ಕಳೆದ ಆಗಸ್ಟ್ 27ರಂದು ನಡೆದ KPSC ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಕಂಡು ಬಂದ ಗಂಭೀರ ಲೋಪಗಳು, ಕನ್ನಡ ಭಾಷಾಂತರದ ದೋಷಗಳ ಕುರಿತಂತೆ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕನ್ನಡಕ್ಕೆ ಆದ್ಯತೆ ನೀಡಬೇಕಾದ ಸಂಸ್ಥೆಯೊಂದು ಇಂಗ್ಲಿಷಿಗೆ ಅನವಶ್ಯಕ ಆದ್ಯತೆ ನೀಡಿ ಕನ್ನಡವನ್ನು ಅಸಹ್ಯಗೊಳಿಸಿ, ಕನ್ನಡದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಂಕಾಗಿಸಿರುವ ಕುರಿತು ನಾಡಿನ ಹಿರಿಯ ಸಾಹಿತಿಗಳನೇಕರು ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಪರೀಕ್ಷೆ ಬರೆದಿರುವ ಆಕಾಂಕ್ಷಿಗಳೂ ತಮ್ಮ ಅಳಲನ್ನು ತೋಡಿಕೊಂಡು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಷ್ಟಾಗಿಯೂ KPSC ಅಧಿಕಾರಿಗಳಿಗೆ ತಮ್ಮ ತಪ್ಪಿನ ಮೂಲ ಎಲ್ಲಿದೆ ಎಂದು ಅರಿವಾಗಿಲ್ಲ. ಆಗಿದ್ದರೂ ಸಮಸ್ಯೆಯೇ ಇಲ್ಲವೆಂಬಂತೆ ನಟಿಸುತ್ತಾ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಕನ್ನಡ ಪ್ಲಾನೆಟ್ ಈ ಕುರಿತು ಪ್ರಕಟಿಸಿದ್ದ ಸಂಪಾದಕೀಯ ಬರೆಹದಲ್ಲಿ KAS ಪ್ರಶ್ನೆಪತ್ರಿಕೆಯ ಕೆಲವಾರು ದೋಷಗಳನ್ನು ಪಟ್ಟಿ ಮಾಡಿ ತಿಳಿಸಿತ್ತು. ಸಮಸ್ಯೆಯ ಗಂಭೀರತೆ ಓದುಗರಿಗೆ ತಿಳಿಯಲಿ ಎಂಬ ಕಾರಣದಿಂದ ಈ ಪ್ರಶ್ನೆ ಪತ್ರಿಕೆಗಳಲ್ಲಿ ಕಂಡು ಬಂದಿರುವ ಇನ್ನೂ ಹಲವಾರು ದೋಷಗಳನ್ನು ಪಟ್ಟಿ ಮಾಡಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
ಕೆಳಗಿನ ದೋಷಗಳನ್ನು ಓದಿಕೊಂಡು ಸಮಸ್ಯೆಯ ಗಂಭೀರತೆ ಕುರಿತು ನೀವೂ ಒಂದು ತೀರ್ಮಾನಕ್ಕೆ ಬನ್ನಿ.
- Recently introduced Karnataka Stamp Act ಎಂಬುದನ್ನು ಇತ್ತೀಚೆಗೆ ಜಾರಿಗೆ ಬಂದ ಕರ್ನಾಟಕ ಸ್ಟಾಂಪು ಅಧಿನಿಯಮ ಎಂದು ಮಾಡಲಾಗಿದೆ. Introduced ಎಂದರೆ ಮಂಡಿಸಲಾದ ಎಂದಾಗುತ್ತದೆಯೇ ಹೊರತು ಜಾರಿಗೆ ಬಂದ ಎಂದಾಗುವುದಿಲ್ಲ.
- Solar cities are identified by Karnataka ಎಂಬುದನ್ನು ಸೋಲಾರ್ ನಗರಗಳು ಕರ್ನಾಟಕದಲ್ಲಿ ಗುರುತಿಸಲ್ಪಟ್ಟಿವೆ ಎಂದು ಕೊಡಲಾಗಿದೆ. ʼಕರ್ನಾಟಕವು ಗುರುತಿಸಿರುವ ಸೋಲಾರ್ ನಗರಗಳುʼ ಎಂದಾಗಬೇಕು.
- State Legislatures ಎಂಬುದಕ್ಕೆ ರಾಜ್ಯ ವಿಧಾನಮಂಡಲ ಎಂದು ಕೊಡಲಾಗಿದೆ. ಆದರೆ ರಾಜ್ಯಗಳ ಶಾಸಕಾಂಗಗಳು ಎಂದಾಗಬೇಕಿತ್ತು. ಇವುಗಳ ವ್ಯತ್ಯಾಸವೂ ಇವರಿಗೆ ತಿಳಿದಿಲ್ಲವೆ?
