Saturday, July 27, 2024

ಹೊಸ ಪಾರ್ಲಿಮೆಂಟ್‌ ಭವನ ಒಂದು ಫೈವ್‌ ಸ್ಟಾರ್‌ ಜೈಲು: ಶಿವಸೇನೆ ಟೀಕೆ

Most read

ಬಿಜೆಪಿ ಸರ್ಕಾರ ನಿರ್ಮಿಸಿರುವ ಹೊಸ ಪಾರ್ಲಿಮೆಂಟ್ ಭವನ ʻಸೆಂಟ್ರಲ್‌ ವಿಸ್ತಾʼ ಒಂದು ಫೈವ್‌ ಸ್ಟಾರ್‌ ಜೈಲಿನಂತಿದ್ದು, ಇಲ್ಲಿ ಜನಪ್ರತಿನಿಧಿಗಳು ಸುಗಮವಾಗಿ ಕೆಲಸ ಕಾರ್ಯ ಮಾಡುವುದು ತ್ರಾಸದಾಯಕವಾಗಿದೆ. INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂದಿನ ಐತಿಹಾಸಿಕ ಪಾರ್ಲಿಮೆಂಟ್‌ ಭವನದಲ್ಲೇ ಕಾರ್ಯಕಲಾಪ ನಡೆಸುವುದಾಗಿ ಶಿವಸೇನೆ ಕಟುವಾಗಿ ಟೀಕಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ವಕ್ತಾರ ಸಂಜಯ್‌ ರಾವತ್‌, ಹೊಸ ಪಾರ್ಲಿಮೆಂಟ್‌ ಕಟ್ಟಡ ಪಂಚತಾರಾ ಜೈಲು ಇದ್ದಂತಿದೆ. ಇಲ್ಲಿ ಯಾವ ಕೆಲಸವೂ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸದರು ಸೆಂಟ್ರಲ್‌ ವಿಸ್ತಾದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ರಾವತ್‌, INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪಾರ್ಲಿಮೆಂಟ್‌ ಕಲಾಪಗಳನ್ನು ಹಿಂದಿನ ಸಂಸತ್‌ ಭವನದಲ್ಲೇ ನಡೆಸುವುದಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ 2023ರ ಮೇ ತಿಂಗಳಿನಲ್ಲಿ ಹೊಸ ಪಾರ್ಲಿಮೆಂಟ್‌ ಭವನ ಸೆಂಟ್ರಲ್‌ ವಿಸ್ತಾ ಲೋಕಾರ್ಪಣೆಗೊಳಿಸಿದ್ದರು. 971 ಕೋಟಿ ರುಪಾಯಿ ವೆಚ್ಚದಲ್ಲಿ ಸೆಂಟ್ರಲ್‌ ವಿಸ್ತಾ ನಿರ್ಮಿಸಲಾಗಿದ್ದು, 888 ಲೋಕಸಭಾ ಸದಸ್ಯರು ಮತ್ತು 300 ರಾಜ್ಯಸಭಾ ಸದಸ್ಯರಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ಕಳೆದ ಸೆಪ್ಟೆಂಬರ್‌ ನಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರ ನಡೆದ ನಂತರ ಹಲವಾರು ಸಮಸ್ಯೆಗಳು ಉದ್ಭವವಾಗಿದ್ದು, ಸಂಸದರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಬ್ಬರನ್ನು ಒಬ್ಬರು ನೋಡಲು ಬೈನಾಕುಲರ್‌ ಬಳಸಬೇಕಾಗಿದೆ ಎಂದು ಕೆಲ ಸಂಸದರು ಸಮಸ್ಯೆಯ ಆಳವನ್ನು ಬಿಡಿಸಿಟ್ಟಿದ್ದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಹಾಕಿಕೊಂಡಿರುವ ಟಾರ್ಗೆಟ್‌ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಜಯ್‌ ರಾವತ್‌, 400 ಯಾಕೆ, 600 ಸ್ಥಾನದ ಗುರಿ ಇಟ್ಟುಕೊಳ್ಳಲಿ ಎಂದು ಲೇವಡಿ ಮಾಡಿದರು. ಲೋಕಸಭೆಯ ಸದಸ್ಯ ಸ್ಥಾನ 543 ಇದ್ದು, ಅದರಲ್ಲಿ 600 ಸ್ಥಾನ ಬಿಜೆಪಿಯೇ ಗೆಲ್ಲಲಿ ಎಂದು ರಾವತ್‌ ನಗೆಚಾಟಿ ಹಾರಿಸಿದರು.

More articles

Latest article