ಮಾ ನಿಷಾದ, ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ !
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ !!
ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಮೊಟ್ಟ ಮೊದಲ ಶ್ಲೋಕ. ಅಂದರೆ “ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಸಿಕ್ಕಲಾರದು” ಎಂದರ್ಥ. ಜೊತೆಯಾದ ಜೋಡಿಗಳ ಅಗಲಿಕೆ ಅನರ್ಥಕ್ಕೆ ಕಾರಣ ಎಂದು ವಾಲ್ಮೀಕಿ ತಲ್ಲಣಗೊಂಡು ಹೇಳಿದ್ದಾರೆ. ವಾಲ್ಮೀಕಿ ರಾಮಾಯಣದ ಮೊದಲ ಶ್ಲೋಕದ ಮೊದಲ ಶಬ್ದವನ್ನೇ ತಮ್ಮ ನಾಟಕಕ್ಕೆ ಇಟ್ಟ ಗಿರೀಶ್ ಕಾರ್ನಾಡರು “ಮಾ ನಿಷಾದ” ಎನ್ನುವ ಕಿರುನಾಟಕವೊಂದನ್ನು 1963 ರಲ್ಲಿ ಆಕಾಶವಾಣಿಗಾಗಿ ರಚಿಸುತ್ತಾರೆ.
ಕೇವಲ 19 ಪುಟದ ಈ ರೆಡಿಯೋ ನಾಟಕವನ್ನು ಒಂದೂಕಾಲು ಗಂಟೆ ಅವಧಿಯ ಪೂರ್ಣ ಪ್ರಮಾಣದ ನಾಟಕವನ್ನಾಗಿಸಿ ಚೆಂದದ ಪ್ರಯೋಗವೊಂದನ್ನು ಯುವರಂಗಕರ್ಮಿಗಳಾದ ತೇಜಸ್ ಕೆ ಹಾಗೂ ಪುನೀತ್ ರಂಗಾಯಣ ಈರ್ವರೂ ಅಂದವಾಗಿ ಕಟ್ಟಿಕೊಟ್ಟಿದ್ದಾರೆ. ‘ಭಾಗವತರು ಸಾಂಸ್ಕೃತಿಕ ಸಂಘಟನೆ’ಯು ಕಲಾಗ್ರಾಮದ ರಂಗಮಂದಿರದಲ್ಲಿ ಮಾರ್ಚ್ 20 ರಿಂದ 23 ರ ವರೆಗೆ ಆಯೋಜಿಸಿದ್ದ “ಡಾ.ಗಿರೀಶ್ ಕಾರ್ನಾಡರ ನಾಟಕೋತ್ಸವ”ದ ಸಮಾರೋಪ ಸಮಾರಂಭದ ದಿನದಂದು “ಮಾ ನಿಷಾದ” ಪ್ರದರ್ಶನಗೊಂಡು ನೋಡುಗರ ಮನಸ್ಸನ್ನು ಸೆಳೆಯಿತು. ಆಚಾರ್ಯ ಕಾಲೇಜಿನ ಉತ್ಕರ್ಷ ತಂಡದ ವಿದ್ಯಾರ್ಥಿಗಳು ಲವಲವಿಕೆಯಿಂದ ನಟಿಸಿ ಪ್ರೇಕ್ಷಕರ ಮನಗೆದ್ದರು.
