Thursday, December 12, 2024

ಮನು ಬಂದೌನೆ ದಾರಿ ಬಿಡಿ…

Most read

ಅಂಬೇಡ್ಕರರು ಸಾಕಷ್ಟು ಅಧ್ಯಯನ ನಡೆಸಿ ಬರೆದಂತಹ ನಮ್ಮೀ ಘನ ಸಂವಿಧಾನದಿಂದ ಸ್ವಾತಂತ್ರ್ಯಾನಂತರ ’ನಮ್ಮನ್ನು’  ಗೌರವಿಸುವಂತಿಲ್ಲ ಎನ್ನುವವರ ಸಮುದಾಯದ ಎಷ್ಟು ಮಂದಿ ಪ್ರಧಾನಿಗಳಾಗಿದ್ದಾರೆ, ರಾಷ್ಟ್ರ ಪತಿಗಳಾಗಿದ್ದಾರೆ, ನ್ಯಾಯಾಧೀಶರು, ರಾಯಭಾರಿಗಳು, ಸರಕಾರಿ ಸಂಸ್ಥೆಯ ಮುಖ್ಯಸ್ಥರು, ಉದ್ಯೋಗಿಗಳು ಆಗಿದ್ದಾರೆ ಎಂಬುದನ್ನು ಯೋಚಿಸಿ ನೋಡಲಿ- ಶಂಕರ್‌ ಸೂರ್ನಳ್ಳಿ.

ಸಾಮಾನ್ಯವಾಗಿ ಕೆಲವರು ಯಾವುದೋ ಗೌಪ್ಯ ಯೋಜನೆ ಅಥವಾ ತಂತ್ರಕ್ಕೆ ಮುಂದಾದಾಗ ಡಂಗುರ ಬಾರಿಸಿಕೊಂಡು ಊರಿಡೀ ಅದನ್ನು ಹೇಳಿಕೊಳ್ಳುತ್ತಾ ಮುಂದುವರೆದರೆ ಮತ್ತೆ ಕೆಲವರು ತಂತ್ರ ಯಶಸ್ವಿಯಾಗುವ ತನಕ ವಾಸ್ತವತೆ ಹೊರಬರದಂತೆ ನೋಡಿಕೊಂಡು ಜಯ ಸಾಧಿಸುತ್ತಾರೆ. ಅಂದರೆ, ಸದಾ ಸುದ್ದಿಯಲ್ಲಿರುವವರೇ ಬೇರೆ ನಿಜವಾದ ಸುದ್ದಿ ಮಾಡುವವರೇ ಬೇರೆ ಇರುತ್ತಾರೆ. ಗುರಿ ಸಾಧಿಸಲೇ ಬೇಕೆಂದು ನಿಜವಾದ ತಂತ್ರಗಾರಿಕೆಗೆ ಇಳಿಯುವವರ ದಾರಿ ಯಾವತ್ತಿಗೂ ನಿಗೂಢ ಮತ್ತು ಯೋಜಿತವಾಗಿಯೇ ಇರುತ್ತದೆ. ಸದ್ಯಕ್ಕೆ ಇದನ್ನು ಮನುಶಾಸನವಾದಿಗಳ ಬಗ್ಗೆ ಉಲ್ಲೇಖಿಸಬಹುದು

