ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ನಿರ್ಮಾಣ ಘೋಷಿಸಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

Most read

‘ದೇಶದ ಸ್ಟಾರ್ಟ್‌ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದುʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಗುರುವಾರ ಹೇಳಿದ್ದಾರೆ.

ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ʼವೆಂಚುರೈಸ್ 24ʼ ಅನಾವರಣಗೊಳಿಸಿ ಅವರು ಮಾತನಾಡಿ, ಜಪಾನ್‌, ದಕ್ಷಿಣ ಕೊರಿಯಾಗಳ ಮಾದರಿಯಲ್ಲಿ ಈ ಸ್ಟಾರ್ಟ್‌ಅಪ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು. ಈ ಪಾರ್ಕ್‌ನಲ್ಲಿ ನವೋದ್ಯಮಗಳ ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ / ನಿವೇಶನ ಒದಗಿಸಲಾಗುವುದು. ಸಕಲ ಸೌಲಭ್ಯ ಸಜ್ಜಿತ, ಬಳಕೆಗೆ ಸಿದ್ಧ ಇರುವ ಕಚೇರಿಗಳು ಇಲ್ಲಿ ಇರಲಿವೆ. ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ ವಿನೂತನ ಆಲೋಚನೆಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರವನ್ನು ಇಲ್ಲಿ ಕಲ್ಪಿಸಿಕೊಡಲಾಗುವುದು ʼ ಎಂದರು.

ನವೋದ್ಯಮ ಸವಾಲು- ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಮಧ್ಯೆ ಸಂವಹನ ಒದಗಿಸುವ ಮೂಲಕ ತಯಾರಿಕೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಮಾಡಲಿದೆ. ‘ವೆಂಚುರೈಸ್-24ʼ ಕಾರ್ಯಕ್ರಮದ ಯಶಸ್ಸಿಗೆ ಟಿಐಇ ಗ್ಲೋಬಲ್‌ ಜೊತೆಗೆ ಕೈಜೋಡಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ. ಹೊಸ ಉಪಕ್ರಮಗಳನ್ನು ಪರಿಚಯಿಸುವ, ಮಾರ್ಗದರ್ಶನ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಈ ವರ್ಷದ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ನಾವು ಬದ್ಧರಾಗಿದ್ದೇವೆʼ ಎಂದು ಹೇಳಿದರು.

More articles

Latest article