Wednesday, May 22, 2024

ಅನಂತಕುಮಾರ ಹೆಗಡೆ‌ಯವರೇ ನಿಮ್ಮ ನಂಜಿನ ‘ಮಾನಸಿಕತೆ’ಯಿಂದ ಹೊರಗೆ ಬನ್ನಿ…

Most read

ಕೆಲವು ವರ್ಷಗಳಿಂದ ಅನಾರೋಗ್ಯದ ಕಾರಣಕ್ಕೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಈಗ ಮತ್ತೆ ಎಂದಿನ ತನ್ನ ಶೈಲಿಯಲ್ಲಿ ದ್ವೇಷಭಾಷಣ ಮಾಡಿ, ಕೋಮುಗಲಭೆಗಳಿಗೆ ಪ್ರಚೋದನೆ ನಡೆಸಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡ ಕರ್ನಾಟಕಕ್ಕೆ ಅನಂತ ಕುಮಾರ ಹೆಗಡೆಯಂಥವರು ದೊಡ್ಡ ಕಳಂಕ. ಇವನಾರವ ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದು ಕಲ್ಯಾಣ ಕರ್ನಾಟಕದ ಕನಸು ಕಟ್ಟಿದ ಬಸವಾದಿ ಶರಣರ ಆಶಯಗಳಿಗೆ ಇಂಥ ಕೀಳು ಮನಸ್ಥಿತಿಗಳೇ ದೊಡ್ಡ ಸವಾಲು. ಸಮುದಾಯಗಳ ನಡುವೆ ದ್ವೇಷದ ಬೆಂಕಿ ಹಾಕುವ ಇಂಥವರು ಸಾಮಾಜಿಕ ಜೀವನದಲ್ಲಿ ಇರಲು ಯೋಗ್ಯರಲ್ಲ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಅನಂತ ಕುಮಾರ ಹೆಗಡೆಯವರು ಕಾರ್ಯಕ್ರಮವೊಂದರಲ್ಲಿ ತಮ್ಮ ಒಡಲಿನ ನಂಜನ್ನು ಕಾರಿಕೊಂಡಿದ್ದಾರೆ. ಮಸೀದಿಗಳನ್ನು ಮಂದಿರವಾಗಿ ಪರಿವರ್ತಿಸುವ ಮಾತಾಡಿದ್ದಾರೆ. ತಾನು ಆಡಿದ ಮಾತುಗಳನ್ನು ಬೆದರಿಕೆ ಎಂದೇ ಪರಿಗಣಿಸಿ ಎಂಬ ದಾರ್ಷ್ಟ್ಯ, ದರ್ಪವನ್ನೂ ತೋರಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನೂ ನಿಂದಿಸುತ್ತ, ‘ನೀನು ಹೋಗದೇ ಇದ್ದರೂ ರಾಮಮಂದಿರ ಉದ್ಘಾಟನೆ ನಿಲ್ಲಲ್ಲ ಮಗ್ನೇ’ ಎಂದು ಸಾರ್ವಜನಿಕ ಬದುಕಿನಲ್ಲಿ ಪಾಲಿಸಬೇಕಾದ ಸೌಜನ್ಯದ ಲಕ್ಷ್ಮಣ ರೇಖೆಯನ್ನು ಮೀರಿದ್ದಾರೆ.

