ಮಹಾತ್ಮ ನೀನು ಸಾವಿಲ್ಲದ ಜಗದ ಜಂಗಮ

Most read

ನಿನ್ನ ವಿಚಾರಗಳ ಜನಪ್ರಿಯತೆಯನ್ನು ಹೊಸಕಿ ಹಾಕಲು ಮತ್ತು ತಮ್ಮ ಕೈಗಂಟಿದ ರಕ್ತವನ್ನು ತೊಳೆದುಕೊಳ್ಳಲು  ಅದೆಷ್ಟು ಕಥೆಗಳು! ಅದೆಷ್ಟು ಸುಳ್ಳುಗಳು!! ಬಿಡದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೆ ನಡೆಯುತ್ತಲೇ ಬಂದಿವೆ. ಸತ್ಯವನ್ನು ಹೊಸಕಿ ಸುಳ್ಳುಗಳನ್ನು ವಿಜೃಂಭಿಸುವ ಮೂಲಕ ಜನರು ನಿನ್ನ ತತ್ವಗಳನ್ನು ಮರೆತುಬಿಡುತ್ತಾರೆಂದು ಕೊಂಡರು. ಅದು ಸಾಧ್ಯವಾಗದೆ, ಈಗ ನೀ ನಮ್ಮವ ನೀ ನಮ್ಮವನೆಂದು ಆತುಕೊಳ್ಳುತ್ತಿದ್ದಾರೆ– ಲತಾಮಾಲಾ.