ದೇಶಕ್ಕೆ ಸಂಬಂಧಿಸಿದ ಸಂಗತಿಯಾದರೂ ಇದನ್ನು ಸ್ಥಳೀಯವಾಗಿ ರಾಜ್ಯದ ವಿಚಾರದಲ್ಲೇ ನೋಡೋಣ. ಇತ್ತೀಚೆಗೆ ಕೆಲ ಬ್ರಾಹ್ಮಣವಾದಿಗಳ ಸಮೂಹ ಡಾ. ಬಾಬಾ ಸಾಹೇಬರನ್ನು ಇನ್ನಿಲ್ಲದಂತೆ ಹಾಡಿ ಹೊಗಳುತ್ತಾ ತಮ್ಮ ಹಳಸಲು ಸರಕನ್ನೇ ಬಿತ್ತ ಹೊರಟಿದ್ದರು. (ಮನದಲ್ಲಿ ಅಸಹನೆ ಇದ್ದರೂ ತಾವೇ ಅಂಬೇಡ್ಕರರ ಕಟ್ಟಾ ಅಭಿಮಾನಿಗಳು ಎಂಬಂತೆ) ತಮ್ಮದೇ ನೆಲೆಗಟ್ಟಿನಿಂದ ಅವರನ್ನು ವಾಖ್ಯಾನಿಸುತ್ತಾ ಜನರಲ್ಲಿ ಮುಖ್ಯವಾಗಿ ಯುವಜನತೆಯಲ್ಲಿ ಅಂಬೇಡ್ಕರರ ಬಗ್ಗೆ ಬೇರೆಯದೇ ಆದ ಚಿತ್ರಣವನ್ನು ತುಂಬ ಹೊರಟಿರುವುದನ್ನು ಇಲ್ಲಿ ಗಮನಿಸಬಹುದು. ಅಂಬೇಡ್ಕರರಿಗೆ ಮುಸಲ್ಮಾನರ ಬಗ್ಗೆ ಒಲವಿರಲಿಲ್ಲ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಯಸಿದ್ದರು (ದಲಿತರು ಮುಸಲ್ಮಾನರು ಒಟ್ಟಾಗಬಾರದೆಂಬ ದುರುದ್ದೇಶ ಇದರ ಹಿಂದಿದೆ), ಅಂಬೇಡ್ಕರರಿಗೆ ಕಾಂಗ್ರೆಸ್‌ ಸಿಕ್ಕಾಪಟ್ಟೆ ಮೋಸ ಮಾಡಿತು (ಆವತ್ತು ಅಸಲಿಗೆ ಇದ್ದದ್ದು ಒಂದೇ ಪಕ್ಷ. ಉಳಿದವೆಲ್ಲ ಇದ್ದೂ ಇಲ್ಲದಂತಿದ್ದವು. ಪ್ರಮುಖ ರಾಜಕೀಯ ಪಕ್ಷ ಎಂಬ ನೆಲೆಯಲ್ಲಿ ಬಹುತೇಕ ಎಲ್ಲಾ ಸಿದ್ಧಾಂತದವರೂ ಕೂಡ ಅಲ್ಲೇ ಇದ್ದರು. ಬಳಿಕ ಅಂತವರು ಬೇರೆಯದೇ ಪಕ್ಷ ಕಟ್ಟಿದ್ದು ಇತಿಹಾಸ. ಕಾಂಗ್ರೆಸ್‌ನಲ್ಲಿದ್ದ “ಇಂತಹವ”ರಿಂದ ಅಂಬೇಡ್ಕರ್ ದೂರವಾಗುವಂತಾಯ್ತೇ ವಿನಃ ಕೇವಲ ಕಾಂಗ್ರೆಸ್ ನಿಂದಲ್ಲ. ಕಾಂಗ್ರೆಸ್‌ ನಾಯಕ ಪ್ರಧಾನಿ ನೆಹರೂ ಒಂದು ವೇಳೆ ಸಂವಿಧಾನ ಸಮಿತಿಯಲ್ಲಿ ಅಂಬೇಡ್ಕರರಿಗೆ ಅಂದು ಅವಕಾಶವನ್ನೇ ಕೊಡದಿರುತ್ತಿದ್ದರೆ ಇವತ್ತಿನ ಅಂಬೇಡ್ಕರ್ ನಮಗೆ ಸಿಗುತ್ತಲೇ ಇರಲಿಲ್ಲ ಎನ್ನುವುದು ವಾಸ್ತವ) ಇತ್ಯಾದಿ.

ನಂತರ ಕರಾವಳಿಯ ಓರ್ವ ಬ್ರಾಹ್ಮಣ ಸ್ವಾಮೀಜಿ ಜಾತ್ಯತೀತ ರಾಷ್ಟ್ರವೆಂದ ಮೇಲೆ ಜಾತಿ ಆಧಾರಿತ ಮೀಸಲಾತಿ ಯಾಕೆ ಎಂದು ರೊಳ್ಳೆ ತೆಗೆದು ಸುದ್ದಿ ಮಾಡಿದ್ದರು. ಬಳಿಕ ಆ ವ್ಯಕ್ತಿಯೇ ಇತ್ತೀಚೆಗೆ ನಮಗೆ ನಮ್ಮನ್ನು ಗೌರವಿಸುವಂತಹ ಸಂವಿಧಾನ ಬೇಕು ಅರ್ಥಾತ್ ಈಗಿನದ್ದು ಸರಿಯಿಲ್ಲ ಎನ್ನುವಂತಹ ಹೇಳಿಕೆ ನೀಡಿ ಮತ್ತೊಂದು ಚರ್ಚೆಗೆ ಕಾರಣರಾದರು. ಮೇಲಿನ ವಿಚಾರಗಳೆಲ್ಲ ಆಗಾಗ ಮುನ್ನೆಲೆಗೆ ಬಂದು ಚರ್ಚೆಗೆ ಗ್ರಾಸವಾಗುವುದು ಹೊಸತೇನಲ್ಲ. ಆದರೂ ಇಂತಹ ವಿಚಾರಗಳನ್ನು ಕೆಲ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಬೇಕೆಂತಲೇ  ಮುನ್ನೆಲೆಗೆ ತಂದು ಹರಿಯಬಿಡುತ್ತಿರುವುದರ ಹಿಂದೆ ಯಾವುದೋ ಒಂದು ಅಜೆಂಡಾ ಇದ್ದಿರುವುದು ಸ್ಪಷ್ಟ.

ಭಾರತದಂತಹ ಶತಶತಮಾನಗಳ ಕಾಲ ವೈವಿಧ್ಯತೆಯನ್ನು ಹೊದ್ದು ಬೆಳೆದಂತಹ ರಾಷ್ಟ್ರದಲ್ಲಿ ಯಾವುದೋ ಒಂದು ಸಿದ್ಧಾಂತದ ಬಲವಂತದ ಹೇರಿಕೆ ಸುಲಭದ ಮಾತಲ್ಲ. ಹಿಂದೆ ಅಮೀಬಾದಂತೆ ಕಾಲ ಕಾಲಕ್ಕೆ ಬದಲುಗೊಳ್ಳುತ್ತಲಿದ್ದ ಪ್ರಾದೇಶಿಕ ಬಾಹ್ಯ ರೂಪಗಳ ಚಿತ್ರಣ ಈಗಿಲ್ಲ. ಆವತ್ತು ಒಬ್ಬ ರಾಜನ ಕಾಲದಲ್ಲಿ ರಾಜ್ಯ ವಿಸ್ತಾರಗೊಂಡರೆ ಆತನ ಮಗನ ಕಾಲದಲ್ಲಿ ಅದು ಮತ್ತೊಬ್ಬನ ಪಾಲಿನಲ್ಲಿರುತ್ತಿತ್ತು. ಸಾಮಂತನ ಮಗ ಸಾಮ್ರಾಟನಾಗಿ ಮೆರೆಯಲೂ ಬಹುದು. ಒಟ್ಟಾರೆ ರಾಜ್ಯ ಮತ್ತು ರಾಜ್ಯಾಧಿಕಾರಗಳಿಗೆ ನಿರ್ದಿಷ್ಟತೆಯೆಂಬುದೇ ಇದ್ದಿರಲಿಲ್ಲ. ಇಂತಹ ನೂರಾರು ರಾಜರುಗಳಿದ್ದ ಅಂದಿನ ಭಾರತದಲ್ಲಿ ಪ್ರಾದೇಶಿಕತೆಗೆ ತಕ್ಕಂತೆ ಉಸಿರಾಡುತ್ತಿದ್ದ ಬ್ರಾಹ್ಮಣ್ಯ ಇವತ್ತು ನಿರ್ದಿಷ್ಟ ಆಡಳಿತ ವ್ಯವಸ್ಥೆ, ಕಾನೂನು ಕಟ್ಟಲೆ, ಸ್ಪಷ್ಟ ವಿಸ್ತೀರ್ಣವುಳ್ಳ ಸೀಮೆಯ ಚೌಕಟ್ಟು ಇತ್ಯಾದಿಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಒಂದು ಸಿದ್ಧಾಂತದ ಹೇರಿಕೆಗೆ ಹಲವು ಲೆಕ್ಕಾಚಾರಗಳ ಅವಶ್ಯಕತೆ ತೀರಾ ಅನಿವಾರ್ಯ.