- ʼUnder the Recovery of Endangered Specieś component of the centrally sponsored Scheme ́Integrated Development of Wildlife Habitats for the recovery of endangered species consider the followingʼ ಎಂದಿದೆ. ಇದನ್ನು ಕನ್ನಡದಲ್ಲಿ ಸರಿಯಾಗಿ ಬರೆದರೆ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಪ್ರಾಯೋಜಿತ ವನ್ಯಜೀವಿ ಸ್ವಾಭಾವಿಕ ನೆಲೆಗಳ ಸಂಯೋಜಿತ ಅಭಿವೃದ್ಧಿ’ ಯೋಜನೆಯಡಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪುನಶ್ಚೇತನ ಘಟಕಾಂಶವು ಕೆಳಗಿನವುಗಳನ್ನು ಒಳಗೊಂಡಿರುತ್ತದೆʼ ಎಂದು ಬರೆಯಬೇಕಿತ್ತು. ಆದರೆ KPSC ಇದನ್ನು ಹೀಗೆ ಕೊಟ್ಟಿದೆ:
ಕೇಂದ್ರ ಪ್ರಾಯೋಜಿತ ಯೋಜನೆಯ ಘಟಕಾಂಶವಾದ ʼಅಪಾಯವನ್ನುಂಟುಮಾಡುವ ಪ್ರಭೇದಗಳನ್ನು ಪುನಃ ವಶಪಡಿಸಿಕೊಳ್ಳುವಿಕೆʼಯ ಮೇರೆಗೆ ಅಪಾಯವನ್ನುಂಟುಮಾಡುವ ಪ್ರಭೇದಗಳನ್ನು ಪುನಃ ವಶಪಡಿಸಿಕೊಳ್ಳುವುದಕ್ಕಾಗಿ ವನ್ಯಜೀವಿ ಸ್ವಾಭಾವಿಕ ನೆಲೆಗೆಳ ಸಮಗ್ರ ಅಭಿವೃದ್ಧಿ:
ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಅಪಾಯವನ್ನುಂಟುಮಾಡುವ ಪ್ರಭೇದ ಎಂದು ಅನುವಾದಿಸುವ ಜೊತೆಗೆ ಪ್ರಶ್ನೆಯ ತಲೆಬುಡವೇ ಅರ್ಥವಾಗದ ರೀತಿ ವಾಕ್ಯರಚನೆ ಮಾಡುವುದನ್ನು KPSC ಏನಾದರೂ ಹೊಸದಾಗಿ ಕನ್ನಡಿಗರಿಗೆ ಕಲಿಸುತ್ತಿದೆಯೇ?
- ಮತ್ತೊಂದು ಕಡೆ species which are endemic to western ghats ಎಂಬುದನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಮಾಡಿದ್ದಾರೆ. ಇಲ್ಲಿ endemic ಎಂದರೆ ಒಂದು ಜಾಗಕ್ಕೆ ಸೀಮಿತವಾದ, ಬೇರೆ ಎಲ್ಲೂ ಸಿಗದ ಎಂಬ ಅರ್ಥವೇ ಹೊರತು ಅಳಿವಿನಂಚಿನಲ್ಲಿರುವ ಎಂದಲ್ಲ.
- ಮಿಷನ್ ಲೈಫ್ ಎಂಬ ಪರಿಸರ ಸಂಬಂಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ Pavillion ಎಂಬ ಪದಕ್ಕೆ ʼವೇದಿಕೆ” ಎಂದು ಕೊಡಬೇಕಿದ್ದ ಕಡೆ ಮನರಂಜನಾ ಭವನ ಎಂದು ಕೊಡಲಾಗಿದೆ. ಜಾಗತಿಕ ಪರಿಸರ ಸಮ್ಮೇಳನದಲ್ಲಿ ಭಾರತ ಸರ್ಕಾರ ಮನರಂಜನಾ ಭವನ ನಿರ್ಮಿಸಿದೆ ಎಂದರೆ ಎಂತಹ ಅಪಾರ್ಥ ಕೊಡುತ್ತದೆ ಯೋಚಿಸಿ.
- ಇನ್ನೊಂದು ಪ್ರಶ್ನೆಯಲ್ಲಿ fiscal responsibility, fiscal deficit ಎಂಬುದಕ್ಕೆ ಆರ್ಥಿಕ ಹೊಣೆಗಾರಿಕೆ, ಆರ್ಥಿಕ ಕೊರತೆ ಎಂದು ಕೊಟ್ಟಿದ್ದಾರೆ. ಆದರೆ fiscal ಎಂದರೆ ಆರ್ಥಿಕ (economic) ಅಲ್ಲ ವಿತ್ತೀಯ ಇಲ್ಲವೇ ಹಣಕಾಸು ಎಂದು. ಇದು ಭಾಷಾಜ್ಞಾನಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಸಾಮಾನ್ಯ ತಿಳುವಳಿಕೆಗೆ ಎಟಕುವ ವಿಷಯ. ವಿತ್ತೀಯ ಹೊಣೆಗಾರಿಕೆ ಅಥವಾ ವಿತ್ತೀಯ ಕೊರತೆ ಎಂಬ ಪದಗಳೂ ಪರಿಚಯವಿರದ ಮಹಾನುಭಾವರು KPSC ಭಾಷಾಂತರಕಾರರು!!
