ಆಧುನಿಕ ಶಿಕ್ಷಣವನ್ನು ಪಡೆದ ಮೋಹನದಾಸ ಪೈ, ಮಧು ಕೀಶ್ವರ್ ಮೊದಲಾದವರಲ್ಲಿ ಯಾಕೆ ಮಾನವೀಯ ಗುಣಗಳು ಕಾಣದಂತಾದವು? ಅಂದರೆ ತಪ್ಪು ಯಾರದು? ಮತೀಯ ದ್ವೇಷಕ್ಕೆ ಪ್ರೋತ್ಸಾಹ ನೀಡುವ ಸರಕಾರ ಮತ್ತು ಇಕೋ ಸಿಸ್ಟಮ್ ನದೇ? ನಮಗೆ ಉತ್ತಮ ಸಂಸ್ಕಾರ ನೀಡಬೇಕಾಗಿದ್ದ ಸಮಾಜದ್ದೇ? ಅಥವಾ ನಮಗೆ ಸಿಗುತ್ತಿರುವ ಶಿಕ್ಷಣದ್ದೇ? -ಶ್ರೀನಿವಾಸ ಕಾರ್ಕಳ.
ಅವರು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಹಳ ಓದಿಕೊಂಡವರೂ, ಅನುಭವಿಯೂ, ಪ್ರಸಿದ್ಧ ಐಟಿ ಕಂಪೆನಿಯೊಂದರ ಸ್ಥಾಪಕ ಸದಸ್ಯರಲ್ಲೊಬ್ಬರೂ ಅಂತೆ. ‘ಅತಿಥಿ ದೇವೋಭವ’ ಎಂಬ ತತ್ತ್ವವನ್ನು ಅಕ್ಷರಶಃ ಪಾಲಿಸುತ್ತ, ಒಳಗೊಳುವಿಕೆಯ ಪರಂಪರೆಗೆ ಹೆಸರಾದ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಮನುಷ್ಯ ತಾನು ಎಂದು ಅವರು ಸ್ವತಃ ಘೋಷಿಸಿಕೊಳ್ಳುತ್ತಾರೆ.
ಆದರೆ ಹಾರ್ಡ್ ಕೋರ್ ಸಂಘಿ. ಆದ್ದರಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಬಲಪಂಥೀಯರ ಡಾರ್ಲಿಂಗ್. ಟ್ವಿಟರ್ ನಲ್ಲಿ ಅಂದಾಜು ಏಳು ಲಕ್ಷ ಮಂದಿ ಫಾಲೋವರ್ ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್. ಬಲಪಂಥೀಯ ಅಂದ ಮೇಲೆ ಕೇಳಬೇಕೇ, ಜನಾಂಗದ್ವೇಷಿ ಆಲೋಚನೆಯ ಬದ್ಧ ಪ್ರತಿಪಾದಕ, ಬಿಜೆಪಿಯ ನಿಷ್ಠಾವಂತ ಬೆಂಬಲಿಗ, ಅದಕ್ಕಿಂತಲೂ ಹೆಚ್ಚಾಗಿ ನರೇಂದ್ರ ಮೋದಿಯ ಪರಮ ಭಕ್ತ.
ಇಷ್ಟೆಲ್ಲ ‘ಶ್ರೇಷ್ಠ ಗುಣ’ ಇದ್ದ ಮೇಲೆ ಕಾಂಗ್ರೆಸ್ ಮತ್ತು ನೆಹರೂ ಮೇಲೆ ದ್ವೇಷ ಇರದಿರಲು ಸಾಧ್ಯವೇ? ಹಾಗಂತ ಈ ಮನುಷ್ಯ ಓದಿದ್ದು ಕಾಂಗ್ರೆಸ್ ಮತ್ತು ನೆಹರೂ ಕಾಲದ ಶಾಲೆಗಳಲ್ಲಿಯೇ. ಇವರ ಉದ್ಯಮಗಳು ಉನ್ನತಿಯನ್ನು ಕಂಡುದು ಕಾಂಗ್ರೆಸ್ ಕಾಲದಲ್ಲಿಯೇ. ಆದರೂ ಕಾಂಗ್ರೆಸ್ ಮತ್ತು ನೆಹರೂ ನಿಂದನೆ ನೇರ, ದಿಟ್ಟ ಮತ್ತು ನಿರಂತರ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದರೂ ಕನ್ನಡ ಮತ್ತು ಕನ್ನಡಿಗರ ಹಿತಾಸಕ್ತಿಯ ಪ್ರಶ್ನೆ ಬಂದಾಗ, ತನ್ನ ಉದ್ಯಮ ಹಿತಾಸಕ್ತಿಗೆ ಮೊದಲ ಪ್ರಾಶಸ್ತ್ಯ ನೀಡುವ ಮನುಷ್ಯ. ಇತ್ತೀಚೆಗೆ ಕರ್ನಾಟಕದ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯ ವಿಷಯ ಬಂದಾಗ ತಕರಾರು ಎತ್ತಿದ ಉದ್ಯಮಿಗಳ ನೇತೃತ್ವ ವಹಿಸಿ ಕೊನೆಗೂ ಆ ಮಸೂದೆ ನೆನೆಗುದಿಗೆ ಬೀಳುವಂತೆ ಮಾಡಿ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾದ ಮಹಾನುಭಾವ. ಈತ ಬೇರಾರೂ ಅಲ್ಲ, ನಮ್ಮ ಮೋಹನದಾಸ ಪೈ.