ನಿಷಾದ ಅಂದರೆ ಬೇಡ ಅಥವಾ ಬೇಟೆಗಾರ ಎಂದರ್ಥ. ಬೇಡನೊಬ್ಬ ಪ್ರೀತಿಸುತ್ತಿದ್ದ ಪಕ್ಷಿಗಳಲ್ಲಿ ಒಂದನ್ನು ಕೊಂದು ಜೋಡಿಗಳನ್ನು ಅಗಲಿಸಿದ್ದಕ್ಕೆ ವಿಷಾದ ಹೊಂದಿದ ವಾಲ್ಮೀಕಿಯು ತಮ್ಮ ಮನಃಶಾಂತಿಗಾಗಿ ಹಾಗೂ ಬೇಡನಾಗಿದ್ದಾಗ ತಾನು ಮಾಡಿದ ಹಿಂಸೆಯ ಪಶ್ಚಾತ್ತಾಪಕ್ಕಾಗಿ ರಾಮಾಯಣವನ್ನು ರಚಿಸಿದ ಎಂದು ಹೇಳಲಾಗುತ್ತದೆ. ಆದರೆ.. ಇಡೀ ರಾಮಾಯಣದಲ್ಲಿ ಬರುವ ಅತ್ಯಂತ ಚಿಕ್ಕದಾದ ಪಾತ್ರ ಈ ಅಗಸನದ್ದು. ಹೀಗೆ ಬಂದು ಹೇಳಬೇಕಾದದ್ದನ್ನು ಹೇಳಿ ಇಡೀ ರಾಮಾಯಣಕ್ಕೆ ಒಂದು ಮಹತ್ತರ ತಿರುವನ್ನು ಕೊಟ್ಟು ಹಾಗೆ ಹೋಗುವ ಪುಟ್ಟ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ರಾಮನನ್ನು ಹಾಗೂ ರಾಮರಾಜ್ಯವನ್ನು ವಿಶ್ಲೇಷಿಸುವಂತಹ ನಾಟಕ ಒಂದನ್ನು ಬರೆದ ಕಾರ್ನಾಡರ ಸೃಷ್ಟಿ ಹಾಗೂ ದೂರದೃಷ್ಟಿ ಅನನ್ಯವಾದದ್ದು. ಕ್ರೌಂಚ ಪಕ್ಷಿಗಳನ್ನು ಅಗಲಿಸಲು ಬೇಡನೊಬ್ಬ ಕಾರಣವಾದರೆ, ಸೀತಾ-ರಾಮರ ಜೋಡಿಯನ್ನು ಬೇರ್ಪಡಿಸುವ ಕ್ರಿಯೆಗೆ ರಾಮಾಯಣದಲ್ಲಿ ಅಗಸನೊಬ್ಬ ಕಾರಣನಾಗುತ್ತಾನೆ ಎಂಬ ಹೋಲಿಕೆ ಮಾ ನಿಷಾದದೊಳಗಿನ ವಿಷಾದವಾಗಿದೆ.
ಶ್ರೀರಾಮನು ಮೋಸದಿಂದ ವಾಲಿಯನ್ನು ಕೊಂದಿದ್ದು, ಶೂರ್ಪನಖಿಗೆ ಅನ್ಯಾಯ ಮಾಡಿದ್ದನ್ನೆಲ್ಲಾ ಕೇಳಿ ಕೆರಳಿದ ಅಗಸ ಪದ್ಮನಾಭನು ಶ್ರೀರಾಮನ ಭಕ್ತೆಯಾದ ತನ್ನ ಹೆಂಡತಿಯ ಮೇಲೆ ಸಿಟ್ಟಾಗಿ ಪೆಟ್ಟು ಕೊಟ್ಟಾಗ ಆಕೆ ಮನೆಬಿಟ್ಟು ತವರಿಗೆ ಹೊರಡುತ್ತಾಳೆ. ಮತ್ತೆ ಹೆಂಡತಿ ಮರಳಿ ಬಂದಾಗ ಮನೆಯೊಳಗೆ ಸೇರಿಸಲು ನಿರಾಕರಿಸಿದ ಅಗಸನು “ಬಿಟ್ಟು ಹೋದವಳನ್ನು ಮತ್ತೆ ಸೇರಿಸಿಕೊಳ್ಳಲು ನಾನೇನು ರಾಮನೇ?” ಎಂದು ಪ್ರಶ್ನಿಸಿ ಪತ್ನಿಯನ್ನು ಹೊರಗಟ್ಟುತ್ತಾನೆ. ಸೀತೆಯೊಂದಿಗೆ ಸಂತಸದಿಂದಿದ್ದ ಅರಸನಿಗೆ ಅಗಸನ ಈ ಕೊಂಕು ಮಾತು ಸೈನಿಕರಿಂದ ತಿಳಿದು ತಳಮಳಗೊಂಡು ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಇದು ರಾಮಾಯಣದಲ್ಲಿರುವ ಕಥೆ. ಇದನ್ನು ನಾಟಕಕಾರರು ಇನ್ನಷ್ಟು ವಿಸ್ತರಿಸುತ್ತಾರೆ.
