ನೆನಪು | ಜನ ಮನದ ನಡುವೆ ಅಲಕ್ಷಿತರ ಕತೆಗಾರ

Most read

ಹೆಚ್ಚಾಗಿ ಒಂದೇ ಜಾತಿ ವರ್ಗದ ಕತೆಗಳೇ ಗಂಭೀರ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಅಕಡೆಮಿಕ್ ವಲಯದಾಚೆಗೆ ಡಿಸೋಜರಂತಹ ಬರಹ ಬಂದಿದ್ದನ್ನು ಈಗ ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಬರಹಗಳಲ್ಲಿ ಆಳಕ್ಕಿಂತ, ಸರಳ ನೇರ ಶೈಲಿ ಕಾಣಿಸುತ್ತದೆ. ಅದು ಬಹುಶಃ ಯಾವುದೇ ಸಾಹಿತ್ಯ ಪಂಥ, ಹಿನ್ನೆಲೆಯ ತರಬೇತಿ ಇಲ್ಲದೇ ಇರುವುದರಿಂದ ಆಗಿರಬಹುದು. ಮತ್ತು ಅದೇ ಅವರ ವಿಫುಲ ಬರವಣಿಗೆಗೆ ಕಾರಣವೂ ಆಗಿರಬಹುದು – ಸಬಿತಾ ಬನ್ನಾಡಿ, ಪ್ರಾಧ್ಯಾಪಕರು.

ಜನಪ್ರಿಯ ಮಾಧ್ಯಮಗಳ ಮೂಲಕ ಬರವಣಿಗೆ ಆರಂಭಿಸಿದ ನಾ ಡಿಸೋಜ ಅವರನ್ನು ರೂಪಿಸಿದ್ದು ಮೂರು ಅಂಶಗಳು. ಮೊದಲನೆಯದು ಬಾಲ್ಯಕಾಲದಿಂದಲೂ ಅವರು ಓದಿದ ಕಾರಂತ, ಕುವೆಂಪು, ಮಾಸ್ತಿ ಮೊದಲಾದವರ ಕಥನಗಳು. ಎರಡನೆಯದು ಹೈಸ್ಕೂಲು ಶಿಕ್ಷಣ ಮುಗಿಸಿ, ಶರಾವತಿ ಯೋಜನೆಯ ಕಾರಣಕ್ಕೆ ಸಾಗರಕ್ಕೆ ಬಂದು ಅಲ್ಲಿನ ಕಛೇರಿಯಲ್ಲಿ ಟೈಪಿಸ್ಟ್ ಆಗಿ ಸೇರಿದಾಗ ಸಂತ್ರಸ್ತರ ಸಂಕಟಗಳಿಗೆ ಅವರು ಕಿವಿಗೊಟ್ಟಿದ್ದು, ಮೂರನೆಯದು 1959ರಲ್ಲೇ ಅವರು ಮೈಸೂರಿನಿಂದ ಉದ್ಯೋಗ ನಿಮಿತ್ತ ಸಾಗರಕ್ಕೆ ಬಂದು ಇಲ್ಲಿಯೇ ನೆಲೆಸಿದಾಗ ನಡೆದ ಕಾಗೋಡು ಚಳುವಳಿ ಹೋರಾಟದಲ್ಲಿ ಅವರೂ ಭಾಗಿಯಾದದ್ದರ ಫಲವಾಗಿ ಅವರೊಳಗೆ ರೂಪುಗೊಂಡ ನ್ಯಾಯದ ಪರಿಕಲ್ಪನೆ. ಇವೆಲ್ಲದರಾಚೆಗೆ ಅವರು ಸಾಹಿತ್ಯದ ಅಕಡೆಮಿಕ್ ವಲಯದ ವೃತ್ತದಿಂದ  ಆಚೆ ಇದ್ದುದೂ ಅವರು ನಿರುಮ್ಮಳವಾಗಿ ಬೆಳೆಯಲು ಕಾರಣವಾಯಿತು. ಈಗ ಹಿಂತಿರುಗಿ ನೋಡಿದರೆ ಜನಪ್ರಿಯ ಓದುಗ ವಲಯಕ್ಕೆ/ ಸಮಾಜಕ್ಕೆ ಅಲಕ್ಷಿತರ ಮುಖವಿಲ್ಲದ ಕತೆಗಳಿಗೆ ಮುಖವಾದ ನಡೆಯೊಂದು ಅವರ ಬರಹದ ಪಯಣದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ನಾ ಡಿಸೋಜ ಅವರನ್ನು ನಾನು ಕೊನೆಯದಾಗಿ ಭೇಟಿಯಾದದ್ದು ಸರಿಯಾಗಿ ಒಂದು ವರ್ಷದ ಹಿಂದೆ. ಕಳೆದ ಜನವರಿಯಲ್ಲಿ ಸಾಗರದ ಪರಸ್ಪರ ವೇದಿಕೆಯವರು ಕೊಡಮಾಡಿದ ‘ಅಕ್ಕಮಹಾದೇವಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅತಿಥಿಯಾಗಿದ್ದರು. ತಣ್ಣಗಾಗಿದ್ದ ‘ಶರಾವತಿ ನದಿ ತಿರುವು ಯೋಜನೆ’ ಯ ಬಗೆಗೆ ಪುನಃ ಆತಂಕ ಶುರುವಾಗಿತ್ತು. ಹೊಸ ಸರ್ಕಾರವು ಈ ಬಗ್ಗೆ ಮತ್ತೆ ಆಸಕ್ತಿ ವಹಿಸುತ್ತಿದೆ ಎಂಬ ಆತಂಕ ಅದಾಗಿತ್ತು. ಕಾರ್ಯಕ್ರಮ ಆರಂಭವಾಗುವುದಕ್ಕೂ ಮುಂಚೆ ಪತ್ರಕರ್ತರು ಈ ಬಗ್ಗೆ ನಾ ಡಿಸೋಜ ಅವರಿಗೆ ಪ್ರಶ್ನೆ ಕೇಳಿದರು. ವಯೋಸಹಜವಾಗಿ ಶಕ್ತಿಗುಂದಿದ್ದ ಡಿ ಸೋಜ ಅವರು ಈ ಯೋಜನೆಯನ್ನು ಖಂಡಿಸಿದರು ಮಾತ್ರವಲ್ಲ, ಅಗತ್ಯವೆನಿಸಿದರೆ ಹೋರಾಟಕ್ಕೂ ಸಿದ್ಧ ಎಂಬುದನ್ನು ಸ್ಪಷ್ಟ ಪಡಿಸಿದರು. ಅವರ ಈ ಸ್ಪಷ್ಟತೆ ಮೇಲ್ಪದರದ್ದಲ್ಲ. ನಾಡಿನ ಯಾವುದೋ ಮೂಲೆಯ ಜನರಿಗಾಗಿ ಶರಾವತಿಯ ಆಸುಪಾಸಿನ ಜನ ನಿರಂತರವಾಗಿ ತ್ಯಾಗ ಮಾಡಬೇಕು ಎಂದು ಒತ್ತಡ ಹಾಕುವ, ಆ ಮೂಲಕ ಸ್ಥಳೀಯ ಜನರ ಬದುಕಿನ ಬಗೆಗೆ ನಿರ್ಲಕ್ಷ್ಯ ವಹಿಸುವ ಆಡಳಿತದ ಕುರುಡು ಕಣ್ಣುಗಳನ್ನು ಮತ್ತದರ ಧಾರುಣ ಪರಿಣಾಮಗಳನ್ನು ಕಂಡು ನೊಂದ ಹೃದಯದಾಳದಿಂದ ಹೊಮ್ಮಿದ್ದಾಗಿತ್ತು.