ಮಣಿಪಾಲ ಸಂಸ್ಥೆಗಳಿಗೆ ಸರಕಾರಿ ರಿಯಾಯಿತಿಯ ಕತೆ
ಒಮ್ಮೆ ಏನಾಯಿತು ಗೊತ್ತಾ? ಎಂದಿನಂತೆ ಪೈ ಸಾಹೇಬರು ಟ್ವಿಟರ್ ನಲ್ಲಿ ಕಾಂಗ್ರೆಸ್ ಮತ್ತು ನೆಹರೂ ನಿಂದನೆಯ ಕಾರ್ಯಕ್ರಮ ಆರಂಭಿಸಿದರು. ಕಾಂಗ್ರೆಸ್ ಕಾಲದಲ್ಲಿ ಏನೂ ಒಳ್ಳೆಯ ಕೆಲಸಗಳು ಆಗಿಯೇ ಇರಲಿಲ್ಲ, ಉದ್ಯಮಗಳ ಬೆಳವಣಿಗೆಗೆ ಆಗ ಸಹಾಯವೇ ಇರಲಿಲ್ಲ, ಎಲ್ಲ ಒಳ್ಳೆಯ ಕೆಲಸಗಳೂ ಆದುದು ನರೇಂದ್ರ ಮೋದಿಯ ಹತ್ತು ವರ್ಷಗಳ ಕಾಲದಲ್ಲಿ ಎಂಬುದು ಅವರ ನಿಲುವು. ಈ ಪೈ ಮಹಾಶಯನ ವಾದಗಳಿಗೆ ಸಾಮಾನ್ಯವಾಗಿ ಯಾವುದೇ ಆಧಾರ ಇರುವುದಿಲ್ಲ. ಬಹುತೇಕ ಎಲ್ಲವೂ ಬಿಜೆಪಿ ವಾಟ್ಸಪ್ ಗ್ರೂಪ್ ಗಳಲ್ಲಿ ಕಾಣ ಸಿಗುವ ಪ್ರಪಗಾಂಡಾ ಮಾತುಗಳು. ಇವರ ಸುಳ್ಳುಗಳನ್ನು ಕಣ್ಣು ಮುಚ್ಚಿ ಬೆಂಬಲಿಸುವ ಸಾವಿರಾರು ಅಂಧ ಭಕ್ತರೂ ಇದ್ದಾರೆ.
ಆದರೆ, ಎಲ್ಲರೂ ಹಾಗೆಯೇ ಇರುತ್ತಾರೆಯೇ? ಅನೇಕ ತಿಳಿವಳಿಕಸ್ಥರು ಪೈ ಸಾಹೇಬರ ವಾದವನ್ನು ಸುಳ್ಳು ಎಂದು ಅಂಕಿ ಅಂಶ ಸಹಿತವಾಗಿ ಸಾಬೀತು ಪಡಿಸುತ್ತಲೇ ಇರುತ್ತಾರೆ. ಅಂಥವರಲ್ಲಿ ಒಬ್ಬರು ರಂಜಿತ್ ಥಾಮಸ್ ಎನ್ನುವವರು. ಇವರು ನಾನು ಗಮನಿಸಿದಂತೆ ಆರ್ಥಿಕ ವಿಚಾರಗಳ ಬಗ್ಗೆ ಇದಮಿತ್ಥಂ ಎಂದು ವಾದಿಸಬಲ್ಲವರು ಮತ್ತು ಕರ್ನಾಟಕದ ಬಗ್ಗೆ ಅಪಾರ ತಿಳಿದು ಕೊಂಡಿರುವವರು. ಪೈ ಸಾಹೇಬರ ಸುಳ್ಳುಗಳನ್ನು ಗಾಳಿಗೆ ಹಿಡಿಯುತ್ತಲೇ ಇರುವವರು.
