ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಅಪರಾಧದಲ್ಲಿ ಭಾಗಿಯಾಗಿದ್ದ 98 ಜನರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿ ಇನ್ನು ಮೂವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಾಯಶಃ ಕರ್ನಾಟಕದ ನ್ಯಾಯಾಂಗದ ಇತಿಹಾಸದಲ್ಲೇ ಇದೊಂದು ಹೆಗ್ಗುರುತಿನ ತೀರ್ಪು (landmark judgement) ಎನ್ನಬಹುದು. ಮರಕುಂಬಿ ದೌರ್ಜನ್ಯ ಪ್ರಕರಣಕ್ಕಿಂತಲೂ ಕ್ರೂರವಾದ ದಲಿತ ದೌರ್ಜನ್ಯ ಪ್ರಕರಣಗಳು ಈ ನಾಡಿನಲ್ಲಿ ಈ ಹಿಂದೆ ನಡೆದಿದ್ದರೂ ಶೇಕಡಾ 99 ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗಿರುವ ಸಂದರ್ಭಗಳನ್ನೇ ಕಂಡಿದ್ದೇವೆ. ಘನಘೋರವಾದ ಕಂಬಾಲಪಲ್ಲಿ ದಲಿತರ ಸಜೀವ ದಹನ ಪ್ರಕರಣದಲ್ಲಿ ಸಹ ಅಪರಾಧಿಗಳಿಗೆ ಶಿಕ್ಷೆ ಆಗಲಿಲ್ಲ. ದಲಿತರ ಮೇಲೆ ಎಂತಹುದೇ ದೌರ್ಜನ್ಯ ನಡೆದರೂ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಮೂಡಿದ್ದ ಸನ್ನಿವೇಶದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಇಂತಿನ ತೀರ್ಪು ಬಹಳ ಮಹತ್ವ ಪಡೆದಿದೆ.
ಕಳೆದ ವಾರವಷ್ಟೇ ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಜಾಥಾ ನಡೆಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳಿಗೆ ಜಿಲ್ಲಾಡಳಿತ ಕುರುಡಾಗಿ ವರ್ತಿಸುತ್ತಿರುವ ಕುರಿತು ಧ್ವನಿ ಎತ್ತಿದ್ದರು. ಮರಕುಂಬಿ ದೌರ್ಜನ್ಯ ಪ್ರಕರಣಕ್ಕೆ ಮೊದಲು ಹಾಗೂ ನಂತರದಲ್ಲಿ ಅನೇಕ ದೌರ್ಜನ್ಯಗಳು ಇಲ್ಲಿ ಎಡೆಬಿಡದೇ ನಡೆಯುತ್ತಿದ್ದವು. ದೌರ್ಜನ್ಯ ಎಸಗಿದವರು ಯಾವುದೇ ಶಿಕ್ಷೆಯ ಭಯವಿಲ್ಲದೆ ಅಡ್ಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ಸಮಾಜದಲ್ಲಿ ವ್ಯಕ್ತಿಗಳು ಮಾಡುವ ಅಪರಾಧಗಳಿಗೆ ಶಿಕ್ಷೆಯೇ ಆಗುವುದಿಲ್ಲ ಎಂಬ ಅಭಯ ದೊರೆಯುವ ಪರಿಸ್ಥಿತಿ (ಇಂಪ್ಯುನಿಟಿ) ಇದ್ದರೆ ಆ ಸಮಾಜ ಮತ್ತಷ್ಟು ಕ್ರೌರ್ಯ, ದೌರ್ಜನ್ಯಗಳಿಗೆ ಕುಮ್ಮಕ್ಕು ನೀಡುತ್ತದೆ. ನಮ್ಮ ದೇಶದ ಜಾತಿ ದೌರ್ಜನ್ಯಗಳ ವಿಷಯದಲ್ಲಿ ಪ್ರಭುತ್ವಗಳು ಮತ್ತು ನ್ಯಾಯಾಲಯಗಳ ನಡವಳಿಕೆ ನೋಡಿದಾಗ ಈ ಬಗೆಯ ಇಂಪ್ಯುನಿಟಿಯೇ ಎದ್ದು ಕಾಣುತ್ತದೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಖೈರ್ಲಾಂಜಿ ಪ್ರಕರಣವೂ ಇದಕ್ಕೆ ಹೊರತಾಗಿರಲಿಲ್ಲ. ಒಂದು ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತಹ ಕ್ರೌರ್ಯ ಅಲ್ಲಿ ನಡೆದಿತ್ತು. ಒಂದಿಡೀ ಹಳ್ಳಿಯ ಮೇಲ್ಜಾತಿ ಜನರು ಒಂದು ದಲಿತ ಕುಟುಂಬದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಕೊಂದು ಹಾಕಿದ ಮೇಲೂ ಬಿಡದೇ ಅತ್ಯಾಚಾರ ಎಸಗಿದ್ದ ಭೀಬತ್ಸ ಕೃತ್ಯ ಅದು. ಆದರೆ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯೇ ಆಗಲಿಲ್ಲ.
ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ
ಮರಕುಂಬಿ ಗ್ರಾಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿದೆ. 2014ರ ಅಕ್ಟೋಬರ್ 28ರಂದು ಗಂಗಾವತಿಯ ಸಿನಿಮಾ ಟಾಕೀಸೊಂದರಲ್ಲಿ ʼಪವರ್ʼ ಸಿನಿಮಾ ನೋಡಲು ಹೋಗಿದ್ದ ಮರಕುಂಬಿ ದಲಿತ ಯುವಕರಿಗೂ ಸವರ್ಣೀಯರಿಗೂ ನಡುವೆ ಗಲಾಟೆಯಾಗಿದ್ದು. ಇದಾದ ತರುವಾಯ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ್ದ ಹೇಯ ಘಟನೆ ನಡೆದಿತ್ತು. ದಲಿತ ಮಹಿಳೆಯರ ಮೇಲೆ ಹಲ್ಲೆ ಇಟ್ಟಿಗೆ, ಕಲ್ಲು ಮತ್ತು ಬಡಿಗೆಗಳಿಂದ ಮನಬಂದಂತೆ ಥಳಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ ಪೊಲೀಸರು ಹಲ್ಲೆ ನಡೆಸಿದವರನ್ನು ಬಂಧಿಸಿರಲಿಲ್ಲ. ಈ ಪ್ರಕರಣದಲ್ಲಿ ನಂತರ 117 ಆರೋಪಿಗಳ ಮೇಲೆ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ಮೆಟ್ಟಿಲು ಹತ್ತಿದ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ದೊಡ್ಡ ವೀರೇಶಪ್ಪ ಎಂಬ ದಲಿತ ಕಾರ್ಯಕರ್ತ ಕೊಪ್ಪಳದ ರೈಲು ಹಳಿಗಳ ಪಕ್ಕ ಶವವಾಗಿ ದೊರೆತಿದ್ದ.
ಮರಕುಂಬಿ ಗ್ರಾಮದಲ್ಲಿ ಈ ಬಗೆಯ ದಲಿತ ದೌರ್ಜನ್ಯ ಇದೇ ಮೊದಲೇನೂ ಆಗಿರಲಿಲ್ಲ. 2014ರ ಆಗಸ್ಟ್ 14ರಂದು ಜನಶಕ್ತಿ ಮಾಧ್ಯಮವು ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸುವುದಾದರೆ, ‘ಮರಕುಂಬಿ ಗ್ರಾಮದ ಸುಮಾರು 60 ಕುಟುಂಬಗಳ ಸದಸ್ಯರು ಈ ಊರಿನಲ್ಲಿರುವ ಕ್ಷೌರದಂಗಡಿಗಳಲ್ಲಿ ಕ್ಷೌರ ಮಾಡಿಸಿಕೊಳ್ಳಲು ಆ ಊರಿನ ಸವರ್ಣೀಯ ಜಮೀನ್ದಾರರು ಬಿಡುವುದಿಲ್ಲ. ದಲಿತರು ಹೊಟೆಲ್ ಗಳಿಗೆ ಹೋಗಲು ಬಿಡುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಅಂಗಡಿ ಸಾಮಾನು ಸಿಗದೆ, ಶಾಲೆಗೆ ಹೋಗುವ ದಲಿತ ಮಕ್ಕಳಿಗೆ ಆಟೋದಲ್ಲಿ ಪ್ರಯಾಣ ಮಾಡುವುದಕ್ಕೆ ಅಡ್ಡಿ ಮಾಡಲಾಗಿತ್ತು. ಈ ಕುರಿತು ಸಿಪಿಎಂ ಮತ್ತು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಅನೇಕ ಸಲ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು, ಮರಕುಂಬಿಯಿಂದ ಗಂಗಾವತಿ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ತಾಲ್ಲೂಕು ಅಧಿಕಾರಿಗಳು ದಲಿತರಿಗೆ ನ್ಯಾಯ ಕೊಡಿಸುವ ಬದಲಿಗೆ ಆ ಊರಿನಲ್ಲಿದ್ದ ಕ್ಷೌರದ ಅಂಗಡಿ ಮತ್ತು ದಲಿತರಿಗೆ ಟೀ ತಿಂಡಿ ನೀಡಲು ನಿರಾಕರಿಸಿದ್ದ ಗಂಗಾಧರ ಸ್ವಾಮಿ ಎಂಬುವವರ ಹೊಟೆಲುಗಳನ್ನ ತೆರವುಗೊಳಿಸಿ ʼಸಮಸ್ಯೆ ಪರಿಹಾರ ಆಗಿದೆʼ ಎಂದು ಘೋಷಿಸಿದ್ದರು! ಇದರಿಂದ ಅಧಿಕಾರಿಗಳೇ ಸಾಮಾಜಿಕ ಬಹಿಷ್ಕಾರಕ್ಕೆ ಕುಮ್ಮಕ್ಕು ನೀಡಿದಂತಾಗಿತ್ತು. ಜುಲೈ 23, 2014ರಂದು ಗಂಗಾವತಿಯಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಲಾಗಿತ್ತು. ಮರಕುಂಬಿ ಮಾತ್ರವಲ್ಲದೆ ಸುತ್ತಲಿನ ಹಳ್ಳಿಗಳ ಜನರೂ ಇದರಲ್ಲಿ ಭಾಗವಹಿಸಿದ್ದರು. ಅಂದು ಜಿಲ್ಲಾಧಿಕಾರಿಗಳು ಬಾಯಿಮಾತಿನಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದು ಬಿಟ್ಟರೆ ಮಾಡಿದ್ದು ಸೊನ್ನೆ’. ಇದೇ ದೌರ್ಜನ್ಯ ಎಸಗುವವರಿಗೆ ಕುಮ್ಮಕ್ಕು ನೀಡಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಹಲ್ಲೆ ನಡೆಸಿದ್ದರು. ಆ ಹಲ್ಲೆ ಪ್ರಕರಣದ ವಿಚಾರಣೆ ಬರೋಬ್ಬರಿ ಹತ್ತು ವರ್ಷಗಳವರೆಗೆ ನಡೆದು ಅಂತಿಮವಾಗಿ ನೆನ್ನೆ ತೀರ್ಪು ಹೊರಬಿದ್ದಿದೆ.
ಈಗ ದೋಷಿಗಳು ತಮ್ಮನ್ನು ನಿರ್ದೋಷಿಗಳೆಂದು ಸಾಧಿಸಿಕೊಳ್ಳಲು ಮತ್ತೆ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು. ಮತ್ತೆ ಅಲ್ಲಿ ವಿಚಾರಣೆ ನಡೆಯಬಹುದು. ಅದೇನೇ ಇರಲಿ, ದಲಿತರ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ಈ ಪ್ರಕರಣದ ತೀರ್ಪು ನಿಜಕ್ಕೂ ಒಂದು ಮೈಲಿಗಲ್ಲಾಗಲಿದೆ.
ಇಂದು ಅಟ್ರಾಸಿಟಿ ಕಾಯ್ದೆಯ ದುರ್ಬಳಕೆ ಕುರಿತು ಅವ್ಯಾಹತವಾದ ಅಪಪ್ರಚಾರ ನಡೆಯುತ್ತಿದೆ. ಎಲ್ಲೋ ಕೆಲವು ಪ್ರಕರಣಗಳಲ್ಲಿ ಅಟ್ರಾಸಿಟಿ ಕಾಯ್ದೆಯನ್ನು ಬಳಸಿಕೊಂಡು ಕೆಲವರು ದಂದೆ ನಡೆಸುತ್ತಿರುವುದನ್ನು ತೋರಿಸಿ ಈ ಕಾಯ್ದೆಯೇ ರದ್ದಾಗಬೇಕು ಎಂಬ ಮಟ್ಟಕ್ಕೆ ಅಭಿಪ್ರಾಯ ಮೂಡಿಸುವ ಕೆಲಸ ನಡೆಯುತ್ತಿದೆ. ಆದರೆ ಇಂದು ಪ್ರತಿನಿತ್ಯವೂ ಒಂದಿಲ್ಲೊಂದು ಕಡೆಯಲ್ಲಿ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೇ ಇದೆ. ಎರಡು ವಾರಗಳ ಹಿಂದಷ್ಟೇ ಬೆಂಗಳೂರಿನ ದಲಿತ ಸಮುದಾಯಕ್ಕೆ ಸೇರಿದ ಪೌರ ಕಾರ್ಮಿಕ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯೊಬ್ಬ ಜಾತಿನಿಂದನೆ ಮಾಡಿದ್ದ ಪ್ರಕರಣ ದಾಖಲಾಗಿದೆ. ಎಷ್ಟೋ ಸಲ ಗಂಭೀರ ದೌರ್ಜನ್ಯ ಪ್ರಕರಣಗಳು ದಾಖಲಾಗುವುದೇ ಇಲ್ಲ.
2017ರಲ್ಲಿ ತುಮಕೂರಿನ ಗುಬ್ಬಿಯಲ್ಲಿ ಅಭಿಷೇಕ್ ಎಂಬ ಯುವಕನನ್ನು ಬೆತ್ತಲುಗೊಳಿಸಿ, ಚಪ್ಪಲಿ ಹಾರ ಹಾಕಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿ ಅದನ್ನು ವಿಡಿಯೋ ಮಾಡಿ ವೈರಲ್ ನಡೆಸಲಾಗಿತ್ತು. ಅಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರು ಚಲೋ ನಡೆದು ಸಹಸ್ರಾರು ದಲಿತರು ಹಾಗೂ ಪ್ರಗತಿಪರರು ಅಣಿನೆರೆದಿದ್ದರು. ದಲಿತ ಸಾಹಿತಿ ದಿ. ಕೆ ಬಿ ಸಿದ್ದಯ್ಯ ಅಂದು ವೇದಿಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಜಿಗ್ನೇಶ್ ಮೇವಾನಿ ಅಂದು ಬಂದಿದ್ದರು. ಆದರೆ ಆ ದಲಿತ ಯುವಕ ಅಭಿಷೇಕ್ ಕುಟುಂಬ ಇಂದಿಗೂ ಚೇತರಿಸಿಕೊಂಡಿಲ್ಲ. ಅಭಿಷೇಕ್ ಮೇಲೆ ನಡೆದಿದ್ದ ಹಲ್ಲೆ ಯಾವ ಪರಿ ಇತ್ತೆಂದರೆ ಇಂದಿಗೂ ಅವನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೋರಾಟದ ಪರಿಣಾಮವಾಗಿ ಪ್ರಕರಣ ದಾಖಲಾಗಿ ಇಂದಿಗೂ ವಿಚಾರಣೆ ನಡೆಯುತ್ತಿದೆ. ಈ ನಡುವೆ ಕುಟುಂಬ ಸಾಕಷ್ಟು ಒತ್ತಡ, ಬೆದರಿಕೆ, ಆಮಿಷ ಎಲ್ಲವನ್ನೂ ಎದುರಿಸಿ ನಿಂತಿದೆ. ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ನಿಸ್ಪೃಹ ಮನಸ್ಸಿನ ನ್ಯಾಯವಾದಿಗಳು ಮಾತ್ರ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಎಂತಹ ನ್ಯಾಯತೀರ್ಪು ಬರಲಿದೆ ಎಂಬುದನ್ನು ಕಾಲವೇ ಹೇಳಬೇಕು.