ಅವರ ಈ ಮನದಾಳದ ಸ್ಪಂದನೆಯೇ ಅವರನ್ನು ಸಾಹಿತಿಯನ್ನಾಗಿಸಿದ್ದು. ಅವರೊಂದು ರೀತಿಯಲ್ಲಿ ಜಾನಪದ ಸತ್ವದ ಲೇಖಕ. ಇದನ್ನು ನಾನು ಹೇಳುತ್ತಿರುವುದಕ್ಕೆ ಕಾರಣ, ಡ್ಯಾಮ್ ನಂತಹ ಬೃಹತ್ ಯೋಜನೆಯನ್ನು ಪ್ರಗತಿಯ ಸಂಕೇತವಾಗಿ ಮತ್ತು ಅದಕ್ಕಾಗಿ ಮುಳುಗಡೆಯಾಗಿ ಸ್ಥಳಾಂತರವಾಗುವ ಜನರು ಮಾಡುವ ತ್ಯಾಗ ನಾಡಿನ ಒಳಿತಾಗಿ ಇರುವುದರಿಂದ ‘ಮಾಡಲೇ ಬೇಕಾಗಿರುವುದು’ ಎಂಬ ಒತ್ತಡ ಮೂಲದ್ದಾಗಿ ಬಿಂಬಿತವಾಗುತ್ತಿದ್ದ ಕಾಲದಲ್ಲಿ ನಾ ಡಿಸೋಜ ಭಿನ್ನವಾಗಿ ಯೋಚಿಸಿದರು. ಇದನ್ನವರು ಜನರ ಅನುಭವಕ್ಕೆ ಸ್ಪಂದಿಸುವುದರ ಮೂಲಕ ‘ಕಂಡು ಕೊಂಡರು’. ಅಂದರೆ ಅಧಿಕಾರದ ಭಾಷೆಗೆ ಎದುರಾಗಿ ಜನರ ಭಾಷೆಗೆ ಕಿವಿಕೊಟ್ಟರು. ಹೀಗೆ ಮನೆ ಮಠ, ಆಸ್ತಿ ಪಾಸ್ತಿ ಕಳೆದುಕೊಳ್ಳುವ ‘ಹಳ್ಳಿ’ ಜನರ ಮಾತನ್ನು ಕೇಳುವ ಅವಶ್ಯಕತೆಯಾಗಲೀ, ಕೇಳುವ ಕಿವಿಗಳಾಗಲೀ ಇರಲೇ ಇಲ್ಲ. ನಾಡಿನ ಯೋಜನೆಗಳು, ನಾಡಿನ ಕಲಿತ ಅಧಿಕಾರಿಗಳು, ಸರ್ಕಾರದ ಯಜಮಾನಿಕೆಯ ಚಾಟಿಗಳು ಇವೆಲ್ಲವೂ ಪ್ರಶ್ನಾತೀತ ಮಾತ್ರವಲ್ಲ ಅವೆಲ್ಲಕ್ಕೂ ‘ಅಭಿವೃದ್ಧಿ’ಯ ಸರ್ಟಿಫಿಕೇಟ್ ಬೇರೆ ಇರುತ್ತದೆ. ಹೀಗಿರುವಾಗ ಈ ಅಲಕ್ಷಿತರ ಕಣ್ಣಿಂದ ಬದುಕನ್ನು ನೋಡುವ, ಜೀವನ ಪಾಠಗಳನ್ನು ಕಲಿಯುವ ಅಗತ್ಯವನ್ನು ಡಿಸೋಜ – ಅವರಿಗರಿವಿಲ್ಲದೆ, ಹಳ್ಳಿಗನ ಸಹಜ ಪ್ರಾಮಾಣಿಕತೆಯಲ್ಲಿ, ಲೋಕದ ಟೀಕೆ ಇತ್ಯಾದಿಗಳ ಬಗೆಗೆ ತಲೆಕೆಡಿಸಿಕೊಳ್ಳದೆ ಹೇಳಬೇಕಾದುದನ್ನು ಸರಳವಾಗಿ ಹೇಳಿದರು. ಅವರ ‘ಮುಳುಗಡೆ’ ಕಾದಂಬರಿ ಜನರ ಗಮನ ಸೆಳೆದದ್ದು ಇಂತಹ ನಡೆಯಿಂದಾಗಿ. ಹಾಗೆ ನೋಡಹೋದರೆ, ನಾ ಡಿಸೋಜರ ಕಥನಗಳು ಅವುಗಳ ವಸ್ತು ಮತ್ತು ಅದರ ಅಲಕ್ಷಿತ ನೆಲೆಯ ನೋಟಕ್ಕಾಗಿ ಮುಖ್ಯವೇ ಹೊರತು ಅವುಗಳ ತಂತ್ರ ಅಥವಾ ಕಲಾತ್ಮಕತೆಗಾಗಿ ಅಲ್ಲ. ಮುಳುಗಡೆ ಕಾದಂಬರಿಯು ಯಾವುದೇ ವಿಶೇಷ ನಿರೂಪಣಾ ತಂತ್ರವನ್ನು ಹೊಂದಿಲ್ಲ. ಬದಲಿಗೆ ಯಾರ ಕಣ್ಣಿಗೂ ಕಾಣದಿದ್ದ, ಕಂಡರೂ ಹೇಳಬೇಕೆನಿಸದಿದ್ದ, ಹೇಳಿದರೂ ಗಹನವಾದದ್ದು ಅನ್ನಿಸದ ವಿಚಾರಗಳನ್ನು ತಣ್ಣಗೆ ಹೇಳಲೇ ಬೇಕು ಎಂಬ ಒತ್ತಾಸೆಯಲ್ಲಿ ಹೇಳುತ್ತಾ ಹೋಗುತ್ತದೆ. ಅರೆ! ಹೌದಲ್ಲವೇ? ಎಂದು ಓದುಗರು ಭಾವಿಸುವಂತೆ ಮಾಡುತ್ತದೆ. ಇದು ಅವರ ಹೆಚ್ಚಿನ ಕೃತಿಗಳ ಮಾದರಿಯೂ ಆಗಿದೆ.