“ಡಿಯರ್ ಪೈ, ಕಾಂಗ್ರೆಸ್ ಕಾಲದಲ್ಲಿ ಏನೂ ಆಗಿಯೇ ಇರಲಿಲ್ಲ, ಸಂಸ್ಥೆಗಳಿಗೆ, ಉದ್ಯಮಗಳಿಗೆ ಕಾಂಗ್ರೆಸ್ ಸರಕಾರ ಯಾವ ಬೆಂಬಲವನ್ನೂ ನೀಡಿಯೇ ಇರಲಿಲ್ಲ ಎನ್ನುತ್ತೀರಲ್ಲ, ನಿಮ್ಮ ಮಣಿಪಾಲದ ಮೆಡಿಕಲ್ ಕಾಲೇಜು ಮತ್ತಿತರ ಸಂಸ್ಥೆಗಳು ಆರಂಭವಾದುದು ಯಾವಾಗ? ಅವಕ್ಕೆ ಆಗಿನ ಸರಕಾರ ಸಹಾಯ ಮಾಡಿಲ್ಲವೇ? ಅಗ್ಗದ ದರದಲ್ಲಿ ಭೂಮಿ ಕೊಟ್ಟಿಲ್ಲವೇ?” ಎಂದು ಪ್ರಶ್ನೆ ಎಸೆದರು ರಂಜಿತ್. ಅದಕ್ಕೆ ಉತ್ತರಿಸಿದ ಪೈಗಳು “ಆಗಿನ ಸರಕಾರ ಯಾವ ನೆರವನ್ನೂ ನೀಡಿಲ್ಲ, ಮಣಿಪಾಲ ಪೈಗಳು ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಿದ್ದು” ಎಂದು ಉತ್ತರಿಸಿದರು. ರಂಜಿತ್ ಸುಮ್ಮನೆ ಬಿಡುತ್ತಾರೆಯೇ? ನೇರ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಆರ್ ಟಿ ಐ ಅರ್ಜಿ ಸಲ್ಲಿಸಿ ಸುಮಾರು ಅರ್ಧ ಶತಮಾನಕ್ಕೂ ಹಿಂದಿನ ಕಡತ ತೆಗೆಸಿದರು. ಅದರಲ್ಲಿ ಮಣಿಪಾಲ ಸಂಸ್ಥೆಗೆ ಸಾಂಕೇತಿಕ ಶುಲ್ಕದೊಂದಿಗೆ ಅನೇಕ ಎಕರೆ ಜಮೀನು ನೀಡಿದ್ದು ಬಹಿರಂಗಗೊಂಡಿತು. ಇಡೀ ದಾಖಲೆಯನ್ನು ರಂಜಿತ್ ಟ್ವಿಟರ್ ನಲ್ಲಿ ಹಾಕಿ “ಇದರ ಬಗ್ಗೆ ಏನು ಹೇಳುತ್ತೀರಿ?” ಎಂದು ಪೈಗಳಿಗೆ ಕೇಳಿದರು. ಪೈಗಳು ರಂಜಿತ್ ರನ್ನು ಬ್ಲಾಕ್ ಮಾಡಿ ಓಡಿ ಹೋದರು.
