ಭಾರತೀಯರ ಸಂಪೂರ್ಣ ವಿಮೋಚನೆಗಾಗಿ ನವ ಬೌದ್ಧಯಾನ ಮಾರ್ಗವು ಬಹಳ ಸೂಕ್ತವಾಗಿದೆ ಎಂಬುದನ್ನು ಅರಿತುಕೊಂಡ ದಿನ ಭಾರತವು ಪ್ರಬುದ್ಧ ಭಾರತವಾಗುತ್ತದೆ – ಡಾ. ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
“ಭಾರತದ ಇತಿಹಾಸ ಎಂದರೆ ಅದು ಬ್ರಾಹ್ಮಣ ಧರ್ಮಕ್ಕೂ ಬೌದ್ಧ ಧಮ್ಮಕ್ಕೂ ನಡೆದ ಸಂಘರ್ಷವಲ್ಲದೆ ಬೇರೇನೂ ಅಲ್ಲ”
“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು”
“ಯಾವುದೇ ಒಂದು ಜನಾಂಗವನ್ನು ನಾಶ ಮಾಡಬೇಕಾದರೆ ಅವರ ಇತಿಹಾಸವನ್ನು ನಾಶ ಮಾಡಬೇಕು, ಆಗ ಆ ಜನಾಂಗ ತಾನಾಗಿಯೇ ನಾಶವಾಗುತ್ತದೆ”.
ಭೋದಿ ಸತ್ವ ಪರಮಪೂಜ್ಯ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ರವರು ಈ ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತದ ಮೂಲ ನಿವಾಸಿ ಬಹು ಸಂಖ್ಯಾತ ಸಮುದಾಯಗಳು ಇಂದು ಸಾವಿರಾರು ಜಾತಿಗಳ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹಿಂದುಳಿದ ಜಾತಿಗಳನ್ನು ಶೂದ್ರರೆಂದು, ಅತ್ಯಂತ ಕೆಳ ಜಾತಿಗಳನ್ನು ಅಸ್ಪೃಶ್ಯರೆಂದು ಕರೆಯುತ್ತಾರೆ. ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ವ್ಯವಸ್ಥೆ, ಜಾತಿ ಪದ್ಧತಿ ವೈದಿಕ ಧರ್ಮದ ತಳಹದಿ. ಜಾತಿಗಳು ಬರುವುದಕ್ಕಿಂತ ಮೊದಲು ವರ್ಣಾಶ್ರಮ ಸಿದ್ಧಾಂತದಡಿಯಲ್ಲಿ ಸಮಾಜವನ್ನು ವಿಭಾಗ ಮಾಡಿದ್ದರು. ಪ್ರಾಚೀನ ಭಾರತದಲ್ಲಿ ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿದ್ದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಈ ನಾಲ್ಕು ವರ್ಣಗಳು ಮಾಡಬೇಕಾದ ಕೆಲಸಗಳನ್ನು, ಮಾಡಬಾರದ ಕೆಲಸಗಳನ್ನು ಹುಟ್ಟಿನ ಆಧಾರದ ಮೇಲೆ ಮೊದಲೇ ನಿರ್ಧಾರ ಮಾಡಲಾಗಿತ್ತು .

