ಪೀರಿಯಡ್ ನ ಅತಿಯಾದ ನೋವು ತಾಳಲಾರದೆ ಮುಂಬೈನ ಮಾಲ್ವಾನಿ ಪ್ರದೇಶದ 14 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ತಮಿಳು ನಾಡಿನ ತಿರುಚಿಯ 18 ವರ್ಷದ ಹುಡುಗಿಯೊಬ್ಬಳು ಮುಟ್ಟಿನ ಅತಿಯಾದ ನೋವನ್ನು ತಾಳಲಾರದೆ ನೋವು ಕಡಿಮೆ ಮಾಡಲು ಪೇನ್ ಕಿಲ್ಲರ್‌ಗಳ ಅತಿಯಾದ ಸೇವನೆಯಿಂದ ಸಾವಿಗೀಡಾಗಿದ್ದಾಳೆ. ಈಗ ಹೇಳಿ ಇದು ಕೇವಲ ರಜೆ ಮಾತ್ರವಾ? – ಸುಮನ್ ಪಾಟೀಲ್, ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿಜಯಪುರ.
ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳ ಯೋಗ ಕ್ಷೇಮದ ಹಿತದೃಷ್ಟಿ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ “ಮುಟ್ಟಿನ ರಜೆ ನೀತಿ 2025 “- ಒಂದು ದಿನ ವೇತನ ಸಹಿತ ರಜೆ ನೀಡುವ ನೀತಿಗೆ ಅನುಮೋದನೆ ನೀಡಿರುವುದು ಮಹತ್ವದ ಹೆಜ್ಜೆ.
ಕೇರಳ, ಸಿಕ್ಕಿಂ, ಬಿಹಾರ, ಒಡಿಶಾ ರಾಜ್ಯಗಳು ಈ ಹಿಂದೆಯೇ ಋತುಚಕ್ರ ರಜೆ ನೀತಿ ಯನ್ನು ಅಳವಡಿಸಿವೆ. ಈಗ ಕರ್ನಾಟಕ ಸರ್ಕಾರ ಕೂಡ ಇದಕ್ಕೆ ಮುಂದಾಗಿರುವುದು ಒಳ್ಳೆಯ ನಡೆ. ಋತುಚಕ್ರ ಎಂಬುದು ಹೆಣ್ಣಿನ ದೇಹದಲ್ಲಿ ನಡೆಯುವ ಅತ್ಯಂತ ಸಹಜ ಕ್ರಿಯೆ, ಪೀರಿಯಡ್ಸ್ ಅಥವಾ ಮುಟ್ಟು ಇದೊಂದು ನೈಸರ್ಗಿಕ ವಿದ್ಯಮಾನವಾದರೂ ಇದು ಬರುವ ಒಂದು ವಾರ 15 ದಿನಗಳ ಮುಂಚೆ ಆಕೆಯ ಮನಸ್ಥಿತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಇದು ಪ್ರಾರಂಭವಾದ ಮೊದಲ 3, 4 ದಿನಗಳು ಹೆಚ್ಚಿನ ಮಹಿಳೆಯರು ತುಂಬ ನೋವನ್ನು ಅನುಭವಿಸುತ್ತಾರೆ.
ಆ ದಿನಗಳಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಅವರಲ್ಲಿ ತಲೆನೋವು, ಸುಸ್ತು, ಹೊಟ್ಟೆನೋವು, ಕಾಲುಗಳ ಸೆಳೆತ, ಕಿರಿಕಿರಿಗಳು, ಪದೇ ಪದೇ ಮೂಡ್ ಸ್ವಿಂಗ್ಸ್, ಸತತ 5 ದಿನಗಳ ರಕ್ತಸ್ರಾವ ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಈ ಸಮಯದಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ನೋವಿರುತ್ತದೆ.
ಲಂಡನ್ ಪೇನ್ ಜರ್ನಲ್ ನಲ್ಲಿ ಪ್ರಕಟಿಸಿದ ಒಂದು ವೈದ್ಯಕೀಯ ಅಧ್ಯಯನದ ಪ್ರಕಾರ ಋತುಚಕ್ರದ ನೋವು ಹೃದಯಾಘಾತದಷ್ಟೇ ಕೆಟ್ಟದಾಗಿರುತ್ತದೆ ಎಂದು ತಿಳಿದು ಬಂದಿದೆ. 21 ನೆಯ ಶತಮಾನದ AI ಯುಗದಲ್ಲಿ ಬದುಕುತ್ತಿರುವಾಗ ಜಮ್ಮು ಕಾಶ್ಮೀರದ ಕೆಲವು ಹಳ್ಳಿಗಳಲ್ಲಿ ಮೆನ್ಸುಟ್ರುವಲ್ ಸೈಕಲ್ ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ. ಆ ಪ್ರದೇಶಗಳ ಕುಟುಂಬದಲ್ಲಿ ಇದರ ಹೆಸರನ್ನು ಯಾರೂ ಎತ್ತುವುದಿಲ್ಲ. ಹಾಗೆ ಇಲ್ಲಿ ಪೀರಿಯಡ್ ಅನ್ನು 5 ದಿನದ ರೋಗ ಅಂತ ಕರೆಯುತ್ತಾರೆ. ಅಷ್ಟೇ ಯಾಕೆ ಪೀರಿಯಡ್ ನ ಅತಿಯಾದ ನೋವು ತಾಳಲಾರದೆ ಮುಂಬೈನ ಮಾಲ್ವಾನಿ ಪ್ರದೇಶದ 14 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ತಮಿಳು ನಾಡಿನ ತಿರುಚಿಯ 18 ವರ್ಷದ ಹುಡುಗಿಯೊಬ್ಬಳು ಮುಟ್ಟಿನ ಅತಿಯಾದ ನೋವನ್ನು ತಾಳಲಾರದೆ ನೋವು ಕಡಿಮೆ ಮಾಡಲು ಪೇನ್ ಕಿಲ್ಲರ್‌ಗಳ ಅತಿಯಾದ ಸೇವನೆಯಿಂದ ಸಾವಿಗೀಡಾಗಿದ್ದಾಳೆ . ಈಗ ಹೇಳಿ ಇದು ಕೇವಲ ಪೀರಿಯಡ್ ಮಾತ್ರವಾ?.