ಹೇಳಿಕೇಳಿ ಬ್ರಾಹ್ಮಣ್ಯದ ನೈಜ ಫಲಾನುಭವಿಗಳ ಜನಸಂಖ್ಯೆಯೂ ಕೂಡ ಈ ದೇಶದಲ್ಲಿ ತೀರಾ ಅಲ್ಪವಿದ್ದು ಇದೂ ಸಹ ಸಿದ್ಧಾಂತ ಬದಲಾವಣೆ ಪ್ರಕ್ರಿಯೆಯ ಹೆಸರಲ್ಲಿನ ಮುನ್ನುಗ್ಗುವಿಕೆಗೆ ಬಹುದೊಡ್ಡ ತೊಡಕೇ ಆಗಿದೆ. ಈ ಕಾರಣಕ್ಕೇ ಮುಸಲ್ಮಾನರು, ಪಾಕಿಸ್ತಾನ ಮತ್ತು ಹುಸಿ ದೇಶಭಕ್ತಿಯ ಕಹಾನಿಗಳನ್ನು ಪ್ರಚೋದನಾತ್ಮಕವಾಗಿ ಬಿತ್ತಿ ಶೂದ್ರ ವರ್ಗವನ್ನು ಕಾಲಾಳುಗಳನ್ನಾಗಿಸುವ ಪ್ರಕ್ರಿಯೆಯೂ ಕೂಡ ಬಹುತೇಕ ಯಶಕಂಡಿದೆ. ಇಂತಹ ಒಂದು ಸಿದ್ಧಾಂತ ಹೇರಿಕೆಯ ತಂತ್ರದ ಭಾಗವೇ ಮೇಲಿನ ಹೇಳಿಕೆಗಳು.

ಹೇಳಿ ಕೇಳಿ 2025 ಕ್ಕೆ ಇನ್ನು ತಿಂಗಳಷ್ಟೇ ಬಾಕಿ. ಅದನ್ನು ಬ್ರಾಹ್ಮಣ್ಯವಾದಿಗಳ ನೆಚ್ಚಿನ ವರ್ಷವನ್ನಾಗಿಸಲು ಅನೇಕರು ಕನಸು ಕಾಣುತ್ತಿದ್ದಾರೆ. ಸಂಘ ಸ್ಥಾಪನೆಯ ಶತಮಾನದಾಚರಣೆಯ ಸಂಭ್ರಮದ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಲು ಈಗಲೇ ಅದಕ್ಕೆ ವೇದಿಕೆ ಸಿದ್ಧವಾಗಿದ್ದು ಆಡಳಿತಾಧಿಕಾರವೂ ಸಹ ಅವರ ಕೈಯಲ್ಲೇ ಇದೆ.

ಸಂವಿಧಾನ ಸರಿಯಿಲ್ಲ, ಮೀಸಲಾತಿ ಯಾಕೆ? ಎಂಬಂತಹ ಪ್ರಶ್ನೆಗಳು ಕೇವಲ ಪ್ರಶ್ನೆಗಳಲ್ಲವೇ ಅಲ್ಲ. ಇವು ಪರೀಕ್ಷೆಯಷ್ಟೆ. ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಿಯಿಂದ ಇಂತಹ ಮಾತುಗಳನ್ನು ಹೊರಡಿಸಿ ಆ ಕುರಿತು ಜನರಿಂದ ಬರುವ ಪ್ರತಿಕ್ರಿಯೆಗಳನ್ನಾಧರಿಸಿ ಮುಂದಿನ ಈ ಕುರಿತಾದ ನಡೆಯನ್ನು ಜಾರಿಗೊಳಿಸುವ ತಂತ್ರ ಇದರ ಹಿಂದಿದೆ.

“ಸ್ವಾತಂತ್ರ್ಯ ಪಡೆಯುವ ಮುನ್ನ ಇದು ಹಿಂದೂ ರಾಷ್ಟ್ರವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ  ಇದನ್ನು ಜಾತ್ಯತೀತ ರಾಷ್ಟ್ರವನ್ನಾಗಿಸಲಾಯ್ತು. ಜಾತ್ಯತೀತತೆಯನ್ನು ಸಾರುವ ಸಂವಿಧಾನಕ್ಕಿಂತ ’ನಮ್ಮನ್ನ” ಗೌರವಿಸುವಂತ ಸಂವಿಧಾನವೇ ನಮಗೆ ಬೇಕು” ಎನ್ನುವ ಸ್ವಾಮೀಜಿಯೊಬ್ಬರ ಮಾತು ಹಲವು ಒಳ ಸೂಕ್ಷ್ಮತೆಗಳನ್ನು ಹೊಂದಿರುವುದನ್ನು ಗಮನಿಸಬೇಕು. ಈ ಜಾತ್ಯತೀತ ಎನ್ನುವ ಪದವೇ ಹಿಂದುತ್ವವಾದಿಗಳಿಗೆ ಯಾವತ್ತಿಗೂ ಅಲರ್ಜಿ. ಅದನ್ನು ಪ್ರತಿಪಾದಿಸುವ ನಮ್ಮೀ ಘನ ಸಂವಿಧಾನ ಮತ್ತು ಜಾತ್ಯತೀತತೆಗೆ ಮಹತ್ವ ನೀಡಿದ ಸ್ವಯಂ ಬ್ರಾಹ್ಮಣ ಸಮುದಾಯದರೇ ಆದ ಪ್ರಥಮ ಪ್ರಧಾನಿ ನೆಹರೂ ಇವರೆಲ್ಲ ಹಿಂದುತ್ವವಾದಿಗಳಿಗೆ ಯಾವ ಕಾಲಕ್ಕೂ ದುಸ್ವಪ್ನಗಳಾಗಿ ತೋರುವುದು ಇದೇ ಕಾರಣಕ್ಕಲ್ಲವೇ…

