ನೆನಪು
ಪ್ರೊ. ಮುಝಫರ್ ಅಸ್ಸಾದಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಬಹುತ್ವದ ಪ್ರಖರ ಚಿಂತಕ. ಅವರ ಬಹುತ್ವದ ಚಿಂತನೆ ನಮ್ಮೆಲ್ಲರದಾಗಲಿ ಎಂದು ಪ್ರೊ.ಮುಝಫರ್ ಅಸ್ಸಾದಿಯವರನ್ನು ನೆನೆಯುತ್ತ ಅವರ ನಿಕಟವರ್ತಿಗಳಲ್ಲಿ ಒಬ್ಬರಾದ ಮೈಸೂರಿನ ರಂಗಕರ್ಮಿ ಸಿ ಬಸವಲಿಂಗಯ್ಯನವರು ಬರೆದ ನುಡಿ ನಮನ ಇಲ್ಲಿದೆ.
ಹಕೀಮ ಪ್ರಭುತ್ವ ಮತ್ತು ರಾಜಕೀಯ ಪ್ರಭುಗಳಿಗೆ ಮದ್ದು ಅರೆಯುತ್ತಿದ್ದವ. ಪ್ರೊ.ಮುಝಫರ್ ಅಸ್ಸಾದಿ ಪ್ರಜಾಪ್ರಭುತ್ವದ ಜನ ಸೇವಕರಿಗೂ ಮಾರ್ಗ ದರ್ಶಕರಾಗಿದ್ದರು. ತಮ್ಮ ಬೌದ್ಧಿಕ ನೆಲೆಯಲ್ಲಿ ತರಗತಿಗಳ ಕೋಣೆಗಳಿಗೆ ಸೀಮಿತವಾಗದೆ ಜನಪರ ಹೋರಾಟಗಳಲ್ಲಿ ಬೀದಿಗೆ ಬಂದು ಪ್ರಾಕ್ಟಿಕಲ್ ಆಗಿ ಹೋರಾಟಗಳಲ್ಲಿ ತಮ್ಮ ತತ್ವ ಚಿಂತನೆ ಬೆಸೆಯುತ್ತಿದ್ದರು.
ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಚುನಾವಣೆಯ ಚದುರಂಗ ಆಟದಲ್ಲಿ ಅಪಾಯದ ಧರ್ಮಾಧಾರಿತ ಫ್ಯಾಶಿಸ್ಟ್ ಶಕ್ತಿಯ ಕೈಗೆ ಸಿಕ್ಕಿ ನಲುಗುತ್ತಿದೆ. ಶ್ರೀಸಾಮಾನ್ಯರ ಬದುಕು ಮತ್ತು ಅವರ ಪರವಾಗಿ, ಆಕಾಡೆಮಿಕ್ ಆಗಿ, ಸಮಾಜ ಶಾಸ್ತ್ರೀಯ ರಾಜಕೀಯ ಚಿಂತಕರಾಗಿ ಬೀದಿಯಲ್ಲಿ ಅವರ ಹಕ್ಕುಗಳಿಗೆ ಧ್ವನಿ ಎತ್ತುತ್ತಿದ್ದ ಅಸಾದಿಯವರು ಯಾಕಿಷ್ಟು ಅವಸರ ಅವಸರವಾಗಿ ಈ ಲೋಕ ತ್ಯಜಿಸಿದರೋ..
ಈ ಜನವರಿ 4 ಮತ್ತು ನಾಲ್ಕರ ಬೆಳಿಗ್ಗೆ ನನಗೆ ಅತೀವ ದುಃಖದ ಸಂಗತಿ ತರುತ್ತದೆ ಎಂದು ತಿಳಿದಿರಲಿಲ್ಲ. ಬೀದರ್ ಯಶವಂತಪುರ ಎಕ್ಸಪ್ರೆಸ್ ರೈಲುಗಾಡಿ ರಾಯಚೂರು ನಿಲ್ದಾಣವನ್ನು 3 ರ ರಾತ್ರಿ 11.30ಗೆ ಬರಬೇಕಾಗಿದ್ದು ತೂಗಡಿಸುತ್ತ ಏಳುತ್ತಾ ಬೀಳುತ್ತಾ ಸೋಲಾಪುರ ಕಡೆಯಿಂದ ಎರಡು ಗಂಟೆ ತಡವಾಗಿ 1.35 ಗಂಟೆಗೆ ತಲುಪಿತು. ಅರ್ದ ಬರ್ದ ನಿದ್ರಾವಸ್ಥೆಯಲ್ಲಿ ನಿಲ್ದಾಣದಲ್ಲಿ ನನ್ನೊಂದಿಗೆ ಎಡಪಂಥೀಯ ಹೋರಾಟಗಾರ ಮೂಲ ರಾಯಚೂರು ಜಿಲ್ಲೆಯವರೇ ಆದ ಶ್ರೀ ಚಂದ್ರಶೇಖರ ಬಾಳೆಯವರು ಜೊತೆಗಿದ್ದರು. ಅವರದೇ ಸನ್ಮಾನ ಮತ್ತು ಅಭಿನಂದನಾ ಗ್ರಂಥ “ಅರುಣೋದಯ“ ಬಿಡುಗಡೆ ಮಾಡಲು ಬಾಳೆಯವರ ಒಡನಾಡಿಗಳು ಅಭಿಮಾನಿಗಳು ವಿಶೇಷ ಆಹ್ವಾನ ಕೊಟ್ಟು ರಾಯಚೂರಿಗೆ ನನ್ನನ್ನು ಕರೆಸಿದ್ದರು. ಕಾರ್ಯಕ್ರಮ ಮುಗಿದು ಮೈಸೂರಿಗೆ ಮರಳಲು ರಾತ್ರಿ ತಡವಾಗಿ ಬಂದ ರೈಲು ಹತ್ತಿ, ನಮ್ಮ ಬೋಗಿಗಳು ಬೇರೆ ಬೇರೆ ಇದ್ದದ್ದರಿಂದ ಬೆಳಿಗ್ಗೆ ಸಿಗುವುದಾಗಿ ವಿದಾಯ ಹೇಳಿ ಮಲಗಿದಾಗ ನಿದ್ರೆ ಅರನಿದ್ರೆಯೇ ; ಈ ಮಧ್ಯೆ ಎಚ್ಚರವಾಗಿ ಗಡಿಯಾರ ನೋಡಲು ಮೊಬೈಲ್ ಆನ್ ಮಾಡಿದಾಗ ಬೆರಳು FB ಗೆ ತಾಕಿ ಕಣ್ಣಾಯಿಸಿದಾಗ ಎರಡು ಸುದ್ದಿಗಳು ಅವರ ಭಾವಚಿತ್ರಗಳ ಜೊತೆಗೆ ಕಂಡವು. ಹುಟ್ಟು ಹಬ್ಬದ ಶುಭಾಶಯಗಳ ಸುದ್ದಿ ಇರಬಹುದು ಅಂತ ಭಾವಿಸಿದ್ದೆ. ಸೂಕ್ಷ್ಮವಾಗಿ ಗಮನಿಸಿದಾಗ ಅವು ಸಂಕಟದ ಸುದ್ದಿಗಳಾಗಿದ್ದವು. ಪ್ರಗತಿಪರ ರಾಜಕೀಯ ಚಿಂತಕ ಪ್ರೊ.ಮುಝಫರ್ ಅಸ್ಸಾದಿ ಮತ್ತು ಎಡಪಂಥೀಯ ರೈತ ಹೋರಾಟಗಾರ ಸಂಗಾತಿ ಬಯ್ಯಾರೆಡ್ದಿ ನಮ್ಮನ್ನ ಅಗಲಿದ್ದಾರೆ ಎಂಬುದು.
