ಮಂಡ್ಯ: ಎರಡು ದಿನ ನಗರದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳದಲ್ಲಿ 6150 ಅರ್ಜಿಗಳು ಬಂದಿದ್ದು, ಆ ಪೈಕಿ 1,122 ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದ್ದು ನೇಮಕಾತಿ ಪತ್ರ ನೀಡಲಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಉಳಿದ ಅಭ್ಯರ್ಥಿಗಳಿಗೆ ಡಿಸೆಂಬರ್ ತಿಂಗಳ ಒಳಗಾಗಿ ಉದ್ಯೋಗ ಕೊಡಿಸಲಾಗುವುದು. ಅದಕ್ಕಾಗಿ ಮಂಡ್ಯದ ಸಂಸದರ ಕಚೇರಿಯಲ್ಲಿ ಸುಸಜ್ಜಿತ ವಾರ್ ರೂಮ್ ತೆರೆಯಲಾಗುವುದು ಹಾಗೂ ದೆಹಲಿಯ ನನ್ನ ಸಚಿವಾಲಯದಲ್ಲಿ ವಿಶೇಷ ಸೆಲ್ ತೆರೆಯಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ನನ್ನ ಕ್ಷೇತ್ರದ, ರಾಜ್ಯದ ವಿವಿಧ ಜಿಲ್ಲೆಗಳ ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಸಿಕ್ಕಿದೆ ಎನ್ನುವ ಆತ್ಮತೃಪ್ತಿ ನನಗೆ ದೊರೆತಿದೆ. ಇದು ಆರಂಭ, ಮುಕ್ತಾಯ ಅಲ್ಲ. ಇಂತಹ ಉದ್ಯೋಗ ಮೇಳಗಳು ಮುಂದೆ ನಿರಂತರವಾಗಿ ನಡೆಯುತ್ತವೆ ಎಂದರು.
ಈ ಮೇಳದಲ್ಲಿ ಒಬ್ಬರಿಗೆ ಹುಂಡೈ ಕಂಪನಿಯಿಂದ ವರ್ಷಕ್ಕೆ 8 ಲಕ್ಷ ರೂಪಾಯಿ ಪ್ಯಾಕೆಜ್ ಸಿಕ್ಕಿದೆ. ಮರ್ಸಿಡಿಸ್ ಬೆಂಜ್ ಕಂಪನಿಯಿಂದ ಇನ್ನೂ ಹಲವರಿಗೆ ವಾರ್ಷಿಕ 6 ಲಕ್ಷ ರೂಪಾಯಿ ಪ್ಯಾಕೆಜ್ ಸಿಕ್ಕಿದೆ ಎಂದು ಹೇಳಿದರು.
ಶಿರೂರು ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಜನಾರ್ಧನ ನಾಯಕ್ ಅವರ ಪುತ್ರಿ ಕೃತ್ತಿಕಾ ಜೆ.ನಾಯ್ಕ ಅವರಿಗೆ ಅವರಿಗೆ BHEL ಕಂಪನಿಯಲ್ಲಿ ಉದ್ಯೋಗ ದೊರೆತಿದ್ದು, ಸಚಿವರು ನೇಮಕಾತಿ ಪತ್ರ ನೀಡಿದರು. ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಉದ್ಯೋಗ ಪಡೆದ ಅವಳಿ ಜವಳಿ ಯುವತಿಯರಾದ ನವ್ಯಾ ಮತ್ತು ನಂದಿತಾ ಅವರಿಗೂ ಸಚಿವರು ನೇಮಕಾತಿ ಪತ್ರ ವಿತರಿಸಿದರು. ವಿಶೇಷ ಚೇತನ ಯುವಕ ಅಜಯ್ ಕುಮಾರ್ ಅವರಿಗೆ ಅಲೋರಿಕಾ ಗ್ಲೋಬಲ್ ಬಿಪಿಒ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದ್ದು ಸಚಿವರು ಶುಭ ಹಾರೈಸಿದರು.