Thursday, July 25, 2024

ಶ್ರದ್ಧಾ ಭಕ್ತಿಯ ಕ್ಷೇತ್ರಗಳೋ? ಇಲ್ಲಾ ಪ್ರವಾಸೋದ್ಯಮ ಕೇಂದ್ರಗಳೋ?

Most read

ದೇಶದ ಜನರ ತಲೆಯಲ್ಲಿ ರಾಮಭಕ್ತಿಯನ್ನು ತುಂಬಿ ಅದರ ಮೂಲಕ ಜನರಿಂದಲೇ ಓಟು ನೋಟುಗಳನ್ನು ನಿರಂತರವಾಗಿ ಪಡೆಯುವ ಅತೀ ದೊಡ್ಡ ಪ್ಲಾನ್ ನ ಭಾಗವೇ ಈ ರಾಮಮಂದಿರ ನಿರ್ಮಾಣ. ಅಯೋಧ್ಯೆಯನ್ನು ದೇಶದ ಅತೀ ದೊಡ್ಡ ಧಾರ್ಮಿಕ ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವುದೇ ಪುರೋಹಿತಶಾಹಿಗಳ ಗುರಿ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ

“ತೀರ್ಥಕ್ಷೇತ್ರಗಳನ್ನು ಈಗ ಅಭಿವೃದ್ದಿಯ ಹೆಸರಿನಲ್ಲಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಅಂದರೆ ತೀರ್ಥಕ್ಷೇತ್ರಗಳು ಭೋಗದ ಸ್ಥಳಗಳಾಗುತ್ತಿವೆ. ಬಹಳ ಜನರು ಅಭಿವೃದ್ಧಿಯ ಹೆಸರಲ್ಲಿ ಇದನ್ನೇ ಒಪ್ಪಿಕೊಳ್ಳುತ್ತಿದ್ದಾರೆ” ಎಂದು ಬೇರೆ ಯಾವ ವ್ಯಕ್ತಿಯೋ ಇಲ್ಲಾ ಪಕ್ಷವೋ ಹೇಳಿದ್ದರೆ ಸಂಘ ಪರಿವಾರದ ನಾಯಕರು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದರು. ಧರ್ಮದ್ರೋಹಿಗಳು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಅವಲತ್ತುಕೊಳ್ಳುತ್ತಿದ್ದರು. ಆದರೆ ಈ ಮಾತುಗಳನ್ನು ಕೇಳಿಯೂ ಈಗ ಸರ್ವಾಂಗಗಳನ್ನೂ ಮುಚ್ಚಿಕೊಂಡು ಕೂತಿದ್ದಾರೆ. ಯಾಕೆಂದರೆ ಮೇಲಿನ ಹೇಳಿಕೆಯನ್ನು ಸುದ್ದಿಮಾಧ್ಯಮಗಳ ಮುಂದೆ ಹೇಳಿದ್ದು ಪುರಿ ಶಂಕರಾಚಾರ್ಯ ಮಠದ ನಿಶ್ವಲಾನಂದ ಸರಸ್ವತಿ ಸ್ವಾಮಿಗಳು. 

ವೈದಿಕ ಮಠದ ಸ್ವಾಮಿಗಳು ಹೇಳಿದ್ದರಲ್ಲಿ ಅತಿಶಯವೇನೂ ಇಲ್ಲ. ಇರುವುದನ್ನೇ ಹೇಳಿದ್ದಾರೆ. ಹಿಂದುತ್ವ ಧರ್ಮ ರಕ್ಷಣೆಗಾಗಿಯೇ ಇರುವ ಸ್ವಾಮಿಗಳನ್ನು ಧರ್ಮದ್ರೋಹಿ ಎಂದು ಕರೆದು ಜೀರ್ಣಿಸಿಕೊಳ್ಳಲು ಬಿಜೆಪಿಗರಿಗೆ ಸಾಧ್ಯವಿದೆಯೇ? ಅದಕ್ಕೆ ಜಾಣ ಮೌನಕ್ಕೆ ಜಾರಿದ್ದಾರೆ.