ಶೋಷಕ ಶೋಷಿತ ಎಂಬ ತಾಕಲಾಟಗಳೇನೇ ಇದ್ದರೂ ಭಾರತದಲ್ಲಿ ಅದರ ತೀವ್ರತೆ ತೀರಾ ಸಣ್ಣ ಮಟ್ಟದ್ದು. ಇವತ್ತಿಗೂ ಸಹ ಕೆಲವೆಡೆ ಜನರಿಂದ ಆಯ್ಕೆಗೊಂಡಂತಹ ಅಧಿಕಾರವುಳ್ಳ ಸಚಿವನೊಬ್ಬ ಎಲ್ಲರೂ ದೇಗುಲದೊಳಗೆ ಹೋದರೆ ನನ್ನ ಸ್ಥಾನ ಇಲ್ಲೇ ಎಂದು ಸಾರ್ವಜನಿಕರೆದುರು ಹೊರಗೇ ನಿಂತು ಕಾಯುವಂತ ಉದಾಹರಣೆಗಳಿವೆ.  ಈಗ ನನಗೆ ಅಧಿಕಾರವಿದೆ ಎಂದು ಆತ ಮುನ್ನುಗ್ಗಲಾರ. ಒಂದು ವೇಳೆ ಅರ್ಚಕರೇ ಇಲ್ಲಾ ಊರ ಗಣ್ಯರೇ ಒಳ ಕರೆದರೆ ಮುಜುಗರದಿಂದಲೇ ಒಳ ಹೋಗಿ ದೈನ್ಯದಿಂದಲೇ ಅಲ್ಲಿ ವರ್ತಿಸುತ್ತಾನೆ.

ರಾಣಿಯೊಬ್ಬಳಲ್ಲಿ ಹಸಿವಿನಿಂದಿರುವ ಪ್ರಜೆಗಳು ತಿನ್ನಲು ಬ್ರೆಡ್ ಇಲ್ಲ ಎಂದು ಅದಕ್ಕಾಗಿ ಬೇಡಿಕೆ ಇತ್ತಾಗ ಆಕೆ  ’ಬ್ರೆಡ್ ಇಲ್ಲದಿದ್ದಲ್ಲಿ ಕೇಕ್ ತಿನ್ನಿ” ಅಂದಳಂತೆ ಕೇವಲ ಆ ಮಾತಿಗಾಗೇ ರಾಜಪರಿವಾರವನ್ನು ಕೊಂದು ಮೆರವಣಿಗೆ ಮಾಡಲಾಯ್ತು. ಇದು ವಿದೇಶದ ಕತೆ. ಭಾರತದಲ್ಲಿ ಶೂದ್ರವರ್ಗ ಅನುಭವಿಸಿದ ಹಾಗು ಅನುಭವಿಸುತ್ತಿರುವ ನೋವು ಅವಮಾನಗಳೆದುರು ಇದೇನೂ ಅಲ್ಲ. ಶೂದ್ರವರ್ಗದ ಜನಸಂಖ್ಯೆಯೂ ಅಪಾರ. ಆದರೂ ಇವತ್ತಿಗೂ ಹೇಳಿಕೊಳ್ಳುವ ಪ್ರತಿರೋಧಗಳಿಲ್ಲ. ಚಪ್ಪಲಿ ಹಾಕಿದರೆ, ಕುರ್ಚಿ ಮೇಲೆ ಕೂತರೆ, ಕುದುರೆ ಹತ್ತಿದರೆ ದಲಿತರ ಕೊಲೆಗಳು ನಡೆದರೂ ಅಸ್ಪೃಶ್ಯತೆಯ ಮೂಲ ಬೇರಾದ ಬ್ರಾಹ್ಮಣ್ಯದ ಬಗ್ಗೆ ಹೇಳಿಕೊಳ್ಳುವ ಅಸಹನೆಗಳು ವ್ಯಕ್ತವಾಗದು. ಬ್ರಾಹ್ಮಣ ವರ್ಗಕ್ಕೆ ಪ್ರತಿಯೊಬ್ಬರೂ ಸಾರ್ವಜನಿಕವಾಗಿ ಗೌರವ ಕೊಡುತ್ತಾರೆ. ಸಣ್ಣ ಮಕ್ಕಳಿಗೂ ಕೂಡ ಐಯ್ನೋರೇ.. ಅಣ್ಣೆರೇ.. ಎಂದೇ ಕರೆಯುತ್ತಾರೆಯೇ ಹೊರತು ದ್ವೇಷ ಕಾರುವುದಿಲ್ಲ. ಹಾಗೊಂದು ವೇಳೆ ದ್ವೇಷ ಸಾಧಿಸಿದ್ದರೆ ದೇಶದ ಚರಿತ್ರೆಯೇ ಬೇರೆ ಇರುತ್ತಿತ್ತು.