ಬ್ರಾಹ್ಮಣರು ಬ್ರಹ್ಮನ ತಲೆಯಿಂದ ಜನಿಸಿದ್ದರಿಂದ ಅವರಿಗೆ ಜ್ಞಾನವನ್ನು ಗಳಿಸುವುದು, ವೇದಾಧ್ಯಯನ ಮಾಡುವುದು, ಶಿಕ್ಷಣ ನೀಡುವುದು ಮುಂತಾದ ಕೆಲಸಗಳನ್ನು ವಹಿಸಲಾಗಿತ್ತು. ಕ್ಷತ್ರಿಯರು ಬ್ರಹ್ಮನ ತೋಳುಗಳಿಂದ ಜನಿಸಿದ್ದರಿಂದ ಅವರಿಗೆ ರಾಜ ಧರ್ಮ ಪಾಲನೆ, ರಾಜ್ಯಭಾರ ಮಾಡುವ ಹೊಣೆಯನ್ನು ವಹಿಸಲಾಗಿತ್ತು. ವೈಶ್ಯರು ಬ್ರಹ್ಮನ ಹೊಟ್ಟೆಯಿಂದ ಜನಿಸಿದ್ದರಿಂದ ಅವರಿಗೆ ವ್ಯಾಪಾರ ವಹಿವಾಟನ್ನ ವಹಿಸಲಾಗಿತ್ತು. ಶೂದ್ರರು ಬ್ರಹ್ಮನ ಪಾದಗಳಿಂದ ಜನಿಸಿದ್ದರಿಂದ ಅವರಿಗೆ ಈ ಮೇಲಿನ ಮೂರು ವರ್ಣಗಳ ಸೇವೆಗಳನ್ನು ಮಾಡುವ ಹೊಣೆಯನ್ನು ವಹಿಸಲಾಗಿತ್ತು. ಒಂದು ವರ್ಣದಿಂದ ಮತ್ತೊಂದು ವರ್ಣಕ್ಕೆ ತಮಗೆ ಇಷ್ಟ ಬಂದ ಹಾಗೆ ಬದಲಾವಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿರಲಿಲ್ಲ. ಯಾರು ಎಲ್ಲಿ ಹುಟ್ಟಿರುತ್ತಾರೋ ಅದೇ ವರ್ಣದಲ್ಲಿ ಇರಬೇಕು, ಮದುವೆಯಾಗಬೇಕು ಮತ್ತು ಸಾಯಬೇಕು. ಯಾರಿಗೂ ಇದನ್ನು ಉಲ್ಲಂಘನೆ ಮಾಡುವ ಅಧಿಕಾರ ಇರಲಿಲ್ಲ. ಒಂದು ವೇಳೆ ಉಲ್ಲಂಘಿಸಿದರೆ ಅವರಿಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ಮನು ಧರ್ಮಶಾಸ್ತ್ರದ ಪ್ರಕಾರ ನೀಡುತ್ತಿದ್ದರು. ಶೂದ್ರರಿಗಂತೂ ಯಾವುದೇ ಅಧಿಕಾರ ಅಂದರೆ ಶಿಕ್ಷಣ, ವ್ಯಾಪಾರ, ಸಂಪತ್ತಿನ ಶೇಖರಣೆ ಮುಂತಾದವುಗಳಿಗೆ ಅವಕಾಶ ಕೊಟ್ಟಿರಲಿಲ್ಲ. ಹಾಗೊಂದು ವೇಳೆ ಅವರಿಗೆ ಸಂಪತ್ತು ಇರುವುದು ತಿಳಿದು ಬಂದರೆ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಬ್ರಾಹ್ಮಣರಿಗೆ ಮತ್ತು ಕ್ಷತ್ರಿಯರಿಗೆ ಇತ್ತು. ಇಂತಹ ವ್ಯವಸ್ಥೆಯಿಂದ ಶೂದ್ರರು ಗುಲಾಮರಿಗಿಂತ ದಯನೀಯವಾದ ಸ್ಥಿತಿಗೆ ತಲುಪಿದರು.ಇಂತಹ ಸಮಯದಲ್ಲಿ ಭಾರತದ ಜಂಬೂ ದ್ವೀಪದಲ್ಲಿ ಜನಿಸಿದ ಗೌತಮ ಸಿದ್ದಾರ್ಥ ವೈದಿಕ ಧರ್ಮದ ವರ್ಣಾಶ್ರಮ ಪದ್ಧತಿಯನ್ನು ಮೊಟ್ಟ ಮೊದಲ ಬಾರಿಗೆ ವೈಚಾರಿಕವಾಗಿ ಪ್ರಶ್ನೆ ಮಾಡುತ್ತಾರೆ. ವೈದಿಕ ಆಚರಣೆಗಳನ್ನು ಖಂಡ ತುಂಡವಾಗಿ ವಿರೋಧಿಸುತ್ತಾರೆ. ವೈದಿಕ ಧರ್ಮದ ಬದಲಾಗಿ ಶೋಷಣೆಗೆ ತುತ್ತಾದ ಜನರಿಗೆ ಅತ್ಯಂತ ಸರಳ ಸಿದ್ಧಾಂತವನ್ನು, ಧರ್ಮವನ್ನು ಬೋಧಿಸುತ್ತಾರೆ ಅದೇ ಮುಂದೆ ಬೌದ್ಧ ಧರ್ಮ ಎಂದು ಹೆಸರು ಪಡೆಯಿತು.