ಅನೇಕ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರಗಳು ವ್ಯಾಪಾರಿ ಕೇಂದ್ರಗಳಾಗಿದ್ದನ್ನು ಯಾರೂ ಅಲ್ಲಗಳೆಯಲಾಗದು. ಆದರೆ.. ಈಗ ಸ್ವಾಮಿಗಳು ಹೇಳಿದಂತೆ ತೀರ್ಥಕ್ಷೇತ್ರಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಬದಲಾಗುತ್ತಿರುವುದರಲ್ಲೂ ಸುಳ್ಳಿಲ್ಲ.  ರಾಮಮಂದಿರ ನಿರ್ಮಾಣವು ಶ್ರದ್ಧಾ ಭಕ್ತಿಯ ಕ್ಷೇತ್ರವಾಗುವ ಬದಲು ದೇವರ ಹೆಸರಲ್ಲಿ ಆದಾಯ ಸಂಗ್ರಹಿಸುವ ಕೇಂದ್ರವಾಗುವುದರಲ್ಲಿ ಸಂದೇಹವೇ ಇಲ್ಲ. ದೇಶದ ಜನರಿಂದ, ಪಕ್ಷಗಳಿಂದ, ಉದ್ಯಮಿಗಳಿಂದ  ದೇಣಿಗೆ ಸಂಗ್ರಹಿಸಿ ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಮಂದಿರವೂ ಸಹ ಭಕ್ತಾದಿಗಳಿಗೆ ಉಚಿತ ಸೇವೆಗೆ ಅವಕಾಶ ಒದಗಿಸಿಕೊಡಲೂ ಸಾಧ್ಯವಿಲ್ಲ. ಅಯೋಧ್ಯೆಯು ತಿರುಪತಿಯನ್ನೂ ಮೀರಿಸುವ ವ್ಯಾಪಾರಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಭಕ್ತಾದಿಗಳಿಂದ ಹರಿದು ಬರುವ ಆದಾಯಕ್ಕಂತೂ ತೆರಿಗೆ ಅನ್ನುವುದೇ ಇಲ್ಲಾ. ಎಲ್ಲಾ ರಾಮಜನ್ಮಭೂಮಿ ಟ್ರಸ್ಟ್ ಸ್ವಾಹಾ ಅಷ್ಟೇ.  ಬರೀ ಮಂದಿರವೊಂದೇ ಆದರೆ ಹೇಗೆ. ಅದರ ಆಜು ಬಾಜು ಪ್ರೇಕ್ಷಣೀಯ ಸ್ಥಳಗಳನ್ನು ನಿರ್ಮಿಸಿದರೆ ಈ ಧಾರ್ಮಿಕ ಕ್ಷೇತ್ರವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಬದಲಾಯಿಸಬಹುದು ಎಂಬುದೇ ಮಾಸ್ಟರ್ ಪ್ಲಾನ್.

ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕಿಡ್ಸ್ ಕೆಂಪ್ ಎನ್ನುವ ಬಹು ದೊಡ್ಡ ಮಾಲ್ ಒಂದು ಆರಂಭವಾಗಬೇಕಿತ್ತು.  ಗ್ರಾಹಕರನ್ನು ಆಕರ್ಷಿಸಲು ಅದರ ಮಾರವಾಡಿ ಮಾಲೀಕ ಮೊದಲು ಮಾಡಿದ್ದೇನೆಂದರೆ ಮಾಲ್ ಹಿಂದೆ ದೊಡ್ಡದಾದ ಶಿವನ ಮೂರ್ತಿ ಕಟ್ಟಿಸಿದ್ದು. ಆ ಶಿವನ ದರ್ಶನಕ್ಕೆ ಹೋದವರು ಹೊರಗೆ ಬರಬೇಕೆಂದರೆ ಮಾಲ್ ಒಳಗಿನಿಂದಲೇ ಬರಬೇಕಿತ್ತು. ದೇವರಿಗಾಗಿ ಬಂದ ಭಕ್ತರು ಮಾಲ್ ಒಳಗೆ ಕಾಲಿಡುತ್ತಲೇ ಗ್ರಾಹಕರಾಗುತ್ತಿದ್ದರು. ಸರಕುಗಳು ಬಿಕರಿಯಾಗುತ್ತಿದ್ದವು. ವ್ಯಾಪಾರ ಹೆಚ್ಚಾಗತೊಡಗಿತು. ದೇವರ ನೆಪದಲ್ಲಿ ವ್ಯಾಪಾರಿಕರಣ ಮಾಡುವುದು ಅಂದರೆ ಇದು. ಬಂದವರಿಗೆ ಸ್ವಾಮಿಕಾರ್ಯ ಒದಗಿಸುವುದರ ಜೊತೆಗೆ ಸ್ವಕಾರ್ಯವನ್ನೂ ಸಾಧಿಸುವ ಬಂಡವಾಳಶಾಹಿಗಳ ತಂತ್ರಗಾರಿಕೆ ತುಂಬಾ ಹಳೆಯದು.

