Saturday, July 27, 2024

ಬೆಳಗಾವಿಗೂ ಕಾಲಿಟ್ಟ ಕನ್ನಡ ನಾಮಫಲಕ ಹೋರಾಟ : ಕನ್ನಡ ಹೋರಾಟಗಾರರಿಗೆ MES ನಿಂದ ಜೀವ ಬೆದರಿಕೆ!

Most read

ಬೆಂಗಳೂರಿನಲ್ಲಿ ಕಾವು ಪಡೆದಿರುವ ಕನ್ನಡ ನಾಮಫಲಕ ಹೋರಾಟವು ಬೆಳಗಾವಿಯಲ್ಲಿ ಹರಡುವ ಸೂಚನೆಗಳು ಕಾಣಿಸುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್) ಪುಂಡರು ಬಾಲ ಬಿಚ್ಚುತ್ತಿದ್ದಾರೆ.

ಬೆಳಗಾವಿಯ ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸಲಾಗುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ನಿಯಮವನ್ನು ಕಡ್ಡಾಯ ಜಾರಿಗೊಳಿಸಲು ಕ್ರಮ ಕೈಗೊಳ್ಳಲು ಸ್ಥಳೀಯ ಕನ್ನಡ ಹೋರಾಟಗಾರರಾದ ಅನಿಲ ದಡ್ಡಿಮನಿ ಮತ್ತು ಸಂಪತ್ ಕುಮಾರ ಅವರ ನೇತೃತ್ವದಲ್ಲಿ ಕನ್ನಡ ಹೋರಾಟಗಾರರು ಕಳೆದ ವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಯಲ್ ಬೆಳಗಾವ್ಕರ್ (Royal Belgavkar) ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಕನ್ನಡ ಹೋರಾಟಗಾರರಾದ ಅನೀಲ ದಡ್ಡಿಮನಿ ಅವರಿಗೆ ಜೀವಬೆದರಿಕೆಯ ಆಡಿಯೋ ಕರೆಗಳು ಬರುತ್ತಿವೆ. ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಂತೆ, ಅವಾಚ್ಯ ಪದಗಳಲ್ಲಿ ನಿಂದನೆ ಮಾಡಿದ ಸಂದೇಶಗಳು ನಿರಂತರವಾಗಿ ಬಂದಿವೆ.

ಇದಲ್ಲದೆ The_Belgav_Maratha_Page ಎಂಬ ಮತ್ತೊಂದು ಇನ್ಸ್ಟಾಗ್ರಾಂ ಪುಟದಲ್ಲಿ ಕನ್ನಡ ಹೋರಾಟಗಾರ ಸಂಪತ್ ಕುಮಾರ್ ಅವರ ಭಾವಚಿತ್ರಕ್ಕೆ ಓಲೆ, ಹಣೆಬೊಟ್ಟು, ನತ್ತು ಹಾಕಿ ಮಹಿಳೆಯರಂತೆ ಎಡಿಟ್ ಮಾಡಿ ಅವಮಾನಿಸಲಾಗಿದೆ.  ಈ ಭಾವಚಿತ್ರ ಬಳಸಿ ಅವಾಚ್ಯ ಆಡಿಯೋ ಬಳಸಿ ಬೆದರಿಕೆಯನ್ನು ನೀಡಲಾಗುತ್ತಿದೆ.

ಈ ವಿಡಿಯೋ, ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆ, ಕನ್ನಡ ಪರ ಖಾತೆಗಳೆಲ್ಲ ರಿಪೋರ್ಟ್ ಮಾಡಿ ಖಾತೆ ನಿಷ್ಕ್ರಿಯಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆದರಿಕೆಯನ್ನು ಎದುರಿಸುತ್ತಿರುವ ಅನಿಲ ದಡ್ಡಿಮನಿ, ಮೂರು ವರ್ಷಗಳ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಮಹಾಮೇಳಾವ್ ಮಾಡಲು ನಿರ್ಧರಿಸಿತ್ತು. ಇದಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿರಲಿಲ್ಲ. ಅಧಿವೇಶನದ ವೇಳೆ ನಾಡವಿರೋಧಿ ಮಹಾಮೇಳಾವ್ ಮಾಡಲು ಅವಕಾಶ ಕೋರಿ ಕೆಲವು ಎಂಇಎಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ಹಾಗೂ ಸಂಪತ್ ಎಂಇಎಸ್ ನಾಯಕರ ಮೇಲೆ ಮಸಿ ಎರಚಿ ಪ್ರತಿಭಟನೆ ಮಾಡಿದ್ದೆವು. ಅಂದಿನಿಂದ ನಮ್ಮಿಬ್ಬರ ಮೇಲೆ ನಿರಂತರವಾಗಿ ಎಂಇಎಸ್ ಪುಂಡರು ಹೀಗೆ ಅವಾಚ್ಯವಾಗಿ ದಾಳಿ ಮಾಡುತ್ತಲೇ ಇದ್ದಾರೆ. ಯಾವುದೇ ಕನ್ನಡ ಚಟುವಟಿಕೆಗಳು ನಡೆದರೂ ನಮ್ಮನ್ನು ಟಾರ್ಗೆಟ್ ಮಾಡಿ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಡಳಿತ ಕನ್ನಡ ಪರ ಹೋರಾಟಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅನಿಲ ದಡ್ಡಿಮನಿ

ಈ ಕುರಿತು ಪ್ರತಿಕ್ರಿಯಿಸಿರುವ ಬೆದರಿಕೆಯನ್ನು ಎದುರಿಸುತ್ತಿರುವ ಸಂಪತ್ ಕುಮಾರ್, ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಯಾರಿಗೂ ಹೆದರದೆ ಕನ್ನಡ ನಾಮಫಲಕ ಹೋರಾಟ ಬೆಳಗಾವಿಯಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.




ಸಂಪತ್ ಕುಮಾರ್

More articles

Latest article