ಸರ್ಕಾರ ನೀಡಿರುವ ತನ್ನ ಈ ರಜೆಯ ಹಕ್ಕನ್ನು ಘನತೆಯಿಂದ ಪಡೆದುಕೊಳ್ಳುವ ವಾತಾವರಣ ಸೃಷ್ಟಿ ಆಗಬೇಕಿದೆ. ನಮ್ಮ ಸಾಂಪ್ರದಾಯಿಕ ಸಾಮಾಜೀಕರಣದ ತರಬೇತಿಗಳ ಬೇಲಿಯನ್ನು ಮುರಿದು ಮುಂದಡಿ ಇಡಬೇಕಿದೆ – ಸೌಮ್ಯ ಕೋಡೂರು, ಪ್ರಾಧ್ಯಾಪಕರು
ತಾಯ್ತನವನ್ನು ಸಂಭ್ರಮಿಸುವ ಹೆಣ್ಣು ಹಾಗೂ ಆಕೆಯ ಸುತ್ತಲಿನವರು ಅದೇ ಹೆಣ್ಣಿನ ಮುಟ್ಟಿನ ವಿಷಯವಾಗಿ ಅಸಹ್ಯ ಪಡುತ್ತಾರೆ ಎಂದರೆ ಅಚ್ಚರಿಗೊಳ್ಳಬೇಕಿಲ್ಲ. ಮುಟ್ಟಿನ ಹಿನ್ನೆಲೆಯ ಅನೇಕ ಮಡಿ ಮೈಲಿಗೆ ಆಚರಣೆಗಳು, ಮೂಢನಂಬಿಕೆಗಳು ಇಂದಿಗೂ ನಮ್ಮಲ್ಲಿ ರೂಢಿಯಲ್ಲಿವೆ. ಮಡಿ ಮೈಲಿಗೆ ಭಯಗಳನ್ನು ಮೀರುವ ಧೈರ್ಯ ನಮ್ಮ ಸಾಮಾಜಿಕ ಪರಿಸರದಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ಬದುಕಿನ ಕಾಕತಾಳ ಘಟನೆಗಳು ಈ ಮೌಢ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಸಫಲವಾಗಿವೆ.
ಮೊದಲ ತಲೆಮಾರಿನ ಹೆಣ್ಣು, ಶಿಕ್ಷಣ ಪಡೆದು ಉದ್ಯೋಗಸ್ಥಳಾದ ಸಂದರ್ಭದಲ್ಲಿ ಹೇಗೆಲ್ಲ ಮುಟ್ಟಿನ ಈ ಸಂಕಟಗಳನ್ನು ಎದುರಿಸಿರಬಹುದು ಎಂಬ ಆಲೋಚನೆ ನನ್ನೊಳಗೆ ಅಚ್ಚರಿ ಮೂಡಿಸುತ್ತದೆ. ನಿಜಕ್ಕೂ ಈಗಿನ ತಲೆಮಾರಿನ ಹುಡುಗಿಯರಿಗಿಂತ ನಮ್ಮ ಮೊದಲ ತಲೆಮಾರಿನ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಬಹಳ ಧೈರ್ಯವಂತರೇ ಅನಿಸುತ್ತದೆ.
ಮುಟ್ಟಿನ ದಿನಗಳ ನೋವನ್ನು ಸಹಿಸಿಕೊಂಡು ಆ ಸಂದರ್ಭದ ಮೂಡ್ ಸ್ವಿಂಗ್ಸ್ ಗಳನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ, ಕುಟುಂಬವನ್ನೂ, ವೃತ್ತಿಯನ್ನೂ ನಿಭಾಯಿಸುವುದು ಖಂಡಿತಾ ಸಣ್ಣ ವಿಷಯವಲ್ಲ. ಇಂತಹ ಸಂಗತಿಗಳನ್ನು ಅರ್ಥೈಸಿಕೊಳ್ಳುವ ಸಂಗಾತಿ ಸಿಕ್ಕರೆ ಮಾತ್ರ ಮನೆಯಿಂದಾಚೆಗೆ ದುಡಿಯುವ ಹೆಣ್ಣುಗಳ ಬದುಕು ಸಹ್ಯ. ಈ ಅರಿವಿನ ಕೊರತೆಗೆ ನಮ್ಮ ಸಾಮಾಜೀಕರಣದ ತರಬೇತಿಯೇ ಮೂಲ ಕಾರಣ.
ಮುಟ್ಟಿನ ದಿನಗಳನ್ನು ಸಾಂಪ್ರದಾಯಿಕ ವಿಧಾನಗಳಲ್ಲಿ ಎದುರಾಗುತ್ತಿದ್ದ ಹೆಣ್ಣಿಗೆ, ಸಾನಿಟರಿ ಪ್ಯಾಡ್ ಗಳು ಬಂದಾಗ ಒಂದು ಮಟ್ಟಿಗಿನ ಧೈರ್ಯ ಮೂಡಿತು. ಈಗ ಬಂದಿರುವ ಮುಟ್ಟಿನ ಕಪ್ ಗಳಂತೂ ಹೆಣ್ಣಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಋತುಚಕ್ರ ನೀತಿ – 2025 ಇಂತಹ ನಿಲುವುಗಳು ನಿಜಕ್ಕೂ ಹೆಣ್ಣಿನ ಮನೋಸಾಮರ್ಥ್ಯವನ್ನು, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಐತಿಹಾಸಿಕ ನಿರ್ಣಯವಾಗಿದೆ.