ಸೀತಾ ಪರಿತ್ಯಾಗಕ್ಕೆ ಅಗಸನ ಮಾತೇ ಕಾರಣವೆಂದು ತಿಳಿದ ಅಯೋಧ್ಯೆಯ ಪ್ರಜೆಗಳು ಆತನನ್ನು ದ್ವೇಷಿಸಲು ಆರಂಭಿಸುತ್ತಾರೆ. ಕೆಲಸ ಕೊಡಲು ಎಲ್ಲರೂ ನಿರಾಕರಿಸುತ್ತಾರೆ. ಆತನ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಪಶ್ಚಾತ್ತಾಪದಿಂದ ದೊರೆ ರಾಮನನ್ನು ಕಾಣಲು ಹೋಗಿ ಅನುಮತಿ ಸಿಗದೆ ನಿರಾಸೆ ಹೊಂದುತ್ತಾನೆ. ಆತ ಸಮಾಜದ ನಿಂದನೆಯಿಂದ ತಪ್ಪಿಸಿಕೊಳ್ಳಲು ಊರೂರು ಬದಲಾಯಿಸಿದರೂ ಜನರು ಗುರುತಿಸಿ ಹಿಂಸೆ ಕೊಡುತ್ತಲೇ ಇರುತ್ತಾರೆ. ಕೊನೆಗೆ ಸೀತಾರಾಮರ ಅಗಲಿಕೆಗೆ ನಾನು ಕಾರಣನಾದೆ ಎಂದು ನೊಂದುಕೊಂಡ ಅಗಸ ಕಾಡಿಗೆ ಹೋಗಿ ಋಷಿಯೊಬ್ಬರ ಆಶ್ರಮದಲ್ಲಿ ಕಾಲ ಕಳೆಯುತ್ತಾನೆ. ಹೆಂಡತಿಯ ನೆನಪಾಗಿ ಹಲವು ವರ್ಷಗಳ ನಂತರ ಮನೆಗೆ ಬಂದಾಗ ಅಪಮಾನದಿಂದಾಗಿ ಪತ್ನಿ ಸತ್ತು, ತನ್ನ ಮನೆಯೆಲ್ಲಾ ಸರ್ವನಾಶವಾಗಿದ್ದು ಗೊತ್ತಾಗಿ ದುಃಖ ಪೀಡಿತನಾಗುತ್ತಾನೆ. ಸೀತೆಯನ್ನು ಭೇಟಿಯಾಗಿ ಕ್ಷಮೆ ಕೇಳಲು ಕಾಡಿಗೆ ಬಂದು ವಾಲ್ಮೀಕಿಯನ್ನೇ ಭೇಟಿಯಾಗುತ್ತಾನೆ. ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಬಂದಾಗ ಆತನ ಜೊತೆ ಅಯೋಧ್ಯೆಗೆ ಮತ್ತೆ ಮರಳಿ ಹೋಗಲು ನಿರಾಕರಿಸಿದ ಸೀತೆ ಭೂಮಿಯೊಡಲು ಸೇರಿ ಮಣ್ಣಲ್ಲಿ ಮಣ್ಣಾದ ಸಂಗತಿ ಋಷಿಯಿಂದ ಗೊತ್ತಾಗಿ ಅಗಸ ತಲ್ಲಣಿಸಿ ಹೋಗುತ್ತಾನೆ. ರಾಮಾಯಣ ಹೀಗೆಯೇ ಕೊನೆಗೊಳ್ಳಬೇಕೆ? ಎನ್ನುವ ಅಗಸನ ವಿಷಾದದ ಪ್ರಶ್ನೆಯೊಂದಿಗೆ ಮಾ ನಿಷಾದ ನಾಟಕ ಮುಗಿಯುತ್ತದೆ. ನೋಡುಗರ ಮನದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಪಶ್ಚಾತ್ತಾಪಕ್ಕೊಳಗಾದ ಅಗಸ ಶ್ರೀರಾಮನನ್ನು ನೋಡಿ ಅರಮನೆಗೆ ಬಂದಾಗ ಭೇಟಿಯಾದ ಭರತನ ಮುಂದೆ ತನ್ನ ತಪ್ಪೊಪ್ಪಿಕೊಳ್ಳುತ್ತಾನೆ. “ತಪ್ಪು ನಿನ್ನದಲ್ಲ . ನೀನಿಲ್ಲದಿದ್ದರೆ ಬೇರೆ ಯಾವುದಾದರೂ ಕಾರಣ ಸಿಗುತ್ತಿತ್ತು ಶ್ರೀರಾಮರಿಗೆ” ಎಂದು ಭರತ ಹೇಳಿ ಹೋಗುವ ಆ ಒಂದು ಮಾರ್ಮಿಕವಾದ ಮಾತು ಅಗಸನ ಮೇಲಿದ್ದ ಕಳಂಕವನ್ನು ಕಡಿಮೆ ಮಾಡಿ ರಾಮನ ನಿಜವಾದ ಮುಖವನ್ನು ಅನಾವರಣಗೊಳಿಸುವಂತಿದೆ. ಶ್ರೀರಾಮರು ಸೀತೆಯನ್ನು ತೊರೆಯಲು ಮೊದಲೇ ನಿರ್ಧರಿಸಿಯಾಗಿತ್ತು. ಅದಕ್ಕೊಂದು ನೆಪ ಬೇಕಿತ್ತು. ಅಗಸನ ಮಾತು ಅದಕ್ಕೆ ಕಾರಣವಾಯ್ತು ಎನ್ನುವುದೇ ಭರತನ ಮಾತಿನ ಹಿಂದಿರುವ ಮರ್ಮವಾಗಿತ್ತು.
ಆದರೆ ಈಗಿನಂತೆ ಆಗಲೂ ರಾಮಭಕ್ತರಿಗೆ ಇದು ಅರ್ಥವಾಗದ ಸಂಗತಿ. ಅರಸನ ನಿರ್ಧಾರಕ್ಕೆ ಅಗಸನೇ ಕಾರಣವೆಂದು ರೊಚ್ಚಿಗೆದ್ದ ಜನರು ಅಗಸನ ಮೇಲೆ ದಾಳಿ ಮಾಡಲು ಪ್ರಯತ್ನಿಸಿ ಆತನ ಬದುಕನ್ನೇ ಸರ್ವನಾಶ ಮಾಡಿದ್ದು ಈಗಿನ ಪ್ರಸ್ತುತ ಸಮಕಾಲೀನ ಪರಿಸ್ಥಿತಿಯನ್ನೇ ಹೋಲುತ್ತದೆ. ಈಗಲೂ ಸಹ ಈ ನಮ್ಮ ದೇಶದಲ್ಲಿ ಪ್ರಭುತ್ವದ ವಿರುದ್ಧ ಮಾತಾಡಿದವರಿಗೆ ದೇಶದ್ರೋಹಿ ಪಟ್ಟ ಕಟ್ಟಿ ಅವಮಾನಿಸಲಾಗುತ್ತಿದೆ. ಶ್ರೀರಾಮನ ವಿರುದ್ಧ ಒಂದೇ ಒಂದು ಮಾತಾಡಿದರೂ ದೈವದ್ರೋಹದ ಆರೋಪಕ್ಕೊಳಗಾಗಿ ರಾಮಭಕ್ತರಿಂದ ನಿಂದನೆಗೆ ಒಳಗಾಗ ಬೇಕಾಗುತ್ತದೆ. ಶ್ರೀರಾಮನ ಹೆಸರಲ್ಲಿ ಹಲ್ಲೆ ಹಿಂಸೆಗಳು ಈಗ ಭಾರತದಾದ್ಯಂತ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಶ್ರೀರಾಮನ ಹೆಸರಲ್ಲಿ ಭಾವ ಪ್ರಚೋದನೆ ಮಾಡಲಾಗುತ್ತಿದೆ.