ಮೈಸೂರಿನಲ್ಲಿ ಮೂರು ದಶಕಗಳಿಂದ ಕಾರ್ಯಕ್ರಮಗಳಲ್ಲಿ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಅವರು ಡಿಸೆಂಬರ್ 25 ರಂದು ರಂಗಾಯಣದ ಆವರಣದಲ್ಲಿ ಜನಮನ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಜಿಕೆವಿಕೆಯ ಡಾ. ರಾಧಾಕೃಷ್ಣ ರ “ಅವಸಾನದತ್ತ ನೀಲಗಿರಿ ಕನ್ನಡಿಗರು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಘಾಟಕರಾಗಿ, ಪುಸ್ತಕ ಬಿಡುಗಡೆ ಮಾಡಿ ಪ್ರೊ. ಅಸ್ಸಾದಿಯವರು ದೇಶದ ಮೂಲ ನಿವಾಸಿಗಳ ವಸ್ತುಸ್ಥಿತಿ ಮತ್ತು ಅವರ ಬವಣೆಗಳು, ಸರ್ಕಾರಗಳ ಧೋರಣೆಗಳ ಬಗ್ಗೆ ಮಾತನಾಡಿದರು. ಕರ್ನಾಟಕದ ನೀಲಗಿರಿ, ಊಟಿಯನ್ನು ಕನ್ನಡಿಗರು ಮತ್ತು ಕರ್ಣಾಟಕ ಸರ್ಕಾರ ತಮಿಳು ನಾಡಿಗೆ ಹೇಗೆ ತಮ್ಮ ಹಕ್ಕು ಚಲಾಯಿಸದೆ ಪುಕ್ಕಟೆಯಾಗಿ ಉಡುಗೊರೆಯಾಗಿ ಕೊಟ್ಟೆವು ಎಂದು ಮಾರ್ಮಿಕವಾಗಿ ಮಾತನಾಡಿದರು. ನೀಲಗಿರಿ ಕನ್ನಡಿಗರು ತಾವು ಕರ್ನಾಟಕದಿಂದ ದುಡಿಮೆಗಾಗಿ ವಲಸೆ ಬಂದವರಲ್ಲ ನೀಲಗಿರಿಯ ಮೂಲ ನಿವಾಸಿಗಳು ಎಂದು ತಮ್ಮ ಅಸ್ಮಿತೆಯನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಚಿಂತಿಸುವ ಸಲಹೆ ಕೊಟ್ಟರು. ಅಸ್ಸಾದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅದೇ ಕೊನೆಯದಾಗಬಹುದು ಎಂದು ನಾನು ಅಂದುಕೊಂಡಿರಲಿಲ್ಲ.
ಇದೇ ಅವರ ಕೊನೆಯ ಭೇಟಿಯಾದರೆ ನಾನು ಅಸ್ಸಾದಿಯವರನ್ನು ಮೊದಲ ಸಲ ಭೇಟಿಯಾದದ್ದು ಯಾವಾಗ? ಎಲ್ಲಿ ? ಗತಿಸಿದ ಕಾಲಕ್ಕೆ ನನ್ನ ಮನಸ್ಸು ಮತ್ತೆ ಜಿಗಿಯಿತು.
80 ರ ದಶಕದ ಆರಂಭದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿಯಲು ನಾನು ಅಂದಿನ GT Exp. ( Graand tranks) ರೈಲು ಹತ್ತಿದಾಗ ಅದು “ಕೊಂಕಣ ಸುತ್ತಿ ಮೈಲಾರಕ್ಕೆ” ಹೋಗುವ ಗಾದೆಯಂತೆ ಕರ್ನಾಟಕದಿಂದ ತಮಿಳುನಾಡು ತಲುಪಿ ನಂತರ ಆಂಧ್ರ, ಮಧ್ಯಪ್ರದೇಶ ಮಾರ್ಗವಾಗಿ ದೇಶದ ಹಲವು ರಾಜ್ಯಗಳ ದರ್ಶನ ಮಾಡಿಸಿ ಎರಡು ಹಗಲು ಎರಡು ರಾತ್ರಿ ಬೋಗಿಯಲ್ಲೇ ಕೂಡಿಹಾಕಿ ಹಳೆ ದಿಲ್ಲಿಯ ನಿಜಾಮುದ್ದೀನ್ ನಿಲ್ದಾಣಕ್ಕೆ ತಲುಪಿಸುತ್ತಿತ್ತು. ಆ ಹೆಬ್ಬಾವಿನಂತ ಬಹಳ ಉದ್ದದ ರೈಲಿನ ಒಂದು ಬೋಗಿಯಲ್ಲಿದ್ದ ಧಾರವಾಡದ ಅಶೋಕ ಶೆಟ್ಟರ್ ತಮ್ಮ ಎಂ.