ಯುಪಿಎ ಸರಕಾರದ ಬಗ್ಗೆ ಸುಳ್ಳು ಹೇಳಿದ ಪೈ
ಒಮ್ಮೆ ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ‘ವರ್ಲ್ಡ್ ಹಿಂದೂ ಕಾಂಗ್ರೆಸ್’ ನಲ್ಲಿ ಮಾತನಾಡಿದ ಪೈಗಳು “ಇಂಡೋ ಚೀನಾ ಗಡಿಯಲ್ಲಿ ಒಳ ನುಸುಳುವಿಕೆ ತಡೆಯಲು ನರೇಂದ್ರ ಮೋದಿಯವರು ಆದೇಶ ನೀಡಿದ್ದಾರೆ, ಸೇನೆ ಗಡಿ ಕಾಯುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ. ಆದರೆ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ ಪಾಕಿಸ್ತಾನ ಸೇನೆ ಗುಂಡೆಸೆದರೆ ನೀವು ಮರಳಿ ಗುಂಡೆಸೆಯ ಬೇಡಿ ನಾವು ಮದ್ದುಗುಂಡುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸೇನೆಗೆ ಹೇಳಲಾಗಿತ್ತು” ಎಂದರು. ಈ ಸುದ್ದಿ ವೈರಲ್ ಆಗುತ್ತಲೇ ಸೇನೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಅನೇಕ ಸೇನಾಧಿಕಾರಿಗಳು ಮುಂದೆ ಬಂದು, “ಇದು ಅಪ್ಪಟ ಸುಳ್ಳು, ನಮಗೆ ಅಂತಹ ಯಾವುದೇ ನಿರ್ಬಂಧ ಇರಲಿಲ್ಲ. ಬದಲಿಗೆ ಒಂದು ಗುಂಡಿಗೆ ಹತ್ತು ಗುಂಡೆಸೆಯುವ ಅನುಮತಿ ಇತ್ತು” ಎಂದು ಹೇಳಿದರು ಮಾತ್ರವಲ್ಲ, ಸುಳ್ಳು ಹೇಳುತ್ತ ಸೇನೆಯನ್ನು ದೇಶವನ್ನು ಅವಮಾನಿಸುತ್ತಿರುವ ಪೈ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಪೈಯವರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಬೆಂಬಲಿಗರಲ್ಲವೇ? ಅವರ ವಿರುದ್ಧ ಯಾವ ಕ್ರಮವೂ ಜರುಗಲಿಲ್ಲ, ಪೈಗಳು ಕ್ಷಮೆ ಕೇಳಲೂ ಇಲ್ಲ ಎನ್ನುವುದು ಬೇರೆ ವಿಚಾರ.
ಸತೀಶ ಆಚಾರ್ಯರ ಕಾರ್ಟೂನ್ ಗೆ ಪೈಗಳ ಪ್ರತಿಕ್ರಿಯೆ
ಇವೆಲ್ಲಕ್ಕಿಂತಲೂ ಮುಖ್ಯವಾದ ಮತ್ತು ಪೈ ಸಾಹೇಬರ ನೀಚ ಮನಸನ್ನು ಬಯಲಿಗಿಟ್ಟದ್ದು ಇತ್ತೀಚಿನ ಅವರ ಒಂದು ಟ್ವೀಟ್.
ಉತ್ತರ ಪ್ರದೇಶದಲ್ಲಿ ಕಾವಡಿಗಳ ಯಾತ್ರೆಯ ಸಂದರ್ಭ, ಯಾತ್ರೆ ಸಾಗುವ ಹಾದಿಯಲ್ಲಿ ಇರುವ ಅಂಗಡಿಗಳು ಹೊಟೇಲುಗಳು ತಮ್ಮ ಮಾಲೀಕರು, ಸಿಬ್ಬಂದಿಗಳ ಹೆಸರಿನ ಬೋರ್ಡ್ ಅಳವಡಿಸಬೇಕು ಎಂಬ ತೀರಾ ಆಕ್ಷೇಪಾರ್ಹ ಆದೇಶವನ್ನು ಉತ್ತರ ಪ್ರದೇಶದ ಯೋಗಿ ಸರಕಾರ ಹೊರಡಿಸಿತು. ಇದರ ಬೆನ್ನಿಗೇ ಉತ್ತರಾಖಂಡವೂ ಇಂಥದ್ದೇ ಆದೇಶ ಹೊರಡಿಸಿತು. ಅತ್ಯಂತ ಸಂವಿಧಾನ ಬಾಹಿರವಾದ ಮತ್ತು ಮುಸ್ಲಿಮರನ್ನು ಟಾರ್ಗೆಟ್ ಮಾಡುವುದನ್ನೇ ಉದ್ದೇಶ ಮಾಡಿಕೊಂಡ ಈ ಆದೇಶದ ವಿರುದ್ಧ ಪ್ರಜ್ಞಾವಂತರ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ವಿಷಯ ಸುಪ್ರೀಂ ಕೋರ್ಟ್ ತಲಪಿ ಕೋರ್ಟ್ ಈ ಆದೇಶಕ್ಕೆ ತಡೆಯನ್ನು ನೀಡಿತು. “ನೀವು ಬೇಕಿದ್ದರೆ ಶಾಖಾಹಾರಿ ಮತ್ತು ಮಾಂಸಾಹಾರಿ ಎಂಬ ಬೋರ್ಡ್ ಹಾಕಿ, ಆದರೆ ಅಲ್ಲಿ ಮಾಲೀಕರ ಮತಧರ್ಮದ ವಿಷಯ ಯಾಕೆ?” ಎಂದು ಅದು ಕೇಳಿತು. “ನಾನು ಕೇರಳದಲ್ಲಿದ್ದಾಗ ಅಲ್ಲಿ ಶಾಖಾಹಾರಿ ತಿಂಡಿ ತಿನಿಸುಗಳ ಒಂದು ಹಿಂದೂ ಹೊಟೆಲ್, ಮತ್ತೊಂದು ಮುಸ್ಲಿಂ ಹೊಟೇಲ್ ಇತ್ತು. ನಾನು ಮುಸ್ಲಿಂ ಹೊಟೇಲ್ ಗೆ ಹೋಗುತ್ತಿದ್ದೆ. ಯಾಕೆಂದರೆ ಅದರ ಮಾಲೀಕ ದುಬಾಯಿಯಲ್ಲಿದ್ದವನಾಗಿದ್ದು ತನ್ನ ಹೊಟೆಲ್ ನಲ್ಲಿ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ಅಂತಾರಾಷ್ಟ್ರೀಯ ಮಟ್ಟವನ್ನು ಆತ ಕಾಪಾಡಿಕೊಂಡಿದ್ದ” ಎಂದು ನ್ಯಾಯ ಮೂರ್ತಿ ಭಟ್ಟಿ ಹೇಳಿದರು.
ವ್ಯಾಪಾರದಲ್ಲಿ ಹಿಂದೂ ಮುಸ್ಲಿಂ ಏನಿದು? ಮಾರುವ ಹಣ್ಣುಗಳಲ್ಲಿ ಹಿಂದೂ ಮುಸ್ಲಿಂ ಎಂದು ಇದೆಯೇ? ಇದನ್ನೇ ವಸ್ತುವಾಗಿರಿಸಿಕೊಂಡು ದೇಶದ ಖ್ಯಾತ ಕಾರ್ಟೂನಿಸ್ಟ್ ಕನ್ನಡಿಗ ಸತೀಶ ಆಚಾರ್ಯ ಒಂದು ಅದ್ಭುತ ಕಾರ್ಟೂನ್ ರಚಿಸಿದರು. ಅದರಲ್ಲಿ ಹಿಂದೂ ಮುಸ್ಲಿಮರು ಸಿಖ್ಖರು ಸೇರಿ ಒಂದು ಮರವನ್ನು ಬೆಳೆಸುವುದು ಮತ್ತು ಹಿಂದೂ ಮುಸ್ಲಿಮರು ಸೇರಿ ಅದರ ಫಲವನ್ನು ಕೊಯ್ಯುವುದು, ಮಾರುವುದು, ಇದನ್ನು ನೋಡುತ್ತಾ ಮುಖ್ಯಮಂತ್ರಿ ಯೋಗಿ ‘ಇವರಿಗೆ ಧರ್ಮದ ಚೀಟಿ ಅಂಟಿಸುವುದು ಹೇಗೆ’ ಎಂದು ಪ್ರಶ್ನಿಸುವುದನ್ನು ಬಿಂಬಿಸಲಾಗಿತ್ತು.
ಸಮಾನತೆ, ಭ್ರಾತೃತ್ವ, ಸೆಕ್ಯುಲರಿಸಂನ ಸಾಂವಿಧಾನಿಕ ತತ್ತ್ವದಲ್ಲಿ ನಂಬಿಕೆ ಇರಿಸಿದ ಯಾರೇ ಆದರೂ ಸಂಭ್ರಮಿಸಬೇಕಾದ ವ್ಯಂಗ್ಯ ಚಿತ್ರವಿದು. ಆದರೆ ಪೈಗಳಿಗೆ ಇದು ಇಷ್ಟವಾಗಲಿಲ್ಲ. ಈ ಚಿತ್ರಕ್ಕೆ ಟ್ವಿಟರ್ ನಲ್ಲಿ ಪೈಯವರ ಟೀಕೆ ಹೀಗಿತ್ತು “A filthy hate filled cartoon by a crazy communal demented mind. Big shame” . ಅಸಲಿಗೆ ಇದು ಧರ್ಮ ನಿರಪೇಕ್ಷತೆಯನ್ನು ಸಾರುವ ಮತ್ತು ಇಂದಿನ ಪ್ರಕ್ಷುಬ್ಧ ಭಾರತಕ್ಕೆ ಅತ್ಯಂತ ಅಗತ್ಯದ ಶಾಂತಿಯ ಸಂದೇಶ ಸಾರುವ ಚಿತ್ರ. ಇದರಲ್ಲಿ ಪೈಗಳಿಗೆ ಕೊಳಕು, ದ್ವೇಷಪೂರಿತ, ಕೋಮು ಮನಸು ಕಂಡುದಾದರೂ ಹೇಗೆ?!
