ಬೆಂಗಳೂರು: ಸೌಜನ್ಯ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ರಚಿಸಿರುವ ವಿಶೇಷ ತನಿಖಾ ತಂಡವನ್ನು ಪುನರ್ ರಚಿಸುವುದು ಅಗತ್ಯವಿದೆ ಎಂದು ಕೊಂದವರು ಯಾರು? ಆಂದೋಲನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.
ಎಸ್‌ಐಟಿ ತನಿಖೆಗೆ ಮುಖ್ಯಸ್ಥರಾಗಿರುವ ಶಶಿಕುಮಾರ್ ಹಾಗೂ ತಂಡದಲ್ಲಿರುವ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರ ಮೇಲೆ ಭ್ರಷ್ಟಾಚಾರ ಮತ್ತು ಪ್ರಭಾವಿಗಳ ಒತ್ತಡಕ್ಕೆ ಮಣಿಯುವ ಆರೋಪಗಳಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಡಿಜಿ (DG) ಅಥವಾ ಎಡಿಜಿಪಿ (ADGP) ಶ್ರೇಣಿಯ ದಕ್ಷ ಅಧಿಕಾರಿಗೆ ತಂಡದ ನೇತೃತ್ವ ನೀಡಬೇಕು ಎಂದು ಆಂದೋಲನಕಾರರು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ತನಿಖಾ ತಂಡದಲ್ಲಿ ಫೊರೆನ್ಸಿಕ್ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ಒಳಗೊಳ್ಳಬೇಕು.
ಹಾಗೆಯೇ, ಮರು ರಚಿಸಲಾಗುವ ಎಸ್ಐಟಿಗೆ ಅಧಿಕಾರಿಗಳ ಆಯ್ಕೆಯಲ್ಲಿ ಸುಪ್ರೀಂ ಸೂಚಿಸಿರುವ ಮೂರು ಅಂಶಗಳನ್ನು ಪಾಲಿಸಬೇಕು ಎಂದು ಆಂದೋಲನ ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಆಶಯಕ್ಕೆ ಅನುಗುಣವಾಗಿ ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಮರುತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಎಸ್‌ಐಟಿ ಸೇರ್ಪಡೆಗೊಂಡಿರುವ ಎಸ್ಪಿ ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ವಿವಿಧ ಪ್ರಕರಣಗಳು ಹಾಗೂ ಗಂಭೀರ ಆರೋಪಗಳ ಕುರಿತು ಇಲಾಖಾ ತನಿಖೆಗಳು ನಡೆದಿದ್ದವು ಎಂದು ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಯನ್ನು ಸೌಜನ್ಯ ಪ್ರಕರಣದ ಮರುತನಿಖಾ ತಂಡದಲ್ಲಿ ಸೇರಿಸಿರುವುದು ಸುಪ್ರೀಂ ಕೋರ್ಟ್‌ನ ಆದೇಶದ ಮೂಲ ಆಶಯಕ್ಕೆ ವಿರುದ್ಧವಾಗಬಹುದು ಎಂದು ಆಂದೋಲನ ಆತಂಕ ವ್ಯಕ್ತಪಡಿಸಿದೆ.
ಈ ವಿಶೇಷ ತನಿಖಾ ತಂಡದ (SIT) ನೇತೃತ್ವವನ್ನು ಪೊಲೀಸ್ ಮಹಾನಿರೀಕ್ಷಕ (IGP) ಎನ್. ಶಶಿ ಕುಮಾರ್ ವಹಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಸಿಐಡಿ (CID) ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲ್ಸರ್, ಹಾಗೂ ಬೆಂಗಳೂರು ಗ್ರಾಮಾಂತರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಅವರು ಈ ತಂಡದ ಇತರ ಸದಸ್ಯರಾಗಿದ್ದಾರೆ.
ಈ ತಂಡದ ತನಿಖಾಧಿಕಾರಿಗಳಿಗೆ, ಸದರಿ ಕಾನೂನಿನ ಸೆಕ್ಷನ್ 193ರ ಅಡಿಯಲ್ಲಿ ಸಮರ್ಥ ನ್ಯಾಯಾಲಯಕ್ಕೆ ಪೊಲೀಸ್ ವರದಿಯನ್ನು ಸಲ್ಲಿಸಲು ಅಧಿಕಾರ ನೀಡಲಾಗಿದೆ ಎಂದು ಗೃಹ ಇಲಾಖೆಯ ತಿಳಿಸಿದೆ. ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಅಸೂಕ್ಷ್ಮತೆ ಹಾಗೂ ಕೋಮುವಾದಿ ಶಕ್ತಿಗಳೊಂದಿಗೆ ನೇರ ಸಂಪರ್ಕದ ಆರೋಪಗಳನ್ನು ಹೊಂದಿರುವ ಅಧಿಕಾರಿಗಳನ್ನು ತಂಡದಿಂದ ದೂರವಿಡಬೇಕು.
ಸೌಜನ್ಯ ಪ್ರಕರಣದ ಮರುತನಿಖೆಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖಾ ತಂಡ ಅಗತ್ಯವಾಗಿದ್ದು, ಯಾವುದೇ ಸ್ಥಳೀಯ ಪ್ರಭಾವ ಅಥವಾ ಹಿಂದಿನ ತನಿಖೆಯ ಲೋಪಗಳಿಗೆ ಒಳಗಾಗದ ಅಧಿಕಾರಿಗಳನ್ನು ನೇಮಿಸಬೇಕು ಎಂದು ‘ಕೊಂದವರು ಯಾರು?’ ಆಂದೋಲನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದೆ.