ಅನಂತ ಕುಮಾರ ಹೆಗಡೆಯವರ ಭಾಷಣದಲ್ಲಿ ಅವರು ಬಹಳ ಸ್ಪಷ್ಟವಾಗಿ ಈ ದೇಶದಲ್ಲಿ ಸೌಹಾರ್ದದ ಸಹಬಾಳ್ವೆಯನ್ನು ಬಯಸುವವರನ್ನೇ ಗುರಿಯಾಗಿಸಿಕೊಂಡು ಮಾತಾಡಿದ್ದಾರೆ. ನಮ್ಮ ವಿರೋಧ ಇರುವುದು ಕಾಂಗ್ರೆಸ್ ಪಕ್ಷದ ಮೇಲಲ್ಲ, ಸಿದ್ಧರಾಮಯ್ಯ ಅವರ ಮೇಲೆ, ಅವರ ‘ಮಾನಸಿಕತೆ’ ಮೇಲೆ ಎಂದಿದ್ದಾರೆ ಅವರು. ಈ ಮಾನಸಿಕತೆಯನ್ನು ಅಹಿಂದೂ ಮಾನಸಿಕತೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಹಿಂದೂ, ಹಿಂದುತ್ವ ಅನ್ನುವುದು ತಮಗೆ ಸಿಕ್ಕ ಗುತ್ತಿಗೆ ಎಂಬುದು ಅನಂತ ಕುಮಾರ ಹೆಗಡೆಯಂಥವರ ಅಂಬೋಣ. ಅವರು ಯಾವ ಹಿಂದುತ್ವವನ್ನು ಪ್ರತಿಪಾದಿಸುತ್ತಾರೆ ಎಂಬುದು ಜಗತ್ತಿಗೆ ತಿಳಿದ ವಿಷಯ. ಮೇಲು ಕೀಳು, ಜಾತಿ ವಿಷಬೇಧಗಳ ವರ್ಣಾಶ್ರಮ ವ್ಯವಸ್ಥೆಯೇ ಇವರ ಪ್ರತಿಪಾದನೆಯ ಹಿಂದುತ್ವ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬುದು ಇವರ ನಾಲಿಗೆ ತುದಿಯ ಮಾತುಗಳು ಮಾತ್ರ. ಹಿಂದೊಮ್ಮೆ ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನವನ್ನು ಬದಲಿಸಲು ಎಂದಿದ್ದರು ಇದೇ ಹೆಗಡೆ. ಸಂವಿಧಾನದ ಜಾಗದಲ್ಲಿ ಇವರು ಏನನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅದೇ ಮೇಲು-ಕೀಳು, ಅಸ್ಪೃಶ್ಯತೆಯನ್ನು ಆಚರಿಸುವ ಮನುಧರ್ಮ ಶಾಸ್ತ್ರವನ್ನಲ್ಲವೇ?

ಅನಂತ ಕುಮಾರ ಹೆಗಡೆಯವರಿಗೆ ಭಾರತದ ಸಂವಿಧಾನವೇ ಗಂಟಲ ಮುಳ್ಳಾಗಿಹೋಗಿದೆ. ಅದಕ್ಕಾಗಿಯೇ ಅದನ್ನು ಬದಲಾಯಿಸಬೇಕು ಎನ್ನುತ್ತಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶದ ಎಲ್ಲ ನಾಗರಿಕರನ್ನು ಸಮಾನವೆಂದು ಘೋಷಿಸುವ ಸಂವಿಧಾನವನ್ನು ಬರೆದರು. ಅನಂತ ಕುಮಾರ ಹೆಗಡೆಯವರಿಗೆ ಇದು ಹೇಗೆ ಒಪ್ಪಿತವಾಗಲು ಸಾಧ್ಯ? ಮೇಲ್ಜಾತಿಗಳು ಶ್ರೇಷ್ಠ, ಮಿಕ್ಕವರು ಕನಿಷ್ಠ ಎಂಬ ಮಾನಸಿಕತೆಯಿಂದ ನರಳುತ್ತಿರುವವರಿಗೆ ನಮ್ಮ ಭಾರತ ಸಂವಿಧಾನ ಯಾವತ್ತಿಗೂ ಅಪಥ್ಯವೇ ಆಗಿರುತ್ತದೆ. ಅನಂತ ಕುಮಾರ ಹೆಗಡೆ ಇದಕ್ಕೆ ಹೊರತಲ್ಲ. ಈ ದುರ್ಭಾವದ, ದುರಾಲೋಚನೆಯ ‘ಮಾನಸಿಕತೆ’ಯಿಂದ ಹೆಗಡೆಯಂಥವರು ಹೊರಗೆ ಬರಬೇಕಿತ್ತು. ಆದರೆ ಅವರಿಗೆ ಅದು ಸಾಧ್ಯವಾಗುತ್ತಿಲ್ಲ.