ನಿನ್ನನ್ನು ಯಾರೂ ಕೊಲ್ಲಲಾಗುವುದಿಲ್ಲ; ಜನರ ಉಸಿರಲ್ಲಿ ಬೆರೆತು ಪ್ರತಿಕ್ಷಣವೂ ಜೀವಂತವಿರುವ ನೀನು ಈ ದೇಶದ ಆತ್ಮವಾಗಿದ್ದಿಯ.  ನುಡಿದಂತೆ ನಡೆದ ಮಾರ್ಗದಲ್ಲಿ ನೀನೇ ನೇಯ್ದಕೊಂಡ ತುಂಡೆರಡು ಬಟ್ಟೆಯನುಟ್ಟು, ಕೋಲ ಹಿಡಿದು ದೇಶವನ್ನು ಸುತ್ತಿ ಜಡತ್ವವನ್ನು ಜಾಡಿಸಿದ ಜಂಗಮನು ನೀನು. ಇಂದಿನವರೆಗೆ ನಿನ್ನಂತಹ ಮತ್ತೊಬ್ಬನನ್ನು  ಕಾಣಲಿಲ್ಲ ಈ ಪ್ರಪಂಚ.  ತಾಯಂದಿರು ಕೂಸುಗಳನ್ನು ಹೊತ್ತು,  ರೈತರು ಉಳುಮೆ ಬಿಟ್ಟು, ವ್ಯಾಪಾರಸ್ಥರು ಅಂಗಡಿ ಮುಚ್ಚಿ ನಿನ್ನನ್ನು ಕಾಣಲು ಒಡೋಡಿ ಬಂದ ಕಥೆಗಳನ್ನು ಕೇಳಿ ಬೆಳೆದವರು ನಾವು. ಈ ದೇಶವಷ್ಟೇ ಅಲ್ಲ, ಪ್ರಪಂಚವೇ ನಿನ್ನ ಅಹಿಂಸೆ ಮತ್ತು ಸತ್ಯಾಗ್ರಹ ತತ್ವಗಳಿಗೆ ಮಾರು ಹೋಗಿದೆ. ಅಹಿಂಸೆಯೆಂಬ ಬೆಳಕು ಮೊದಲಿನಿಂದ ಇತ್ತಾದರೂ ನೀನದನ್ನು ಬೆಳಗಿ ತೋರಿಸಿದೆ. ಕೇವಲ ಮಾರ್ಟಿನ್ ಲೂಥರ್ ಕಿಂಗ್ (ಜು), ನೆಲ್ಸನ್ ಮಂಡೇಲಾ,  ಆಂಗ್ ಸಾನ್ ಸೂಕಿ, ಚಾರ್ಲ್ಸ್ ವಾಕರ್, ಪ್ರೊ. ಅಡಾಲ್ಫೊ ಡಿ ಒಬಿಯೆಟಾ, ಡೆಸ್ಮಂಡ್ ಟುಟು ಅಥವಾ ಬರಾಕ್ ಒಬಾಮರಂತಹ ಗಣ್ಯರನ್ನೂ ಪ್ರಭಾವಿಸಿದ್ದಲ್ಲ, ಪ್ರಪಂಚದ ಎಷ್ಟೋ ಸಾಮಾನ್ಯರನ್ನೂ ನೀನು ತಾಕಿದ್ದಿಯಾ ಎನ್ನುವುದೇ ಸೋಜಿಗ. ಇಥಿಯೋಪಿಯಾದ ಪ್ರವಾಸದಲ್ಲಿದ್ದಾಗ, ನನ್ನ ಸ್ನೇಹಿತೆ ಗಾಂಧಿಯವರ ಆತ್ಮ ಕಥೆಯನ್ನು ಓದುತ್ತಿದ್ದು, ಹೊರಗೆ ಹೋಗುವಾಗ ಪುಸ್ತಕವನ್ನು ವಾಹನದಲ್ಲಿಯೇ ಬಿಟ್ಟು ಬಂದಿದ್ದರು. ಮರಳಿ ಬಂದಾಗ  ಸ್ವಲ್ಪಮಟ್ಟಿಗೆ ಇಂಗ್ಲಿಷ್ ಮಾತನಾಡುತ್ತಿದ್ದ ನಮ್ಮ ವಾಹನ ಚಾಲಕರು ಆ ಪುಸ್ತಕವನ್ನು ತಿರುವಿ ಹಾಕುತ್ತಿದ್ದರು. ನನಗೆ ಗಾಂಧಿ ಎಂದರೆ ತುಂಬಾ ಇಷ್ಟ, ಅವರ ಅಹಿಂಸಾ ತತ್ವವು ಇಂದಿಗೂ ಈ ಜಗಳಗಂಟ ಪ್ರಪಂಚಕ್ಕೆ ಬಹು ಅಗತ್ಯವಿದೆ ಎಂದಾಗ ಆಶ್ಚರ್ಯವೆನಿಸಿತು. ಆ ಪುಸ್ತಕವನ್ನು ನನ್ನ ಮಗಳಿಗಾಗಿ ಓದಲು ಕೊಟ್ಟರೆ ಮತ್ತೆ ಮರಳಿಸುತ್ತೇನೆ ಎಂದಾಗ, ನನ್ನ ಸ್ನೇಹಿತೆ ಪುಸ್ತಕವನ್ನು ಅವರಿಗೆ ಕೊಡುಗೆಯಾಗಿ ಕೊಟ್ಟ ನೆನಪಿನ್ನೂ ಹಸಿರಾಗಿದೆ. ಜಾಗತಿಕವಾಗಿ ಒಪ್ಪಿತವಾದ ಸತ್ಯ ಮತ್ತು ಅಹಿಂಸಾ ಮಾರ್ಗಗಳ ಮಹತ್ವದ ನೆನಪಿಗಾಗಿ ಈ ದೇಶಕ್ಕೆ ಬರುವ ವಿದೇಶಿಗರು ನಿನ್ನ ವಿಶ್ರಾಂತಿ ತಾಣಕ್ಕೆ ಇಂದಿಗೂ ಬರುತ್ತಾರೆ.

ಆದರೆ, ಈ ದೇಶದಲ್ಲಿನ್ನೂ ‘ಪಿತಾಮಹಾ’ ಅಥವಾ ‘ಮಹಾತ್ಮ’ನೆಂಬ ಬಿರುದುಗಳಿಗೆ ನೀನು ಅರ್ಹನೇ ಎಂಬ ಚರ್ಚೆಗಳು ನಡೆಯುತ್ತಿವೆ. ನೀನು ಅದನ್ನು ಕೇಳದೆಯೂ, ಅವು ನಿನಗೆ ತಕ್ಕುದಾದವು ಎಂದುಕೊಂಡ ಮತ್ತಾರೋ ಮಹನೀಯರು ಕೊಟ್ಟ ಆ ಬಿರುದುಗಳನ್ನು ಜನ ಅಂದಿಗೂ ಇಂದಿಗೂ ಒಪ್ಪಿದ್ದಾರೆ ಅಷ್ಟೆ. ಅದನ್ನೀಗ ಮತ್ತಾರೋ ಬೇಡವೆಂದು ಕಿತ್ತುಕೊಂಡರೆ ನೀನೇನು ತಲೆಕೆಡಿಸಿಕೊಳ್ಳುವುದಿಲ್ಲ ಬಿಡು. 

