ಸಕಲೇಶಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮರ್ಥಿಕೊಳ್ಳುವ ಭರದಲ್ಲಿ ಅವರ ಆಪ್ತ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಟ್ಟಣದಲ್ಲಿ ಇಂದು ಮಲೆನಾಡು ವೀರಶೈವ ಸಂಘ ಮತ್ತು ಇತರ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಬಸವೇಶ್ವರ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವ ಮಹಿಳೆ ಸಾವಿನ ಕುರಿತು ಮಾತನಾಡಿದರು.
“ಸನ್ಮಾನ್ಯ ಯಡಿಯೂರಪ್ಪ ಸಾಹೇಬ್ರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಅವಳೂ ಕೂಡ ಹದಿನೈದು ದಿನಗಳ ಹಿಂದೆ ಸತ್ತುಹೋದಳು” ಎಂದು ಜಿ.ಮರಿಸ್ವಾಮಿ ತಮ್ಮ ಭಾಷಣದಲ್ಲಿ ಹೇಳಿಬಿಟ್ಟರು. ಮರಿಸ್ವಾಮಿಯವರ ಈ ಹೇಳಿಕೆಯಿಂದಾಗಿ ಸಂತ್ರಸ್ಥೆ ಸಾವಿನ ಕುರಿತು ಅನುಮಾನ ಸೃಷ್ಟಿಯಾದಂತಾಗಿದೆ.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳ ಸಮ್ಮುಖದಲ್ಲೇ ಮರಿಸ್ವಾಮಿ ಈ ಹೇಳಿಕೆ ನೀಡಿರುವುದು ವಿಶೇಷವಾಗಿದೆ.
ತಮ್ಮ ಭಾಷಣದ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಪ್ರಸ್ತಾಪಿಸಿದ ಮರಿಸ್ವಾಮಿ, ಲಿಂಗಾಯಿತ ಸಮುದಾಯದವಳೇ ಆದ ಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ಯಡಿಯೂರಪ್ಪನವರ ನಿವಾಸಕ್ಕೆ ಬಂದಿದ್ದಳು. ಬಜಾಜ್ ಕಂಪೆನಿಯಿಂದ ನನಗೆ 5,000 ಕೋಟಿ ರುಪಾಯಿ ಬರುವುದಿದೆ. ಇದಕ್ಕೆ ಸಹಾಯ ಮಾಡಿ ಎಂದಳು. ಯಡಿಯೂರಪ್ಪ ಸಾಹೇಬ್ರು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ, ಇವರ ಸಮಸ್ಯೆ ಏನಿದೆಯೋ ನೋಡಿ ಎಂದು ಹೇಳಿ ಅವರ ಬಳಿ ಆಕೆಯನ್ನು ಕಳಿಸಿದರು. ನಂತರ ಆಕೆ ಸಾಹೇಬ್ರ ವಿರುದ್ಧ ಇಲ್ಲಸಲ್ಲದ ದೂರು ದಾಖಲಿಸಿದರು. ಈ ಪ್ರಕರಣದಲ್ಲಿ ನನ್ನ ಹೆಸರೂ ಇದೆ. ನಾನೂ ಮತ್ತು ನನ್ನ ಸ್ನೇಹಿತ ರುದ್ರೇಶ್ ಇಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದೇವೆ ಎಂದು ಅವರು ವಿವರಿಸಿದರು.
ಯಡಿಯೂರಪ್ಪ ಸಾಹೇಬ್ರನ್ನು ಬಂಧಿಸುತ್ತಾರೆ ಎಂದು ಟಿವಿ ಚಾನಲ್ ಗಳಲ್ಲಿ ಸುದ್ದಿ ಬರುತ್ತಿದೆ. ಯಡಿಯೂರಪ್ಪ ಸಾಹೇಬ್ರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಅವಳೂ (ಸಂತ್ರಸ್ಥೆಯ ತಾಯಿ) ಹದಿನೈದು ದಿನಗಳ ಹಿಂದೆ ಸತ್ತು ಹೋದಳು ಎಂದು ಅವರು ಹೇಳಿದರು.
ಯಡಿಯೂರಪ್ಪ ಮೇಲೆ ಪ್ರಕರಣ ದಾಖಲಿಸಿದ್ದ ಸಂತ್ರಸ್ಥೆಯ ತಾಯಿ ಇತ್ತೀಚಿಗೆ ಅನಾರೋಗ್ಯದಿಂದ ತೀರಿಕೊಂಡಾಗ ಹಲವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈಗ ಮರಿಸ್ವಾಮಿ ಹೇಳಿಕೆ ಈ ಅನುಮಾನಗಳಿಗೆ ಪುಷ್ಠಿ ನೀಡಿದಂತಾಗಿದೆ.
ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಇಂದು ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಲು ಅನುಮತಿ ನೀಡಿದೆ.
ಸಿಐಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1 ಈ ಆದೇಶವನ್ನು ನೀಡಿದ್ದು, ಯಾವುದೇ ಕ್ಷಣದಲ್ಲಿ ಯಡಿಯೂರಪ್ಪ ಅವರ ಬಂಧನವಾಗುವ ಸಾಧ್ಯತೆ ಇದೆ.
ಸರ್ಚ್ ವಾರಂಟ್ ಮತ್ತು ಬಂಧನ್ ವಾರಂಟ್ ಹೊರಡಿಸಲು ಅನುಮತಿ ಕೋರಿ ಸಿಐಡಿ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಎನ್ ಎಂ ರಮೇಶ್ , ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಬಂಧನಕ್ಕೆ ವಾರಂಟ್ ಹೊರಡಿಸಲು ಅನುಮತಿ ನೀಡಿದ್ದಾರೆ.
ತನ್ನಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ನೆರವು ಕೇಳಿಕೊಂಡು ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದ ಮಹಿಳೆಯೋರ್ವರು ತನ್ನ ಮಗಳ ಜೊತೆ ಯಡಿಯೂರಪ್ಪ ಅನುಚಿತವಾಗಿ ನಡೆದುಕೊಂಡು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಅವರ ವಿರುದ್ಧ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿತ್ತು. ಮಾರ್ಚ್ 14ರಂದು ದೂರು ದಾಖಲಾದ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ದೂರು ಸಲ್ಲಿಸಿದ್ದ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು.