Thursday, December 12, 2024

‘ಕರ್ನಾಟಕದಲ್ಲಿದ್ದ ಮೇಲೆ ಕನ್ನಡದ ನಾಮ ಫಲಕಗಳನ್ನು ಪ್ರದರ್ಶಿಸಲೇಬೇಕು’ : ಹೈಕೋರ್ಟ್‌ ಸೂಚನೆ

Most read

ಬೆಂಗಳೂರು: “ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಲೇಬೇಕು,” ಎಂದು ಹೈಕೋರ್ಟ್‌ ಸೂಚನೆ ಹೊರಡಿಸಿದೆ. ಆ ಮೂಲಕ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಆದ್ಯತೆ ಎಂಬ ರಾಜ್ಯ ಸರಕಾರದ ಆಶಯವನ್ನು ಹೈಕೋರ್ಟ್ ಬೆಂಬಲಿಸಿದೆ.

ಅಲ್ಲದೆ, ನ್ಯಾಯಾಲಯ ವಾಣಿಜ್ಯ ಮತ್ತು ಇತರೆ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಶೇ. 60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಲೇಬೇಕೆಂಬ ಸರಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಭಾರತೀಯ ರೀಟೇಲರ್ಸ್‌ ಅಸೋಸಿಯೇಷನ್‌ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ- 2022ಗೆ ತಿದ್ದುಪಡಿ ತರುವ ಮೂಲಕ 2024ರ ಫೆ.26ರಂದು ಸರಕಾರ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ಬೋರ್ಡ್‌ಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲೇಬೇಕೆಂದು ಆದೇಶ ಹೊರಡಿಸಿತ್ತು.

ಅದನ್ನು ಪ್ರಶ್ನಿಸಿ ಭಾರತೀಯ ರೀಟೇಲರ್ಸ್‌ ಅಸೋಸಿಯೇಷನ್‌ ಸೇರಿ ಹಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳು ನ್ಯಾ. ಹೇಮಂತ್‌ ಚಂದನ ಗೌಡರ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದವು.

ಆಗ ಅರ್ಜಿದಾರರ ಪರ ವಕೀಲರು, “ನ.1ರಂದು ಕನ್ನಡ ರಾಜ್ಯೋತ್ಸವ ಇದೆ. ಅನಂತರ ರಾಜ್ಯದಲ್ಲಿ ಕನ್ನಡ ಅಭಿಯಾನ ಆರಂಭವಾಗಲಿದೆ. ಹಾಗಾಗಿ, ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸಬೇಕು,” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆಗ ಪ್ರಕರಣದ ದಾಖಲೆಗಳನ್ನು ಗಮನಿಸಿದ ನ್ಯಾಯಮೂರ್ತಿ, ”ವಾಣಿಜ್ಯ ಸಂಸ್ಥೆಗಳು ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದ ಮೇಲೆ ನೀವು ಕನ್ನಡ ಭಾಷೆಯಲ್ಲಿಯೇ ಸೂಚನಾ ಫಲಕಗಳನ್ನು ಪ್ರದರ್ಶಿಸಲೇಬೇಕು. ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗದು,” ಎಂದು ಮೌಖಿಕವಾಗಿ ಹೇಳಿದರು. ಅಲ್ಲದೆ, ಕನ್ನಡ ಭಾಷಾ ರಕ್ಷಣೆ ಸಂಬಂಧ ಶ್ರಮಿಸುತ್ತಿರುವ ಕನ್ನಡ ರಕ್ಷಣಾ ವೇದಿಕೆಯ ಹೋರಾಟವನ್ನು ಪ್ರಸ್ತಾಪಿಸಿದರು.

ಕಳೆದ ವರ್ಷ ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಐತಿಹಾಸಿಕ ಚಳವಳಿ ನಡೆದಿತ್ತು. ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಸಾವಿರಾರು ಕರವೇ ಕಾರ್ಯಕರ್ತರು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಇಂಗ್ಲಿಷ್ ನಾಮಫಲಕಗಳನ್ನು ಒಡೆದು ಹಾಕಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈ ಅಭೂತಪೂರ್ವ ಹೋರಾಟದ ಪರಿಣಾಮವಾಗಿ ರಾಜ್ಯ ಸರ್ಕಾರ ಅಂಗಡಿ ಮುಂಗಟ್ಟುಗಳ ಮುಂದೆ ಶೇ.60ರಷ್ಟು ಕನ್ನಡ ಅಕ್ಷರಗಳಲ್ಲಿ ನಾಮಫಲಕ, ಜಾಹೀರಾತು ಫಲಕ ಅಳವಡಿಸುವಂತೆ ಆದೇಶ ಹೊರಡಿಸಿತ್ತಲ್ಲದೆ, ಮೇಲ್ಭಾಗದಲ್ಲಿ ಕನ್ನಡ ಇರಬೇಕು ಎಂದು ನಿಯಮಾವಳಿ ರೂಪಿಸಿತ್ತು.