ಗೆಳತಿಯರೇ, ಮುಟ್ಟಿನ ವಿಷಯಗಳನ್ನು ಗುಟ್ಟಾಗಿ ಮಾತಾಡಿಕೊಳ್ಳುತ್ತಾ, ಮುಜುಗರದಲ್ಲೇ ಇಷ್ಟು ವರ್ಷಗಳನ್ನು ತಳ್ಳಿದ್ದಾಯ್ತು. ಅಂತಹ ಸಾಮಾಜಿಕ ಸಂದರ್ಭ ನಮ್ಮಲ್ಲಿನ್ನೂ ಜೀವಂತವಾಗಿರುವುದಕ್ಕೆ ನಾವೇ ಇನ್ನೊಂದು ಬಗೆಯಲ್ಲಿ ಕಾರಣಕಾರ್ಯರೂ ಕೂಡ. ಪರಿಸ್ಥಿತಿ ಹೀಗಿರುವಾಗ ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಧೈರ್ಯವಾಗಿ ಮುಟ್ಟಿನ ರಜೆಯನ್ನು ತೆಗೆದುಕೊಳ್ಳುವ ಮನೋದಾರ್ಢ್ಯತೆಯನ್ನು ಬೆಳೆಸಿಕೊಳ್ಳಬೇಕಿರುವುದು ಈಗಿರುವ ಜರೂರು.
ಈಗಾಗಲೇ ಹಲವು ಐಟಿ ಕಂಪನಿಗಳಲ್ಲಿ, ಖಾಸಗಿ ಕಂಪನಿಗಳಲ್ಲಿ ಈ ರಜೆಯ ಸೌಲಭ್ಯಗಳಿದ್ದಾಗಿಯೂ ಅವುಗಳನ್ನು ತೆಗೆದುಕೊಳ್ಳಲು ವಿದ್ಯಾವಂತ ಮಹಿಳೆಯರೇ ಹಲವು ಬಾರಿ ಹಿಂದೇಟು ಹಾಕಿದ್ದಿದೆ. ಒಂದು ವೇಳೆ ರಜೆ ತೆಗೆದುಕೊಂಡಿದ್ದರೂ ಮರುದಿನ ಪುರುಷ ಸಹೋದ್ಯೋಗಿಗಳನ್ನು ಎದುರಾಗಬೇಕಾದ ಸಂದರ್ಭವೇ ಇನ್ನಷ್ಟು ಮುಜುಗರ ತರಿಸಬಹುದು.
ಹೀಗಿರುವಾಗ ಸರ್ಕಾರ ಘೋಷಿಸಿರುವ ಈ ನೀತಿ, ಗಾರ್ಮೆಂಟ್ಸ್ ಉದ್ಯೋಗಿಗಳಿಂದ ಆದಿಯಾಗಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಅನ್ವಯವಾಗುವುದರಿಂದ ಗಾರ್ಮೆಂಟ್ಸ್ ಹಾಗೂ ಇನ್ನಿತರ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಹೆಣ್ಣುಗಳ ಆತ್ಮವಿಶ್ವಾಸ ಹೆಚ್ಚಬೇಕಿದೆ. ಸರ್ಕಾರ ನೀಡಿರುವ ತನ್ನ ಈ ರಜೆಯ ಹಕ್ಕನ್ನು ಘನತೆಯಿಂದ ಪಡೆದುಕೊಳ್ಳುವ ವಾತಾವರಣ ಸೃಷ್ಟಿ ಆಗಬೇಕಿದೆ. ನಮ್ಮ ಸಾಂಪ್ರದಾಯಿಕ ಸಾಮಾಜೀಕರಣದ ತರಬೇತಿಗಳ ಬೇಲಿಯನ್ನು ಮುರಿದು ಮುಂದಡಿ ಇಡಬೇಕಿದೆ.
ಬಾಬಾಸಾಹೇಬರು ಹೇಳುವಂತೆ – “ನಾನು ಸಮುದಾಯದ ಪ್ರಗತಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ” ಎಂಬ ಆಶಯವು ಸಾಕಾರಗೊಳ್ಳಲು ನಮ್ಮ ರಾಜ್ಯ ಸರ್ಕಾರದ ನಡೆ ಐತಿಹಾಸಿಕವಾದುದು. ಮಹಿಳೆಯರ ಬದುಕಿನ ಘನತೆಯನ್ನು ಎತ್ತಿ ಹಿಡಿದ “ಋತು ಚಕ್ರ ನೀತಿ – 2025” ನಿಜಕ್ಕೂ ಶ್ಲಾಘನೀಯ.
ಸೌಮ್ಯ ಕೋಡೂರು
ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಶೋದನಾ ವಿದ್ಯಾರ್ಥಿನಿ, ಬೆಂಗಳೂರು.
ಇದನ್ನೂ ಓದಿ- ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮಹಿಳಾ ಸಂಘಟನೆಗಳಿಂದ ಜನಾಗ್ರಹ ಪತ್ರ