ಫಿಲ್, ಪಿಎಚ್ಡಿ ಶಿಕ್ಷಣಕ್ಕಾಗಿ JNU ಸೇರಲು ರೈಲು ಹತ್ತಿದವರು ಆಕಸ್ಮಾತ್ ಕನ್ನಡ ಭಾಷೆಯ ಕಾರಣಕ್ಕೆ ಪರಿಚಯವಾದರು. ಅವರ ಮೂಲಕ ಪ್ರೊ. ಮುಝಫರ್ ಅಸ್ಸಾದಿ JNU ನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಫಿಲ್ ಮತ್ತು ಪಿಎಚ್ಡಿ ಪದವಿ ಪಡೆಯಲು ಕರಾವಳಿ ಕಡೆಯಿಂದ ಬಂದಿದ್ದರು. ಅಶೋಕ ಶೆಟ್ಟರ್ ಮೂಲಕ ಅವರು ನನಗೆ ಪರಿಚಯವಾದರು. ನಾನು ಪ್ರತಿ ಶನಿವಾರ ಸಂಜೆ JNU ತಲುಪಿ ಭಾನುವಾರದ ಸಂಜೆ ವರೆಗೆ ಅಶೋಕ ಶೆಟ್ಟರ್ ರ ರೂಂಮೇಟ್ ಆಗುತ್ತಿದ್ದೆ. ಅವರು ಮಂಡಿಹೌಸ್ ನಲ್ಲಿದ್ದ JNU ಗೆಸ್ಟ್ ಹೌಸ್ ಮತ್ತು ಗ್ರಂಥಾಲಯಕ್ಕೆ ಬರುವಾಗ NSD ಗೂ ಬಂದು ನಾಟಕ ನೋಡಿ ಹೋಗುತ್ತಿದ್ದರು ಮತ್ತು ನಮ್ಮ ವಿದ್ಯಾರ್ಥಿ ನಿಲಯದಲ್ಲಿ ತಂಗುತ್ತಿದ್ದರು. ನನ್ನ ರೂಂಮೇಟ್ ಗಳು ನನ್ನ ಗೆಸ್ಟ್ ಗೆ ಅನುಕೂಲ ಕಲ್ಪಿಸಲು ನೆರವಾಗುತ್ತಿದ್ದರು. 1981_84 ಅವಧಿಯಲ್ಲಿ ನನಗೆ NSD ಆಂತರಿಕ ಹಾಗೂ JNU ಬಾಹ್ಯ ಕಲಿಕೆಯ ಕೇಂದ್ರಗಳಾದವು. SFI ಸಂಘಟನೆ ಕರ್ನಾಟಕದಲ್ಲೇ ನನಗೆ ಸಮಾಜವಾದ, ಸಮತಾವಾದದ ಮೂಲ ತತ್ವಗಳನ್ನು ಪರಿಚಯಿಸಿದ್ದರೆ, ಸಮುದಾಯ ಸಾಂಸ್ಕೃತಿಕ ಸಂಘಟನೆ ಸಾಂಸ್ಕೃತಿಕ ರಾಜಕಾರಣವನ್ನು ಮನದಟ್ಟು ಮಾಡಿಸಿತ್ತು. ಕಲೆ, ಕಲಾವಿದರು, ಕಲಾಮೀಮಾಂಸೆ, ಯಾರಿಗಾಗಿ? ಯಾರಿಗೋಸ್ಕರ? ಯಾರದ್ದಾಗಿರಬೇಕು ಎಂಬ ಅರಿವನ್ನು ಅರಿವ ನಿಟ್ಟಿನಲ್ಲಿ ಪ್ರಶ್ನೆಗಳನ್ನು ನನ್ನಲ್ಲಿ ಮೂಡಿಸಿದ್ದವು. ನಾಟಕ ಕಲೆಯ ಬಗ್ಗೆ ನಾನು ಹೆಚ್ಚಿಗೆ ಕಲಿಯುವ ಆಸಕ್ತಿಯಿಂದ NSD ಸೇರಿದ್ದೆ. ನನ್ನ ರೂಂಮೇಟ್ ಗಳಾಗಿ ಲಖನೌದ ಸಲೀಮ್ ಆರಿಫ್ ಮತ್ತು ಡೆಹ್ರಾಡೂನ್ ನ ಪ್ರಗತಿ ಶಾ ಜೊತೆಯಾಗಿದ್ದರು. JNUಗೆ ನಾನು ಹೋದಾಗ ಆಗಾಗ ಅಸ್ಸಾದಿಯವರ ಭೇಟಿಯಾಗುತ್ತಿತ್ತು.
