ಶಾಲಾ ಮಕ್ಕಳಿಗೆ ಮಧ್ಯಾಹ್ನದ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವ ಯೋಜನೆಯಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರ ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಪೌಂಡೇಷನ್ ಆರಂಭಿಸಿರುವ 75ನೇ ಅಡಿಗೆ ಮನೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, “ತಮಿಳುನಾಡಿನಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಕಾಮರಾಜರ್ ಅವರು ದೇಶದಲ್ಲೇ ಮೊದಲು ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆ ಜಾರಿಗೊಳಿಸಿದ್ದರು. ಆದರೆ, ಇಡೀ ದೇಶಕ್ಕೆ ಬೆಳಕನ್ನು ಹರಿಸಿ ಎಲ್ಲ ರಾಜ್ಯಗಳ ಕಣ್ಣು ತೆರೆಯುವಂತೆ ಮಾಡಿ ಸುಪ್ರೀಂ ಕೋರ್ಟ್ನಿಂದಲೂ ಮೆಚ್ಚುಗೆ ಗಳಿಸಿದ್ದು ಮಾತ್ರ ಕರ್ನಾಟಕದ ಬಿಸಿಯೂಟ ಯೋಜನೆ” ಎಂದು ಇತಿಹಾಸವನ್ನು ನೆನೆದರು.
“ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಪ್ರತಿ ಹಳ್ಳಿ ಹಳ್ಳಿಯ ಶಾಲಾ ಮಕ್ಕಳಿಗೂ ಪೌಷ್ಠಿಕಾಂಶಯುಕ್ತ ಆಹಾರವನ್ನು ಪೂರೈಕೆ ಮಾಡಲಾಗಿತ್ತು. ಪರಿಣಾಮ ಈ ಯೋಜನೆಯನ್ನೇ ಉದಾಹರಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, “ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಆರಂಭವಾದ ಈ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ, ಈ ಮಾದರಿ ಯೋಜನೆಯನ್ನು ಏಕೆ ದೇಶದಾದ್ಯಂತ ಜಾರಿಗೆ ತರಬಾರದು?” ಎಂದು ಪ್ರಶ್ನಿಸಿದ ನಂತರ ಇಂದು ಇಡೀ ದೇಶದಾದ್ಯಂತ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲಾಯಿತು” ಎಂದರು.
ಮುಂದುವರೆದು, “ಪ್ರಸ್ತುತ ದೇಶದಲ್ಲಿ 127 ಮಿಲಿಯನ್ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪಾಲಿಗೆ ಬಿಸಿಯೂಟ ಯೋಜನೆ ವರದಾನವಾಗಿದೆ. ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಕಾಂಗ್ರೆಸ್ ಸರ್ಕಾರ ಮತ್ತು ನಮ್ಮ ಹಿರಿಯ ನಾಯಕರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ” ಎಂದು ಮೆಚ್ಚುಗೆ ಸೂಚಿಸಿದರು.
ಅಕ್ಷಯ ಪಾತ್ರ ಪೌಂಡೇಷನ್ ನಡೆಸುತ್ತಿರುವ ಉತ್ತಮ ಕೆಲಸಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ಅವರು, “ರಾಜ್ಯದಲ್ಲಿ ಅಕ್ಷಯ ಪಾತ್ರ ಪೌಂಡೇಶನ್ ಸಹ ಸರ್ಕಾರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದೆ. ಕರ್ನಾಟಕದಿಂದ ಆರಂಭವಾದ ಇವರ ಕೆಲಸ ಇಂದು ದೇಶದ 16 ರಾಜ್ಯ 02 ಕೇಂದ್ರಾಡಳಿತ ಪ್ರದೇಶಕ್ಕೂ ವ್ಯಾಪಿಸಿದೆ. ದೇಶದ ಒಟ್ಟು 2.20 ಕೋಟಿ ಮಕ್ಕಳಿಗೆ ಅಕ್ಷಯ ಪಾತ್ರ ಪೌಂಡೇಶನ್ ಬಿಸಿಯೂಟ ನೀಡುತ್ತಿರುವುದು ಸಣ್ಣ ಮಾತಲ್ಲ.
ಈ ಪೌಂಡೇಶನ್ ಇದೀಗ ಬ್ಯಾಟರಾಯನಪುರ ಕ್ಷೇತ್ರದಲ್ಲಿ ತಮ್ಮ 75ನೇ ಅಡುಗೆ ಮನೆಯನ್ನು ತೆರೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅರ್ಹ ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶದ ಊಟವನ್ನು ಒದಗಿಸಲು ಅವರ 75 ನೇ ಅಡುಗೆಮನೆ ಇಂದು ತೆರೆದಿದೆ. ವಿಶೇಷವಾಗಿ ಪ್ರವಾಹ ಪರಿಹಾರ ಮತ್ತು ಕೋವಿಡ್ನಂತಹ ಕಠಿಣ ಸಮಯದಲ್ಲಿ ಅವರೊಂದಿಗೆ ಸಹಕರಿಸಲು ನಾವು ಸಂತೋಷಪಡುತ್ತೇವೆ. ಚಿಕ್ಕಜಾಲದಲ್ಲಿರುವ ಈ ಅಡುಗೆಮನೆಯು 200+ ಸರ್ಕಾರಿ ಶಾಲೆಗಳಲ್ಲಿ 35,000 ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡಲು ವಿನ್ಯಾಸಗೊಳಿಸಿದ ಬೆಂಗಳೂರಿನ 5 ನೇ ಅಡುಗೆಮನೆಯಾಗಿದ್ದು, ಅಗತ್ಯವಿದ್ದಾಗ 70,000 ಮಕ್ಕಳಿಗೆ ಊಟ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.