ಮೋದಿ ಸರ್ಕಾರ ಬ್ಯಾಂಕ್‌ಗಳನ್ನು ‘ಕಲೆಕ್ಷನ್ ಏಜೆಂಟ್’ಗಳಾಗಿ ಮಾಡಿಕೊಂಡಿದೆ: ಖರ್ಗೆ ಆರೋಪ

Most read

ನವದೆಹಲಿ: ಎಟಿಎಂ ವಹಿವಾಟು ಶುಲ್ಕ ಹೆಚ್ಚಳಕ್ಕೆ ಆರ್‌ಬಿಐ (RBI) ಅನುಮತಿ ನೀಡಿರುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ದುರದೃಷ್ಟವಶಾತ್, ಬ್ಯಾಂಕುಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ ‘ಕಲೆಕ್ಷನ್ ಏಜೆಂಟ್’ಗಳನ್ನಾಗಿ ಮಾಡಿಕೊಂಡಿದೆ. 2018 ಮತ್ತು 2024ರ ನಡುವೆ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಉಳಿತಾಯ ಖಾತೆಗಳು ಮತ್ತು ಜನ ಧನ ಖಾತೆಗಳಿಂದ ಕನಿಷ್ಠ ರೂ.43,500 ಕೋಟಿ ಸಂಗ್ರಹಿಸಿವೆ ಎಂದು ಹೇಳಿದ್ದಾರೆ.

ಪ್ರತಿ ವರ್ಷ ರೂ.100 ರಿಂದ ರೂ. 200 ನಿಷ್ಕ್ರಿಯತೆಯ ಶುಲ್ಕ, ಬ್ಯಾಂಕ್ ಸ್ಟೇಟ್ಮೆಂಟ್ ವಿತರಣೆಗೆ ರೂ. 50– ರೂ. 100, ಎಸ್ ಎಂ ಎಸ್ ಎಚ್ಚರಿಕೆಗಳಿಗೆ ಪ್ರತಿ ತ್ರೈಮಾಸಿಕಕ್ಕೆ ರೂ. 20– ರೂ. 25 ಶುಲ್ಕ, ಎನ್ಇಎಫ್ಟಿ (NEFT), ಡಿಮ್ಯಾಂಡ್ ಡ್ರಾಫ್ಟ್ ಶುಲ್ಕಗಳ ಹೆಚ್ಚುವರಿ ಹೊರೆ. ಸಹಿ ಬದಲಾವಣೆಗಳಂತಹ ಕೆವೈಸಿ ನವೀಕರಣಗಳಿಗೂ ಶುಲ್ಕ ಹೀಗೆ ದೇಶದ ಜನರನ್ನು ಬ್ಯಾಂಕ್ ಶುಲ್ಕಗಳಿಂದ ಲೂಟಿ ಮಾಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಕೇಂದ್ರ ಸರ್ಕಾರವು ಬ್ಯಾಂಕ್ ಶುಲ್ಕಗಳಿಂದ ಸಂಗ್ರಹಿಸಲಾದ ಮೊತ್ತದ ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ಒದಗಿಸುತ್ತಿತ್ತು. ಆದರೆ, ಈಗ ಆರ್ ಬಿ ಐ ಅಂತಹ ದತ್ತಾಂಶವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ಈ ಪದ್ಧತಿಯನ್ನು ಸಹ ನಿಲ್ಲಿಸಲಾಗಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕ್ಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಶುಕ್ರವಾರ ಅನುಮತಿ ನೀಡಿದೆ.

More articles

Latest article