ನಿನ್ನ ಮಹತ್ಸಾಧನೆಯಾದರೂ ಏನು? ಕೇವಲ ಅಹಿಂಸೆಯಿಂದಲೇ ನಮಗೆ ಸ್ವಾತಂತ್ರ್ಯ ಬಂದಿತೇ? ಎಷ್ಟೊಂದು ಸಾವು ನೋವುಗಳಾದವಲ್ಲ! ಅಹಿಂಸೆಯು ಹೇಡಿತನದ ಗುರುತಲ್ಲವೇ? ಇಂತಹ ಪ್ರಶ್ನೆಗಳಿಗೆ ನೀನು ಉತ್ತರದಾಯಿಯಲ್ಲ, ಜನರೇ ಉತ್ತರಿಸುತ್ತಾರೆ; ಹೌದು ಬಲಿದಾನ ನೀಡಿದ ಸಾವಿರಾರು ಪುಣ್ಯ ಜೀವಿಗಳು ಸ್ಮರಣೀಯರೇ. ಕೇವಲ ಅಹಿಂಸಾ ಮಾರ್ಗವೇ ಎಲ್ಲವೂ ಆಗಿರಲಿಲ್ಲವಾದರೂ, ಅಂದಿನ ತನಕ ಯುದ್ಧವೇ ಅಂತಿಮ ಮಾರ್ಗವೆಂದುಕೊಂಡಿದ್ದ ಪ್ರಪಂಚದ ಮೂಲ ನಂಬಿಕೆಯ ಬುಡವನ್ನೇ ಅಲ್ಲಾಡಿಸಿತಲ್ಲವೇ ನಿನ್ನ ಅಹಿಂಸಾವಾದ. ಕಡು ಬಡತನ, ದಾರಿದ್ರ್ಯ ಮತ್ತು ಶೋಷಣೆಯಲ್ಲಿ ಮುಳುಗಿದ್ದ ಅಂದಿನ ಸಮಾಜವನ್ನು ಯುದ್ಧದಲ್ಲಿ ಮುಳುಗಿಸಿ ಮತ್ತಷ್ಟು ಕೂಪಕ್ಕೆ ತಳ್ಳಬೇಕಿತ್ತೇ? ನಮ್ಮೊಳಗಿನ ಗುಲಾಮಿತನವನ್ನು ಯಾವ ಹಿಂಸೆ ಅಥವಾ ಯಾವ ವೀರತನದಿಂದ ಹೊಡೆದೊಡಿಸುವುದು? ಕಾದಾಡಿ ಗೆಲ್ಲುವವರು ನಮಗೆ ಸ್ವತಂತ್ರತೆಯ ಬದಲಾವಣೆ ತರುತ್ತಿದ್ದರೋ ಅಥವಾ ಸ್ವಾಮಿತನದ ಬದಲಾವಣೆ ಪ್ರಸಾದಿಸುತ್ತಿದ್ದರೋ ಯಾರಿಗೆ ಗೊತ್ತು? ಯುದ್ಧಗಳಲ್ಲಿ ಕೊಂದವರಿಗಿಂತ ಅಥವಾ ಸತ್ತವರಿಗಿಂತ, ಇದ್ದೂ ಸತ್ತವರು ಅವರ ಮಹಿಳೆಯರು ಮತ್ತು ಮಕ್ಕಳು.  ಪುರುಷ ಪ್ರಧಾನ ಹಿಂಸಾ ಮಾರ್ಗದಿಂದ ನೊಂದು ಬೆಂದಿದ್ದ ಮಹಿಳೆ ಮತ್ತು ಮಕ್ಕಳು ಈ ಅಹಿಂಸಾ ತತ್ವದಿಂದ ನಿರಂಬಳವಾಗಿದ್ದು ನಿಜವಲ್ಲವೇ? ಹಿಂಸೆಯಿಂದ ವಿಜಯಿಯಾದವರು ಮತ್ತೆ ಹಿಂಸೆಯನ್ನೇ ಹುಟ್ಟುಹಾಕಿದ್ದಲ್ಲದೆ,  ಅದರಲ್ಲೇ ತಮ್ಮನ್ನು ಮತ್ತು ತಮ್ಮ ಜನರನ್ನು ಕಿಚ್ಚಿಗಿಳಿಸಿದ ಉದಾಹರಣೆಗಳು ಅವೆಷ್ಟೋ! ನಿನ್ನ ಸತ್ಯ ಮತ್ತು ಅಹಿಂಸಾ ತತ್ವಗಳು  ಅಂದಿನ ರಾಜ ಮಹಾರಾಜರನ್ನು ಪ್ರಭಾವಿಸಿದ ಕಾರಣದಿಂದಲೇ ಪ್ರಭುಗಳ ಆಳ್ವಿಕೆಯಡಿ ಛಿದ್ರಗೊಂಡಿದ್ದ ಪ್ರದೇಶವನ್ನು ಒಗ್ಗೂಡಿಸಿ ಒಂದು ದೇಶವಾಗಿ ಕಟ್ಟಲು ಸಾಧ್ಯವಾಯಿತು. ಹಾಗಾಗಿಯೇ, ಪ್ರತಿ ಜನಸಾಮಾನ್ಯರೂ ತಮ್ಮ ಸರ್ಕಾರವನ್ನು ಚುನಾಯಿಸುವಂತಾಗಿ ಸ್ವತಂತ್ರ ಭಾರತದ ಜನರು ಪ್ರಜಾಪ್ರಭುತ್ವದ ಫಲವನ್ನು ಕುಯಿಲು ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಸರಿಹೋಗಿದೆ ಎಂದಲ್ಲ, ಆದರೆ ಪ್ರಭುತ್ವದ ಆಡಳಿತಕ್ಕಿಂತ ಉತ್ತಮವಾಗಿ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಹೊಂದಿದ್ದಾರೆ ಎಂಬುದು ನಿನಗೂ ಒಪ್ಪಿತವೆ.