ಮಂಡಿಹೌಸ್ ನ ಕಮಾನಿ ಆಡಿಟೋರಿಯಂ ನಲ್ಲಿ NSD Rep ಕಂಪನಿಗೆ ಇಬ್ರಾಹಿಂ ಅಲ್ಕಾಜಿ ನಿರ್ದೇಶಿಸಿದ್ದ ಗಿರೀಶ್ ಕಾರ್ನಾಡ್ ರ ತುಘಲಕ್ ನಾಟಕವನ್ನು ನೋಡಲೂ ಅವರು ಬಂದಿದ್ದರು. ಬಿ. ವಿ. ಕಾರಂತರು ಹಿಂದಿ ಭಾಷೆಗೆ ಅನುವಾದಿಸಿದ ಕನ್ನಡ ನಾಟಕವನ್ನು ಹಿಂದಿವಾಲಗಳು ತಮ್ಮದೇ ಮೂಲ ಹಿಂದಿ ನಾಟಕವೆಂದು ನಂಬಿದ ಅನೇಕ ಬೆಪ್ಪು ತಕ್ಕಡಿಗಳು ದಿಲ್ಲಿಯಲ್ಲಿ ಇದ್ದರು!. ಆ ಸಂದರ್ಭದಲ್ಲಿ ಮುಝಫರ್ ರನ್ನು ಕಂಡಿದ್ದೆ . ಕನ್ನಡ ಭಾಷೆಯಲ್ಲಿ ಮಾತನಾಡಿದ್ದರಿಂದ ಮೊಗಲರು , ಶಾ, ಸಯ್ಯದ್, ಗುಲಾಮಿ ಸಂತಾನದ ರಾಜರು ದೆಹಲಿ ಆಳಿದ್ದರ ಬಗ್ಗೆ ನನ್ನ ಅನುಮಾನದ ಪ್ರಶ್ನೆಗಳ ಬಗ್ಗೆ ಅವರೊಡನೆ ಚರ್ಚಿಸಿದ ನೆನಪು.
JNU ನಲ್ಲಿ ಎಂ ಫಿಲ್, ಪಿಎಚ್ಡಿ , ನಂತರ ಶಿಕಾಗೋ ವಿ ವಿ ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟರ್ ಪದವೀಧರರಾಗಿ ಭಾರತಕ್ಕೆ ಮರಳಿದ ಅವರದು ಬಹು ಶಾಸ್ತ್ರೀಯ ನೆಲೆಯ ಅಧ್ಯಯನಗಳು. ಅದರಲ್ಲಿಯೂ ‘ ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳುವಳಿ’, ‘ಅಸ್ಮಿತೆ ರಾಜಕಾರಣ ಮತ್ತು ಮೂಲಭೂತವಾದ‘ ಪ್ರಮುಖ ಕೃತಿಗಳು.
