Thursday, May 23, 2024

ಬರ ಪರಿಹಾರ ಹಣ ದುರ್ಬಳಕೆ ತಡೆಯುವ ಸಲುವಾಗಿ ‘ಫ್ರೂಟ್ಸ್’ ತಂತ್ರಾಂಶ ಅಭಿವೃದ್ಧಿ : ಸಚಿವ ಕೃಷ್ಣ ಬೈರೇಗೌಡ

Most read

ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಹಣ ದುರ್ಬಳಕೆಯಾಗುವುದನ್ನು ತಡೆಯುವ ಸಲುವಾಗಿ ಈ ವರ್ಷಪರಿಹಾರದ ಹಣವನ್ನು “ಫ್ರೂಟ್ಸ್” ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರಾಯಚೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಸರ್ಕಾರ ಈ ಹಿಂದೆ ರೈತರ ಬರ ಪರಿಹಾರ ಹಣವನ್ನು ಅಧಿಕಾರಿಗಳ ಮೂಲಕ ತಲುಪಿಸುತ್ತಿತ್ತು. ಆದರೆ, ಈ ವೇಳೆ ಸಾಕಷ್ಟು ಹಣ ದುರ್ಬಳಕೆ ಪ್ರಕರಣಗಳೂ ಕಂಡು ಬರುತ್ತಿತ್ತು. ಪರಿಹಾರದ ಹಣವೂ ಸಿಗದೆ ರೈತರು ಪರಿತಪಿಸುವ ಸ್ಥಿತಿ ಇತ್ತು. ಹೀಗಾಗಿ ಈ ಎಲ್ಲಾ ಅಕ್ರಮಗಳಿಗೆ ತಡೆಯೊಡ್ಡುವ ಸಲುವಾಗಿ “ಫ್ರೂಟ್ಸ್” ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇದೀಗ ರಾಜ್ಯಾದ್ಯಂತ ಎಲ್ಲಾ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಮೊದಲ ಕಂತಿನ ಪರಿಹಾರವನ್ನು ಯಾವುದೇ ತಾಂತ್ರಿಕ ದೋಷವಿಲ್ಲದೆ, ಹಣ ದುರುಪಯೋಗವಾಗದೆ ನೇರವಾಗಿ ರೈತರಿಗೆ ತಲುಪಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇನ್ನೂ ಒಂದು ವಾರದೊಳಗೆ ರಾಜ್ಯದ 25 ಲಕ್ಷ ರೈತರು ಪರಿಹಾರ ಹಣ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ, ರಾಯಚೂರು ಜಿಲ್ಲೆಯಲ್ಲಿ 1.4 ಲಕ್ಷ ರೈತರ ಆಧಾರ್ ಹಾಗೂ ಆರ್‌ಟಿಸಿ ಹೊಂದಾಣಿಕೆಯಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ತಹಶೀಲ್ದಾರ್ ಗಳು ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ನಂತರ ರಾಯಚೂರಿನ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ತಲುಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ರೈತರ ಆಧಾರ್ ಲಿಂಕ್ ನಮ್ಮ ಆದ್ಯತೆ:

ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರದ ಹಣ ತಲುಪಿಸುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.

ಕುಡಿಯುವ ನೀರು ಪೂರೈಸಿ

ರಾಯಚೂರಿನ ಯಾವುದೇ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ರಾಯಚೂರು ಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ರಾಯಚೂರಿನ 374 ಗ್ರಾಮಗಳಲ್ಲಿ ಹಾಗೂ ನಗರ ಭಾಗದ 269 ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ.

ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು. ಈಗಾಗಲೇ 59 ಖಾಸಗಿ ಬೋರ್ ವೆಲ್‌ಗಳನ್ನು ಗುರುತಿಸಲಾಗಿರುವುದು ಉತ್ತಮ ಬೆಳವಣಿಗೆ. ಅಧಿಕಾರಿಗಳು ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ, ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್ ಡಿ ಆರ್ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಮಾನಪ್ಪ ವಜ್ಜಲ್ ಮತ್ತು ಬಸನಗೌಡ ದದ್ದಲ್ ಮಾತನಾಡಿ, “ಪ್ರತಿಯೊಂದು ಕ್ಷೇತ್ರಕ್ಕೂ ಸರ್ಕಾರ ಸ್ವಂತ ಟ್ಯಾಂಕರ್ ಖರೀದಿಸಬೇಕು. ಇದಕ್ಕೆ ಕೆಕೆಆರ್‌ಡಿಬಿ ಹಣ ಬಳಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಸಚಿವರಿಗೆ ಮನವಿ ಮಾಡಿದರು.