ಇದಲ್ಲದೆ ನನ್ನ ಗಮನ ಸೆಳೆದ ಇನ್ನೊಂದು ಅಂಶವೆಂದರೆ, ಅವರು ಯಜಮಾನಿಕೆಯ ಒಳಶ್ರೇಣೀಕರಣಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ‘ದ್ವೀಪ’ ಇದಕ್ಕೆ ಅತ್ಯುತ್ತಮ ಉದಾಹರಣೆ. ಒಂದೆಡೆ ಆಧುನಿಕ ಸಮಾಜ ‘ಹಳ್ಳಿಗ’ರ ಬದುಕಿನ ಹೆಣಿಗೆಗಳನ್ನು, ಸಾಹಸಗಳನ್ನು, ನಂಬಿಕೆಗಳನ್ನು, ಅರಿವುಗಳನ್ನು, ಪ್ರಾಮಾಣಿಕತೆಗಳನ್ನು ಲೇವಡಿ ಮಾಡುವ, ಉಡಾಫೆ ಮಾಡುವ, ನಿರ್ಲಕ್ಷಿಸುವ ಮತ್ತು ದಾಖಲೆಗಳಿಲ್ಲದ ಬದುಕುಗಳನ್ನು ನಿರಾಕರಿಸುವ ಕ್ರೌರ್ಯ ತೋರಿಸುವುದನ್ನು ಹೇಳುವ ಕತೆ ಜೊತೆ ಜೊತೆಗೇ ಹೆಣ್ಣುಜೀವವೊಂದು ತನ್ನ ಸೌಖ್ಯದಾಚೆಗೆ ಗಂಡ, ಮಾವನಿಗಾಗಿ ಅವರ ಜೊತೆ ಕೈಜೋಡಿಸುತ್ತಿರುವಾಗಲೂ ಮನೆಯೊಳಗಿನ ಯಜಮಾನಿಕೆ ಅವಳನ್ನು ಅನುಮಾನಿಸುವ ಕ್ರೌರ್ಯವನ್ನೂ ಹೇಳುತ್ತದೆ. ವಯಸ್ಸಾದ ತಂದೆ ಹೇಳುವ, “ನಾವು ಇಲ್ಲಿ ಬದುಕಿದ್ದೇ ಸುಳ್ಳಾ?” “ಕಾಡೆಲ್ಲ ನಮ್ದೇ. ಇದು ಸರಕಾರದ್ದು, ಇದು ನಮ್ದು ಅಂತ ಭೇದ ಇತ್ತಾ?” ಎನ್ನುವ ಮಾತಿನ ಹಿಂದಿರುವ ಒಳಗೊಳ್ಳುವಿಕೆಯ ಬಾಳನ್ನು ಅರ್ಥ ಮಾಡಿಕೊಳ್ಳದ ಆಧುನಿಕ ಸಮಾಜದ ಬಗೆಗಿನ ಖೇದ ಆ ಮನೆಯ ಸೊಸೆಯ ಖೇದಕ್ಕಿಂತ ಭಿನ್ನವಾದದ್ದಲ್ಲ. ವಲಸೆಯ ಸಂಕಟ ನಿನಗೆ ಅರ್ಥವಾಗುವುದಿಲ್ಲ ಎನ್ನುವ ಗಂಡನಿಗೆ ಆಕೆ, “ಇದನ್ನು ನನಗೆ ಹೇಳ್ತೀರಾ? ತವರು ಮನೆ ಬಿಟ್ಟು ಗಂಡನ ಮನೆಗೆ ನಾವು ಬತ್ತಿಲ್ಯ?” ಎನ್ನುತ್ತಾಳೆ. ಅವನು ಅದನ್ನು ತಳ್ಳಿ ಹಾಕುತ್ತಾನೆ. ಮಾತ್ರವಲ್ಲ, ಅವಳ ಅಂತಃಚೈತನ್ಯವನ್ನು ಮಾನ್ಯಮಾಡುವ ಮನಸ್ಸೇ ಅವನಲ್ಲಿ ಕಾಣಿಸುವುದಿಲ್ಲ.