ಉಡುಪಿ ಜಿಲ್ಲೆಯ ಶಿರ್ವ ದಿಂದ ತಮ್ಮ ಬದುಕಿನ ಪಯಣ, ಅಧ್ಯಯನ ಆರಂಭಿಸಿ, ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ ನಂತರ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ, ಆನಂತರ ಶಿಕಾಗೋ ಹೀಗೆ ಗಾಂಧಿವಾದ, ರಾಜಕೀಯ, ಸಮಾಜಶಾಸ್ತ್ರ , ಪ್ರಜಾಪ್ರಭುತ್ವ ಸಿದ್ಧಾಂತ, ಸಾಮಾಜಿಕ ಚಳುವಳಿಗಳು, ತುಲನಾತ್ಮಕ ಸರ್ಕಾರ, ಮಾನವ ಹಕ್ಕುಗಳ ಜಾಗತಿಕ ರಾಜಕೀಯ ಸಿದ್ಧಾಂತ ಮೊದಲಾದ ವಿಚಾರಗಳ ಕುರಿತಾದ ಆಳವಾದ ಅಧ್ಯಯನ ಅವರ ಮಹತ್ವದ ಕೊಡುಗೆಯಾಗಿದೆ. 90ರ ದಶಕದಲ್ಲಿ ಮೈಸೂರು ರಂಗಾಯಣಕ್ಕೆ ನಾನು ಸೇರಿದ ನಂತರ, ಅಸಾದಿಯವರು ದೇಶ ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಶಾಸ್ತ್ರ ಬೋಧಿಸಿ ನಂತರ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಬಂದರು, ಮೈಸೂರಿನವರೇ ಆದರು. “ತುಘಲಕ್”, “ಚೋಟೆ ಸಯ್ಯದ್ ಬಡೆಸಯ್ಯದ್ “ ನಾಟಕಗಳ ಪಾತ್ರ ಅವರ ಧರ್ಮ ಕುಲ ಗೋತ್ರಗಳ ಗೊಂದಲ ನನ್ನಲ್ಲೂ ಉಂಟುಮಾಡಿತ್ತು. ಇಂದು ಎಲ್ಲಾ ಮುಸ್ಲಿಂ, ಆಫ್ಘಾನ್, ಪರ್ಷಿಯನ್ ದೊರೆ, ಪ್ರಜೆಗಳ ಕಲೆ ಸಂಸ್ಕೃತಿ, ಭಾಷೆಯ ವೈವಿಧ್ಯತೆ ಅರಿಯದೆ ಸಾರಾಸಗಟು ಸಾಬರನ್ನಾಗಿಸಿ ನೋಡುವ ಅಂಧ ಭಕ್ತರ ಪಡೆ ದೇಶದ ತುಂಬಾ ವಿಜೃಂಭಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದು ಆರ್ಥವಾಗದ ಭಾರತದ ಅಲ್ಪ ಸಂಖ್ಯಾತರು, ಜಾತಿ ಶ್ರೇಣೀಕೃತ ಮುಸ್ಲಿಂ ಸಮಾಜ ಅವರ ಮೇಲೆ ಧರ್ಮ ಮತ್ತು ಫ್ಯಾಸಿಸ್ಟ್ ಸಾಂಸ್ಕೃತಿಕ ರಾಜಕಾರಣದ ಪಿತೂರಿ ಅರಿಯಲು ಅಸ್ಸಾದಿಯವರ “ ಅಲ್ಪ ಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ “ ಪುಸ್ತಕ ನೆರವಿಗೆ ಬಂತು. ಮುಸ್ಲಿಮರ ವೈವಿಧ್ಯತೆ, ಆಹಾರ ಪದ್ಧತಿ, ಕಾಯಕವೃತ್ತಿ, ಉಡುಗೆ ತೊಡುಗೆ, ಭಾಷೆಗಳಲ್ಲಿನ ವೈವಿಧ್ಯತೆ, ಭಿನ್ನತೆಗಳನ್ನು ಕುರಿತ ಅವರ ವಿದ್ವತ್ಪೂರ್ಣ ಅಧ್ಯಯನದಲ್ಲಿ ಸಯ್ಯದ್, ಶೇಖ್, ಖಾನ್, ಪಠಾಣ್, ಬ್ಯಾರಿ ಮುಂತಾದ ವರ್ಗದ ಮುಸ್ಲಿಮರು ಮತ್ತು ಜಾತಿ ಶ್ರೇಣೀಕೃತ ಆಧಾರಿತ ತಳ ಸಮುದಾಯಗಳಾದ ಪಿಂಜಾರರು, ದರ್ವೇಶಿಗಳು, ಕರಡಿ ಖಲಂದರ್, ಸಾಲಬಂದರ್, ಚಪ್ಪರ್ ಬಂದರ್ ಮುಂತಾದ ಶೋಷಿತ ವರ್ಗದ ಸಾಂಸ್ಕೃತಿಕ ಅಸ್ಮಿತೆ, ಪ್ರಾತಿನಿಧ್ಯತೆ ಕುರಿತು ಬಹು ಶಾಸ್ತ್ರೀಯ ನೆಲೆಯಲ್ಲಿ ಸೈದ್ಧಾಂತಿಕವಾಗಿ ಅಧ್ಯಯನಮಾಡಿ ದಾಖಿಸಿದರು.