ಹಿಂದೊಮ್ಮೆ ಸ್ಮೃತಿ ಇರಾನಿ ಪೀರಿಯಡ್ಸ್ ಎಂಬುದು ಅಂಗವೈಕಲ್ಯವಲ್ಲ ಇದಕ್ಕೆ ರಜೆ ಅಗತ್ಯವಿಲ್ಲ ಎಂದು ಹೇಳಿ ಟೀಕೆಗೊಳಗಾಗಿದ್ದರು. ಇದೇನು ದೊಡ್ಡ ವಿಷಯವೇ ದೊಡ್ಡ ರೋಗ ಬಂದವರ ಹಾಗೆ ಆಡುತ್ತೀರಾ ಅಂತ ಹೇಳುವವರಿಗೆ ಹೇಳುವುದು ಇಷ್ಟೇ- ಆ ದಿನಗಳಲ್ಲಿ ಆಕೆ ಅನುಭವಿಸುವ ನೋವು ಅವಳಿಗೆ ಮಾತ್ರ ಗೊತ್ತು . ಎಷ್ಟೋ ಜನ ಈ ನೋವನ್ನು ಸಹಿಸಲಾರದೆ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ ಹಾಗೆ ಆಗಿ ಕತ್ತರಿಸಿ ಬಿಡುವಷ್ಟು ಯಾತನೆಗೆ ಒಳಗಾಗುತ್ತಾರೆ .
ಈಗ ಕರ್ನಾಟಕ ಸರ್ಕಾರ ನೀಡಿರುವ ಋತುಚಕ್ರ ರಜೆ ನೀತಿಯಿಂದ ಅದೆಷ್ಟೋ ಹೆಣ್ಮನಗಳಿಗೆ ನಿರಾಳವಾಗಿರುವುದಂತೂ ಸತ್ಯ . ಏಕೆಂದರೆ ಶಾಲಾ ಕಾಲೇಜುಗಳು, ಗಾರ್ಮೆಟ್‌ನಂತಹ ಜಾಸ್ತಿ ಹೊತ್ತು ನಿಂತು ಕೆಲಸ ಮಾಡುವ ಸ್ಥಳಗಳಲ್ಲಿ ಆ ದಿನಗಳಲ್ಲಿ ಮಹಿಳೆಯರು ಬಹಳ ಆಯಾಸಗೊಳ್ಳುತ್ತಾರೆ. ಈ ರಜೆ ನಿಯಮವನ್ನು ಆಯಾ ವಲಯಗಳು ಕಟ್ಟು ನಿಟ್ಟಾಗಿ ಪಾಲಿಸಿ ಮಹಿಳೆಯರೂ ಅಳವಡಿಸಿಕೊಂಡು ತಮ್ಮ ತಿಂಗಳ ದಿನಗಳನ್ನು ನಿರಾಳವಾಗಿ ಕಳೆಯುವಂತಾಗಲಿ. ಅವಳ ಪೂರ್ತಿ ನೋವನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದರೂ ಆ ದಿನಗಳಲ್ಲೂ ಕೆಲಸಕ್ಕೆ ಹೋಗಬೇಕಲ್ಲ ಎಂಬ ಆಲೋಚನೆ ದೂರ ಸರಿದು ಮುಟ್ಟಿನ ರಜೆ ಅವಳ ಮೊಗದಲ್ಲಿ ನಗು ಮೂಡಿಸಿ ಅವಳ ನೋವಿಗೆ ಕಿರು ಆಸರೆಯಾಗಲಿ. ಹ್ಯಾಪಿ ಪೀರಿಯಡ್ಸ್.
ಸುಮನ್ ಪಾಟೀಲ್
ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿಜಯಪುರ.
ಇದನ್ನೂ ಓದಿ- http://“ಋತು ಚಕ್ರ ನೀತಿ – 2025” ನಿಜಕ್ಕೂ ಶ್ಲಾಘನೀಯ https://kannadaplanet.com/menstrual-leave-policy-2025-is-commendable/