- ಬಾಗಲಕೋಟೆಯ ಕಲಾದಗಿ ಪ್ರದೇಶವನ್ನು ಉಲ್ಲೇಖಿಸಿ ಕೊಟ್ಟಿರುವ ಒಂದು ಪ್ರಶ್ನೆಯಲ್ಲಿ ಕಲಾದಗಿಯನ್ನು ಕಾಲಡ್ಗಿ ಎಂದು ಕೊಡಲಾಗಿದೆ. ಹಾಗೆಯೇ ಶಿವಮೊಗ್ಗದ ಸೋಗಾನೆ ಎಂಬ ಊರಿನ ಹೆಸರನ್ನು KPSC ಪ್ರಶ್ನೆಪತ್ರಿಕೆ ಶಿವಮೊಗ್ಗದ ಸೋಗಣೆ ಎಂದು ಬದಲಿಸಿಬಿಟ್ಟಿದೆ. ಬೆಂಗಳೂರಿನ ಪೂಜೇನಹಳ್ಳಿಯನ್ನು ಪೂಜನಹಳ್ಳಿ ಮಾಡಿದ್ದಾರೆ. ಕನ್ನಡದ ಊರುಗಳ ಹೆಸರುಗಳನ್ನೂ ಹೀಗೆ ಕೆಡಿಸುವ ಪುಣ್ಯಾತ್ಮರು ಯಾವ ಗ್ರಹದಿಂದ ಬಂದವರಿರಬೇಕು?
- Bidriware is year old art ಅನ್ನುವುದನ್ನು ʼಬಿದ್ರಿವೇರ್ ಎಂಬುದು ವರ್ಷಗಳ ಹಿಂದಿನ ವಸ್ತುʼ ಎಂದು ಅನುವಾದಿಸುವವರಿಗೆ ಕರ್ನಾಟಕದ ಬೀದರ್ ನಲ್ಲಿರುವ ಪ್ರಸಿದ್ದ ಬಿದರಿ ಕಲೆಯ ಬಗ್ಗೆ ತಿಳಿದಿರದಿದ್ದರೂ Art ಎಂದರೆ ಕಲೆ ಎಂಬುದೂ ತಿಳಿದಿರಲಿಲ್ಲವೆ?
- sramana tradition ಎಂಬುದನ್ನು ಶ್ರಮಣ ಪರಂಪರೆ ಎಂದು ಕೊಡಬೇಕಾದ ಕಡೆ ಸ್ರಮಾನ ಪರಂಪರೆ ಎಂದು ಕೊಟ್ಟರೆ ಈ ಭಾಷಾಂತರಕಾರರ ಸಾಮಾನ್ಯ ಜ್ಞಾನ ಯಾವ ಮಟ್ಟದ್ದು ಎಂದು ಯೋಚಿಸಿ. ಇಂತವರನ್ನು ಯಾವ ಮಾನದಂಡದಲ್ಲಿ ಇಂತಹ ಕಡೆ ನೇಮಕ ಮಾಡಿಕೊಳ್ಳಲಾಗಿದೆ ಎಂಬುದೂ ತನಿಖೆಗೆ ಒಳಪಡಬೇಕಿದೆ.
- Things in common ಎಂದಿರುವುದಕ್ಕೆ ಸಮಾನವಾಗಿರುವ ಅಂಶಗಳು ಎಂಬುದರ ಬದಲಿಗೆ ಸಾಮಾನ್ಯ ವಿಷಯಗಳು ಎಂದು ಬರೆಯಲಾಗಿದೆ. ಇದರ ಅರ್ಥವೇ ಬದಲಾಗುತ್ತದಲ್ಲವೆ?
- ಬಳಸಿದ ಇಂಧನವು ದುಬಾರಿಯಾಗಿದೆಯಲ್ಲದೆ ಅದನ್ನು ಮರಳಿ ಪಡೆಯುವುದು ಕಷ್ಟ (difficult to recover) ಎಂದಾಗಬೇಕಿದ್ದನ್ನು ʼಬಳಸಿದ ಇಂಧನವು ದುಬಾರಿಯಾಗಿದೆ ಮತ್ತು ಚೇತರಿಸಿಕೊಳ್ಳುವುದು ಕಷ್ಟʼ ಎಂದು ಕೊಡಲಾಗಿದೆ. ಆದಷ್ಟು ಬೇಗ ಇಂಧನವು ಹುಷಾರಾಗಿ ಬರಲಿ ಎಂದು KPSC ಬಯಸುತ್ತಿರಬೇಕು.
- Cadmium ಅಂದರೆ ಕ್ಯಾಡ್ಮಿಯಂ ಎಂದಿರುವುದನ್ನು ಕ್ಯಾಲ್ಸಿಯಂ ಎಂದು ಕೊಟ್ಟಿದ್ದಾರೆ.
- On the lines of Mumbai – Chennai economic corridor the Karnatak Government has planned similar corridors ಎಂದರೆ ಮುಂಬೈ – ಚೆನ್ನೈ ಆರ್ಥಿಕ ಕಾರಿಡಾರ್ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಅಂತಹುದೇ ಕಾರಿಡಾರ್ ನಿರ್ಮಿಸಲು ಯೋಜಿಸಿದೆ ಎಂದಾಗಬೇಕು ಅಲ್ಲವೇ? ಆದರೆ KPSC ಹೇಳುವುದೇನೆಂದರೆ, “ ಮುಂಬೈ – ಚೆನ್ನೈ ಆರ್ಥಿಕ ಕಾರಿಡಾರ್ ಮಾರ್ಗಗಳಲ್ಲಿ ಕರ್ನಾಟಕ ಸರ್ಕಾರವು ಇವುಗಳ ನಡುವೆ ಏಕರೂಪ ಕಾರಿಡಾರ್ ಗಳನ್ನು ಯೋಜಿಸಿದೆ”!