ಇವರೆಲ್ಲ ಯಾಕೆ ಹೀಗಾದರು?!
ಇವು ಕೆಲವೇ ಉದಾಹರಣೆಗಳು. ಪೈ ಸಾಹೇಬರ ಇಂತಹ ಬಾಲಿಶವಾದ, ಕೆಲವೊಮ್ಮೆ ಆಕ್ಷೇಪಾರ್ಹವಾದ ಅಸಂಖ್ಯ ಕಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದ ತುಂಬಾ ಕಾಣಬಹುದು. ಇಂತಹ ಮನಸುಗಳು ಪೈ ಒಬ್ಬರದೇ ಅಲ್ಲ, ಸಾಕಷ್ಟು ಓದಿಕೊಂಡವರಂತೆ ಕಾಣುವ, ಅದ್ಭುತವಾದ ಇಂಗ್ಲಿಷ್ ಮಾತನಾಡಬಲ್ಲ, ಪಶ್ಚಿಮದ ಶಿಕ್ಷಣ ಮತ್ತು ಬದುಕಿಗೆ ತೆರೆದುಕೊಂಡ, ಆದರೆ ಚಿಂತನೆಗಳಲ್ಲಿ ತೀರಾ ಪ್ರತಿಗಾಮಿಯಾದ, ದಿನ ಬೆಳಗಾದರೆ ಹಿಂದೂ ಮುಸ್ಲಿಂ ವಿಷಯ ಎತ್ತಿಕೊಂಡು ನಮ್ಮದೇ ದೇಶದ ಪ್ರಜೆಗಳ ವಿರುದ್ಧ ಮಾತನಾಡುವ ಅನೇಕರನ್ನು ಕಾಣಬಹುದು. ಮತ್ತೆ ಹೇಳಬೇಕೆಂದರೆ ಇವರೆಲ್ಲ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವರು ಮತ್ತು ಆಧುನಿಕ ಬದುಕನ್ನು ಬದುಕುವವರು! ಇವರಲ್ಲಿ ದೊಡ್ಡ ದೊಡ್ಡ ವೈದ್ಯರು, ವಿದ್ವಾಂಸರು, ಪ್ರೊಫೆಸರ್ ಗಳು, ಸಾಹಿತಿಗಳು, ಸಿನಿಮಾ ನಟರು, ಉದ್ಯಮಿಗಳು, ಪತ್ರಕರ್ತರು ಕೂಡಾ ಇದ್ದಾರೆ!
ಈಗ ನಮ್ಮಲ್ಲಿ ಮೂಡುವ ಬಹು ಮುಖ್ಯ ಪ್ರಶ್ನೆಯೆಂದರೆ, ಮೋಹನದಾಸ ಪೈಯಂಥ ಸೋಕಾಲ್ಡ್ ವಿದ್ಯಾವಂತರು ಹೀಗಾದುದು ಹೇಗೆ? ಪೈಯವರು ಕರ್ನಾಟಕದವರು. ಬಸವ, ಕುವೆಂಪು, ಶಿಶುನಾಳ ಷರೀಫರ ಕರ್ನಾಟಕ ಮತೀಯ ಸೌಹಾರ್ದಕ್ಕೆ ಇನ್ನೊಂದು ಹೆಸರು. ಕರ್ನಾಟಕವನ್ನು ಕಟ್ಟುವಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರೆಲ್ಲರ ಕೊಡುಗೆ ಇದೆ. ಇಂತಹ ಸೆಕ್ಯುಲರ್ ನಾಡಿನಲ್ಲಿ ಹುಟ್ಟಿದ, ಪಶ್ಚಿಮದ ಶಿಕ್ಷಣ ಮತ್ತು ಜೀವನ ಶೈಲಿಗೆ ಹೊಂದಿಕೊಂಡ, ದೊಡ್ಡ ಉದ್ಯಮಿ ಇಷ್ಟರ ಮಟ್ಟಿಗೆ ಮತೀಯವಾದಿಯಾದುದು ಹೇಗೆ? ಕಣ್ಣಿಗೆ ಬಿದ್ದ ವಿಷಯಗಳ ಬಗ್ಗೆಯೆಲ್ಲ ಬಿಜೆಪಿಯ ಅಂಧಭಕ್ತರಂತೆ ಪ್ರತಿಕ್ರಿಯಿಸುವುದು, ತನ್ನ ನಿಲುವನ್ನು ಒಪ್ಪದವರ ಮೇಲೆಲ್ಲ ಮಾತಿನ ಕಲ್ಲು ಎಸೆಯುವುದು, ವಾದಿಸುವಾಗ ಅತ್ಯಂತ ಕೆಳ ಮಟ್ಟದ ಭಾಷೆಯನ್ನು ಬಳಸುವುದು, ವೈಯಕ್ತಿಕ ನಿಂದನೆಯಲ್ಲಿ ತೊಡಗುವುದು ಯಾಕೆ?
