ಹಿಂದೂ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ʻಉಗಿದʼ ಎಂಬ ಕಾರಣಕ್ಕೆ ಜೈಲುಪಾಲಾಗಿದ್ದ ಅದ್ನಾನ್ ಮನ್ಸೂರಿ ಎಂಬ ಯುವಕ 151 ದಿನಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತನ ಬಿಡುಗಡೆಗೆ ಕಾರಣವೇನು ಗೊತ್ತೇ? ಈ ಪ್ರಕರಣದ ದೂರುದಾರನೇ ಆರೋಪಿಯನ್ನು ಗುರುತಿಸಿಲು ವಿಫಲವಾಗಿರುವುದು! ಒಂದು ಸುಳ್ಳು ದೂರಿನಿಂದ ಮನ್ಸೂರಿ ಕೇವಲ ಜೈಲು ಶಿಕ್ಷೆ ಅನುಭವಿಸಿದ್ದು ಮಾತ್ರವಲ್ಲ, ಆತನ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಬಳಸಿ ಒಡೆದು ಹಾಕಿತ್ತು.
ಪ್ರಕರಣ ನಡೆದಿರುವುದು ಮಧ್ಯಪ್ರದೇಶದ ಉಜ್ಜೈನಿಯಲ್ಲಿ. ಕಳೆದ ವರ್ಷ ಜುಲೈ 17ರಂದು ಉಜ್ಜೈನಿಯಲ್ಲಿ ಮಹಾಕಾಲ (ಶಿವನ ಇನ್ನೊಂದು ಹೆಸರು) ಉತ್ಸವ ನಡೆಯುತ್ತಿತ್ತು. ಉತ್ಸವ ನಡೆಯುವಾಗ ತಮ್ಮ ಮನೆಯ ತಾರಸಿ ಮೇಲೆ ನಿಂತಿದ್ದ ಮೂವರು ಹುಡುಗರನ್ನು ನೋಡಿ ಮೆರವಣಿಗೆಯಲ್ಲಿದ್ದ ಯಾರೋ ಅವರು ಉಗಿದರು, ಉಗಿದರು ಎಂದು ಕೂಗಿಕೊಂಡರು. ಮೂವರು ಬಾಲಕರನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದುಕೊಂಡರು.
ಬಂಧಿತ ಮೂವರಲ್ಲಿ ಮನ್ಸೂರಿಯ ಒಬ್ಬ ತಮ್ಮ ಮತ್ತು ಇನ್ನೊಬ್ಬ ಸೋದರ ಸಂಬಂಧಿ ಇದ್ದರು. ಮೂವರೂ ಅಪ್ರಾಪ್ತ ಬಾಲಕರಾಗಿದ್ದರು. ಎರಡೇ ದಿನಗಳ ನಂತರ ಮಧ್ಯಪ್ರದೇಶ ಸರ್ಕಾರದ ಬುಲ್ಡೋಜರ್ ಸದ್ಸು ಮಾಡಿತು. ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ ಎಂಬ ನೆಪ ಹೇಳಿ ಅದ್ನಾನ್ ನ ಮನೆಯನ್ನು ಒಡೆದುಹಾಕಲಾಯಿತು. ಬುಲ್ಡೋಜರ್ ಕೆಲಸ ಮಾಡುವಾಗ ಡಿಜೆ ಹಾಕಿ ಜೋರಾಗಿ ಡೋಲುಗಳ ಸದ್ದುಗಳನ್ನು ಹೊರಡಿಸಲಾಯಿತು. ಯಾರು ಶಿವನನ್ನು ಅಣಕಿಸುವರೋ ಅವರು ಶಿವತಾಂಡವಕ್ಕೂ ಸಿದ್ಧವಾಗಿರಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡ ಆಶಿಶ್ ಅಗರ್ ವಾಲ್ ಅಬ್ಬರಿಸಿದ್ದರು.
ಅದ್ನಾನ್ ಮತ್ತು ಆತನ ಸೋದರ ಮೇಲೆ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪ, ದ್ವೇಷ ಹಬ್ಬಿಸಿದ ಆರೋಪ, ಧಾರ್ಮಿಕ ಮೆರವಣಿಗೆ ತೊಂದರೆ ಕೊಟ್ಟ ಆರೋಪ ಹೊರೆಸಲಾಯಿತು. ಉಜ್ಜೈನಿಯ ಸ್ಥಳೀಯ ಸವಾನ್ ಎಂಬಾತ ದೂರು ನೀಡಿದ್ದರು. ಅದ್ನಾನ್ ಸೋದರರಿಗೆ ಜಾಮೀನು ಮಂಜೂರಾದರೂ ಆದ್ನಾನ್ ಜೈಲು ಪಾಲಾಗಿದ್ದ.
