ಸ್ಮರಣೆ | ನನ್ನ ಗೌರಿ ಟೀಚರ್ …

Most read

ಗೌರಿ ಲಂಕೇಶ್ ಪತ್ರಿಕೆ ಶುರು ಮಾಡಿದ್ದಾಗ ನನಗೂ ಬರೆಯುವ ಲಹರಿ ಉಕ್ಕಿ ಉಕ್ಕಿ ಹರಿದು ಗೌರಿಗೆ ಹೇಳಿದೆ ” ನನಗೂ ಏನಾದ್ರೂ ಬರೀಬೇಕು ಅಂತಿದೆ ” ಎಂದು. ” ಬರೀರಿ ರಾಜೇಶ್ವರಿ ಬರೀರೀರೀರೀರೀ ” ಎಂದೇಳಿ ಪ್ರೋತ್ಸಾಹ ಕೊಟ್ಟರೂ ಪೇಪರ್ ಮೇಲೆ ಪೆನ್ ಓಡಲೇ ಇಲ್ಲ. ವಿಪರ್ಯಾಸವೆಂದರೆ ಅಕ್ಷರಗಳಲ್ಲಿ ನಾನು ಬರೆದದ್ದು ಅವರ ಸಾವಿನ ನಂತರ! ರಾಜೇಶ್ವರಿ ಭೋಗಯ್ಯ

ಪತ್ರಕರ್ತೆಯಾಗಿ ನೂರಾರು ಲೇಖನಗಳನ್ನು ಗೌರಿ ಬರೆದಿದ್ದರೂ ಸಹ ಬರವಣಿಗೆಗಳಿಗಿಂತ ನಾನು ಅವರ ಮಾತುಗಳಿಗೆ ಮರುಳಾಗಿ ಖೆಡ್ಡಾದೊಳಗೆ ಬಿದ್ದಿದ್ದೆ. ಹಾಗಂತ ಅವರೇನು ಎಲ್ಲರೂ ಬೀಳಲಿ ಎಂದು ಖೆಡ್ಡಾ ತೋಡಿರಲಿಲ್ಲ. ನೇರ, ನಿಷ್ಠೂರ, ತಮಾಷೆ  ಒಮ್ಮೊಮ್ಮೆ ಸೀರಿಯಸ್ ಆಗಿ ಮಾತನಾಡುತ್ತಿದ್ದರೆ ಆ ಬಲೆಯೊಳಗೆ ನಾವು ಸಿಕ್ಕಿಹಾಕಿಕೊಳ್ಳದೆ ಇರಲು ಅಸಾಧ್ಯ. ಪೀಚಲು ದೇಹವಾದರೂ ಧ್ವನಿ ಮಾತ್ರ ಗಡುಸಾಗಿ ಒಂಥರಾ ಸೆಳೆಯುವಂತೆ ತೊದಲು, ತೊದಲುಕೊಂಡು ಮಾತಾಡಿದರೂ, ಮುದ್ದು ಮುದ್ದಾಗಿ ಆಗ ತಾನೆ ಮಾತನಾಡಲು ಕಲಿತಿರುವ ಮಗುವಂತೆ ಇದ್ದು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ಆದರೆ ಅಲ್ಲಿಂದ ಇಲ್ಲೀತನಕ ಖೆಡ್ಡಾದಿಂದ ಮೇಲೆ ಬರಲು, ಬಲೆಯನ್ನು ಕಿತ್ತು  ಹೊರಬರಲು ನಾನು ಎಂದೂ ಪ್ರಯತ್ನಿಸಿಲ್ಲ. 

ಟೀಚರ್ ಎಂದರೆ ಮೊದಲು ಮೂಡುವ ಭಾವವೇ ಹೆದರಿಕೆ, ನಂತರವಷ್ಟೇ ಭಕ್ತಿ, ಗೌರವ ಮಿಕ್ಕಿದ್ದೆಲ್ಲ. ಇಲ್ಲಿ ಗೌರಿ ನನಗೆ, ನನ್ನ ಮಕ್ಕಳಿಗೆ ಒಂಚೂರೂ ಹೆದರಿಕೆ ಹುಟ್ಟಿಸದ ಟೀಚರ್.