ಈಗ ಅಯೋಧ್ಯೆಯ ಅಭಿವೃದ್ದಿ ಪ್ರಾಜೆಕ್ಟ್ ಅಂತಾ ಮಾಡಲಾಗಿದೆ. ಅಯೋಧ್ಯೆಯತ್ತ  ಜನರನ್ನು  ಆಕರ್ಷಿಸುವಂತೆ ಅಭಿವೃದ್ದಿ ಮಾಡುವುದೇ ಈ ಪ್ರಾಜೆಕ್ಟಿನ ಕೆಲಸ. ಅದರ ಭಾಗವಾಗಿಯೇ ಸಿದ್ಧಗೊಳ್ಳುತ್ತಿದೆ ‘ರಾಮಾಯಣ ಆಧ್ಯಾತ್ಮಿಕ ವನ’.

ರಾಮಮಂದಿರಕ್ಕೆ ಹತ್ತಿರವಿರುವ ಸರಿಯೂ ನದಿ ದಂಡೆಯಲ್ಲಿ ರಾಮನ ವನವಾಸದ ಜೀವನದ ದರ್ಶನ ಮಾಡಿಸುವಂತಹ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲಿ ರಾಮನ ವ್ಯಕ್ತಿತ್ವ ಸಾರುವ ತೆರೆದ ವಸ್ತುಸಂಗ್ರಹಾಲಯವೂ ಇರುತ್ತದಂತೆ. ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳು ಈ ಆಧ್ಯಾತ್ಮ ವನವನ್ನೂ ಕಣ್ತುಂಬಿ ಕೊಳ್ಳಬಹುದಂತೆ. ಇದಕ್ಕೆಲ್ಲಾ ಪ್ರವೇಶವಂತೂ ಉಚಿತವಲ್ಲ. ಜೇಬಿಗೆ ಭಾರವೆನಿಸುವ ಪ್ರವೇಶ ದರ ಪಡೆದಾಗಲೇ ಶ್ರೀರಾಮ ವನವಾಸ ದರ್ಶನ ಭಾಗ್ಯ ದೊರೆಯುವುದು. ಅಂದರೆ ಆದಾಯದ ಮೂಲಗಳನ್ನು ವಿಸ್ತರಿಸುವ ವ್ಯಾಪಾರಿ ವಿನ್ಯಾಸವಿದು. ಇಂತಹ ಹಲವಾರು ರಾಮನ ಹೆಸರಿನ ಪ್ರೇಕ್ಷಣೀಯ ಸ್ಥಳಗಳನ್ನು ಅಯೋಧ್ಯೆಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. 

ಭಕ್ತಾದಿಗಳನ್ನು ರಾಮ ದರ್ಶನಕ್ಕೆ, ಅಯೋಧ್ಯೆ ವೀಕ್ಷಣೆಗೆ ಕರೆತರಲು ಉಚಿತ ರೈಲು ಯಾತ್ರೆ ಯೋಜನೆಯನ್ನೂ ಕೇಂದ್ರ ಸರಕಾರ ಹಮ್ಮಿಕೊಳ್ಳುತ್ತದೆ. ಈಗಾಗಲೇ ಬಿಜೆಪಿ ನೇತೃತ್ವದ ಛತ್ತೀಸಗಡ ರಾಜ್ಯವು ರಾಮಭಕ್ತರಿಗಾಗಿ ಉಚಿತ ರೈಲು ಯಾತ್ರೆ ಯೋಜನೆಗೆ ಅಧಿಕೃತವಾಗಿ ಅನುಮೋದನೆ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳೂ ಈ ಯೋಜನೆಯನ್ನು ಜಾರಿ ಮಾಡುತ್ತವೆ. ಆಗ ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ ಉಚಿತವಾಗಿ ಬರುವ ಪ್ರವಾಸಿಗರು ರಾಮಮಂದಿರದ ಆದಾಯವನ್ನು ಹೆಚ್ಚಿಸುತ್ತಾರೆ. ಉಚಿತ ಯಾತ್ರೆಗೆ ಸರಕಾರ ರೈಲು ಇಲಾಖೆಗೆ ಜನರ ತೆರಿಗೆ ಹಣವನ್ನು ಪಾವತಿಸುತ್ತದೆ.

