Saturday, July 27, 2024

ಸ್ವಪಕ್ಷೀಯರ ವಿರೋಧದ ನಂತರವೂ ತನ್ನ ಕೀಳು ಅಭಿರುಚಿಯ ಹೇಳಿಕೆ ಸಮರ್ಥಿಸಿಕೊಂಡ ಅನಂತಕುಮಾರ್‌ ಹೆಗಡೆ.

Most read

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮಗನೇ ಎಂದು ನಿಂದಿಸಿದ್ದಲ್ಲದೆ ಕೋಮುದ್ವೇಷದ ಹೇಳಿಕೆಗಳನ್ನು ನೀಡಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ತನ್ನ ಮಾತುಗಳನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಇದು ನನ್ನ ವೈಯಕ್ತಿಕ ಹೇಳಿಕೆ, ಪಕ್ಷದ ಹೇಳಿಕೆ ಅಲ್ಲ. ಬಿ. ವೈ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಶಿರಸಿಯಲ್ಲಿಂದು ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದಾರೆ.

ಮೋದಿ, ಬಿಎಸ್‌ ವೈ ಬಗ್ಗೆ ಅಸಭ್ಯವಾಗಿ ಮಾತನಾಡ್ತಾರೆ. ನಮ್ಮ ದೇಗುಲದ ಬಗ್ಗೆ ಕೀಳಾಗಿ ಮಾತಾಡುವುದು ಏಕೆ? ನಮ್ಮ ಪ್ರಧಾನಿ, ಅಮಿತ್‌ ಶಾ ಬಗ್ಗೆ ಏನೆಲ್ಲ ಹೇಳಿದ್ದಾರೆ. ಯಾರ್ಯಾರು ಏನೇನು ಮಾತನಾಡಿದ್ದಾರೆಂದು ಹೇಳಬೇಕಾ? ಮೋದಿಗೆ ಸಿದ್ದರಾಮಯ್ಯ ಮಾಸ್‌ ಮರ್ಡರ್‌ ಅಂದ್ರು. ಕಾಂಗ್ರೆಸ್‌, ಸಿದ್ದರಾಮಯ್ಯರಿಗಿಲ್ಲದ ಸಭ್ಯತೆ ನಮಗ್ಯಾಕೆ? ನನ್ನ ಹೇಳಿಕೆಯಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಅನಂತ ಕುಮಾರ ಹೆಗಡೆಯವರ ಹೇಳಿಕೆಗಳನ್ನು ಭಾರತೀಯ ಜನತಾ ಪಕ್ಷದ ಮುಖಂಡರೇ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಹೆಗಡೆ ಹೇಳಿಕೆಗೂ‌ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರೆ, ಪಕ್ಷದ ನಾಯಕರುಗಳಾದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಹಲವರು ಹೆಗಡೆ ಮಾತಾಡಿದ್ದು ಸರಿಯಲ್ಲ ಎಂದು ಹೇಳಿದ್ದರು‌.

ಹಲವು ವರ್ಷಗಳಿಂದ ಸಾರ್ವಜನಿಕರ, ಮತದಾರರ ಕೈಗೆ ಸಿಗದೆ ಇದ್ದ ಅನಂತ ಕುಮಾರ ಹೆಗಡೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೆಗಡೆ ಅನಾರೋಗ್ಯ ಮತ್ತು ನಿಷ್ಕೃಯತೆ ಹಿನ್ನೆಲೆಯಲ್ಲಿ ಈ ಬಾರಿ ಸಂಸತ್ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

More articles

Latest article