ಇಂದು ಸಂಜೆ ಮಾಕ್‌ ಡ್ರಿಲ್;‌ ಬೆಂಗಳೂರಿನಲ್ಲಿ ಎಲ್ಲೆಲ್ಲಿ ನಡೆಯಲಿದೆ? ಹೇಗಿರಲಿದೆ ಕಾರ್ಯಾಚರಣೆ?

Most read

ಬೆಂಗಳೂರು: ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಗಡಿಯಲ್ಲಿ ಯುದ್ಧದ ಛಾಯೆ ಆವರಿಸಿದೆ. ಈ ಮಧ್ಯೆ ಆಪರೇಷನ್‌ ಸಿಂಧೂರ ಮೂಲಕ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ನೆಲೆಗಳ ಮೇಲೆ ದಾಳಿ ನಡೆಸಿರುವ ಭಾರತ ಪಾಕಿಸ್ತಾನಕ್ಕೆ ತಕ್ಕ ಎದಿರೇಟು ನೀಡಿದೆ.
ಈ ಬೆಳವಣಿಗೆಗಳ ನಡುವೆಯೇ ಇಂದು ಸಂಜೆ ದೇಶಾದ್ಯಂತ ಮಾಕ್ ಡ್ರಿಲ್ ನಡೆಯಲಿದೆ. ಕರ್ನಾಟದ ಮೂರು ಜಿಲ್ಲೆಗಳಾದ ಬೆಂಗಳೂರು ಉತ್ತರ ಕನ್ನಡ ಮತ್ತು ರಾಯಚೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಸಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

1971ರ ಭಾರತ-ಪಾಕ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಮಾಕ್ ಡ್ರಿಲ್ ನಡೆಯುತ್ತಿದೆ. ಹಲಸೂರು ಲೇಕ್ನಿಂದ ಮಾಕ್ ಡ್ರಿಲ್ ಆರಂಭವಾಗಲಿದೆ. ನಂತರ ಅಗ್ನಿಶಾಮಕ ಪ್ರಧಾನ ಕಚೇರಿಯಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದ್ದು, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಅಣಕು ಕಾರ್ಯಾಚರಣೆ ನಡೆಯಲಿದೆ. ಈ ಮಾಕ್ ಡ್ರಿಲ್ನಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಅಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ತಂಡ, ಎನ್ಸಿಸಿ ತಂಡಗಳು ಮಾಕ್ ಡ್ರಿಲ್ ನಲ್ಲಿ ಭಾಗಿಯಾಗಲಿವೆ. ಈ ನಿಟ್ಟಿನಲ್ಲಿ ಹಲಸೂರಿನ ಅಗ್ನಿಶಾಮಕ ದಳ ಕಚೇರಿಯಲ್ಲಿ ಸಿವಿಲ್ ಡಿಫೆನ್ಸ್ ತಂಡ ಬೀಡುಬಿಟ್ಟಿದೆ.
ಮಾಕ್ ಡ್ರಿಲ್ ಹಿನ್ನೆಲೆ ಬೆಂಗಳೂರಿನಲ್ಲಿ ರಾತ್ರಿ 7 ಗಂಟೆಗೆ ಸರಿಯಾಗಿ ಸಂಪೂರ್ಣ ವಿದ್ಯುತ್ ಸ್ಥಗಿತಗೊಳ್ಳಲಿದೆ. ವಾಯುದಾಳಿಯ ಸಮಯದಲ್ಲಿ ಲೈಟ್ ಆಫ್ ಮಾಡಲಾಗುತ್ತದೆ. ಈ ವೇಳೆ ಸಾರ್ವಜನಿಕರು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಯುದ್ಧದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಈ ಅಭ್ಯಾಸ ನೆರವಾಗುತ್ತದೆ.

ಬೆಂಗಳೂರು ನಗರದ 32 ಪ್ರದೇಶಗಳಲ್ಲಿ ನಡೆಯಲಿದೆ ಮಾಕ್ ಡ್ರಿಲ್:
ಬೆಂಗಳೂರಿನ 35 ಕಡೆ ಸೈರನ್ ಇದ್ದು, 32 ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯ ನಿರ್ವಹಿಸುವ ಪ್ರದೇಶಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ಎನ್ ಎ ಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, ಎಸ್‌ ಆರ್‌ ಎಸ್‌ ಪೀಣ್ಯ, ವಿವಿ ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆ, ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಠಾಣೆ, ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ITPL ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.

ಮಾಕ್ ಡ್ರಿಲ್ ನಲ್ಲಿ ಸೈರನ್ ಹಾಕಲಾಗುತ್ತದೆ. ಮೂರು ಹಂತದಲ್ಲಿ ಸೈರನ್ ಆನ್ ಮಾಡಲಾಗುತ್ತದೆ. ಸೈರನ್ ಸಹ ಮೂರು ರೀತಿಯ ಶಬ್ದ ಮಾಡುತ್ತದೆ. ಈ ಸೈರನ್ ಶಬ್ಧ ಸುಮಾರು 3ಕಿ.ಮೀ. ವ್ಯಾಪ್ತಿಯವವರೆಗೂ ಕೇಳಿಸುತ್ತದೆ.

More articles

Latest article