ತುರ್ತು ವಿಚಾರಣೆ ಮನವಿಯನ್ನು ನಯವಾಗಿಯೇ ತಳ್ಳಿಹಾಕಿದ ನ್ಯಾಯಾಲಯ, ಕಳೆದ ಮಾರ್ಚ್‌ 18ರಂದು ನೀಡಿದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂಬ ಮಧ್ಯಂತರ ಆದೇಶ ಮುಂದುವರಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ “ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವ ಸಂಸ್ಥೆಗಳು ಕನ್ನಡ ಭಾಷೆ ಆದೇಶ ಪಾಲಿಸಬೇಕಾಗುತ್ತದೆ. ಇಲ್ಲಿನ ನೀರು, ವಿದ್ಯುತ್‌, ಭೂಮಿ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವ ನೀವು ಕನ್ನಡದ ವಿಚಾರದಲ್ಲಿ ಏಕೆ ಹಿಂದೇಟು ಹಾಕುತ್ತೀರಿ” ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ”ಸೂಚನಾ ಫಲಕಗಳಲ್ಲಿ ಶೇ. 60ರಷ್ಟು ಕನ್ನಡವಿಲ್ಲದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಿಸುವುದು ಸರಿಯಲ್ಲ. ಮೇಲ್ನೋಟಕ್ಕೆ ಇದನ್ನು ಒಪ್ಪಲಾಗದು. ಸಂಸ್ಥೆಗಳಿಗೆ ಸ್ವಲ್ಪ ಕಾಲಾವಕಾಶ ನೀಡಬೇಕಾಗುತ್ತದೆ,” ಎಂದು ಹೇಳಿತ್ತು.

ಅಲ್ಲದೆ, ಸದ್ಯಕ್ಕೆ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಾರ್ಚ್‌ 18ರಂದು ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಮುಂದೂಡಿತ್ತು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ 2022ಕ್ಕೆ 2024ರಲ್ಲಿ ಮಾಡಿರುವ ತಿದ್ದುಪಡಿಯನ್ನು ಅರ್ಜಿದಾರರು ಪ್ರಶ್ನಿಸಿದ್ದು, ಅದು ಅಸಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಟ್ರೇಡ್‌ ಮಾರ್ಕ್ ಕಾಯಿದೆಗೆ ವಿರುದ್ಧವಾಗಿದೆ. ಹಾಗಾಗಿ, ತಿದ್ದುಪಡಿ ರದ್ದುಗೊಳಿಸಬೇಕೆಂದು ಕೋರಿದ್ದಾರೆ. ಅಲ್ಲದೆ, 2009ರ ಜೂನ್‌ನಲ್ಲೂ ಸರಕಾರ ಇಂತಹುದೇ ಪ್ರಯತ್ನ ನಡೆಸಿತ್ತು. ಆದರೆ, ನ್ಯಾಯಾಲಯ ಅದನ್ನು ರದ್ದುಪಡಿಸಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನಿಯಮ ಸಡಿಲಿಕೆ

ಹೈಕೋರ್ಟ್‌ ಮಧ್ಯಂತರ ಆದೇಶದ ನಂತರ ಸರಕಾರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಜರುಗಿಸುವುದನ್ನು ಸ್ಥಗಿತಗೊಳಿಸಿ ತನ್ನ ನಿಲುವನ್ನು ಸ್ವಲ್ಪ ಸಡಿಲಿಕೆ ಮಾಡಿತ್ತು. ಹಾಗಾಗಿ, ಮಾರ್ಚ್ನಿಂದೀಚೆಗೆ ಕನ್ನಡ ನಾಮಫಲಕ ವಿವಾದ ಸ್ವಲ್ಪ ತಣ್ಣಗಾಗಿತ್ತು.

More articles

Latest article