ಭಾರತದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಭಾರತದ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಹೇಳಿಕೆ ಮೂಲಕ ಚರ್ಚೆಯದಲ್ಲಿದ್ದರು. ಆದರೀಗ ಅವರು ತಮ್ಮ ಕಂಪನಿಯ ಶೇ. 0.04ರಷ್ಟು ಪಾಲನ್ನು ತಮ್ಮ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಕಂಪನಿಯಲ್ಲಿ 15 ಲಕ್ಷ ಷೇರುಗಳನ್ನು ಅಂದರೆ ಶೇಕಡಾ 0.04ರಷ್ಟು ಪಾಲನ್ನು ಏಕಾಗ್ರಹ ಹೊಂದಿರುವುದಾಗಿ ಸೋಮವಾರ ಷೇರು ವಿನಿಮಯ ಕೇಂದ್ರ ಮಾಹಿತಿ ನೀಡಿದೆ. ಈ ಷೇರು ಹಂಚಿಕೆಯ ನಂತರ ಇನ್ಫೋಸಿಸ್‌ನಲ್ಲಿರುವ ಎನ್‌ಆರ್ ನಾರಾಯಣ ಮೂರ್ತಿಯವರ ಪಾಲು ಶೇ. 0.40ಯಿಂದ ಶೇ. 0.36ಕ್ಕೆ ಅಂದರೆ 1.51 ಕೋಟಿ ಕುಸಿದಿದೆ.
ನವೆಂಬರ್‌ನಲ್ಲಿ ನಾರಾಯಣ ಮೂರ್ತಿ ಮತ್ತು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಪತ್ನಿ ಅಪರ್ಣಾ ಕೃಷ್ಣನ್ ಅವರಿಗೆ ಗಂಡು ಮಗು ಜನಿಸಿತು. ಈ ಮಗಿಗೆ ಈಗ ಷೇರನ್ನು ಉಡುಗೊರೆಯಾಗಿ ನೀಡಲಾಗಿದೆ.
ಸೋಮವಾರ ಇನ್ಫೋಸಿಸ್ ಷೇರುಗಳು ಬೆಲೆ 1601 ರೂ.ಗಳಾಗಿತ್ತು. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳು ಸುಮಾರು ಶೇ. 14 ರಷ್ಟುಲಾಭವನ್ನು ನೀಡಿವೆ.
ನಮ್ಮ ಯುವಜನರು ‘ಇದು ನನ್ನ ದೇಶ, ನಾನು ವಾರದಲ್ಲಿ 70 ಗಂಟೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ 240 ಕೋಟಿ ಷೇರ್ ನೀಡಿದ್ದಾರಲ್ಲ. ದೇಶಕ್ಕಾಗಿ ಅವರ ಮೊಮ್ಮಗ 70 ಗಂಟೆ ಕೆಲಸ ಮಾಡಲ್ವೇ? ಎಂದು ಸಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಈ ಮೂಲಕ ಯುವಜನತೆಗೆ ಈತರದ ಪೊಳ್ಳು ಮಾರ್ಗದರ್ಶನ ನೀಡಿ, ತಮ್ಮ ಮನೆಯವರಿಗೆ ಕೂತಿ ತಿನ್ನುವಷ್ಟು ಆಸ್ತಿ ಮಾಡುತ್ತಿದ್ದಾರೆ ನಾರಾಯಣಮೂರ್ತಿ ಅವರು ಎಂದು ಸಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಚೇತನ್ ಅಹಿಂಸಾ ಟೀಕೆ:-
“4 ತಿಂಗಳ ಮೊಮ್ಮಗನಿಗೆ 240 ಕೋಟಿ ರೂಪಾಯಿ ಮೌಲ್ಯದ ಷೇರು ಉಡುಗೊರೆ ನೀಡಿದ್ದಾರೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ. 120 ದಿನಗಳ ವಯಸ್ಸಿನಲ್ಲಿ, ಆ ಮಗು ಜಗತ್ತಿನ 99.9999% ಗಿಂತ ಶ್ರೀಮಂತವಾಗಿದೆ — ಅಸಹ್ಯಕರ. ಭಾರತದಲ್ಲಿ ಯಾವುದೇ ಪಿತ್ರಾರ್ಜಿತ ತೆರಿಗೆ ಇಲ್ಲ — ಇದು ಕೂಡ ಅಸಹ್ಯಕರ. ಇಂತಹ ಅಸಭ್ಯ ಪೀಳಿಗೆಯ ಸಂಪತ್ತಿನ ವರ್ಗಾವಣೆಯನ್ನು ತಡೆಯುವ ಬೃಹತ್ ಪಿತ್ರಾರ್ಜಿತ ತೆರಿಗೆಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಬೇಕು” ಎಂದು ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.