ಭಾರತದ ಬಹುಭಾಗವನ್ನು ಆಳುತ್ತಿದ್ದ ನಾಗಬೌದ್ಧ ದೊರೆಗಳು ಬೌದ್ಧ ಧರ್ಮವನ್ನು ಇಡೀ ಏಷ್ಯಾ ಖಂಡಕ್ಕೆ ಹರಡಿದರು. ಇಂತಹ ಭವ್ಯ ಪರಂಪರೆಗೆ ಸೇರಿದ ಮೂಲ ನಿವಾಸಿ ಬಹು ಸಂಖ್ಯಾತ ಭಾರತೀಯರು ಇಂದು ಶೂದ್ರರಾಗಿ, ಅಸ್ಪೃಶ್ಯರಾಗಿ, ಬಡವರಾಗಿ, ಶೋಷಿತರಾಗಿ ಬದುಕುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯವಿಲ್ಲದೆ ವೈದಿಕ ಧರ್ಮದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಜಾತಿ ವ್ಯವಸ್ಥೆಯ ಕರಾಳ ಕೂಪದಲ್ಲಿ ನರಳುತ್ತಿದ್ದಾರೆ. ಇವರು ಯಾರು ಮೂಲದಲ್ಲಿ ಈ ವೈದಿಕ ಧರ್ಮದವರಲ್ಲ, ಹಿಂದೂ ಧರ್ಮದವರಲ್ಲ ಬದಲಾಗಿ ಭಾರತದ ಮೂಲ ನಿವಾಸಿಗಳು. ಭಾರತದ ಬಹುಭಾಗವನ್ನು ಆಳಿದ ಬೌದ್ಧ ನಾಗ ದೊರೆಗಳು. ಈ ಇತಿಹಾಸವನ್ನು ನಮಗೆ ಶೋಧಿಸಿ ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ರವರು.

ಭಾರತದಲ್ಲಿ ಬೌದ್ಧ ಧರ್ಮವು ಸಾವಿರಾರು ವರ್ಷಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ನಂತರ ವೈದಿಕ ಧರ್ಮದ ಕುತಂತ್ರಗಳಿಗೆ, ದಾಳಿಗಳಿಗೆ ತುತ್ತಾಗಿ ಹಾಗೂ ಇಸ್ಲಾಂನ ದಾಳಿಗೆ ಒಳಗಾಗಿ ಅವಸಾನದ ಅಂಚಿಗೆ ತಲುಪಿತು. ಇದರಿಂದ ಮತ್ತೆ ಭಾರತೀಯ ಸಮಾಜ ಗಾಢಾಂಧಕಾರಕ್ಕೆ ಮರಳಿತು. ಈ ಸ್ಥಿತಿಯು ಸುಮಾರು 2,500 ವರ್ಷಗಳ ಕಾಲ ಮುಂದುವರಿದ ಪರಿಣಾಮವಾಗಿ ಭಾರತೀಯ ಮೂಲ ನಿವಾಸಿಗಳಾದ ಶೂದ್ರರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಧರ್ಮವನ್ನು ಮರೆತುಬಿಟ್ಟರು. ಇಷ್ಟೇ ಅಲ್ಲ ಇವರು ವೈದಿಕ ಧರ್ಮದಲ್ಲಿ ಶಿಕ್ಷಣ, ಅಧಿಕಾರ, ಸಂಪತ್ತು ಮತ್ತು ಧಾರ್ಮಿಕ ಸಂಸ್ಕಾರವನ್ನು ಕಳೆದುಕೊಂಡರು. ಭಾರತಕ್ಕೆ ಬ್ರಿಟಿಷರ ಆಗಮನದಿಂದ ವೈದಿಕ ಧರ್ಮದೊಳಗೆ ಅನೇಕ ಸುಧಾರಣೆಗಳಾದವು. ಇವುಗಳ ಪರಿಣಾಮದಿಂದ ಪರಮ ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸ್ವದೇಶಿ ಮತ್ತು ವಿದೇಶಿ ಶಿಕ್ಷಣ ದೊರೆಯುವಂತಾಯಿತು.