ಕಾಗೋಡು ಚಳುವಳಿಯ ಹಿನ್ನೆಲೆಯಲ್ಲಿ ಬರೆದ ‘ಕೊಳಗ’, ಕಣಸೆ ಜಟ್ಟೆನಾಯಕನೆಂಬ ವ್ಯಕ್ತಿಯ ಕತೆಯಾಧರಿಸಿ ಬರೆದ ‘ಕುರ್ಚಿ’ ಕತೆ, ತಮ್ಮದೇ ಧರ್ಮದ ಹಿನ್ನೆಲೆಯಲ್ಲಿ ಬರೆದ ‘ಕೈತಾನ ಗಾಂಧಿ’ ಮತ್ತು ಇನ್ನೂ ಕೆಲವಾರು ಕತೆಗಳು, ಯಾವುದೇ ಹಿನ್ನೆಲೆಯ ಕತೆಯಾದರೂ ಅಲ್ಲಿ ಅವರು ಸಮಸ್ಯೆಯ ಇನ್ನೊಂದು ಮುಖವನ್ನು ಗುರುತಿಸುವ ರೀತಿ ಅವರು ಸದಾ ಸಾಮಾನ್ಯ ಜನರ ಏಜೆಂಟ್ ಆಗಲು ಬಯಸುತ್ತಿದ್ದುದನ್ನು ಹೇಳುತ್ತದೆ. ಶರಾವತಿ ಯೋಜನೆಯ ಕಚೇರಿಯಲ್ಲಿ ಯಾವುದೇ ಅಧಿಕಾರದ ಹುದ್ದೆಯಲ್ಲಿರದ ವ್ಯಕ್ತಿ ನಿರ್ಭಾವುಕ ದಾಖಲೆಗಳನ್ನು, ಆದೇಶಗಳನ್ನು ಟೈಪ್ ಮಾಡುತ್ತಿರುವಾಗಲೂ ತಮ್ಮ ಕಣ್ಣು ಕಿವಿ ಮನಸ್ಸುಗಳನ್ನು ಭಾವುಕತೆಯಿಂದ ವಿಮುಖಗೊಳಿಸಿಕೊಳ್ಳದೆ, ಅದೇ ಟೈಪಿಸುವಿಕೆಯಲ್ಲಿ ಅವರನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ತಲುಪುವ ಕಾಯಕ ಮಾಡುತ್ತಿದ್ದರು. ಅವರೇ ‘ಚಂದನ’ ವಾಹಿನಿಗೆ ಜಿ.ಎನ್.ಮೋಹನ್ ಮಾಡಿರುವ ಸಂದರ್ಶನದಲ್ಲಿ ಹೇಳಿದಂತೆ, ಶರಾವತಿ ಮತ್ತಿತರ ಯೋಜನೆಯ ಸಂತ್ರಸ್ತರು ಅವರ ಕಾದಂಬರಿಗಳನ್ನು ಓದಿ ಎಲ್ಲೆಲ್ಲಿಂದಲೋ ಬಂದು ಮಾತನಾಡಿಸಿ ‘ನಮ್ಮ ಕತೆಯನ್ನು ನೀವು ಬರೆದಿದ್ದಕ್ಕೆ’ ಧನ್ಯವಾದಗಳನ್ನು ಹೇಳಿದರಂತೆ. ಬಹುಶಃ ನಾ ಡಿಸೋಜ ಅವರೂ ಇದಕ್ಕಿಂತ ಹೆಚ್ಚಿನದನ್ನು ಬಯಸಿದವರಲ್ಲ. ಇದು ಇಬ್ಬರಿಗೂ ಪರಸ್ಪರ ಸಮಾಧಾನ ನೀಡುವ ಸಂತೈಸುವ ಸಂಗತಿಗಳಾಗಿರುತ್ತವೆ.