ಕರ್ನಾಟಕ ಸರ್ಕಾರ ಮುಂಬೈ ಚೆನ್ನೈ ಮಾರ್ಗದಲ್ಲಿ ಕಾರಿಡಾರ್ ಮಾಡುತ್ತದೆಂತೆ!!
- Building inclusive and equitable Startup ecosystem ಎಂದರೆ- ಒಳಗೊಳ್ಳುವ ಹಾಗೂ ನ್ಯಾಯಸಮ್ಮತ ಸ್ಟಾರ್ಟಪ್ (ನವೋದ್ಯಮ) ಪರಿಸರವನ್ನು ನಿರ್ಮಿಸುವುದು ಎಂದಾಗಬೇಕು. KPSC ಇದನ್ನು- ಕಟ್ಟಡ ಅಂತರ್ಗತ ಮತ್ತು ನ್ಯಾಯಸಮ್ಮತ ನವೋದ್ಯಮ ಪರಿಸರ ವ್ಯವಸ್ಥೆ ಎಂದು ಕೊಟ್ಟಿದೆ. Building = ಕಟ್ಟಡ, inclusive = ಅಂತರ್ಗತ; ಅಲ್ಲಿಗೆ ಕಟ್ಟಡ ಅಂತರ್ಗತ, ಹೇಗಿದೆ KPSC ಲಾಜಿಕ್ಕು?
- Visual Reality ಎಂಬುದನ್ನು ದೃಶ್ಯ ವಾಸ್ತವ ಎಂದು ಮಾಡುವ ಬದಲಿಗೆ ವಿಷುಯಲ್ ರಿಯಾಯಿತಿ ಎಂದು ಕೊಟ್ಟಿದ್ದಾರೆ! ಇಂಗ್ಲಿಷಿನ ರಿಯಾಲಿಟಿಗೆ ಕನ್ನಡ ಪದ ರಿಯಾಯಿತಿಯಂತೆ!
- Disorder ಎಂಬುದನ್ನು ಖಾಯಿಲೆ ಎಂದು ಹೇಳುವ ಬದಲಿಗೆ ದೇಹ ವಿಕಾರ ಎಂದು ಮಾಡಿದ್ದಾರೆ. ಪ್ರಶ್ನೆ ಇರುವುದು ಮಾನಸಿಕ ಖಾಯಿಲೆ ಕುರಿತು. ಅಲ್ಲಿ ದೈಹಿಕ ಸಮಸ್ಯೆ ಕುರಿತು ಇಲ್ಲವೇ ಇಲ್ಲ.
- Major import destination ಎಂಬುದನ್ನು ಪ್ರಮುಖ ರಫ್ತಿನ ಗಮ್ಯಸ್ಥಾನ ಎಂದು ಕೊಟ್ಟಿದ್ದಾರೆ. ಪ್ರಮುಖ ಆಮದು ಕೇಂದ್ರ ಎಂದು ಕೊಡಬೇಕಾದ ಕಡೆ ರಫ್ತು ಗಮ್ಯಸ್ಥಾನ ಎಂದು ಕೊಟ್ಟರೆ ವಾಕ್ಯವೇ ತದ್ವಿರುದ್ಧವಾಗಿಬಿಡುತ್ತದೆ. ಇಂಗ್ಲಿಷ್ ಪ್ರಶ್ನೆಗೆ ಮತ್ತು ಕನ್ನಡದ ಪ್ರಶ್ನೆಗೆ ಒಂದೇ ಉತ್ತರವಿರಲು ಸಾಧ್ಯವೆ? KPSC ಯಲ್ಲಿ ಮಾತ್ರ ಸಾಧ್ಯ!
- Monetizing the data ಎಂಬುದಕ್ಕೆ ಡಾಟಾವನ್ನು ನಿಯಂತ್ರಿಸಬಹುದಾಗಿರುವ ಎಂದು ಕೊಡಲಾಗಿದೆ. ಆದರೆ ಪ್ರಶ್ನೆ ಇರುವುದು ಡಾಟಾವನ್ನು ಹಣಸಂಪಾದನೆಗೆ ಬಳಸಿಕೊಳ್ಳುವ ಕುರಿತಾಗಿಯೇ ಹೊರತು ನಿಯಂತ್ರಿಸುವ ಕುರಿತು ಅದರಲ್ಲಿ ಇಲ್ಲ.
- Adhesive ಎಂದರೆ ಅಂಟು/ ಅಂಟಿಕೊಳ್ಳುವ ಎಂಬುದರ ಬದಲಾಗಿ ಅನುಸಕ್ತಿ ಎಂದು ಕೊಟ್ಟರೆ ಯಾರಿಗೆ ತಾನೇ ಅರ್ಥವಾಗುತ್ತದೆ?
- Menstrual cups ಎಂಬುದನ್ನು ಮುಟ್ಟಿನ ಕಪ್ ಎನ್ನುವ ಬದಲು ಮಾಸಿಕ ಕಪ್ ಎಂದರೆ?