ಈ ನಾಟಕದಲ್ಲಿ ತೋರಿಸಿದಂತೆ ಅಗಸನಿಗೆ ಯಾರೂ ಹಿಂಸೆ ಕೊಡಬಾರದು ಎಂದು ಶ್ರೀರಾಮನೇ ಡಂಗೂರ ಸಾರಿಸುತ್ತಾನೆ. ಆದರೆ ರಾಮಭಕ್ತರು ಸುಮ್ಮನಿರುವುದಿಲ್ಲ. ನಿಂದನೆ ಮಾಡುವುದನ್ನು ಬಿಡುವುದಿಲ್ಲ. ಊರಿನಲ್ಲಿ ನೆಮ್ಮದಿಯಾಗಿ ಬದುಕಲೂ ಆತನಿಗೆ ಅವಕಾಶ ಕೊಡುವುದಿಲ್ಲ. ಇಂದಿನ ವರ್ತಮಾನದ ಪರಿಸ್ಥಿತಿಯೂ ಬೇರೆಯಾಗೇನೂ ಇಲ್ಲಾ. ಸ್ವತಃ ಶ್ರೀರಾಮ ದೇವರೇ ಪ್ರತ್ಯಕ್ಷವಾಗಿ ಯಾರೂ ನನ್ನ ಹೆಸರಲ್ಲಿ ಹಿಂಸೆ ಮಾಡಬಾರದು ಎಂದರೂ ಕೇಳುವ ಪರಿಸ್ಥಿತಿಯಲ್ಲಿ ಉದ್ರಿಕ್ತ ರಾಮಭಕ್ತರು ಇಲ್ಲ. ರಾಮನ ಗುತ್ತಿಗೆ ಪಡೆದವರಂತೂ ಸುಮ್ಮನಿರಲು ಸಾಧ್ಯವೇ ಇಲ್ಲ. ಯುಗಗಳೇ ಬದಲಾಗಿರಬಹುದು, ಆದರೆ ಈ ರಾಮಭಕ್ತರ ಅತಿರೇಕಗಳು ನಿಂತಿಲ್ಲ ಎನ್ನುವುದನ್ನು ಮಾ ನಿಷಾದ ಪರೋಕ್ಷವಾಗಿ ಹೇಳುತ್ತದೆ. “ಅಯೋಧ್ಯೆಯ ಸುಸಂಸ್ಕೃತ ಪೌರರು, ರಾಮರಾಜ್ಯದ ಪ್ರಜೆಗಳು ಎಂದಿಗೂ ತಮ್ಮ ಶಾಂತಿ, ವಿನಯ, ವಿದ್ಯೆಗಾಗಿ ಹೆಸರಾದ ಜನ. ಆದರೆ ನನ್ನ ಒಂದು ಮಾತಿಗೆ ಇವರ ಛದ್ಮ ವೇಷಗಳೆಲ್ಲಾ ಕಳಚಿಬಿದ್ದಿವೆ” ಎಂದು ಆಗಸ ಹೇಳುವ ಮಾತು ಆ ಕಾಲಕ್ಕೂ ಈ ಕಾಲಕ್ಕೂ ಸೂಕ್ತವೆನಿಸುವಂತಿದೆ.
ಪ್ರಾಸಂಗಿಕವಾಗಿ ಹೇಳಿದ ಅಗಸನ ಮಾತನ್ನೇ ಅಡ್ವಾಂಟೇಜಾಗಿ ತೆಗೆದುಕೊಂಡ ಶ್ರೀರಾಮನು ಅದೇ ನೆಪದಲ್ಲಿ ತಮ್ಮ ಮನದಾಳದ ಉದ್ದೇಶವನ್ನು ಜಾರಿಗೊಳಿಸಿ ಸೀತಾ ಪರಿತ್ಯಾಗ ಮಾಡಿ “ಒಬ್ಬ ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಹೆಂಡತಿಯನ್ನೇ ಬಿಟ್ಟ” ಎನ್ನುವ ಶ್ಲಾಘನೆಗೆ ಪಾತ್ರನಾಗಿ ಮರ್ಯಾದಾ ಪುರುಷೋತ್ತಮನಾದ. ಆದರೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ರಾಮರಾಜ್ಯದ ಪ್ರಜೆಯಾಗಿದ್ದ ಅಗಸನ ಬದುಕು ನಾಶವಾಗಿ ಹೋಯ್ತು. ಈಗಲೂ ಸಹ ಯಾರಾದರೂ ಶ್ರೀರಾಮನನ್ನು ವಿಮರ್ಶಿಸಿದರೆ, ರಾಮರಾಜ್ಯದ ನ್ಯೂನತೆಗಳನ್ನು ವಿಶ್ಲೇಷಿಸಿದರೆ ಅಂತವರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ದಮನಿಸಲಾಗುತ್ತದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಯ್ತು ಎಂದು ಕೇಸು ದಾಖಲಿಸಿ ಆಗ ಅಗಸನಿಗೆ ತೊಂದರೆ ಕೊಟ್ಟಂತೆ ಈಗಲೂ ಕಿರುಕುಳ ಕೊಡಲಾಗುತ್ತದೆ.