ಅಂಬೇಡ್ಕರರು ಸಾಕಷ್ಟು ಅಧ್ಯಯನ ನಡೆಸಿ ಬರೆದಂತಹ ನಮ್ಮೀ ಘನ ಸಂವಿಧಾನದಿಂದ ಸ್ವಾತಂತ್ರ್ಯಾನಂತರ ’ನಮ್ಮನ್ನು’  ಗೌರವಿಸುವಂತಿಲ್ಲ ಎನ್ನುವವರ ಸಮುದಾಯದ ಎಷ್ಟು ಮಂದಿ ಪ್ರಧಾನಿಗಳಾಗಿದ್ದಾರೆ, ರಾಷ್ಟ್ರ ಪತಿಗಳಾಗಿದ್ದಾರೆ, ನ್ಯಾಯಾಧೀಶರು, ರಾಯಭಾರಿಗಳು, ಸರಕಾರಿ ಸಂಸ್ಥೆಯ ಮುಖ್ಯಸ್ಥರು, ಉದ್ಯೋಗಿಗಳು ಆಗಿದ್ದಾರೆ ಎಂಬುದನ್ನು ಯೋಚಿಸಿ ನೋಡಲಿ. ಜನ ಸಂಖ್ಯಾಧಾರಿತವಾಗಿ ನೋಡಿದರೆ ಶೋಷಿತ ಸಮಾಜದವನೊಬ್ಬ ರಚಿಸಿದ ಈ ಸಂವಿಧಾನದಿಂದ ಗೌರವ ಪಡೆದದ್ದು ನಿಜಕ್ಕೂ ಯಾರು ಎಂಬುದು ಕಣ್ಣೆದುರೇ ರಾಚುತ್ತದೆ. ಆದರೂ ಗೌರವ ಕೊಡದ ಸಂವಿಧಾನವಂತೆ ಅಂದರೆ ಮೊದಲಿನಂತೆ ವಿದ್ಯೆ, ಸಂಪತ್ತು, ಅಧಿಕಾರಗಳಿಂದ ಶೂದ್ರವರ್ಗವನ್ನು ಶಾಶ್ವತವಾಗಿ ವಿಮುಖರನ್ನಾಗಿಸಿ ಮೆರೆಯುವ ಮನುಸಂವಿಧಾನದ ಪ್ರತಿಷ್ಠಾಪನೆಯೇ ಇವರ ಮುಖ್ಯ ಅಜೆಂಡ ಎಂದಾಯ್ತು. ಸ್ವಲ್ಪ ಕಷ್ಟ ಸ್ವಾಮಿಗಳೇ, ಯಾಕೆಂದರೆ ನಮ್ ಬಾಬಾಸಾಹೇಬ ಯಾವತ್ತೋ ನಮ್ಮ ಮನದಲ್ಲಿ ಪ್ರತಿಷ್ಠಾಪನೆಗೊಂಡಾಗಿದೆ ಅವನನ್ನು ಅಲುಗಾಡಿಸೋದು ಕಷ್ಟಸಾಧ್ಯ.

ಶಂಕರ್ ಸೂರ್ನಳ್ಳಿ

ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿ- ಸಂತರ ಸಮಾವೇಶದ ಹಿಂದೆ ಸಂವಿಧಾನ ವಿರೋಧಿ ಉದ್ದೇಶ

More articles

Latest article