ಆದರೆ, ಅಯೋಧ್ಯೆಗೆ ಬರುವ ಪ್ರವಾಸಿಗರು ಮಾಡುವ ಖರ್ಚು ಕೊಡುವ ದೇಣಿಗೆ ಸೇವಾದರಗಳೆಲ್ಲಾ ರಾಮಮಂದಿರ ಟ್ರಸ್ಟ್ ಪಾಲಾಗುತ್ತದೆ. ಅಯೋಧ್ಯೆಯಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನಿರ್ಮಿಸುವುದು, ವಸತಿ ನಿಲಯಗಳನ್ನು ಕಟ್ಟುವುದು, ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸುವುದು ಸರಕಾರದ ಹಣದಲ್ಲಿ. ಆದರೆ ಅದರಿಂದ ಬರುವ ಸಂಪನ್ಮೂಲಗಳೆಲ್ಲಾ ಟ್ರಸ್ಟಿಗೆ. ರಾಮಮಂದಿರದ ಪ್ರಭಾವದಿಂದ ಬರುವ ಮತಗಳೆಲ್ಲಾ ಬಿಜೆಪಿಗೆ. ಇದು ರಾಮನನ್ನು ಗುತ್ತಿಗೆ ಪಡೆದ ಬಿಜೆಪಿಯ ಲೆಕ್ಕಾಚಾರ. ತಿರುಪತಿಯನ್ನೂ ಮೀರಿಸುವ ಆದಾಯ ಸಂಗ್ರಹ ಕೇಂದ್ರವನ್ನಾಗಿ, ಶಬರಿಮಲೆಯನ್ನೂ ಮೀರಿಸುವ ಭಕ್ತ ಸಮೂಹದ ಕ್ಷೇತ್ರವನ್ನಾಗಿ ಮಾಡುವುದೇ ರಾಮಮಂದಿರ ಸ್ಥಾಪನೆಯ ಹಿಂದಿರುವ ಹಿಂದುತ್ವವಾದಿಗಳ ಉದ್ದೇಶ. ದೇಶದ ಜನರ ತಲೆಯಲ್ಲಿ ರಾಮಭಕ್ತಿಯನ್ನು ತುಂಬಿ ಅದರ ಮೂಲಕ ಜನರಿಂದಲೇ ಓಟು ನೋಟುಗಳನ್ನು ನಿರಂತರವಾಗಿ ಪಡೆಯುವ ಅತೀ ದೊಡ್ಡ ಪ್ಲಾನ್ ನ ಭಾಗವೇ ಈ ರಾಮಮಂದಿರ ನಿರ್ಮಾಣ. ಅಯೋಧ್ಯೆಯನ್ನು ದೇಶದ ಅತೀ ದೊಡ್ಡ ಧಾರ್ಮಿಕ ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವುದೇ ಪುರೋಹಿತಶಾಹಿಗಳ ಗುರಿ. 

ಏನೇ ಹೇಳಿ ಈ ಗುಜರಾತಿಗಳ ವ್ಯಾಪಾರಿ ಕಲೆಯನ್ನು ಮೆಚ್ಚಲೇ ಬೇಕು. ಗುಜರಾತಿ ಮೋದಿ ಹಾಗೂ ಅವರ ವ್ಯಾಪಾರಿ ಬಳಗ ದೇವರನ್ನೂ ಆದಾಯದ ಮೂಲವಾಗಿ ಮಾಡಿಕೊಳ್ಳುತ್ತಿರುವ ಸರಕು ಸಂಸ್ಕೃತಿಯನ್ನು ಶ್ಲಾಘಿಸಲೇಬೇಕು. ದೇವರ ಹೆಸರಲ್ಲಿ ಹೇಗೆ ಭಕ್ತರನ್ನು ಗ್ರಾಹಕರಾಗಿಸಬೇಕು ಎನ್ನುವ ಕಲೆಯೂ ಅವರಿಗೆ ಸಿದ್ಧಿಸಿದೆ. ಜನರಲ್ಲಿರುವ ಧಾರ್ಮಿಕ ಭಾವನೆಗಳೂ ಸಹ ವ್ಯಾಪಾರೋದ್ಯಮದ ಸರಕಾಗಿರುವುದು ಬಂಡವಾಳವಾದದ ಯಶಸ್ಸಾಗಿದೆ. ಮೋದಿಯುಗದಲ್ಲಿ ಈಗ ಈ ಧರ್ಮೋದ್ಯಮ ಎನ್ನುವುದು ಕಾರ್ಪೋರೇಟೀಕರಣವಾಗುತ್ತಿದೆ. ಮಂದಿರದ ನೆಪದಲ್ಲಿ ಪ್ರವಾಸೋಧ್ಯಮ ತಲೆ ಎತ್ತುತ್ತಿದೆ. 

