ಮುಂಬೈ: ಮಹಾರಾಷ್ಟ್ರದಲ್ಲಿ ನಾಳೆ ನ. 20, ಬುಧವಾರ ಒಂದೇ ಹಂತದಲ್ಲಿ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜಾರ್ಖಂಡ್ನಲ್ಲಿ ಈಗಾಗಲೇ ಒಂದು ಹಂತದ ಚುನಾವಣೆ ಮುಕ್ತಾಯವಾಗಿದ್ದು, ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ. 288 ಕ್ಷೇತ್ರಗಳಿಗೆ ಸ್ಪರ್ಧಿಸಿರುವ 326 ಮಹಿಳಾ ಮತ್ತು ಇಬ್ಬರು ತೃತೀಯ ಲಿಂಗಿ ಸೇರಿ 4,136 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ರಾಜ್ಯದ ಒಟ್ಟು ಮತದಾರರ ಸಂಖ್ಯೆ 9,70, 25,110. ಮತಗಳ ಎಣಿಕೆ 23ರಂದು ನಡೆಯಲಿದೆ.
ಬಹುಮತಕ್ಕೆ 145 ಸ್ಥಾನಗಳನ್ನು ಗೆಲ್ಲಬೇಕಿದೆ. ಎರಡು ಪ್ರಮುಖ ಒಕ್ಕೂಟಗಳು ಚುನಾವಣಾ ಅಖಾಡದಲ್ಲಿವೆ. ಬಿಜೆಪಿ ನೇತೃತ್ವದ ಮಹಾಯುತಿ (ಎನ್ ಡಿಎ) ಮತ್ತು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ ಒಕ್ಕೂಟ ಅಧಿಕಾರಕ್ಕೇರಲು ಹವಣಿಸುತ್ತಿವೆ.
ಮಹಾಯುತಿಯಲ್ಲಿ ಬಿಜೆಪಿ, ಏಕನಾಥ ಶಿಂಧೆ ನಾಯಕತ್ವದ ಶಿವಸೇನಾ, ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಪ್ರಮುಖ ಪಾಲುದಾರ ಪಕ್ಷಗಳಾಗಿವೆ. ಇನ್ನು ಮಹಾ ವಿಕಾಸ ಅಘಾಡಿ(ಇಂಡಿಯಾ) ಯಲ್ಲಿ ಕಾಂಗ್ರೆಸ್, ಉದ್ಧವ್ ಠಾಖ್ರೆ ನೇತೃತ್ವದ ಶಿವಸೇನಾ, ಮತ್ತು ಶರದ್ ಪವಾರ್ ಅವರ ಎನ್ ಸಿಪಿ ಇದೆ. ಮಹಾವಿಕಾಸ ಅಘಾಡಿ ಅಧಿಕಾರ ಹಿಡಿಯುವ ಸಾದ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳಿವೆ. ಆದರೆ ಸಣ್ಣ ಸಣ್ಣ ಪಕ್ಷಗಳು, ಭಿನ್ನಮತೀಯರು ಮತ್ತು ಭಾರೀ ಸಂಖ್ಯೆಯಲ್ಲಿ ಪಕ್ಷೇತರರು ಸ್ಪರ್ಧಿಸಿದ್ದು, ಎರಡೂ ಒಕ್ಕೂಟಗಳಿಗೆ ತಲೆ ನೋವಾಗಿ ಪರಿಣಮಿಸಿದೆ. 2,086 ಪಕ್ಷೇತರರು ಸ್ಪರ್ಧಿಸಿರುವುದು ದಾಖಲೆ ಎಂದು ಹೇಳಲಾಗುತ್ತಿದೆ. 2014 ಮತ್ತು 2019ರಲ್ಲಿ ಬಿಜೆಪಿ ನೂರರ ಗಡಿ ದಾಟಿ ಅಧಿಕಾರ ಹಿಡಿದಿತ್ತು. ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಒಕ್ಕೂಟಗಳಲ್ಲಿರುವ ಪಕ್ಷಗಳು ತಮ್ಮ ನಿಷ್ಠೆಯನ್ನು ಬದಲಾಯಿಸಲೂಬಹುದು.
ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶರದ್ ಪವಾರ್, ಉದ್ಧವ್ ಠಾಕ್ರೆ ಪ್ರಚಾರ ನಡೆಸಿದ್ದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೂ ಪ್ರಚಾರ ನಡೆಸಿದ್ದರು.