ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಜೈಲರ್ ರಮೇಶ್ ಧರ್ಮಟ್ಟಿ ಹಾಗೂ ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಿ ಜೈಲು ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದಾಗ ಮೊಬೈಲ್ ಫೋನ್ ಬಳಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಕಾರಾಗೃಹ ಇಲಾಖೆ ಆಂತರಿಕ ತನಿಖೆ ಆರಂಭಿಸಿತ್ತು. ಜೈಲಿನೊಳಗೆ ನಿಷೇಧಿತ ಮೊಬೈಲ್ ಫೋನ್ ಹೇಗೆ ತಲುಪಿತು ಮತ್ತು ಅದನ್ನು ಬಳಸಲು ಅವಕಾಶ ಸಿಕ್ಕಿದ್ದು ಹೇಗೆ ಎಂಬ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಜೈಲು ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಜೈಲರ್ ಮತ್ತು ವಾರ್ಡರ್ ಅಮಾನತುಗೊಂಡಿರುವುದರಿಂದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದಲ್ಲಿ ಒಟ್ಟು ಮೂವರು ಜೈಲು ಸಿಬ್ಬಂದಿ ವಿರುದ್ಧ ಅಮಾನತು ಕ್ರಮ ಕೈಗೊಂಡಂತಾಗಿದೆ.
ಜೈಲಿನ ಭದ್ರತಾ ವ್ಯವಸ್ಥೆ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಜೈಲಿನೊಳಗೆ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಪ್ರವೇಶವನ್ನು ತಡೆಯುವಲ್ಲಿ ಸಿಬ್ಬಂದಿಯ ಪಾತ್ರದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