ಯಾವುದೇ ಒಂದು ದೇಶದ ಅಭಿವೃದ್ಧಿ ಎನ್ನುವುದು ಒಂದು ನಿರಂತರ ಪ್ರಕ್ರಿಯೆ, ಪ್ರತಿಯೊಂದು ಸರಕಾರಗಳೂ ಅದಕ್ಕೆ ತನ್ನದೇ ಆದ ಕೊಡುಗೆ ನೀಡುತ್ತವೆ ಎನ್ನುವುದು ಇವರಿಗೆ ಗೊತ್ತಿಲ್ಲವೇ? ಕಾಂಗ್ರೆಸ್ ಸರಕಾರದ ಕಾಲದಲ್ಲಿ ಭಾರತದಲ್ಲಿ ಇಂದಿನಂತಹ ಆರ್ಥಿಕ ಸಂಪನ್ಮೂಲಗಳು ಇರಲಿಲ್ಲ, ಆದರೂ ಅವು ದೇಶ ಕಟ್ಟುವ ಕೆಲಸ ಮಾಡಿಲ್ಲವೇ? ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಟೆಲಿಕಾಂ ಕ್ರಾಂತಿ, ಐಐಟಿ, ಐಐಎಂ, ಇಸ್ರೋ ಇದೆಲ್ಲ ಆದುದು ಯಾರ ಕಾಲದಲ್ಲಿ?
ಈ ದೇಶ ಎಲ್ಲ ಮತಧರ್ಮದವರಿಗೂ ಸೇರಿದ್ದು, ಈ ದೇಶ ಕಟ್ಟುವಲ್ಲಿ ಎಲ್ಲರ ಕೊಡುಗೆಯೂ ಇದೆ, ದೇಶ ಪ್ರಗತಿ ಹೊಂದ ಬೇಕಾದರೆ, ಆರ್ಥಿಕ ಹೂಡಿಕೆಯಾಗಬೇಕಾದರೆ, ದೇಶದಲ್ಲಿ ಶಾಂತಿ, ಸಾಮರಸ್ಯ ಮುಖ್ಯ, ಯಾರೂ ಇಂತಹದೇ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟಿದ್ದಲ್ಲ, ಅದೊಂದು ಆಕಸ್ಮಿಕ, ಇಲ್ಲಿ ಯಾರೂ ಮೇಲೂ ಅಲ್ಲ, ಯಾರೂ ಕೀಳೂ ಅಲ್ಲ, ಎಲ್ಲರೂ ಭಾರತೀಯರೇ, ಅದಕ್ಕಿಂತಲೂ ಮುಖ್ಯವಾಗಿ ಮನುಷ್ಯರು ಎಂಬುದು ಪೈಯಂಥ ಹಿರಿಯರಿಗೆ ಯಾಕೆ ಅರ್ಥವಾಗುವುದಿಲ್ಲ?!