ಮೇವು ಪೂರೈಕೆಗೆ ಸೂಚನೆ:

ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ರಾಯಚೂರಿನಲ್ಲಿ 2846 ರೈತರಿಗೆ 12680 ಮೇವಿನ ಕಿಟ್‌ಗಳನ್ನು ನೀಡಲಾಗಿದೆ. ಈ ಕಿಟ್‌ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು

ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾ ಹಂತದಲ್ಲಿ ಈಗಾಗಲೇ 895 ಕೋಟಿ ರೂ.ಗಳನ್ನು ಇಟ್ಟಿದ್ದೇವೆ. ಜಿಲ್ಲಾಧಿಕಾರಿಯ ಖಾತೆಯಲ್ಲೂ 35 ಕೋಟಿ ರೂ. ಹಣ ಇದೆ ಎಂದು ಅವರು ಮಾಹಿತಿ ನೀಡಿದರು.

ಕಂದಾಯ ಗ್ರಾಮಗಳ ಶೀಘ್ರ ಘೋಷಣೆಗೆ ಸೂಚನೆ:

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ರಾಯಚೂರು ಜಿಲ್ಲೆಯಲ್ಲಿ ಒಟ್ಟು 87 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ 34 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 43 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಶೀಘ್ರದಲ್ಲಿ ಎಲ್ಲಾ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಿ. ಮತ್ತಷ್ಟು ಅರ್ಹ ಗ್ರಾಮಗಳಿದ್ದರೆ, ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ ಬಡವರ ಪರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು:

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ತಾಲೂಕುವಾರು ಶಾಸಕರ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ನಡೆಸಿ ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು. ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಸೂಚಿಸಿದರು.

ಇ ಆಫೀಸ್ ಶೇ.100 ರಷ್ಟು ಬಳಕೆಗೆ ತಾಕೀತು!

ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಆದರೆ, ರಾಯಚೂರಿನ ಲಿಂಗಸಗೂರು, ಮಸ್ಕಿ ಹಾಗೂ ಸಿರವಾರ ತಾಲೂಕುಗಳಲ್ಲಿ ಈವರೆಗೆ ಇ-ಆಫೀಸ್ ಅನುಷ್ಠಾನವೇ ಆಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಮುಂದಾದರೆ, ಎಲ್ಲಾ ಕೆಲಸಗಳೂ ವೇಗ ಪಡೆಯುತ್ತದೆ. ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತದೆ. ಹೀಗಾಗಿ ಶೀಘ್ರದಲ್ಲಿ ರಾಯಚೂರಿನಲ್ಲಿ ಇ-ಆಫೀಸ್ ಅನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಫೆಬ್ರವರಿ ತಿಂಗಳಿನಿಂದ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (ಎಸಿ) ಕಚೇರಿಗಳಿಂದ ಭೌತಿಕ ಕಡತಗಳನ್ನು ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.

ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸಚಿವ ಕೃಷ್ಣ ಬೈರೇಗೌಡ ಅವರು ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಿಲ್ಲಾಭವನ ಕಟ್ಟಡಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ದದ್ದಲ್ ಸಚಿವರಾದ ಭೋಸರಾಜು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳೂ ಉಪಸ್ಥಿತರಿದ್ದರು.

ತಕರಾರು ಅರ್ಜಿಗಳ ವಿಲೇಗೆ ಕಟ್ಟುನಿಟ್ಟಿನ ಸೂಚನೆ

ಜನವರಿ ತಿಂಗಳ ನಂತರ 90 ದಿನಗಳಿಗೆ ಮೀರಿದ ಯಾವ ತಕರಾರು ಪ್ರಕರಣಗಳೂ ಸಹ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಉಳಿಯುವಂತಿಲ್ಲ, ಎಲ್ಲಾ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಬಗ್ಗೆ ಮಾತನಾಡಿದ ಸಚಿವರು, “ಕಳೆದ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಕರಾರು ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡಿದೆ ಎಸಿ ಕೋರ್ಟ್ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 59,800 ಪ್ರಕರಣಗಳು ಇದ್ದವು. ಆದರೆ, ಕಳೆದ ಮೂರೇ ತಿಂಗಳಲ್ಲಿ 33,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲಿರುವ ಪ್ರಕರಣಗಳೂ ಸಹ ತ್ವರಿತ ಗತಿಯಲ್ಲಿ ಇತ್ಯರ್ಥವಾಗುತ್ತಿದೆ.

ತಕರಾರು ಪ್ರಕರಣಗಳ ಕಾರಣಕ್ಕೆ ಸಾರ್ವಜನಿಕರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿತ್ತು. ಆದರೆ, ಇದೀಗ ಅಧಿಕಾರಿಗಳು ಸೂಚನೆಯಂತೆ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲೂ ಸಹ ಅಧಿಕಾರಿಗಳು ಎಲ್ಲಾ ಜಿಲ್ಲೆಯಲ್ಲೂ ತ್ವರಿತಗತಿಯಲ್ಲಿ ಕಂದಾಯ ಇಲಾಖೆ ಪ್ರಕರಣಗಳನ್ನು ಮುಗಿಸಿ ಜನರಿಗೆ ತುಸು ನೆಮ್ಮದಿ ನೀಡಿ ಎಂದರು.

More articles

Latest article