ಬಾಬಾ ಸಾಹೇಬರು ಜೀವನದುದ್ದಕ್ಕೂ ಜಾತಿ ವ್ಯವಸ್ಥೆಯ ಕಹಿಯನ್ನು ಉಂಡವರು. ಬಾಬಾ ಸಾಹೇಬರು ತಮ್ಮ ಜೀವನಪೂರ್ತಿ ಭಾರತೀಯರ ಮನ ಪರಿವರ್ತನೆಗಾಗಿ, ಮಾನವ ಹಕ್ಕುಗಳಿಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದರು. ಅವರ ಹೋರಾಟದ ಫಲವಾಗಿ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವವನ್ನು ಕಾನೂನು ಬದ್ಧವಾಗಿ, ಸಂವಿಧಾನದಲ್ಲಿ ಅಳವಡಿಸಿ ಪ್ರತಿಯೊಬ್ಬ ಭಾರತೀಯರಿಗೂ ಈ ಹಕ್ಕು ಅಧಿಕಾರಗಳು ಸಿಗುವಂತೆ ಮಾಡಿದರು. ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಕರೆಕೊಟ್ಟು ಆಸ್ಪೃಶ್ಯತೆಯನ್ನು ನಿಷೇಧಿಸಿದರು. ಭಾರತೀಯ ಪ್ರಜೆಗಳಿಗೆಲ್ಲರಿಗೂ ಹಕ್ಕು ಅಧಿಕಾರಗಳನ್ನು ಸಮಾನವಾಗಿ ನೀಡಿದ್ದಲ್ಲದೆ ಸಮಾಜದಲ್ಲಿದ್ದ ಎಲ್ಲಾ ತರಹದ ತಾರತಮ್ಯವನ್ನು ಕಾನೂನಾತ್ಮಕವಾಗಿ ಸಂವಿಧಾನ ಬದ್ಧವಾಗಿ ನಿಷೇಧಿಸಿದರು.
ಇಷ್ಟೆಲ್ಲಾ ಹೋರಾಟ ಮಾಡಿದರೂ, ವೈದಿಕ ಹಿಂದೂ ಸಮಾಜ ಬಾಬಾ ಸಾಹೇಬರು ನಿರೀಕ್ಷಿಸಿದಷ್ಟು ಪರಿವರ್ತನೆ ಆಗಲಿಲ್ಲ. ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಬೇಕೆಂಬ ಅವರ ಬಯಕೆ ಈಡೇರಲಿಲ್ಲ. ಹಿಂದೂ ಸಮಾಜ ಸಮ ಸಮಾಜವಾಗಬೇಕು, ಎಲ್ಲರೂ ಸಾಮರಸ್ಯದಿಂದ ಕೂಡಿ ಬಾಳಬೇಕು, ಭ್ರಾತೃತ್ವದಿಂದ ಒಂದೇ ಮನೆಯವರಂತೆ ಸಾಮರಸ್ಯ ಜೀವನ ಸಾಗಿಸಬೇಕೆಂಬ ಅವರ ಮಹತ್ವಾಕಾಂಕ್ಷೆಯ ಬಯಕೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಲಿಲ್ಲ. ಇದಕ್ಕೆ ವೈದಿಕ ಹಿಂದು ಧರ್ಮದ ನಂಬಿಕೆಗಳು ಆಚರಣೆಗಳು ಧರ್ಮಶಾಸ್ತ್ರಗಳು ಕಾರಣವಾಗಿದ್ದವು. ಈ ವೈದಿಕ ಮಡಿವಂತಿಕೆಯ ಹಿಂದೂ ಸಮಾಜ ಯಾವಾಗ ಬಾಬಾ ಸಾಹೇಬರು ನಿರೀಕ್ಷಿಸಿದಷ್ಟು ಬದಲಾಗಲಿಲ್ಲವೋ ಕೂಡಲೇ ಎಚ್ಚೆತ್ತುಕೊಂಡ ಅವರು 1935 ರಲ್ಲಿ “ಹಿಂದೂವಾಗಿ ಹುಟ್ಟಿದ್ದೇನೆ ಅದು ನನ್ನ ಆಯ್ಕೆಯಾಗಿರಲಿಲ್ಲ, ಆದರೆ ಹಿಂದೂವಾಗಿ ಮಾತ್ರ ಸಾಯಲಾರೆ” ಎಂಬ ಅತ್ಯಂತ ದೊಡ್ಡ ಸಂದೇಶವನ್ನು ಭಾರತೀಯರಿಗೆ, ವೈದಿಕ ಹಿಂದೂ ಸಮಾಜಕ್ಕೆ ನೀಡಿದರು. ಭಾರತೀಯರೆಲ್ಲರ ವಿಮೋಚನೆಗಾಗಿ 1956 ಅಕ್ಟೋಬರ್ 14ರಂದು ನಾಗಪುರದಲ್ಲಿ 10 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅದಕ್ಕೆ ಬಾಬಾ ಸಾಹೇಬರು ನೀಡಿದ ಕಾರಣ ಬೌದ್ಧ ಧರ್ಮವು ಈ ನೆಲದ ಧರ್ಮವಾಗಿದೆ, ಇದು ಭಾರತೀಯ ಪರಂಪರೆಯ ಪ್ರತೀಕವಾಗಿದೆ. ಒಂದು ಕಾಲದಲ್ಲಿ ಭಾರತದ ಬಹುಜನರೆಲ್ಲರೂ ಈ ಬೌದ್ಧ ಧರ್ಮದ ಅನುಯಾಯಿಗಳಾಗಿದ್ದರು ಎಂಬುದಾಗಿತ್ತು.
ಈ ಬೌದ್ಧ ಧರ್ಮದಲ್ಲಿ ದೇವರಿಗೆ ಸ್ಥಾನವಿಲ್ಲ, ಆತ್ಮ ಸಿದ್ಧಾಂತಕ್ಕೆ ಸ್ಥಾನವಿಲ್ಲ, ಮೂಢನಂಬಿಕೆಗಳಿಗೆ ಆಸ್ಪದವಿಲ್ಲ. ಈ ಧರ್ಮವು ಕರುಣೆ ಮೈತ್ರಿ ಸಮಾನತೆಯ ಆಧಾರದ ಮೇಲೆ ನಿಂತಿದೆ. ಇಲ್ಲಿ ಜಾತಿ ವ್ಯವಸ್ಥೆಗೆ ಯಾವುದೇ ಸ್ಥಾನಮಾನವಿಲ್ಲ. ಇಲ್ಲಿ ಎಲ್ಲರೂ ಸಮಾನರು, ಈ ಬೌದ್ಧ ಧರ್ಮವು ಮನುಷ್ಯ ಮನುಷ್ಯರ ನಡುವೆ ಯಾವ ರೀತಿಯ ಸಂಬಂಧಗಳು ಏರ್ಪಡಬೇಕು ಎಂಬುದನ್ನು ತಿಳಿಸುತ್ತದೆ. ಪ್ರಜ್ಞ ಮತ್ತು ಕರುಣಾ ಸಮಾನತೆ ಬೌದ್ಧ ಧರ್ಮದ ಆಧಾರ ಸ್ತಂಭಗಳು. ಬೌದ್ಧ ಧರ್ಮದಲ್ಲಿ ಜನ್ಮಾಂತರ, ಪುನರ್ಜನ್ಮ (ವೈದಿಕರ) ಸಿದ್ಧಾಂತಕ್ಕೆ ಮಾನ್ಯತೆ ನೀಡಿಲ್ಲ. ಇವೆಲ್ಲ ಕಾರಣಗಳಿಗಾಗಿ ಭಾರತೀಯರೆಲ್ಲರ ಹೊಸ ಜೀವನ ಪದ್ಧತಿಗಾಗಿ, ಬಿಡುಗಡೆಗಾಗಿ, ಸಮಾನತೆಗಾಗಿ ಮತ್ತು ಜಾತಿ ವಿನಾಶಕ್ಕಾಗಿ 6,000 ಜಾತಿಗಳಾಗಿ ಒಡೆದು ಹೋದವರನ್ನು, ಒಂದು ಸಿದ್ಧಾಂತದಡಿಯಲ್ಲಿ ಒಂದು ಸಂಘದಡಿಯಲ್ಲಿ ತರುವುದಕ್ಕಾಗಿ ಬೋಧಿಸತ್ವ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಈ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ತನ್ನ ಮುಂದಿನ ಜೀವನವನ್ನು ಈ ಬೌದ್ಧ ಧರ್ಮದ ಪ್ರಸಾರಕ್ಕಾಗಿ ಮುಡಿಪಾಗಿಡುತ್ತೇನೆಂದು ಶಪಥ ಮಾಡಿದರು. “ನನ್ನ ಜನರು ಭಾರತದಲ್ಲಿ ಬೌದ್ಧ ಧರ್ಮದ ಪ್ರಸಾರಕ್ಕಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧವಾಗಿದ್ದಾರೆ” ಎಂದು ಅವರ ಅನುಯಾಯಿಗಳ ಮೇಲೆ ಅಪಾರ ಭರವಸೆಯನ್ನು ಇಟ್ಟಿದ್ದರು.

ಬೋಧಿಸತ್ವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವಾಗ 22 ಪ್ರತಿಜ್ಞಾವಿಧಿಗಳನ್ನು ಅಲ್ಲಿ ನೆರೆದಿದ್ದ ಜನರಿಗೆ ಬೋಧಿಸಿದರು. ಕೇವಲ ಧಮ್ಮ ಸ್ವೀಕಾರದಿಂದ ಜನರು ಪರಿವರ್ತನೆ ಆಗುವುದಿಲ್ಲ, ಜನರು ಸಾಂಸ್ಕೃತಿಕವಾಗಿ ಬದಲಾವಣೆಯಾಗಬೇಕು, ಮೂಢನಂಬಿಕೆಗಳಿಗೆ ಬಲಿಯಾಗಬಾರದು, ವೈದಿಕರ ಕುತಂತ್ರಗಳಿಗೆ ಒಳಗಾಗಬಾರದೆಂದು ಆ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು ಮತ್ತು ಅವುಗಳ ಪಾಲನೆಯನ್ನು ಕಡ್ಡಾಯ ಗೊಳಿಸಿದರು.