ದ್ವಿ-ರಾಷ್ಟ್ರ ತತ್ವದ (ಟೂ ನೇಷನ್ಸ್ ಥಿಯರಿ) ಕಿಡಿ ಹೊತ್ತಿಸಿ, ದೇಶ ವಿಭಜನೆಯಾಗಿ, ಹಿಂಸೆಯ ಉರಿ ಹತ್ತಿಕೊಂಡಾಗ, ಕಿಡಿ ಹತ್ತಿಸಿದವರು ದೂರಿದ್ದು ನಿನ್ನನ್ನು. ವಿಭಜಿತಗೊಂಡ ಇನ್ನೊಂದು ದೇಶದ ಪಾಲಿನ 45 ಕೋಟಿಯನ್ನು ಕೊಡುವಂತೆ ನೀನು ಹಠ ಮಾಡಿದ್ದು ಗುಂಡಿಕ್ಕುವಂತಹ ತಪ್ಪೇ?

ಕೋಮು ಗಲಭೆಗಳನ್ನು  ಹುಟ್ಟುಹಾಕುವ ಆಟಗಳು ನೀನಿರುವವರೆಗೆ ನಡೆಯುವುದಿಲ್ಲವೆಂಬ ಕಾರಣಕ್ಕೆ ನಿನ್ನ ಧ್ವನಿಯಡಗಿಸುವುದು ಹತ್ಯೆಯ ಹಿಂದಿನ ಸಂಚಾಗಿತ್ತೆಂದು ಇತಿಹಾಸಕಾರರು ಪುರಾವೆ ನೀಡುತ್ತಾರೆ. ನಿನ್ನ ಹಂತಕನನ್ನು ಭಾರತದ ಶ್ರೇಷ್ಠ ಸುಪುತ್ರನೆಂದು ಅಥವಾ ದೇಶಭಕ್ತನೆಂದು ಹಾಡಿ ಹೊಗಳುತ್ತಾ, ನಿನ್ನನ್ನು ಹತ್ಯೆ ಮಾಡಿ ಎಂತಹ ಉಪಕಾರ ಮಾಡಿದನೆಂಬ ಸಮಜಾಯಿಷಿ ನೀಡಿ ಪುಟಗಟ್ಟಲೆ ಬರೆದಿದ್ದೂ ಆಯಿತು.  ದೇಹವು ಸುಟ್ಟು ಕರಕಲಾದ ನಂತರವೂ ನಿನ್ನನ್ನು ಮತ್ತೇ ಮತ್ತೇ ಕೊಲ್ಲುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ!! ರಾಮನ ಹೆಸರಲ್ಲಿ ಭಾರತವನ್ನು ಒಡೆಯುವ ಸಂಚಿನ ಕ್ರಮಗಳಿಗೆ ನಿನ್ನ ಒಪ್ಪಿಗೆ ಇತ್ತೆಂಬ ಬರೆದೇ ಇಲ್ಲದ ನಿನ್ನ ಪತ್ರದ ಸುಳ್ಳು ದಾಖಲೆಯಾಗಲಿ, ಒಂದು ಧರ್ಮೀಯರನ್ನು ಓಲೈಸುತ್ತಾ ಬಹು ಸಂಖ್ಯಾತರಿಗೆ ಅನ್ಯಾಯ ಮಾಡಿದೆಯೆಂದೋ, ಆಥವಾ ಭಾರತದ ಇಬ್ಬಾಗಕ್ಕೆ ಒಪ್ಪಿಗೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾದೆಯೆಂಬ ಸುಳ್ಳಿನ ಕಥೆಗಳನ್ನೂ, ಹಾಗೂ ನಿನಗೆ ಹೆಗಲು ನೀಡಿದ ಹೆಣ್ಣುಮಕ್ಕಳ ವಿಕೃತಗೊಳಿಸಿದ ಪಟಗಳನ್ನು ಹರಿಬಿಟ್ಟು ನಿನ್ನ ಚಾರಿತ್ರ್ಯ ವಧೆಗೆ ನಡೆಸಿದ ಈ ಕೆಳಮಟ್ಟದ ಕುತಂತ್ರಗಳು ನಿನ್ನನ್ನು ಕಂಗೆಡಿಸುವುದಿಲ್ಲವೇ?

ನೀನು ತಪ್ಪುಗಳನ್ನೇ ಮಾಡಿಲ್ಲವೆಂದಲ್ಲ, ಆದರೆ ನಿನ್ನ ತಪ್ಪುಗಳು ಉದ್ದೇಶ ಪೂರಿತವಾಗಿರಲಿಲ್ಲ.  ಆ ತಪ್ಪುಗಳನ್ನು ತಿದ್ದಿಕೊಳ್ಳುವ, ಕಲಿಯುವ ಮತ್ತು ಬೆಳೆಯುವ ನಿನ್ನ ಸಾಮರ್ಥ್ಯವು ಇಂದಿಗೂ ಆದರ್ಶವಾಗಿದೆ. ಜಾತೀಯತೆ ವಿರೋಧಿ ಮತ್ತು ಮಹಿಳಾ ಸ್ವಾತಂತ್ರ್ಯದ ಬೆಳಕುಗಳಿಂದ ಬೆಳಗನ್ನು ಹತ್ತಿಸಿಕೊಂಡ ಮುಕ್ತ ಮನಸ್ಸು ನಿನ್ನದಾಗಿತ್ತು.