ಈ ನಾಟಕವೂ ಸಹ ಅಗಸನ ನೆಪದಲ್ಲಿ ಪ್ರಸ್ತುತವಾಗಿ ಪ್ರಚಲಿತದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನೇ ಹೇಳುತ್ತದೆ. ಪೌರಾಣಿಕ ಕಥಾನಕದ ಭಾಗವನ್ನು ಸಮಕಾಲೀನಗೊಳಿಸಿದೆ. ಆದರೆ.. ಈ ನಾಟಕದ ನಿರ್ದೇಶಕರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ ರೀತಿ ದ್ವಂದ್ವ ನಿಲುವನ್ನು ಹುಟ್ಟುಹಾಕುವಂತಿದೆ. ನಾಟಕದ ಕೊನೆಯಲ್ಲಿ ಹರಿಕತೆ ದಾಸರ ಮೂಲಕ “ಅನಿಸಿಕೆಗಳನ್ನು ಮನದಲ್ಲೇ ಇಟ್ಟುಕೊಳ್ಳಬೇಕು ಹಾಗೂ ಯಾರೂ ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು” ಎಂದು ಹೇಳಿಸಲಾಗುತ್ತದೆ. ಇದೇ ಈ ನಾಟಕದ ಅಂತಿಮ ಸಂದೇಶವೂ ಆಗಿದೆ; ಪ್ರಭುತ್ವದ ನಿಲುವೂ ಆಗಿರುತ್ತದೆ. ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದದ್ದು. ಪ್ರಭುತ್ವದ ವಿರುದ್ಧ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಪ್ರಜೆಗಳ ಹಕ್ಕು. ಅಗಸನ ಅಭಿಪ್ರಾಯಕ್ಕೆ ಮನ್ನಣೆ ಇತ್ತಲ್ಲವೇ ರಾಮನು ಸೀತೆಯನ್ನು ಬಿಟ್ಟಿದ್ದು. ಅಗಸನೆಂಬ ಪ್ರಜೆ ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸದೇ ಇದ್ದಿದ್ದರೆ ರಾಮಾಯಣವೇ ಮುಂದೆ ಸಾಗುತ್ತಿರಲಿಲ್ಲ. ಹಾಗೆಯೇ ಪ್ರಜಾಪ್ರಭುತ್ವದಲ್ಲೂ ಸಹ ಪ್ರಜೆಗಳು ಪ್ರಭುತ್ವವನ್ನು ಪ್ರಶ್ನಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಂವಿಧಾನದತ್ತ ಹಕ್ಕು. ಅನಿಸಿಕೆಯನ್ನೇ ವ್ಯಕ್ತಪಡಿಸಬಾರದು ಎನ್ನುವುದೇ ದಮನಕಾರಿ ನಿಲುವು. ಈ ನಾಟಕದ ಮೂಲಕ ಮೂಲ ನಾಟಕದಲ್ಲಿಲ್ಲದ ಸಂದೇಶವನ್ನು ನಿರ್ದೇಶಕರು ಕೊಟ್ಟಿರುವುದು ಪ್ರಶ್ನಾರ್ಹವಾಗಿದೆ.
ಒಂದು ಸಂಭಾಷಣಾ ಪ್ರಧಾನವಾದ ಕಿರುನಾಟಕವನ್ನು ಪೂರ್ಣಪ್ರಮಾಣದ ದೃಶ್ಯ ನಾಟಕವನ್ನಾಗಿ ಕಟ್ಟಿಕೊಟ್ಟ ನಿರ್ದೇಶಕರುಗಳನ್ನು ಅಭಿನಂದಿಸಲೇ ಬೇಕಿದೆ. ಮೂಲ ನಾಟಕದಲ್ಲಿ ಯಾವುದು ಕೇವಲ ಸಂಭಾಷಣೆ ರೂಪದಲ್ಲಿದೆಯೋ ಅದಕ್ಕೆ ದೃಶ್ಯರೂಪವನ್ನು ಕೊಡುವ ಮೂಲಕ ಈ ನಾಟಕಕ್ಕೆ ಹೊಸ ಆಯಾಮವನ್ನು ನಿರ್ಮಿಸುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡಲಾಗಿದೆ. ಕಾರ್ನಾಡರ ನಾಟಕದಲ್ಲಿ ಎಲ್ಲಿಯೂ ರಾಮ ಸೀತೆ ಪಾತ್ರಗಳು ಬರುವುದೇ ಇಲ್ಲ. ಆದರೆ ಫ್ಲಾಶ್ ಬ್ಯಾಕ್ ತಂತ್ರಗಳಲ್ಲಿ ಈ ಪಾತ್ರಗಳನ್ನೂ ಸೇರಿಸಿ ನಾಟಕದ ದೃಶ್ಯಸಾಧ್ಯತೆಗಳನ್ನು ವಿಸ್ತರಿಸಲಾಗಿದೆ.
ಈ ನಾಟಕ ಗಮನ ಸೆಳೆಯುವುದು ತನ್ನ ರಂಗತಂತ್ರಗಳ ಮೂಲಕ. ಗಾಲಿಗಳನ್ನು ತಳ್ಳುತ್ತಾ ಬರುವ ನಟನಟಿಯರ ಮೂಲಕ ರಥದ ಚಲನೆಯ ಪರಿಕಲ್ಪನೆಯನ್ನು ಮೂಡಿಸಿದ್ದು, ಸ್ವಸ್ತಿಕ್ ಆಕಾರದ ಹಗ್ಗದ ಹೆಣಿಗೆಯ ಬಂಧದಲ್ಲಿ ಸಿಲುಕಿದ ಅಗಸ ಧರ್ಮಸಂಕಟದಲ್ಲಿ ಬಿದ್ದು ಒದ್ದಾಡುವುದು, ಮಣ್ಣಿನ ಬಣ್ಣದ ಬಟ್ಟೆಯ ಮೂಲಕ ಸೀತೆ ಭೂಮಿಯೊಳಗೆ ಐಕ್ಯಳಾಗುವುದು… ಇಂತಹ ವಿಶಿಷ್ಟ ರಂಗತಂತ್ರಗಳು ಪ್ರೇಕ್ಷಕರನ್ನು ವಿಸ್ಮಯಗೊಳಿಸುವಂತಿವೆ ಹಾಗೂ ಯುವ ನಿರ್ದೇಶಕನ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಒಬ್ಬ ಅಗಸನ ಪಾತ್ರವನ್ನು ಕಾಲವ್ಯತ್ಯಾಸದಲ್ಲಿ ಇಬ್ಬರು ನಟರನ್ನು ಬಳಸಿ ಪಾತ್ರ ಪೋಷಣೆ ಮಾಡಿರುವುದು ನಾಟಕದ ಹೈಲೈಟ್. ಶೈಲೀಕೃತ ಶೈಲಿಯ ನಡಿಗೆ, ವಿಶಿಷ್ಟವಾದ ಉಡುಗೆ ತೊಡುಗೆ, ಲೈವ್ ಆಗಿದ್ದ ಹಿನ್ನೆಲೆ ಸಂಗೀತ, ಹಾಡು ಹಾಗೂ ಬಣ್ಣದ ಬೆಳಕಿನ ವಿನ್ಯಾಸಗಳು ಇಡೀ ಶುಷ್ಕ ನಾಟಕವನ್ನು ದೃಶ್ಯಕಾವ್ಯವನ್ನಾಗಿಸಿವೆ. ಗುಂಪನ್ನು ಸಮರ್ಥವಾಗಿ ಬಳಸಿಕೊಂಡ ರೀತಿ ಹಾಗೂ ಪಾತ್ರಗಳ ಚಲನೆಗಳ ಬ್ಲಾಕಿಂಗ್ ಈ ನಾಟಕಕ್ಕೆ ವಿಶೇಷ ಮೆರುಗನ್ನು ಕೊಟ್ಟಿವೆ. ಸರಳ ಮತ್ತು ಸಾಂಕೇತಿಕವಾದ ರಂಗವಿನ್ಯಾಸ ಗಮನ ಸೆಳೆಯುತ್ತವೆ.