- ನಾ ಡಿಸೋಜಾ ಅವರು 2023ರಲ್ಲಿ ಜೀವಮಾನ ಲೇಖನಕ್ಕೆ ಪಂಪ ಪ್ರಶಸ್ತಿ ಪಡೆದರು! – ಜೀವಮಾನದ ಸಾಹಿತ್ಯಕ್ಕೆ ಎಂದು ಕೊಡುವ ಬದಲು ಲೇಖನಕ್ಕೆ ಎಂದು ಕೊಟ್ಟರೆ ಹೇಗೆ ಸರಿಯಾಗುತ್ತದೆ? (ಇಂಗ್ಲಿಷಿನಲ್ಲಿ lifetime contribution ಎಂದಿದೆ)
- State Assembly ಎಂಬುದನ್ನು ರಾಜ್ಯ ವಿಧಾನ ಸಭೆ ಎಂಬುದರ ಬದಲಿಗೆ ರಾಜ್ಯಸಭೆ ಎಂದು ಬರೆದು ಪ್ರಶ್ನೆಯೇ ತಪ್ಪಾಗಿದೆ.
- ಸಂಬಂಧಗಳನ್ನು ವಿವರಿಸುವ ಪ್ರಶ್ನೆಯೊಂದರಲ್ಲಿ E is A’s sisterʼ ಎಂದಿದ್ದರೆ ಕನ್ನಡದಲ್ಲಿ Eಯು Aನ ಸಹೋದರ ಎಂದು ಬರೆದಿದ್ದಾರೆ. sister ಪದಕ್ಕೆ ಸಹೋದರ ಎಂದು ಬರೆದರೆ ಏನಾಗುತ್ತದೆ?
- Heaviest ಎನ್ನುವುದನ್ನು ಅತಿ ಭಾರವಾದ ಎಂಬುದರ ಬಗಲಿಗೆ ಅತಿ ವೇಗವಾದ ಎಂದು ಬರೆಯಲಾಗಿದೆ.
- ಹೊಂದಿಸಿ ಬರೆಯುವ ಒಂದು ಪ್ರಶ್ನೆಯಲ್ಲಿ drainage system ಎಂಬುದಕ್ಕೆ “ಚರಂಡಿ ವ್ಯವಸ್ಥೆಯʼ ನಮೂನೆಗಳು ಎಂದು ಕೊಟ್ಟಿದ್ದಾರೆ. ಮತ್ತೊಂದು ಕಡೆ ಇದೇ ಪದಕ್ಕೆ ಬಸಿತ ವ್ಯವಸ್ಥೆ ಎಂದು ಕೊಟ್ಟಿದ್ದಾರೆ.
ಮೇಲಿನ ಉದಾಹರಣೆಯಲ್ಲಿ ಭೂಗೋಳ ಶಾಸ್ತ್ರದಲ್ಲಿ ಇಂಗ್ಲಿಷಿನಲ್ಲಿ drainage system ಎಂದು ಹೇಳುವುದಕ್ಕೆ ಕನ್ನಡದಲ್ಲಿ ʼನದಿ ವ್ಯವಸ್ಥೆʼ ಎಂದು ಕರೆಯಲಾಗುತ್ತದೆ ಎಂದು ಸಾಮಾನ್ಯ ಕನಿಷ್ಟ ಜ್ಞಾನ ಇರುವವರಿಗೆ ತಿಳಿದಿರುತ್ತದೆ. ಅಕಸ್ಮಾತ್ ಗೊತ್ತಿರದಿದ್ದರೂ ಈ ಪ್ರಶ್ನೆಯನ್ನು ಪೂರ್ತಿಯಾಗಿ ಗ್ರಹಿಸಿದರೂ ಅದು ಚರಂಡಿ ವ್ಯವಸ್ಥೆ ಬಗ್ಗೆ ಇರುವ ಪ್ರಶ್ನೆಯಲ್ಲ ಬದಲಿಗೆ ನದಿ ವ್ಯವಸ್ಥೆ ಬಗ್ಗೆ ಇರುವ ಪ್ರಶ್ನೆ ಎಂದು ಅರ್ಥವಾಗುತ್ತದೆ. ಇದಕ್ಕೆ ಕಾಮನ್ ಸೆನ್ಸ್ ಇದ್ದರೂ ಸಾಕಾಗುತ್ತದೆ.
ಯಾವುದೇ ಒಂದು ನುಡಿಯಿಂದ ಮತ್ತೊಂದು ನುಡಿಗೆ ಭಾಷಾಂತರ ಮಾಡುವಾಗ ಅನುವಾದಕನಿಗೆ ಇರಬೇಕಾದ ಕನಿಷ್ಟದಲ್ಲಿ ಕನಿಷ್ಟ ತಿಳುವಳಿಕೆ ಎಂದರೆ ಮೂಲ ಭಾಷೆಯಲ್ಲಿರುವ ಒಂದು ಪದ ಅಥವಾ ಒಂದು ವಾಕ್ಯ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಂಡು ನಂತರ ಮತ್ತೊಂದು ಭಾಷೆಗೆ ಭಾಷಾಂತರಿಸಬೇಕು ಎಂಬುದು. ಆದರೆ ಈ ಕನಿಷ್ಟ ತಿಳುವಳಿಕೆಯ ಕೊರತೆ ಇಲ್ಲಿ ತೋರುತ್ತದೆ.