ನನ್ನ ದೊಡ್ಡ ಮಗಳು ರೊಮಿಳಾ ಮೊದಲನೆ ವರ್ಷದ ಇಂಜಿನಿಯರಿಂಗ್ ಓದುತ್ತಿರುವಾಗಲೇ ಗೌರಿಯಿಂದ ಅವಳಿಗೊಂದು ಆಜ್ಞಾಪಿಸುವ ರೀತಿಯ ಮಾತೊಂದಿತ್ತು. ಅದೇನು ಚೆನ್ನಾಗಿ ಓದು ಅಂತನೋ,, ಸಂಪಾದನೆ ಮಾಡು ಅಂತನೋ ಆಗಿರದೆ , ” ನೀ ಮುಂದಿನ ಸತಿ ಪಾರ್ವತೀಶ್ ಜೊತೆಗೆ ನಮ್ಮನೆಗೆ ಬರುವಾಗ ನೀನೇ ಕಾರು ಓಡಿಸಿಕೊಂಡು ಬರಬೇಕು ” ಎಂದೇ ಮಾತು ಶುರುವಾಗುವುದು  ಮುಗಿಯುವುದು ಆಗಿರ್ತಿತ್ತು. ಗೌರಿಯ ದೆಸೆಯಿಂದ ಮಗಳು ಕಾರು ಕಲಿತಳು. ಹೆಣ್ಣು ಮಕ್ಕಳಿಗೆ ಡ್ರೈವಿಂಗ್ ಎಷ್ಟು ಅವಶ್ಯಕ ಎಂದು ಪದೇ ಪದೇ ಹೇಳಿ ನಮ್ಮೊಳಗೂ ಆ ವಿಷಯ ಅಚ್ಚಾಗಿತ್ತು. ಸ್ಕೂಟರ್ ಓಡಿಸೋದು ಇಂದಿನ ದಿನಗಳಲ್ಲಿ ದೊಡ್ಡ ವಿಷಯವೇ ಅಲ್ಲವಾದ್ದರಿಂದ ಕಾರಿನ ವಿಷಯಕ್ಕೆ ನಾವು ತಲೆ ಕೆಡಿಸಿಕೊಂಡಿರಲಿಲ್ಲ. ಗೌರಿಯ ಡ್ರೈವಿಂಗ್ ವಿಷಯದ ಬೋಧನಾ ನಂತರ ಇಬ್ಬರು ಹೆಣ್ಣುಮಕ್ಕಳೂ ಕಾರು ಓಡಿಸೋದು ಕಲಿತಿದ್ದಾರೆ.

ಟೀಚರ್ ಕೆಲಸವೆಂದರೆ ಈ ಥರದ್ದೂ ಅಲ್ಲವೇ…!

ಸಾಮಾನ್ಯವಾಗಿ ಪತ್ರಿಕೆ ಕೆಲಸ ಮುಗಿಸಿ ಮನೆಗೆ ಹೋಗುವ ಮಧ್ಯದಲ್ಲಿ ನಮ್ಮನೆ ಸಿಕ್ತಿತ್ತಾದ್ದರಿಂದ  ವಾರದಲ್ಲಿ ಮೂರು ದಿನವಾದರೂ ಗೌರಿಯ ಕಾರು ನಮ್ಮ ಮನೆ ಕಡೆ ತಿರುಗುತ್ತಿತ್ತು. ಒಮ್ಮೆ ಹಾಗೆ ಮನೆಗೆ ಗೌರಿ ಬಂದಾಗ ನನಗೂ ಚಿಕ್ಕ ಮಗಳಿಗೂ ಊಟದ ವಿಷಯಕ್ಕೆ  ಗಲಾಟೆ ನಡೆಯುತ್ತಿತ್ತು. ಹೈಸ್ಕೂಲು ಓದುತ್ತಿದ್ದ ಅವಳಿಗೆ ನಾನೇ ತಿನ್ನಿಸಿದರೂ ತಿನ್ನಲು ತಪ್ಪಿಸಿ ಓಡುತ್ತಿದ್ದುದನ್ನು ನೋಡಿದ ಗೌರಿ ಅವಳಿಗೆ ” ನೋಡು ನೀನು ಊಟ, ತಿಂಡಿ ಸರಿಯಾಗಿ ಮಾಡದೆ ನನ್ ಥರ ಸಣಕಲಾಗಿ ಬೆಳೀತೀಯ, ಆಗ ಯಾವ ಹುಡುಗನೂ ನಿನ್ನ ಇಷ್ಟ ಪಡೋಲ್ಲ ಗೊತ್ತಾಯ್ತಾ ” ಅಂತ ನಮ್ಮ ಮನೆಯಲ್ಲಿ ಎಂದೂ ಉಪಯೋಗಿಸದ ಒಂದೆರಡು ಪದ ಅವರು ಹೇಳಿದ್ದು ಕೇಳಿ ನಾನು ಪ್ರಜ್ಞೆ ತಪ್ಪುವುದೊಂದು ಬಾಕಿ…

ಟೀಚರ್ ಕೆಲಸವೆಂದರೆ ಇಂಥದ್ದೂ ಸಹ ಇರುತ್ತವೆ!