ಲೋಕೋ ಭಿನ್ನ ರುಚಿಃ, ಪ್ರಜಾತಂತ್ರದಲ್ಲಿ ಅಭಿಪ್ರಾಯ ಭೇದಕ್ಕೂ ಜಾಗ ಇದೆ, ಬೇರೊಬ್ಬರ ಅಭಿಪ್ರಾಯವನ್ನು ಗೌರವಿಸುವುದನ್ನು ಕಲಿಯಬೇಕು, ನಾವು ಅಂದುಕೊಂಡಿರುವುದಕ್ಕಿಂತಲೂ ಆಚೆಗೆ ಒಂದು ಸತ್ಯ ಇರಬಹುದು ಎಂಬುದು ಸಾಕಷ್ಟು ವಯಸಾದ ಮೇಲೂ ಪೈಯಂಥವರಿಗೆ ಯಾಕೆ ಅರ್ಥವಾಗುವುದಿಲ್ಲ?
ಕನ್ನಡದ ಪ್ರಶ್ನೆ
ಇನ್ನು ಕನ್ನಡದ ವಿಷಯಕ್ಕೆ ಬಂದರೆ, ಕನ್ನಡ ನಾಡಿನ ಮಕ್ಕಳಿಗೆ ಕನ್ನಡ ನಾಡಿನಲ್ಲಿ ಉದ್ಯೋಗಾವಕಾಶ ಸಿಗದಿದ್ದರೆ ಬೇರೆಲ್ಲಿ ಸಿಗಬೇಕು? ಕನ್ನಡ ನಾಡಿನ ಉದ್ಯಮಗಳಲ್ಲಿ ಅವರಿಗೆ ಮೀಸಲಾತಿ ಒದಗಿಸಿದರೆ ಅದರಲ್ಲಿ ತಪ್ಪೇನು? ಕನ್ನಡ ನಾಡಿನವರೇ ಆಗಿ ಕನ್ನಡ ಭಾಷೆಯ ಮತ್ತು ಕನ್ನಡದ ಮಕ್ಕಳ ಭವಿಷ್ಯವನ್ನು ಹೊಸಕಿ ಹಾಕುವ ಕೆಲಸ ಯಾಕೆ?
‘ವಿದ್ಯಾ ದದಾತಿ ವಿನಯಂ’ ಎಂಬ ಸಂಸ್ಕೃತ ಮಾತಿದೆ. ಅಂದರೆ ವಿದ್ಯೆಯು ನಮ್ಮಲ್ಲಿ ವಿನಯವನ್ನು ಮೈಗೂಡಿಸಬೇಕು. ಶಿಕ್ಷಣ ನಮ್ಮ ಮನಸನ್ನು ವಿಸ್ತಾರಗೊಳಿಸಬೇಕು, ಮಾನವೀಯಗೊಳಿಸಬೇಕು. ನಮ್ಮ ಮಾತು ನಡೆವಳಿಕೆಗಳನ್ನು ಸಭ್ಯಗೊಳಿಸಬೇಕು. ಪರರ ಭಾವನೆಗಳನ್ನು ಗೌರವಿಸುವುದನ್ನು ಕಲಿಸಬೇಕು. ನಮ್ಮ ವರ್ತನೆಗಳನ್ನು ಪ್ರಜಾತಾಂತ್ರಿಕಗೊಳಿಸಬೇಕು. ನಮ್ಮಲ್ಲಿ ಸೆಕ್ಯುಲರ್ ಮನೋಭಾವವನ್ನು ಮೂಡಿಸಬೇಕು.
ಆದರೆ ಆಧುನಿಕ ಶಿಕ್ಷಣವನ್ನು ಪಡೆದ ಮೋಹನದಾಸ ಪೈ, ಮಧು ಕೀಶ್ವರ್ ಮೊದಲಾದವರಲ್ಲಿ ಯಾಕೆ ಈ ಮಾನವೀಯ ಗುಣಗಳು ಕಾಣದಂತಾದವು? ಅಂದರೆ ತಪ್ಪು ಯಾರದು? ಮತೀಯ ದ್ವೇಷಕ್ಕೆ ಪ್ರೋತ್ಸಾಹ ನೀಡುವ ಸರಕಾರ ಮತ್ತು ಇಕೋ ಸಿಸ್ಟಮ್ ನದೇ? ನಮಗೆ ಉತ್ತಮ ಸಂಸ್ಕಾರ ನೀಡಬೇಕಾಗಿದ್ದ ಸಮಾಜದ್ದೇ? ಅಥವಾ ನಮಗೆ ಸಿಗುತ್ತಿರುವ ಶಿಕ್ಷಣದ್ದೇ? ಈ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ– ಅಂಗಡಿಯಾತನ ಹೆಸರು ಮತ್ತು ಸಬ್ ಕಾ ಸಾಥ್