ನೇಪಾಳ : ನೇಪಾಳ-ಟಿಬೆಟ್ ಗಡಿಯಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ನಂತರ ಇದುವರೆಗೂ 4,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕನಿಷ್ಠ 900 ಮಂದಿ ಮೃತಪಟ್ಟಿರುವುದು ದೃಢವಾಗಿದೆ. ಶೋಧ ಕಾರ್ಯ ಮುಂದುವರಿದಂತೆ ಈ ಸಂಖ್ಯೆಗಳಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ.
ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರವು (NDRRMA), ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇಲ್ಲಿಯವರೆಗೆ ಚಿತ್ವಾನ್‌ನಿಂದ 272, ಪೂರ್ವ ನವಾಲ್‌ಪರಸಿಯಿಂದ 207, ಪಶ್ಚಿಮ ನವಾಲ್‌ಪರಸಿಯಿಂದ 151 ಮತ್ತು ಗೋಖಾ ಜಿಲ್ಲೆಯಿಂದ 62 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು NDRRMA ಮಾಹಿತಿ ನೀಡಿದೆ. ಅದೇ ರೀತಿ, ನುವಾಕೋಟ್‌ನಿಂದ 95, ಧಾಡಿಂಗ್‌ನಿಂದ 55, ತನಹುವಿನಿಂದ 37 ಮತ್ತು ರಸುವಾದಿಂದ 24 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. 85 ಭದ್ರತಾ ಸಿಬ್ಬಂದಿ ಮತ್ತು 320 ವಿದೇಶಿಗರು ಸೇರಿದಂತೆ ಒಟ್ಟು 4,247 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅದು ತಿಳಿಸಿದೆ.
ಏತನ್ಮಧ್ಯೆ, ವಿನಾಶಕಾರಿ ಪ್ರವಾಹದ ಸಂಪೂರ್ಣ ವ್ಯಾಪ್ತಿಯನ್ನು ಅಂದಾಜಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದು, ದೇಶವು “ಊಹಿಸಲಾಗದ ಮತ್ತು ಹೃದಯವಿದ್ರಾವಕ” ವಿಪತ್ತನ್ನು ಎದುರಿಸುತ್ತಿದೆ ಎಂದು ನೇಪಾಳದ ಪ್ರಧಾನಿ ಬಲೇಂದ್ರ ಶಾ ಹೇಳಿದ್ದಾರೆ.
ಕಾಣೆಯಾದ ಕಾರ್ಮಿಕರಿಗಾಗಿ ಶೋಧ
ಹಿಮಾಲಯದ ನದಿ ಕಣಿವೆಯಲ್ಲಿರುವ ತ್ರಿಶೂಲಿ 3A ಜಲವಿದ್ಯುತ್ ಯೋಜನಾ ತಾಣದ ಸುರಂಗದೊಳಗೆ ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾದ ಕಾರ್ಮಿಕರನ್ನು ತಲುಪಲು ನೇಪಾಳ ಸೇನೆಯ ಪಡೆಗಳು ಮತ್ತು ಎಂಜಿನಿಯರ್‌ಗಳು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ರಕ್ಷಣಾ ಕಾರ್ಯಕರ್ತರು ಸುರಂಗದ ದಾರಿಯಲ್ಲಿ ಯಶಸ್ವಿಯಾಗಿ ಕೊಳವೆಯೊಂದನ್ನು ಅಳವಡಿಸಿ, ಸಣ್ಣ ರಂಧ್ರದ ಮೂಲಕ ಗಾಳಿಯನ್ನು ಒಳಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಸಣ್ಣ ರಂಧ್ರದ ಮೂಲಕ ಗಾಳಿಯನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ ಎಂದು ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭಾರತದ 11 ಸದಸ್ಯರ ತಂಡವೊಂದು ಈ ಕಾರ್ಯಾಚರಣೆಗೆ ನೆರವಾಗುತ್ತಿದೆ. ಭಾರತದ ಸುರಂಗ ರಕ್ಷಣಾ ತಂಡವು ಇಂದು ಚಿಲಿಮೆ ಮತ್ತು ಲಾಂಗ್‌ಟಾಂಗ್ ಪ್ರದೇಶದ ಜಲವಿದ್ಯುತ್ ಸುರಂಗ ತಾಣಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ನೇಪಾಳ ಸೇನೆಯ ತಂಡದೊಂದಿಗೆ ಕೆಲಸ ಮಾಡಿದೆ. ಈ ತಂಡವು ನೇಪಾಳ ಸೇನೆಯೊಂದಿಗೆ ನಿಕಟ ಸಮನ್ವಯದೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಪ್ರವಾಹ ಪೀಡಿತ ರಾಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿರುವ ಒಂಬತ್ತು ಜಲವಿದ್ಯುತ್ ಯೋಜನೆಗಳಲ್ಲಿ (ತ್ರಿಶೂಲಿ-3A ಯೋಜನೆ ಸೇರಿದಂತೆ) ಒಟ್ಟು 537 ಕಾರ್ಮಿಕರು ಮತ್ತು ಉದ್ಯೋಗಿಗಳ ಸುಳಿವು ಸಿಕ್ಕಿಲ್ಲ.
ಈ ವಿಪತ್ತಿನಿಂದಾಗಿ ನುವಾಕೋಟ್ ಮತ್ತು ರಾಸುವಾದಲ್ಲಿ ಒಟ್ಟು 354 ಮೆಗಾವ್ಯಾಟ್ ಸಾಮರ್ಥ್ಯದ ಕಾರ್ಯನಿರ್ವಹಿಸುತ್ತಿದ್ದ ಎಂಟು ಜಲವಿದ್ಯುತ್ ಯೋಜನೆಗಳು ಹಾಗೂ ನಿರ್ಮಾಣ ಹಂತದಲ್ಲಿದ್ದ ಐದು ಯೋಜನೆಗಳಿಗೆ ಹಾನಿಯಾಗಿದೆ ಎಂದು ‘ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ನೇಪಾಳ ತಿಳಿಸಿದೆ.
ಆಗಸ್ಟ್ 26 ರಂದು ಹಿಮಾಲಯ ಪ್ರದೇಶದಲ್ಲಿ ನೀರು ಮತ್ತು ಅವಶೇಷಗಳ ಮಾರಕ ಪ್ರವಾಹವು ಅಪ್ಪಳಿಸಿದ ನಂತರ ನಾಪತ್ತೆಯಾದ ಸಾವಿರಾರು ಜನರ ಹುಡುಕಾಟದಲ್ಲಿ, ನೇಪಾಳ ಮತ್ತು ಚೀನಾದ ರಕ್ಷಣಾ ಸಿಬ್ಬಂದಿ ಭಾನುವಾರ ಕೆಸರು, ಉಕ್ಕಿ ಹರಿಯುವ ನದಿಗಳು ಮತ್ತು ಹೊಸದಾಗಿ ರೂಪುಗೊಂಡ ಸರೋವರಗಳ ಅಪಾಯದ ನಡುವೆಯೂ ಕಾರ್ಯಾಚರಣೆ ನಡೆಸಿದರು.