ಆಶ್ಚರ್ಯಕರ ಬೆಳವಣಿಗೆಯಲ್ಲಿ ಮಧ್ಯಪ್ರದೇಶ ಹೈಕೋರ್ಟಿನ ಏಕಸದಸ್ಯ ಪೀಠ ಅದ್ನಾನ್ ಗೆ ಜಾಮೀನು ಮಂಜೂರು ಮಾಡಿದೆ. ಎರಡು ಪುಟಗಳ ಜಾಮೀನು ಆದೇಶದಲ್ಲಿ ದೂರುದಾರರು ಪ್ರತಿಕೂಲ ಸಾಕ್ಷಿ ನೀಡಿರುವುದನ್ನು ಉಲ್ಲೇಖಿಸಿದ್ದಾರೆ. ಮೊದಲ ಸಾಕ್ಷಿ ಮತ್ತು ದೂರುದಾರ ಸವಾನ್ ಲಾಟ್, ಎರಡನೇ ಸಾಕ್ಷಿ ಅಜಯ್ ಖಾತ್ರ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅದ್ನಾನ್, ನನಗೆ ತೋರಿಸಲಾದ ವಿಡಿಯೋದಲ್ಲಿದ್ದ ಹುಡುಗ ಯಾರೆಂದೇ ನನಗೆ ಗೊತ್ತಿಲ್ಲ. ಅವನ ಪರಿಚಯವಿಲ್ಲ. ಕೋರ್ಟಿನಲ್ಲಿ ವಿಡಿಯೋ ಕಾಲ್ ಮುಖಾಂತರ ತೋರಿಸಲಾದ ಹುಡುಗನನ್ನು ನಾನು ನೋಡಿಲ್ಲ. ಹೀಗಾಗಿ ಅವನನ್ನು ಗುರುತಿಸಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಆರೋಪಿಗಳ ಪರ ವಾದ ಮಂಡಿಸಿದ ದೇವೇಂದ್ರ ಸಿಂಗ್ ಸೇಂಗಾರ್, ಪೊಲೀಸರು ಪ್ರಕರಣದ ಕುರಿತು ಸರಿಯಾದ ತನಿಖೆಯನ್ನೇ ಮಾಡಿಲ್ಲ. ಇಷ್ಟು ಧಾರ್ಮಿಕ ಸೂಕ್ಷ್ಮದ ವಿಷಯವನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ. ಈ ಹುಡುಗನ ಕುಟುಂಬದ ಮನೆಯನ್ನು ಸಹ ಒಡೆದುಹಾಕಲಾಗಿದೆ, ಸ್ಥಳೀಯ ಆಡಳಿತ ಹುಡುಗನ ಕುಟುಂಬಕ್ಕೆ ಕಿರುಕುಳ ನೀಡಿದೆ ಎಂದು ಹೇಳಿದರು.
ಮನೆ ಕಳೆದುಕೊಂಡದರೂ ಅದ್ನಾನ್ ತಂದೆ ಅಶ್ರಫ್ ಈಗ ಮಗ ಜೈಲಿನಿಂದ ವಾಪಾಸ್ ಬರುತ್ತಿರುವುದಕ್ಕೆ ಸಂತೋಷದಿಂದಿದ್ದಾರೆ. ನನಗೆ ನನ್ನ ಮುಕ್ತ ಸಂಪೂರ್ಣ ದೋಷಮುಕ್ತನಾಗಿ ಹೊರಗೆ ಬರುವುದಷ್ಟೇ ಮುಖ್ಯ. ನನಗೆ ಬೇರೇನೂ ಬೇಕಿಲ್ಲ ಎಂದು ಅಶ್ರಫ್ ಹೇಳಿದ್ದಾರೆ.
ಯಾರೋ ಹಬ್ಬಿಸಿದ ವದಂತಿಗೆ ಅಪ್ರಾಪ್ತ ಬಾಲಕರು ಜೈಲು ಸೇರುವಂತೆ ಮಾಡಿದ್ದಲ್ಲದೆ, ಆ ಕುಟುಂಬದ ಮನೆಯನ್ನೇ ಒಡೆದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.