಿಸುವುದು ಬೇಡ.. ಏನಂತೀರ?


ವೇದಾ ಆಠವಳೆ, ಬೆಂಗಳೂರು

ಖಾಸಗಿ ಶಾಲೆಯ ಶಿಕ್ಷಕರು

ಇದನ್ನೂ ಓದಿ- ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆಗಳ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ

More articles

Latest article