- If % means division ಎಂಬುದನ್ನು % ಎಂಬುದು ವಿಭಜನೆ ಎಂದು ಕೊಡಲಾಗಿದೆ. ಗಣಿತದ ಸಾಮಾನ್ಯ ತಿಳುವಳಿಕೆ ಇದ್ದವರಿಗೆ ಇಂಗ್ಲಿಷ್ ನಲ್ಲಿ division ಎಂದರೆ ಭಾಗಾಕಾರ ಎಂದು ತಿಳಿದಿರುತ್ತದೆ. ಆದರೆ KPSC ಪುಣ್ಯಾತ್ಮರು ಭಾಗಾಕಾರ ಎಂದು ಬರೆಯುವ ಬದಲು ವಿಭಜನೆ ಎಂದು ಬರೆದಿದ್ದಾರೆ.
- Indiaʼs nomination of the Sacred Ensembles of the Hoysalas has been inscribed on UNESCOʼs World Heritage list in the ongoing extended the World Heritage Committee meeting being held in Riyaḑh Saudi Arabia ಎಂಬ ವಾಕ್ಯವಿದೆ. ಇದನ್ನು KPSC ಅನುವಾದದಲ್ಲಿ ಹೀಗಿ ಕೊಟ್ಟಿದ್ದಾರೆ: ಭಾರತದ ಹೊಯ್ಸಳರ ಪವಿತ್ರ ಮೇಳಗಳ ನಾಮಕರಣವನ್ನು ರಿಯಾದ್, ಸೌದಿ ಅರೇಬಿಯಾದಲ್ಲಿ ನಡೆಸಿದ್ದ 45ನೇ ವಿಶ್ವ ಪರಂಪರೆಯ ಸಮಿತಿ ಸಭೆಯನ್ನು ವಿಸ್ತರಿಸಿ ಮುಂದುವರೆಸಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಬರೆಯಲಾಗಿದೆʼ. ಇದೇನಿದು ಹೊಯ್ಸಳರ ಪವಿತ್ರ ಮೇಳಗಳ ನಾಮಕರಣ ಎಂದು ಗಾಬರಿಯಾಗಬೇಡಿ. ಅದರ ಸರಿಯಾದ ಅನುವಾದ ಹೀಗಿರಬೇಕಿತ್ತು: ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿಯ 45ನೆಯ ವಿಸ್ತೃತ ಸಭೆಯಲ್ಲಿ ಭಾರತವು ನಾಮನಿರ್ದೇಶನಗೊಳಿಸಿದ್ದ ಪವಿತ್ರ ಹೊಯ್ಸಳ ಶೈಲಿಯ ದೇಗುಲ ಸಮೂಹವನ್ನು ಯುನೆಸ್ಕೊ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆʼ
- The important function of ionosphere is ಎಂದಿರುವುದನ್ನು ಆಯಾಮಗೋಳದ ಪ್ರಮುಖ ಕಾರ್ಯವೆಂದರೆ… ಎಂದು ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಐಯಾನುಗೋಳ ತಿಳಿದಿರುತ್ತದೆ ಆದರೆ ಈ ಆಯಾಮಗೋಳ ಯಾವುದು?
ಹೀಗೆ ಓದಿಕೊಂಡ ಕನ್ನಡದ ಕಂದಮ್ಮಗಳ ಸ್ಥಿತಿ ಏನಾಗಿರಬಹುದು?
ಪ್ರಬಂಧ (ಪ್ಯಾಸೇಜ್) ಓದಿ ಪ್ರಶ್ನೆಗೆ ಉತ್ತರಿಸುವ ಭಾಗಗಳಂತೂ ಅದ್ವಾನವಾಗಿವೆ. ಕೆಲವನ್ನು ನೋಡಿ:
- A house without books is a characterless house ಎಂದು ಶುರುವಾಗುವ ವಾಕ್ಯವೃಂದವೊಂದನ್ನು ಸರಿಯಾಗಿ ಅನುವಾದಿಸಿದರೆ ʼಪುಸ್ತಕವಿಲ್ಲದ ಮನೆ ಶೀಲವಿಲ್ಲದ ಮನೆಯಂತೆ, ಅವನ ಮನೆಯಲ್ಲಿರುವ ಪರ್ಷಿಯನ್ ಕಂಬಳಿಗಳು ಆತನ ಸಿರಿವಂತಿಕೆಯನ್ನು ಹೇಳಿದರೂ ಅಲ್ಲಿರುವ ಪುಸ್ತಕಗಳು ಅವನ ಮನಸ್ಸು ಹೇಗಿದೆ ಎಂದು ಹೇಳುತ್ತವೆ” ಎಂಬ ವಾಕ್ಯವಿದೆ. ಇದನ್ನು KPSCಯ ಭಾಷಾಂತರಕಾರರು:
ʼಇಲ್ಲಿ ಪುಸ್ತಕಗಳಿಲ್ಲದ ಮನೆ ಅಕ್ಷರವಿಲ್ಲದ ಮನೆ, ಎಷ್ಟೇ ಶ್ರೀಮಂತರಾದರೂ ಪರ್ಷಿಯನ್ ಕಂಬಳಿಗಳು. ನಿಮಗೆ ಆತನು ಹಣ ಹೊಂದಿದ್ದಾನೆ ಎಂದು ಮಾತ್ರ ಹೇಳುತ್ತವೆ. ಆದರೆ ಪುಸ್ತಕಗಳು ಆತನಿಗೆ ಸಹ ಮನಸ್ಸು ಇದೆಯೇ ಎಂದು ನಿಮಗೆ ಹೇಳುತ್ತವೆ.” ಎಂದು ಕೊಟ್ಟಿದ್ದಾರೆ.