ಹಾಗೆ ನೋಡಹೋದರೆ, ಅಲಕ್ಷಿತ ವಲಯದ ಕಥನಗಳನ್ನು ಮುನ್ನೆಲೆಗೆ ತರುವುದು ಕನ್ನಡಕ್ಕೆ ಎಂದೂ ಹೊಸದಲ್ಲ. ಕುವೆಂಪು, ಕಾರಂತರ ಬರವಣಿಗೆಗಳು ಭಿನ್ನ ಓದುಗ ವಲಯವನ್ನು ಹೊಂದಿದ್ದವು. ಆದರೆ 60-70ರ ದಶಕದ ಕಾಲದಲ್ಲಿ ಜನಪ್ರಿಯ ಓದುಗ ವಲಯವು ವಿಸ್ತಾರಗೊಳ್ಳುತ್ತಾ ಹೋಯಿತು. ಆ ನಂತರದಲ್ಲಿ ಹಲವು ಮಾಸಿಕಗಳು, ವಾರಪತ್ರಿಕೆಗಳು, ದಿನದ ಬಾಡಿಗೆಯಲ್ಲಿ ನಡೆಯುತ್ತಿದ್ದ ಲೈಬ್ರೆರಿಗಳು ಓದುಗ ವಲಯವನ್ನು ವ್ಯಾಪಕವಾಗಿ ಹೆಚ್ಚಿಸಿದುವು. ಅಲ್ಲಿ ಬರುತ್ತಿದ್ದ ಪತ್ತೇದಾರಿ ಕತೆಗಳು, ವೈಭವೀಕೃತ ಕತೆಗಳು, ಮಧ್ಯಮವರ್ಗದ ಹುಸಿ ಪ್ರೇಮದ ಕತೆಗಳೇ ಆಳುತ್ತಿದ್ದ ಸಮುದ್ರಕ್ಕೆ ಸಬಾಲ್ಟರ್ನ್ ನೆಲೆಯ ನೈಜ ಕತೆಗಳ ಸರಳ ನದಿಯೊಂದು ಸೇರಿಕೊಂಡಂತೆ ಡಿಸೋಜರ ಬರಹಗಳು ಬಂದುವು. ಹೆಚ್ಚಾಗಿ ಒಂದೇ ಜಾತಿ ವರ್ಗದ ಕತೆಗಳೇ ಗಂಭೀರ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಅಕಡೆಮಿಕ್ ವಲಯದಾಚೆಗೆ ಡಿಸೋಜರಂತಹ ಬರಹ ಬಂದಿದ್ದನ್ನು ಈಗ ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಬರಹಗಳಲ್ಲಿ ಆಳಕ್ಕಿಂತ, ಸರಳ ನೇರ ಶೈಲಿ ಕಾಣಿಸುತ್ತದೆ. ಅದು ಬಹುಶಃ ಯಾವುದೇ ಸಾಹಿತ್ಯ ಪಂಥ, ಹಿನ್ನೆಲೆಯ ತರಬೇತಿ ಇಲ್ಲದೇ ಇರುವುದರಿಂದ ಆಗಿರಬಹುದು. ಮತ್ತು ಅದೇ ಅವರ ವಿಫುಲ ಬರವಣಿಗೆಗೆ ಕಾರಣವೂ ಆಗಿರಬಹುದು. ಆದರೆ ಅವರು ನಂಬಿದ್ದು, ‘ಸಾಹಿತ್ಯ ಮಾನವೀಯ ಸ್ಪಂದನೆ’ಯನ್ನು ಹೊಂದಿರಬೇಕು ಎಂಬ ನಂಬಿಕೆಯನ್ನು. ಅದನ್ನವರು ಬದುಕಿನುದ್ದಕ್ಕೂ ಅನುಸರಿಸಿದರು.

ಸಬಿತಾ ಬನ್ನಾಡಿ

 ಪ್ರಾಧ್ಯಾಪಕರು

ಇದನ್ನೂ ಓದಿ- ನುಡಿ ನಮನ |ಅಗಲಿದ ಸಂಗಾತಿಗಳ ಸಾಲಿಗೆ ಮತ್ತೊಬ್ಬರು…

More articles

Latest article