ಈ ಪ್ರತಿಜ್ಞಾ ವಿಧಿಗಳ ಮೊದಲ ಎಂಟು ಪ್ರತಿಜ್ಞಾವಿಧಿಗಳು ಬಹಳ ಮಹತ್ವಪೂರ್ಣವಾದವು. ಏಕೆಂದರೆ ಈ ದೇಶದ ಶೋಷಿತ ಸಮುದಾಯಗಳು ಧಾರ್ಮಿಕವಾಗಿ ಎಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದನ್ನು ಗುರುತಿಸಿ ಅಲ್ಲಿಂದ ಬೌದ್ಧಿಕವಾಗಿ ಸಾಂಸ್ಕೃತಿಕವಾಗಿ ಬಿಡುಗಡೆಗೊಳ್ಳಬೇಕು ಎಂಬುದನ್ನು ಮನಗಂಡು ಆ ವಿಧಿಗಳನ್ನು ರೂಪಿಸಿದ್ದರು. ಇನ್ನುಳಿದಂತೆ ಬೌದ್ಧ ಧರ್ಮದ ಪಂಚಶೀಲಗಳು, ದಶಪಾರಮಿತಗಳು ಅಷ್ಟಾಂಗ ಮಾರ್ಗಗಳ ತತ್ವಗಳನ್ನು ಒಳಗೊಂಡಿದ್ದವು. ಈ ಪ್ರತಿಜ್ಞೆಗಳಿಂದ ಯಾರಿಗೂ ಜೀವ ಹಾನಿ, ಮಾನಹಾನಿ, ಆರ್ಥಿಕ ನಷ್ಟ, ಸಾಮಾಜಿಕ ಗೌರವ ನಷ್ಟ ಉಂಟಾಗುವುದಿಲ್ಲ, ಬದಲಾಗಿ ಸಮಾಜದಲ್ಲಿ ಸಮಾನತೆ ವೈಚಾರಿಕತೆ ಸಹೋದರತೆ ಭ್ರಾತೃತ್ವ ನೆಲೆಗೊಳ್ಳುತ್ತದೆ ಎಂದು ಬಾಬಾ ಸಾಹೇಬರು ನಂಬಿದ್ದರು. ಭಾರತೀಯ ಸಮಾಜವನ್ನು ಒಂದು ಪ್ರಜಾಸತ್ತಾತ್ಮಕ ಗಣತಂತ್ರ ದೇಶವಾಗಿಸುವುದರ ಜೊತೆಗೆ ಭಾರತದ ಪ್ರಜೆಗಳೆಲ್ಲರಿಗೂ (ಸಾಮಾಜಿಕ, ನ್ಯಾಯವನ್ನು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು) ಸ್ವಾತಂತ್ರ್ಯವನ್ನು (ವಿಚಾರ, ಅಭಿವೃದ್ಧಿ, ನಂಬಿಕೆ, ಧರ್ಮ ಮತ್ತು ಉಪಾಸನೆ), ಸಮಾನತೆಯನ್ನು (ಸ್ಥಾನಮಾನ, ಮತ್ತು ಅವಕಾಶ, ಸಮಾನ ಅವಕಾಶಗಳು) ದೊರೆಯುವಂತೆ ಮಾಡುವುದಕ್ಕಾಗಿ ಭ್ರಾತೃತ್ವವನ್ನು (ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆ) ಮೂಡಿಸುವುದಕ್ಕಾಗಿ ಮಾಡಿದ ಪ್ರಯತ್ನವೇ ಆಗಿತ್ತು ಎಂಬುದನ್ನು ನಾವು ಮನಗಾಣಬೇಕು.
ಭಾರತದ ವಿದ್ಯಾವಂತರಾದ ಜನರು ಬಾಬಾ ಸಾಹೇಬರನ್ನು ಸರಿಯಾಗಿ ಓದಿಕೊಂಡರೆ, ಅವರ ಹೋರಾಟವನ್ನು ಮತ್ತು ಅವರ ವಿಮೋಚನಾ ರಥವನ್ನು ಅರ್ಥ ಮಾಡಿಕೊಂಡರೆ ಅವರು “ವಿಮೋಚನಾ ರಥದ ಸಾರಥಿಗಳಾಗುತ್ತಾರೆ” ಭಾರತೀಯರ ಸಂಪೂರ್ಣ ವಿಮೋಚನೆಗಾಗಿ ನವ ಬೌದ್ಧಯಾನ ಮಾರ್ಗವು ಬಹಳ ಸೂಕ್ತವಾಗಿದೆ ಎಂಬುದನ್ನು ಅರಿತುಕೊಂಡ ದಿನ ಭಾರತವು ಪ್ರಬುದ್ಧ ಭಾರತವಾಗುತ್ತದೆ.
ಡಾ ನಾಗೇಶ್ ಮೌರ್ಯ
ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಬೆಂಗಳೂರು.
ಇದನ್ನೂ ಓದಿ- ಧಮ್ಮಸಾರ | ಜನರು ಏನನ್ನ ನಂಬಬೇಕು ಮತ್ತು ಯಾವುದನ್ನ ಪಾಲಿಸಬೇಕು?