ಅದಕ್ಕಾಗಿಯೇ ‘ತೀರ್ಥಕ್ಷೇತ್ರಗಳು ಪ್ರವಾಸೋದ್ಯಮವಾಗುತ್ತಿವೆ’ ಎಂದು ಪುರಿ ಶಂಕರಾಚಾರ್ಯರು ತಕರಾರು ಎತ್ತಿರುವುದು. ಇದೆಲ್ಲಾ ಗೊತ್ತಿದ್ದೂ ಬಹುತೇಕ ಧಾರ್ಮಿಕ ಕೇಂದ್ರದ ಸ್ವಾಮಿಗಳು, ಸಂತರು,,ಸನ್ಯಾಸಿಗಳು, ಮಠಾಧಿಪತಿಗಳು, ಪೀಠಾಧ್ಯಕ್ಷರುಗಳು ಮೌನವಾಗಿದ್ದಾರೆ. ಈ ಧಾರ್ಮಿಕ ವ್ಯಾಪಾರೀಕರಣಕ್ಕೆ ಮೌನ ಸಮ್ಮತಿಯನ್ನು ಕೊಟ್ಟಿದ್ದಾರೆ. ಸಂಘದ ಸರಸಂಘಿಗಳೂ ಇದಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ.

ಯಾಕೆಂದರೆ ಈ ಎಲ್ಲಾ ಹಿಂದುತ್ವವಾದಿಗಳ ಏಕೈಕ ಅಜೆಂಡಾ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಈಗಿರುವ ಸಂವಿಧಾನವನ್ನು ಬದಲಿಸಿ ಮನುಸ್ಮೃತಿ ಆಧಾರಿತ ಚಾತುರ್ವರ್ಣ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಬೇಕು ಎನ್ನುವುದು. ಅದಕ್ಕಾಗಿ ಒಂದು ದೇಶ, ಒಂದು ಧರ್ಮ, ಒಂದು ದೇವರು, ಒಂದು ಸಂಸ್ಕೃತಿ ಜಾರಿಯಾಗಬೇಕು ಎನ್ನುವುದು ಸಂಘದ ಗುರಿ. ಆದರೆ ಸರ್ವ ಧರ್ಮದ ಶಾಂತಿಯ ತೋಟದಲ್ಲಿ ಇದು ಸಾಧ್ಯವಿಲ್ಲ. ಅದಕ್ಕಾಗಿಯೇ ಶ್ರೀರಾಮನನ್ನು ಹಿಂದೂಗಳೆಲ್ಲರ ಮನದಲ್ಲಿ ಆಳವಾಗಿ ಬಿತ್ತುವ ಕೆಲಸವನ್ನು ರಾಮಮಂದಿರದ ಮೂಲಕ ಮಾಡಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತ ಸಮೂಹವನ್ನು ಅಯೋಧ್ಯೆಯತ್ತ ಆಕರ್ಷಿಸುವ ಯೋಜನೆ ಇದಾಗಿದೆ. ಒಮ್ಮೆ ರಾಮನನ್ನು ಎಲ್ಲರ ಚಿತ್ತ ಭಿತ್ತಿಯಲ್ಲಿ ಒತ್ತಿದರೆ ಸಾಕು ಬಾಕಿ ದೇವರುಗಳ ಪ್ರಭಾವ ಕಡಿಮೆಯಾಗುತ್ತದೆ.

ಬಂಧುತ್ವದ ವಿರುದ್ಧ ಹಿಂದುತ್ವವನ್ನು ಜಾರಿಗೆ ತರುವ ಗುರಿ ಹೊಂದಿರುವ ಸಂಘಿ ಪಕ್ಷಕ್ಕೆ ದಕ್ಷಿಣ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಸವಾಲಾಗಿದೆ. ಆರ್ಯರ ದೇವರಾದ ರಾಮನನ್ನು ದ್ರಾವಿಡ ಜನಾಂಗದವರ ಮನಸ್ಸಿನಲ್ಲಿ ಬಿತ್ತುವ ಮೂಲಕ ಹಿಡಿತಕ್ಕೆ ತೆಗೆದುಕೊಂಡು ತಮ್ಮ ಹಿಂದೂರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯತಂತ್ರದ ಬಹುದೊಡ್ಡ ಭಾಗವೇ ಅಯೋಧ್ಯೆಯ ರಾಮಮಂದಿರ. ಯಾರೋ ಒಬ್ಬಿಬ್ಬರು ಪೀಠಾಧ್ಯಕ್ಷರು ವಿರೋಧಿಸಿದರೆಂದು ಧರ್ಮೋದ್ಯಮವನ್ನು ಬಿಜೆಪಿ ಕೈಬಿಡುವುದಿಲ್ಲ. ದೇಶದ ಶ್ರದ್ಧಾಕ್ಷೇತ್ರಗಳೆಲ್ಲವನ್ನೂ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವುದರಲ್ಲೂ ಸಂದೇಹವಿಲ್ಲ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತ

More articles

Latest article