- ಮಾಸ್ಟರ್ – ಸ್ಪಿರಿಟ್ (ಪ್ರಭಾವಯುತವಾದ ಚೇತನ), ಬ್ರಹ್ಮಾಂಡಕ್ಕೆ ವಿಶಾಲವಾಗಿ ತೆರೆದಿರುವ ಜ್ಞಾನದ ಕಿಟಕಿಯಿಂದ ಹೊರಟಿದ ಪ್ರಜ್ಞೆಯ ಹಠಾತ್ ಪ್ರಭಾವಕ್ಕಾಗಿ ಪುಸ್ತಕಗಳ ಜ್ಞಾನಪ್ರಕಾಶನದಂತೆ ಯಾವುದು ನಿಮಗೆ ಹೆಚ್ಚು ಸಂತೋಷದಾಯಕವಾಗಿದೆ?
- ಅಂತಹ ಸಂದರ್ಭಗಳಲ್ಲಿ, ಒಂದು ತಪ್ಪು ಹೇಗೆ ಬದುಕಬೇಕೆಂಬುದರ ಬಗೆಗಿನ ಒಂದು ತಪ್ಪು ಸಿದ್ಧಾಂತಕ್ಕೆ ಹೊಣೆಯಾಗಿದ್ದಿದ್ದರೆ ಹೇಗೋ ಹಾಗೆ ಅದು ತಪ್ಪೆಂದು ತೋರುತ್ತದೆ..
- ʼನೀವು ಬೆಕ್ಕು ಹೊಂದಿದ್ದರೆ ಅದು ಆಹಾರ ಮತ್ತು ಉಷ್ಣತೆ ಮತ್ತು ಟೈಲ್ಸ್ ಗಳ ಮೇಲೆ ಒಂದು ರಾತ್ರಿ ಮಲಗಲು ಅವಕಾಶ ಪಡೆದರೆ ಅದು ತನ್ನ ಜೀವನವನ್ನು ಆನಂದಿಸುತ್ತದೆʼ
- ನಿಮ್ಮ ಅಗತ್ಯಗಳು ಬೆಕ್ಕಿನ ಅಗತ್ಯತೆಗಳಿಗಿಂತ ಜಟಿಲವಾಗಿವೆ, ಆದರೆ ಅವು ಇನ್ನೂ ಪ್ರವೃತ್ತಿಯಲ್ಲಿ ತಮ್ಮ ಆಧಾರವನ್ನು ಹೊಂದಿವೆ.
- ಸುಸಂಸ್ಕೃತ ಸಮಾಜದಲ್ಲಿ ಇದನ್ನು ಮರೆಯುವುದು ತುಂಬಾ ಸೂಕ್ತವಾಗಿದೆ.
- ಹಲವು ಬಾರಿ ತನಗಾಗಿ ಆನಂದದಾಯಕವಾಗಬಹುದಾದಂಥ ಒಂದು ಚಟುವಟಿಕೆ ಮತ್ತು ಜೊತೆಗೆ ಅದು ಅಸ್ತಿತ್ವಕ್ಕೆ ಬರುವುದನ್ನು ನೀಡಲು ನೀವು ಸಂತೋಷಪಡುವಂಥ ಕೆಲವು ಅಂಶಗಳನ್ನು ಕ್ರಮೇಣವಾಗಿ ನಿರ್ಮಾಣ ಮಾಡುತ್ತದೆ.
- ʼನಗರಗಳಲ್ಲಿ ವೃತ್ತಿಜೀವನ ಇರುವ ಅನೇಕ ಪುರುಷರು ವಾರಾಂತ್ಯಗಳಲ್ಲಿ ತಮ್ಮ ಕೈದೋಟಗಳಲ್ಲಿ ಸ್ವಯಂಪ್ರೇರಿತವಾದ ಹಾಗೂ ಸಂಬಳವಿಲ್ಲದ ಕೆಲಸದಲ್ಲಿ ತೊಡಗುತ್ತಾರೆ. ವಸಂತ ಮಾಸ ಬಂದಾಗ ಅವರು ತಾವು ಸೃಷ್ಟಿಸಿದ ಸೌಂದರ್ಯದ ಸಂತಸವನ್ನು ಅನುಭವಿಸುತ್ತಾರೆʼ ಎಂದು ಕೊಡಬೇಕಿದ್ದನ್ನು ಹೀಗೆ ಕೊಡಲಾಗಿದೆ: ನಗರದಲ್ಲಿ ತಮ್ಮ ವೃತ್ತಿಜೀವನವನ್ನು ಕಳೆಯುವ ಅನೇಕ ಪುರುಷರು ತಮ್ಮ ತೋಟಗಳಲ್ಲಿ ಸ್ವಯಂಪ್ರೇರಿತ ಮತ್ತು ಪ್ರತಿಫಲವಿಲ್ಲದ ಕ್ರಮಕ್ಕಾಗಿ ತಮ್ಮ ಕೆಲಸವನ್ನು ಅರ್ಪಿಸುತ್ತಾರೆ ಮತ್ತು ವಸಂತಕಾಲ ಬಂದಾಗ, ಅವರು ಸೃಷ್ಟಿಸಿದ ಸೌಂದರ್ಯದ ಎಲ್ಲ ಸಂತೋಷಗಳನ್ನು ಅನುಭವಿಸುತ್ತಾರೆʼ
ಇದನ್ನೆಲ್ಲಾ ಓದಿಯೂ ಕಣ್ಣು ಮಂಜಾಗಿ, ಎಚ್ಚರತಪ್ಪಿ ಬೀಳದೇ ಬಂದಿರುವ ಪರೀಕ್ಷಾರ್ಥಿಗಳ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ.
