ಪಾಟ್ನಾ ಆ. 18: ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸುವ ಪ್ರಸ್ತಾವವೊಂದು ಬಿಹಾರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಹಾರ ರಾಜ್ಯ ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿಯ ಮೊದಲ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿತ ದೇವಸ್ಥಾನ ನಿರ್ಮಿಸುವ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿದೆ.
ಬಿಹಾರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿಯ ಮೊದಲ ಸಭೆ ಜುಲೈ 29ರಂದು ಪಾಟ್ನಾದ ಹಳೆಯ ಕಾರ್ಯಾಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಂಡಳಿಯ ಸದಸ್ಯ ರಂಜನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸುವ ಪ್ರಸ್ತಾವ ಮಂಡಿಸಿದರು. ಬಿಹಾರದ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ತಮ್ಮದೇ ಆದ ದೇವಸ್ಥಾನವಿಲ್ಲ. ಸಮುದಾಯಕ್ಕೆ ಗೌರವ ಮತ್ತು ಹಕ್ಕುಗಳನ್ನು ನೀಡುವಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರದ ಪಾತ್ರವಿದೆ ಎಂಬ ಕಾರಣಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಪ್ರಸ್ತಾವ ಮಂಡಿಸಿರುವುದಾಗಿ ಸಿಂಗ್ ಹೇಳಿದ್ದಾರೆ. ಪ್ರಸ್ತಾವಕ್ಕೆ ಮಂಡಳಿಯ ಎಲ್ಲ ಸದಸ್ಯರು ಬೆಂಬಲ ನೀಡಿದ್ದು, ಅದನ್ನು ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನವನ್ನು ಪಾಟ್ನಾದಲ್ಲಿ ನಿರ್ಮಿಸುವ ಉದ್ದೇಶವಿದೆ. ಆದರೆ ದೇವಸ್ಥಾನಕ್ಕೆ ಅಗತ್ಯವಾದ ಜಮೀನು ಇನ್ನೂ ಅಂತಿಮವಾಗಿ ಗುರುತಿಸಲಾಗಿಲ್ಲ. ಸರ್ಕಾರ ಜಮೀನು ಗುರುತಿಸಿದ ಬಳಿಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಂಜನ್ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ. ದೇವಸ್ಥಾನದ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂಬ ಹೇಳಿಕೆಯೂ ವರದಿಯಾಗಿದೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ₹112 ಕೋಟಿ ವೆಚ್ಚ ಮತ್ತು ಐದು ಎಕರೆ ಜಮೀನಿನ ವಿವರಗಳು ವ್ಯಾಪಕವಾಗಿ ಹರಿದಾಡುತ್ತಿವೆ. ದೇವಸ್ಥಾನಕ್ಕೆ ಐದು ಎಕರೆ ಜಮೀನು ಮತ್ತು ₹112 ಕೋಟಿ ಅಗತ್ಯವಿದೆ ಎಂಬ ಅಂದಾಜು ಮಂಡಳಿಯ ಸದಸ್ಯರ ಹೇಳಿಕೆ ಹಿನ್ನೆಲೆಯಲ್ಲಿ ಮೋದಿ ದೇವಸ್ಥಾನ ದೊಡ್ಡ ಪ್ರಮಾಣದಲ್ಲಿ ಸಿದ್ದವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬಿಹಾರ ಸರ್ಕಾರ ಕಳೆದ ವರ್ಷ ಆಗಸ್ಟ್ನಲ್ಲಿ ರಾಜ್ಯ ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿಯನ್ನು ರಚಿಸಿತ್ತು. ಟ್ರಾನ್ಸ್ಜೆಂಡರ್ ಸಮುದಾಯದ ಹಕ್ಕುಗಳ ರಕ್ಷಣೆ, ಸಾಮಾಜಿಕ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಕ್ರಮ ಕೈಗೊಳ್ಳುವುದು ಮಂಡಳಿಯ ಪ್ರಮುಖ ಉದ್ದೇಶವಾಗಿದೆ. ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಕಾಯ್ದೆ, 2019 ಜಾರಿಯಾದ ಬಳಿಕ ಮಂಡಳಿಯ ಮೊದಲ ಸಭೆ ಇದಾಗಿದೆ ಎಂದು ರಂಜನ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸುವ ಪ್ರಸ್ತಾವ ಇದೇ ಮೊದಲಲ್ಲ. ಗುಜರಾತ್ನ ರಾಜ್ಕೋಟ್ನಲ್ಲಿ ಮೋದಿ ಅವರಿಗೆ ಸಮರ್ಪಿತ ದೇವಸ್ಥಾನ ಈಗಾಗಲೇ ಇರುವುದಾಗಿ ವರದಿಯಾಗಿದೆ. 2017ರಲ್ಲಿ ಉತ್ತರ ಪ್ರದೇಶದ ಮೀರತ್ನಲ್ಲಿಯೂ ಮೋದಿ ದೇವಸ್ಥಾನ ನಿರ್ಮಿಸುವ ಪ್ರಸ್ತಾವ ಸುದ್ದಿಯಾಗಿತ್ತು.
ಆದರೆ ಬಿಹಾರದ ಪ್ರಕರಣದಲ್ಲಿ ಗಮನ ಸೆಳೆಯುತ್ತಿರುವುದು ದೇವಸ್ಥಾನ ನಿರ್ಮಾಣದ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿ ಅಂಗೀಕರಿಸಿರುವುದು. ಸಾಮಾಜಿಕ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆಗಾಗಿ ರಚಿಸಲಾದ ಮಂಡಳಿಯು ದೇವಸ್ಥಾನ ನಿರ್ಮಾಣದ ಪ್ರಸ್ತಾವಕ್ಕೆ ಆದ್ಯತೆ ನೀಡಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯೂ ಆರಂಭವಾಗಿದೆ.

