ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಣೆ ‘ಜಿಎಸ್‌ಟಿ 1.5’ ಆಗಿದ್ದು, ನಿಜವಾದ ‘ಜಿಎಸ್‌ಟಿ 2.0’ಗಾಗಿ ಹೋರಾಟ ಮುಂದುವರೆಸುವುದಾಗಿ ಕಾಂಗ್ರೆಸ್ ಹೇಳಿದೆ.
ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರು, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪಕ್ಷದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಳೆದ ಒಂದು ದಶಕದಿಂದ ಜಿಎಸ್‌ಟಿ ಸರಳೀಕರಣಗೊಳಿಸಲು ಕಾಂಗ್ರೆಸ್ ಹೋರಾಟ ನಡೆಸುತ್ತಲೇ ಬಂದಿದೆ. ಸಂಸತ್ ಧಿವೇಶನದಲ್ಲೂ ಆಗ್ರಹಪಡಿಸುತ್ತಾ ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತ್ರ ‘ಒಂದು ರಾಷ್ಟ್ರ, ಒಂದು ತೆರಿಗೆ’ ವ್ಯವಸ್ಥೆಯನ್ನು ‘ಒಂದು ರಾಷ್ಟ್ರ, ಒಂಬತ್ತು ತೆರಿಗೆ’ಗಳಾಗಿ ಬದಲಿಸಿತ್ತು. ಅದರಲ್ಲಿ ಶೇ 0, ಶೇ 5, ಶೇ 12, ಶೇ 18, ಶೇ 28, ಶೇ 0.25, ಶೇ 1.5, ಶೇ 3 ಮತ್ತು ಶೇ 6 ತೆರಿಗೆ ವ್ಯವಸ್ಥೆ ಇತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ 2019 ಹಾಗೂ 2024ರ ತನ್ನ ಪ್ರಣಾಳಿಕೆಗಳಲ್ಲಿ ಜಿಎಸ್‌ಟಿ 2.0 ವ್ಯವಸ್ಥೆಯ ಸರಳೀಕರಣಗೊಳಿಸಲು ಒತ್ತಾಯಿಸಿತ್ತು ಎಂದು ನೆನಪಿಸಿರುವ ಅವರು, ಈ ಒಂಭತ್ತು ಹಂತದ ತೆರಿಗೆ ಎಂಎಸ್‌ಎಂಇ ಹಾಗೂ ಸಣ್ಣ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ತಿಳಿಸಿದ್ದಾರೆ.
2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಲೋಕಸಭೆಯಲ್ಲಿ ಜಿಎಸ್‌ಟಿಯನ್ನು ಅಧಿಕೃತವಾಗಿ ಪ್ರಕಟಿಸಿತ್ತು. 2011ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಜಿಎಸ್‌ಟಿ ಮಸೂದೆ ಮಂಡಿಸಿದಾಗ ಬಿಜೆಪಿ ಅದನ್ನು ವಿರೋಧಿಸಿತ್ತು ಎಂದಿದ್ದಾರೆ.
ಇಂದು ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ ಮಾಡಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ರೈತರಿಗೆ ತೆರಿಗೆ ವಿಧಿಸಿದೆ. ಕೃಷಿ ಕ್ಷೇತ್ರದಲ್ಲಿ ಕನಿಷ್ಠ 36 ವಸ್ತುಗಳ ಮೇಲೆ ಜಿಎಸ್‌ಟಿ ಹೇರಲಾಗಿದೆ. ದಿನನಿತ್ಯದ ವಸ್ತುಗಳ ಮೇಲೂ ಜಿಎಸ್‌ಟಿ ಹೇರಲಾಗಿತ್ತು. ಅಂತಹ ವ್ಯವಸ್ಥೆಯನ್ನು ಬಿಜೆಪಿಯ ಜಿಎಸ್‌ಟಿ ಪದ್ದತಿಯನ್ನು ‘ಗಬ್ಬರ್ ಸಿಂಗ್ ತೆರಿಗೆ’ ಎಂದು ಕರೆಯುವ ಮೂಲಕ ಕಾಂಗ್ರೆಸ್ ವಿರೋಧಿಸಿತ್ತು ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹವು ಶೇ. 240 ಹಾಗೂ ಜಿಎಸ್‌ಟಿ ಸಂಗ್ರಹವು ಶೇ. 177ರಷ್ಟು ಹೆಚ್ಚಾಗಿದೆ. ಸತತ 8 ವರ್ಷಗಳ ನಂತರ ಮೋದಿ ಸರ್ಕಾರ ಗಾಢ ನಿದ್ದೆಯಿಂದ ಎಚ್ಚೆತ್ತು ಜಿಎಸ್‌ಟಿ ಬಗ್ಗೆ ಮಾತನಾಡಿರುವುದು ಉತ್ತಮ ಬೆಳವಣಿಗೆ. ಜಿಎಸ್‌ಟಿಯ ಗೊಂದಲ ಬಗೆಹರಿದು ಸರಳತೆ ಹೊಂದಿರಬೇಕು.ಸಂಕೀರ್ಣತೆ ಬಗೆಹರಿಯಬೇಕು. ಆಗ ಮಾತ್ರ ಎಂಎಸ್‌ಎಂಇ ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರಯೋಜನವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.