Saturday, July 27, 2024

ಹಿರೇಮಗಳೂರು ಕಣ್ಣನ್‌ ಅವರಿಗೆ ನೀಡಿದ ನೋಟಿಸ್ ವಾಪಸ್ : ತಹಶೀಲ್ದಾರ್ ಅವರಿಂದಲೇ ಹಣ ವಸೂಲಿಗೆ ಸರ್ಕಾರ ನಿರ್ಧಾರ!

Most read

ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್​ ಅವರಿಗೆ ವೇತನ ಹಿಂತಿರುಗಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇದೀಗ, ಈ ನೋಟಿಸ್‌ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ಕಣ್ಣನ್‌ಗೆ ನಿಗದಿಗಿಂತ ಹೆಚ್ಚುವರಿಯಾಗಿ ಗೌರವಧನ ಪಾವತಿಯಾಗಿದೆ. ಆಡಿಟಿಂಗ್ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ 4.74 ಲಕ್ಷ ರೂ.ಗಳನ್ನು ದೇವಾಲಯದ ಖಾತೆಗೆ ಮರುಪಾವತಿಸುವಂತೆ ಎಂದು ತಹಸೀಲ್ದಾ‌ರ್ ಸಮಜಾಯಿಷಿ ನೋಟಿಸ್ ಮೂಲಕ ಸೂಚಿಸಿದ್ದರು.

ಈ ಕುರಿತು ಟ್ವೀಟ್ (X) ಮಾಡಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

2017ಕ್ಕಿಂತ ಮೊದಲು ಮಾಸಿಕ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿತ್ತು. 2017ರಿಂದ ಗೌರವ ಧನವನ್ನು 4 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಕಣ್ಣನ್ಗೆ 2013ರಿಂದಲೂ ಮಾಸಿಕ 7,500 ರೂ. ನೀಡಲಾಗುತ್ತಿದೆ. ಹೀಗಾಗಿ 2013ರಿಂದ 2017ರವರೆಗೆ ಪ್ರತಿವರ್ಷ 66 ಸಾವಿರ ರೂ. ಹೆಚ್ಚುವರಿ ಗೌರವಧನ ನೀಡಲಾಗಿದೆ. ಹೀಗಾಗಿ ಹೆಚ್ಚುವರಿ ಬಾಬು 4.74 ಲಕ್ಷ ರೂ.ಗಳನ್ನು ಕೂಡಲೇ ತುಂಬುವಂತೆ ಸೂಚನೆ ನೀಡಲಾಗಿತ್ತು.

ಹಿರೇಮಗಳೂರು ಕಣ್ಣನ್​ ಈ ದೇಗುಲದಲ್ಲಿ ದಿನವು ರಾಮ, ಸೀತಾ ಮತ್ತು ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಗಳಿಂದ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ನೂರಾರು ಭಕ್ತರು ಕಲ್ಯಾಣ ರಾಮರ ದರ್ಶನ ಪಡೆಯುತ್ತಾರೆ.

More articles

Latest article