ನಿನ್ನ ವಿಚಾರಗಳ ಜನಪ್ರಿಯತೆಯನ್ನು ಹೊಸಕಿ ಹಾಕಲು ಮತ್ತು ತಮ್ಮ ಕೈಗಂಟಿದ ರಕ್ತವನ್ನು ತೊಳೆದುಕೊಳ್ಳಲು  ಅದೆಷ್ಟು ಕಥೆಗಳು! ಅದೆಷ್ಟು ಸುಳ್ಳುಗಳು!! ಬಿಡದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೆ ನಡೆಯುತ್ತಲೇ ಬಂದಿವೆ. ಸತ್ಯವನ್ನು ಹೊಸಕಿ ಸುಳ್ಳುಗಳನ್ನು ವಿಜೃಂಭಿಸುವ ಮೂಲಕ ಜನರು ನಿನ್ನ ತತ್ವಗಳನ್ನು ಮರೆತುಬಿಡುತ್ತಾರೆಂದು ಕೊಂಡರು. ಅದು ಸಾಧ್ಯವಾಗದೆ, ಈಗ ನೀ ನಮ್ಮವ ನೀ ನಮ್ಮವನೆಂದು ಆತುಕೊಳ್ಳುತ್ತಿದ್ದಾರೆ; ರಥಯಾತ್ರೆ ಸಂದರ್ಭದಲ್ಲಿ ನಿನ್ನ ಅಪರೂಪದ ಗುಣಗಳನ್ನು ಹೊಗಳಿದ್ದು, ‘ಹೊಳೆಯುವ ನವರತ್ನವೆಂದು’ ಬಿರುದು ನೀಡಿ ನಿನ್ನ ಜಯಂತಿಯನ್ನು ಸಂಭ್ರಮಗೊಳಿಸಿದ್ದರ ಜೊತೆ ಜೊತೆಗೆ ಮಂದಿರ ಮಸೀದಿಗಳ ನಡುವೆ ಬಿರುಕು ತರಿಸುವ ಮತ್ತು ನಿನಗೆ ಗುಂಡಿಟ್ಟವನು ದೇಶಪ್ರೇಮಿಯೆಂಬ ಮಾತುಗಳು! ಈ ದ್ವಂದ್ವತೆಯ ಹಿಂದಿನ ಕೀಳು ರಾಜಕಾರಣವು ನಿನಗೆ ತಿಳಿಯದಿರುತ್ತದೆಯೇ?

ಕೇವಲ ಒಂದು ಪಕ್ಷವಲ್ಲ, ಒಂದು ಗುಂಪಲ್ಲ ಎಲ್ಲರೂ ನಿನ್ನನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮೂಲಕ ಮತ್ತೆ ಮತ್ತೆ ನಿನ್ನನ್ನು ಕೊಲ್ಲುತ್ತಿರುವ ಪರಿ ನೋಡಿ ನಿನಗೆ ನಗುವಷ್ಟೇ ಅಲ್ಲ, ನೋವೂ ಆಗುತ್ತಿರಬಹುದು; ನಿನ್ನ ಹೆಸರನ್ನು ಕುಲಕ್ಕಂಟಿಸಿಕೊಂಡು, ನೀ ಕಟ್ಟಿದ ಚಳುವಳಿಯ ನಾಮಾಂಕಿತವನ್ನು ಪಕ್ಷಕ್ಕೆ ಮೆತ್ತಿಕೊಂಡು ಜನರನ್ನು ದಿಕ್ಕು ತಪ್ಪಿಸಬಹುದೆಂದು ಗ್ರಹಿಸಿದವರು ಅಂದು ಅಧಿಕಾರಕ್ಕಾಗಿ ಸರ್ವಾಧಿಕಾರವನ್ನು ಹೇರಲು ಪ್ರಯತ್ನಿಸಿದ್ದು, ನಿನ್ನ ಮಾರ್ಗವನ್ನು ತುಳಿದ ಸತ್ಯಾಗ್ರಹಿಗಳನ್ನು ಜೈಲುಗಟ್ಟಿದ್ದು,  ಉದಾರೀಕರಣದ ಹೆಸರಲ್ಲಿ ಸ್ವದೇಶಿ ಮತ್ತು ಸ್ವರಾಜ್ಯದ ವಿಚಾರಗಳನ್ನು ಮರೆತವರು – ಈಗ ಅಧಿವೇಶನದ ಶತಮಾನೋತ್ಸವದಲ್ಲಿ ನಿನ್ನನ್ನು ಬಹು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿರುವ ಇವರು ನಿಜಕ್ಕೂ ನನ್ನ ಬೇರುಗಳೇ ಎಂದು ನೀನು ಚಿಂತಿಸುತ್ತಿರಬಹುದು.