ಅನಂತ ಕುಮಾರ್ ಹೆಗಡೆಯವರು ಹೀಗೆ ಕೊಳಕಾಗಿ ಮಾತಾಡುವುದು ಹೊಸದೇನೂ ಅಲ್ಲ. ಹಿಂದೆಯೂ ಸಹ ಅವರು ಮಾತಾಡಿದ್ದಾರೆ. ಭಾರತದ ಜಾತಿಗ್ರಸ್ಥ ಸಮಾಜ ಸುಧಾರಿಸಬೇಕು, ಸಮತೆಯ ಬಾಳು ನಮ್ಮದಾಗಬೇಕು ಎಂಬುದಕ್ಕೆ ಹೆಗಡೆಯಂಥ ಯಥಾಸ್ಥಿತಿವಾದಿಗಳೇ ಅಡ್ಡಿ, ಅವರ ಮಾನಸಿಕತೆಯೇ ಅಡ್ಡಿ.‌ ಇದೇನೂ ಹೊಸತೂ ಅಲ್ಲ. ದೇಹವೇ ದೇಗುಲ ಎಂದು ಸಾರುತ್ತ ಕಾಯಕಧರ್ಮವನ್ನು ಪ್ರತಿಪಾದಿಸಿದ ಬಸವಣ್ಣನವರೇ ಈ ದರಿದ್ರ ‘ಮಾನಸಿಕತೆ’ಯವರ ಶಿಕಾರಿಯಾದರು. ಸತ್ಯ-ಅಹಿಂಸೆಯನ್ನು ಸಾರಿದ ಮಹಾತ್ಮಗಾಂಧಿಯನ್ನೂ ಈ ಮಾನಸಿಕತೆಯವರೇ ಕೊಂದುಹಾಕಿದರು. ಸಮಾಜ ಬದಲಾವಣೆಗೆ ತೆರೆದುಕೊಳ್ಳುವಾಗಲೆಲ್ಲ ಇಂಥ ಶಕ್ತಿಗಳು ಕಾಲಕಾಲಕ್ಕೆ ಜಾಗೃತಿಗೊಳ್ಳುತ್ತವೆ, ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತ ಹೋಗುತ್ತವೆ. ಕಳೆದ ಹತ್ತು ವರ್ಷಗಳಿಂದ ಈ ಶಕ್ತಿಗಳು ಪ್ರಬಲವಾಗಿ ಬೆಳೆದಿವೆ ಎಂಬುದೇನೋ ನಿಜ. ಆದರೆ ಈ ನೆಲದ ಆತ್ಮಸಾಕ್ಷಿಯನ್ನು ಮಣಿಸುವಷ್ಟು ಶಕ್ತಿ ಇವರಿಗಿಲ್ಲ. ಯಾಕೆಂದರೆ ಈ ನೆಲ ಯಾವತ್ತೂ ಶಾಂತಿ, ಸೋದರತೆಯನ್ನೇ ಸಾರಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜಕೀಯ ನೀತಿ, ನಿಲುವು, ನಿರ್ಧಾರಗಳನ್ನು ಖಂಡಿಸುವ ಟೀಕಿಸುವ ಹಕ್ಕು ಅವರ ರಾಜಕೀಯ ಎದುರಾಳಿಗಳಿಗೆ ಇದ್ದೇ ಇರುತ್ತದೆ. ರಾಜಕೀಯ ಟೀಕೆ ತಪ್ಪಲ್ಲ. ಆದರೆ ‘ಮಗ್ನೇ’ ಎಂದೆಲ್ಲ ಮಾತಾಡುವುದು ಯಾವ ಸಂಸ್ಕೃತಿ? ತಮ್ಮನ್ನು ತಾವು ಸುಸಂಸ್ಕೃತರು ಎಂದು ಬೋರ್ಡು ತಗುಲಿಸಿಕೊಂಡು ಓಡಾಡುವವರು ಒಳಗೆ ಅದೆಷ್ಟು ಅಸಂಸ್ಕೃತರಾಗಿರುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಒಬ್ಬ ರಾಜಕಾರಣಿಯಾಗಿ ಸಿದ್ಧರಾಮಯ್ಯ ಅವರ ಗುರಿಯಲ್ಲ, ಒಬ್ಬ ಪ್ರಗತಿಪರ ಚಿಂತಕರಾಗಿರುವುದರಿಂದ ಈ ನಂಜಿನ ಮನಸ್ಥಿತಿಯವರ ಗುರಿಯಾಗಿದ್ದಾರೆ.

ಅನಂತ ಕುಮಾರ ಹೆಗಡೆಯವರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂಥ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿದ್ದನ್ನು ನಾವು ನೋಡಿಲ್ಲ. ಮುಂದೊಮ್ಮೆ ಬಿಜೆಪಿ ಸರ್ಕಾರ ಬಂದಾಗ ಇಂಥ ಕೇಸುಗಳನ್ನು ವಾಪಾಸು ಪಡೆಯಲಾಗುತ್ತದೆ.

ಆದರೆ ಹೆಗಡೆಯಂಥವರು ಬಿತ್ತುವ ವಿಷಬೀಜದಿಂದ ಆಗುವ ದೂರಗಾಮಿ‌ ಪರಿಣಾಮಗಳನ್ನು ಹೇಗೆ ತಡೆಯುವುದು. ಸೌಹಾರ್ದ,‌ ಸಹಬಾಳ್ವೆಯ ಬಗ್ಗೆ ಮಾತಾಡುವುದೇ ಅಪರಾಧ, ದೇಶವಿರೋಧಿ ಚಟುವಟಿಕೆ ಎನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಾಮಾನ್ಯ ಜನರೊಳಗಿನ ಆತ್ಮಸಾಕ್ಷಿ‌ ಎದ್ದು ನಿಲ್ಲುವುದು ಯಾವಾಗ?

More articles

Latest article