ಇವೆಲ್ಲಕ್ಕೂ ಮೊದಲು , ಗೌರಿ ಲಂಕೇಶ್ ಪತ್ರಿಕೆ ಶುರು ಮಾಡಿದ್ದಾಗ ನನಗೂ ಬರೆಯುವ ಲಹರಿ ಉಕ್ಕಿ ಉಕ್ಕಿ ಹರಿದು ಗೌರಿಗೆ ಹೇಳಿದೆ ” ನನಗೂ ಏನಾದ್ರೂ ಬರೀಬೇಕು ಅಂತಿದೆ ” ಎಂದು. ” ಬರೀರಿ ರಾಜೇಶ್ವರಿ ಬರೀರೀರೀರೀರೀ ” ಎಂದೇಳಿ ಪ್ರೋತ್ಸಾಹ ಕೊಟ್ಟರೂ ಪೇಪರ್ ಮೇಲೆ ಪೆನ್ ಓಡಲೇ ಇಲ್ಲ. ಆದರೆ ಮನಸ್ಸಿನೊಳಗೇ ವಾರಕ್ಕೊಂದು ಲೇಖನ ಬರೆದು ಬರೆದು ಬಿಸಾಕಿದ್ದೆ . ವಿಪರ್ಯಾಸವೆಂದರೆ ಅಕ್ಷರಗಳಲ್ಲಿ ನಾನು ಬರೆದದ್ದು ಅವರ ಸಾವಿನ ನಂತರ!

ಭೇಟಿಯಾದಾಗಲೆಲ್ಲ ಏನಾದರೊಂದು ಬದುಕಿನ ಪಾಠ ಮಾಡಿ ಹೋಗೋದು, ಸೀರಿಯಸ್ಸಾದ ಟೀಚರಿನಂತೆ ಅಲ್ಲದೆ ಛೇಡಿಸಿ , ರೇಗಿಸಿ,  ನಗುವಂತೆ ಮಾಡಿ ಒಂದು ಮೆಸೇಜ್ ದಾಟಿಸುವ ರೀತಿಗೆ ನಾ ಫಿದಾ ಆಗಿದ್ದೆ. ಒಮ್ಮೆ ಅವರು ಟೀಚರ್ ಆದರೆ ಇನ್ನೊಮ್ಮೆ ನಾನು ಅವರಿಗೆ ಟೀಚರ್. ಗುಟ್ಟಾಗಿಡುವುದನ್ನು ಒಬ್ಬರಿಗೊಬ್ಬರು ರಟ್ಟು ಮಾಡಿಕೊಂಡು ಮನ ಹಗುರ ಮಾಡಿಕೊಂಡಿದ್ದೆವು. 

ಈ ದಿನವನ್ನು ಅವರ ಸಾವಿನ ದಿನವೆಂದು ನೆನೆಯದೆ, ಶಿಕ್ಷಕಿಯಾಗಿ ಅವರು ಹೇಳಿದ ಪಾಠಗಳನ್ನೆಲ್ಲಾ ನೆನೆದು ಒಬ್ಬ ವಿಧೇಯ ವಿದ್ಯಾರ್ಥಿನಿ ಆಗಿ ಅವರನ್ನು ನೆನೆಸಿಕೊಳ್ಳುವುದು ಕಬ್ಬಿನ ಹಾಲು ಕುಡಿದಾಗ ಹೊಟ್ಟೆ ತಂಪಾಗುವಂತಹ ಅನುಭವ.

ರಾಜೇಶ್ವರಿ ಭೋಗಯ್ಯ

ಕವಯಿತ್ರಿಯಾಗಿರುವ ಇವರು ಗೌರಿಯವರ ಆಪ್ತ ಗೆಳತಿಯಾಗಿದ್ದು ಗೌರಿಯ ನೆನಪಿನಲ್ಲಿ ʼಏಕಾಂತ- ಲೋಕಾಂತʼ ಪುಸ್ತಕವನ್ನು ಬರೆದಿದ್ದಾರೆ.

ಇದನ್ನೂ ಓದಿ- http://ಓ …ನೀವು ಟೀಚರಾ…https://kannadaplanet.com/oh-are-you-a-teacher/

More articles

Latest article