ಬುಡಕಟ್ಟು ಸಮುದಾಯಗಳ ಬದುಕು, ಜೀವನ ಶೈಲಿ ಕುರಿತು ಅಪಾರ ಆಸಕ್ತಿದಾಯಕ ಅಧ್ಯಯನ, ಆದಿ ವಾಸಿಗಳ ಸ್ಥಳಾಂತರಕ್ಕೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕೊಟ್ಟ ರಿಪೋರ್ಟ್ ಪ್ರೊ. ಅಸ್ಸಾದಿ ರಿಪೋರ್ಟ್ ಎಂದೇ ಖ್ಯಾತಿಯಾಗಿದೆ.
ಅವರ ವಿದ್ವತ್ ಪೂರ್ಣ ಅಧ್ಯಯನ, ಚಿಂತನೆಗೆ ಎಷ್ಟೋ ಮಹತ್ವದ ಅಧಿಕಾರಗಳ ಆಯಕಟ್ಟಿನ ಜಾಗಗಳು ಸಿಗಬೇಕಾಗಿತ್ತು. ಸಿಗಲಿಲ್ಲ. ಅವರು ತಮ್ಮ ವೈಚಾರಿಕ ತತ್ವಬದ್ಧತೆಗೆ ಕುಂದು ತರುವ ಯಾವ ವಶೀಲಿಬಾಜಿಗೂ ರಾಜಿಮಾಡಿಕೊಂಡವರಲ್ಲ. ಮೈಸೂರು ವಿ.ವಿ.ಯ ಹಂಗಾಮಿ ಉಪ ಕುಲಪತಿಯಾಗಿ, ರಾಯಚೂರು ವಿ.ವಿ.ಯ ಸದಸ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತವರು. ಅವರ ಕೃತಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತರೂ ಉನ್ನತ ಪ್ರಶಸ್ತಿಗಳು ಅವರಿಗೆ ದಕ್ಕದ ಮುಜುಗರ ನಮಗಾಗಿದೆ. ಕೇವಲ ಮುಸ್ಲಿಂ ಸಂವೇದನೆಯ ಚಿಂತಕ ವಿದ್ವಾಂಸ ಎಂಬ ಯಾವ ಹಣೆಪಟ್ಟಿಗೂ ಸಿಗದ ನಮ್ಮ ಕಾಲದ ಮಹತ್ವದ ಸಮಾಜ ಮತ್ತು ರಾಜಕೀಯ ವಿಜ್ಞಾನಿ ಅವರು.
ಪ್ರೊ. ಮುಝಫರ್ ಅಸ್ಸಾದಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಬಹುತ್ವದ ಪ್ರಖರ ಚಿಂತಕ. ಅವರ ಬಹುತ್ವದ ಚಿಂತನೆ ನಮ್ಮೆಲ್ಲರದಾಗಲಿ.
ಅವರ ಚೇತನ ಚಿಂತನೆ ಅಮರವಾಗಲಿ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯ ನುಡಿ ನಮನ.
ಸಿ.ಬಸವಲಿಂಗಯ್ಯ
ರಂಗಕರ್ಮಿ, ಮೈಸೂರು.
ಇದನ್ನೂ ಓದಿ- ನುಡಿ ನಮನ |ಅಗಲಿದ ಸಂಗಾತಿಗಳ ಸಾಲಿಗೆ ಮತ್ತೊಬ್ಬರು…