ಕೆಲವು ತಿಂಗಳ ಹಿಂದೆ ಕೋಲಾರದ ನಂಗಲಿಯಲ್ಲಿ ನಡೆದ ಘಟನೆ ಇನ್ನೇನು? ದಲಿತ ಯುವಕನೊಬ್ಬ ಒಕ್ಕಲಿಗ ಯುವಕನ ಬೈಕ್ ಹಿಂದಿಕ್ಕಿ ಹೋಗಿದ್ದೇ ಅಪರಾಧವಾಗಿ ನಾಲ್ವರು ಸೇರಿಕೊಂಡು ದಲಿತ ಯುವಕನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದರು. ಇದರಿಂದ ಮನಸ್ಸಿಗೆ ಘಾಸಿಗೊಂಡಿದ್ದ ದಲಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮಾಜದ ಜಾತಿಗ್ರಸ್ಥ ಮನಸ್ಥಿತಿಗೆ ಕನ್ನಡಿ ಹಿಡಿಯಿತು.
ಇಡೀ ರಾಜ್ಯದಲ್ಲಿ ಇಂತಹ ನೂರಾರು, ಸಾವಿರಾರು ಪ್ರಕರಣಗಳಿವೆ. ಆದರೆ ನಿಜಕ್ಕೂ ಇಂತಹ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳ ಮೂಲಕ ನ್ಯಾಯ ದೊರೆಯುವುದು ಮರೀಚಿಕೆಯೇ ಆಗಿಬಿಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಮರಕುಂಬಿ ದಲಿತ ದೌರ್ಜನ್ಯ ಪ್ರಕರಣದಲ್ಲಿನ ನ್ಯಾಯತೀರ್ಪು ಮರುಭೂಮಿಯೊಳಗಿನ ಓಯಸಿಸ್ ನಂತೆ ತೋರುತ್ತಿದೆ. ಮರಕುಂಬಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯ ಕೊಲೆಯೇ ನಡೆದಿದೆ ಎಂಬುದು ನಿಜಕ್ಕೂ ಬೆಚ್ಚಿ ಬೀಳಿಸುವ ಸಂಗತಿ. ನಿಜವಾದ ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾ ಅಧಿಕಾರಿಗಳು, ಸಾಕ್ಷಿಗಳು ಮತ್ತು ಸರ್ಕಾರಿ ವಕೀಲರು ಸಂವಿಧಾನಕ್ಕೆ ಬದ್ಧರಾಗಿ, ಪ್ರಾಮಾಣಿಕರಾಗಿ ಕಾರ್ಯ ನಿರ್ವಹಿಸಿದರೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ಕಷ್ಟವಲ್ಲ. ಅಪರಾಧ ಎಸಗಿದವರು ಒಬ್ಬನಿರಲಿ, ಇಬ್ಬರಿರಲಿ, ಒಂದು ಇಡೀ ಊರಿನ ಸವರ್ಣೀಯರೇ ಇರಲಿ, ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಿಯೇ ತೀರುತ್ತಾರೆ ಎಂಬ ಅಭಿಪ್ರಾಯ ಬಂದರೆ ಶಿಕ್ಷೆಯ ಭಯದಿಂದಲಾದರೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ.
ಈ ಹಿನ್ನೆಲೆಯಲ್ಲಿ ಸಂವಿಧಾನ ಪ್ರೇಮಿಗಳೆಲ್ಲರೂ ಈ ಚಾರಿತ್ರಿಕ ನ್ಯಾಯ ತೀರ್ಪನ್ನು ಸ್ವಾಗತಿಸಬೇಕು
- ಹರ್ಷಕುಮಾರ್ ಕಗ್ವೆ