ಭಾಷಾಂತರದ ಸಮಸ್ಯೆ ಗಂಭೀರವಾಗಿದ್ದರೂ ಇತರ ಸಮಸ್ಯೆಗಳೂ ಇಲ್ಲಿದ್ದವು.
1. ಮೊದಲನೆ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆಪತ್ರಿಕೆಗೆ ಇರಬೇಕಾದ ನೀಲನಕ್ಷೆಯನ್ನು ಗಾಳಿಗೆ ತೂರಿ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗಿದೆ.
2. ಪ್ರಮಾಣಾನುಗುಣವನ್ನು ಕಡೆಗಣಿಸಲಾಗಿದೆ. ಶೇಕಡಾ 90ರಷ್ಟು ದೀರ್ಘ ಪ್ರಶ್ನೆಗಳೇ ಇದ್ದವು. ಉದಾ : ದೀರ್ಘ ಪ್ರಶ್ನೆಗಳು, ನೇರ ಪ್ರಶ್ನೆಗಳ ಪ್ರಮಾಣಾನುಗುಣವನ್ನು ನಿಗದಿತ 2 ತಾಸುಗಳಲ್ಲಿ ಬಿಡಿಸಲು ಸಾಧ್ಯವಾಗುವಂತೆ ನಿರ್ಧರಿಸಿ ಪ್ರಶ್ನೆ ಪತ್ರಿಕೆ ರಚನೆಯಾಗಬೇಕಿತ್ತು. ಇದನ್ನು ಪ್ರಶ್ನೆಪತ್ರಿಕೆ ತಯಾರಿಸುವವರು ಪರಿಗಣಿಸಿಯೇ ಇಲ್ಲ. 90% ಪ್ರಶ್ನೆಗಳು ದೀರ್ಘ ಪ್ರಶ್ನೆಗಳಾಗಿದ್ದ ಕಾರಣಕ್ಕೆ ಸಮಯ ನಿರ್ವಹಣೆ ಮಾಡಲು ಯಾರಿಗೂ ಸಾಧ್ಯವಾಗಿಲ್ಲ.
3. ಮೊದಲನೆ ಪತ್ರಿಕೆಯಲ್ಲಿ ಅರ್ಥಶಾಸ್ತ್ರ, ಭೂಗೋಳಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದು ಇದು KPSC ಯೇ ನೀಡಿರುವ ಸಿಲಬಸ್‌ನ್ನು ಕಡೆಗಣಿಸಿದಂತಾಗಿದೆ.
4. ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ 40% ಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಅರ್ಥಹೀನ ಅನುವಾದ ಮಾಡಲಾಗಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ತಯಾರಾಗಿದ್ದ ಆಕಾಂಕ್ಷಿಗಳು ಪ್ರಶ್ನೆಗಳೇ ಆರ್ಥವಾಗದೇ ಕಕ್ಕಾಬಿಕ್ಕಿಯಾಗುವಂತಾಗಿದೆ.
ಕನ್ನಡ ಮಾಧ್ಯಮದವರಿಗೆ ತಪ್ಪಾದ ಅನುವಾದ ಮತ್ತು ಪ್ರಶ್ನೆ ಪತ್ರಿಕೆ ದೀರ್ಘವಾಗಿದ್ದರಿಂದ ಅರ್ಧದಷ್ಟು ಪ್ರಶ್ನೆಗಳನ್ನು ಬಿಡಿಸುವುದು ಕೂಡ ಕಷ್ಟವಾಗಿದ್ದನ್ನು ಪರೀಕ್ಷೆ ಬರೆದ ಆಕಾಂಕ್ಷಿಗಳೇ ಹೇಳಿದ್ದಾರೆ.
ಈಗ ಹೇಳಿ ಇಂತವರ ಕೈಯಲ್ಲಿ ಕನ್ನಡ ನುಡಿ , ಕನ್ನಡ ನಾಡುಗಳು ಉಳಿಯಲು ಬೆಳೆಯಲು ಸಾಧ್ಯವೆ? ಕರ್ನಾಟಕ ಎಂಬ ಹೆಸರು ಪಡೆದು 50 ವರ್ಷಗಳ ಸಂಭ್ರಮಾಚರಣೆ ಆಚರಿಸುತ್ತಿರುವಾಗ ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಎಂದು ಹರಸಿದ್ದ ಸಾಹಿತಿವರೇಣ್ಯರ ಆಶಯಕ್ಕೆ ಬದಲಾಗಿ ಕನ್ನಡವೇ ಉಸಿರುಗಟ್ಟಿ ಹೋಗುತ್ತಿರುವುದು ವಿಪರ್ಯಾಸ.
ಹರ್ಷಕುಮಾರ್ ಕುಗ್ವೆ