ನಿನ್ನ ಹತ್ಯೆಯು ಇತಿಹಾಸದ ಬಹು ನಿರ್ಣಾಯಕ ಘಳಿಗೆಯಾಗಿ ಉಳಿದಿದೆ. ನಿನ್ನೆದೆಗೆ ತಾಕಿದ ಗುಂಡುಗಳು ಇಡೀ ದೇಶದ ಜನರನ್ನು ಘಾಸಿಗೊಳಿಸಿತು. ನೋವಲ್ಲಿದ್ದ ಜನರು ಅದರ ಹಿಂದಿದ್ದವರನ್ನು ಕ್ಷಮಿಸುವುದಿಲ್ಲವೆಂದು ತಿಳಿದ ಕೂಡಲೇ ಭಾರತವನ್ನು ಸರ್ವಾಧಿಕಾರದ ಮಾರ್ಗದಲ್ಲಿ ಕೊಂಡೊಯ್ಯಲು ಕಾದಿದ್ದವರು ಬಹುಕಾಲ ತಟಸ್ಥವಾಗಬೇಕಾಯಿತು. ಆದ್ದರಿಂದಲೇ ಈ ದೇಶವು ಪ್ರಜಾಪ್ರಭುತ್ವವನ್ನು ಅನುಭವಿಸಲು ಸಾಧ್ಯವಾಯಿತು ಎನ್ನುವುದು ಅಂತರಂಗದ ಮಾತು.  ಪ್ರಪಂಚದಲ್ಲಿ ಘರ್ಷಣೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅಹಿಂಸಾ ತತ್ವವು ಜಗತ್ತಿನಾದ್ಯಂತ ಪ್ರತಿಧ್ವನಿಸಿ ಹೆಚ್ಚಿನವರು ನಿನ್ನ ಮಾರ್ಗವನ್ನು ಅನುಸರಿಸ ಬಯಸುತ್ತಿದ್ದರೆ, ನಿನ್ನನ್ನು ಕೊಂದೆವೆಂದುಕೊಂಡವರು ವಿಚಲಿತರಾಗುತ್ತಿದ್ದಾರೆ.

ತತ್ವಹೀನ ರಾಜಕೀಯ, ದುಡಿಯದೆ ಬರುವ ಸಂಪತ್ತು, ನೈತಿಕತೆ ಇಲ್ಲದ ವ್ಯಾಪಾರ, ಗುಣ ಬೆಳೆಸದ ಶಿಕ್ಷಣ, ಆತ್ಮಸಾಕ್ಷಿ ಇಲ್ಲದ ಆನಂದ, ಮಾನವೀಯತೆ ಇಲ್ಲದ ವಿಜ್ಞಾನ ಮತ್ತು ತ್ಯಾಗವಿಲ್ಲದ ಪೂಜೆ – ಇವುಗಳನ್ನು ತಿರಸ್ಕರಿಸುವ ನಿನ್ನ ಸಪ್ತನೀತಿಗಳಿಂದ ಈ ಆಧುನಿಕ ಜಗತ್ತು ಕಲಿಯುವುದು ಬಹಳವಿದೆ ಮತ್ತು ಕಲಿಯುತ್ತದೆ ಕೂಡ.

ಅಹಿಂಸಾ ತತ್ವವು ಜನಾಂಗ, ಧರ್ಮ, ರಾಷ್ಟ್ರಗಳ ಗಡಿಗಳನ್ನು ಮೀರಿ ಜಾಗತಿಕ ಜಾಗೃತಿಯಾಗಿ ಬೆಳೆದು ನೀನು ಸಾರ್ವಕಾಲಿನ ಶರಣನಾಗಿ ಹೊರಹೊಮ್ಮಿದ್ದಿಯಾ. ಅಹಿಂಸೆಯ ಆಚರಣೆ ಹಾಗೂ ಮಾನವತಾವಾದದ ಉತ್ಕಟ ಅನುಸರಣೆಗಾಗಿ ಪ್ರಪಂಚದ ಎಲ್ಲೆಡೆ ನಿನ್ನನ್ನು ಸ್ಮರಿಸಲಾಗುತ್ತಿದೆ ಎನ್ನುವುದು ತಿಳಿದವರ ಮಾತಾಗಿದ್ದು, ಪ್ರಸ್ತುತದ ಭಾರತಕ್ಕೆ ನಿನ್ನ ಅಹಿಂಸಾ ತತ್ವದ ಬೆಳಕು ಮಾತ್ರವೇ ಬೆಳದಿಂಗಳನ್ನು ತರಬಲ್ಲದು.  

ಲತಾಮಾಲ, ಬೆಂಗಳೂರು

ಸಾಮಾನ್ಯ ಪ್ರಜೆ

ಗಾಂಧೀಜಿ ಕುರಿತ ಈ ಲೇಖನವನ್ನೂ ಓದಿ ಹೊಸ ಬೆಳಕು..

More articles

Latest article