ಅಭಿನಯದಲ್ಲಿ ಅನುಭವವಿಲ್ಲದ ಹೊಸಬರನ್ನು ಹಾಕಿಕೊಂಡು ಇಂತಹ ಕ್ಲಾಸಿಕ್ ನಾಟಕವನ್ನು ನಿರ್ದೇಶಿಸುವುದು ಸವಾಲಿನ ಕೆಲಸ. ಅದರಲ್ಲೂ ಸಾಧ್ಯವಾದಷ್ಟು ಪರಿಣತಿಯನ್ನು ನಿರ್ದೇಶಕರುಗಳು ಸಾಧಿಸಿದ್ದಾರೆ. ಆದರೆ ಇನ್ನೂ ನಟನಟಿಯರು ಪಳಗ ಬೇಕಿದೆ. ದೃಶ್ಯ ಬದಲಾವಣೆಯಲ್ಲಿ ಆಗುವ ಲ್ಯಾಗ್ ತಪ್ಪಿಸಿ ಸ್ಮೂತ್ ಫಿನಿಶಿಂಗ್ ಕೊಡಬೇಕಿದೆ. ಆರಂಭದಲ್ಲಿ ಸೃಷ್ಟಿಸಲಾದ ಹರಿಕಥೆ ದಾಸನ ಮಾತುಗಳು ಅತಿಯಾಗಿದ್ದು ಒಂದಿಷ್ಟು ಕಡಿತಗೊಳಿಸಿ ಅಗತ್ಯವಿರುವಷ್ಟನ್ನು ಮಾತ್ರ ಹೇಳಿಸಿದರೆ ಆರಂಭಿಕ ಎಳೆತವನ್ನು ತಪ್ಪಿಸಬಹುದಾಗಿದೆ. ರಾಮ ವನವಾಸಕ್ಕೆ ಹೋಗಿ ಹದಿನಾಲ್ಕು ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುತ್ತಿರುವಾಗ ರಾಮನ ಬರುವಿಕೆಗಾಗಿ ಶೋಕಗ್ರಸ್ತರಾಗಿ ರೋಧಿಸುವ ಕೇಸರಿ ವಸ್ತ್ರಧಾರಿ ರಾಮಭಕ್ತರ ಗುಂಪು ಸೃಷ್ಟಿ ಯಾಕೋ ಅಸಮಂಜಸವೆನ್ನಿಸುವಂತಿದೆ. ಮುಂದಿನ ಪ್ರಯೋಗಗಳಲ್ಲಿ ಇದೆಲ್ಲಾ ಸರಿಪಡಿಸಿದರೆ ಉತ್ತಮವಾದ ದೃಶ್ಯಕಾವ್ಯ ಪ್ರಸ್ತುತಿ ಕನ್ನಡ ರಂಗಭೂಮಿಗೆ ದಕ್ಕಿದಂತಾಗುತ್ತದೆ. ಈಗಾಗಲೇ ಕೆಲವಾರು ರಂಗಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದ ಕಾಲೇಜು ತಂಡದ ಈ ನಾಟಕ ಕಾಲೇಜು ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ತರವಾಗಿದೆ. ನಿರ್ದೇಶಕರ ಶ್ರಮ, ಕಲಾವಿದರು ಮತ್ತು ತಂತ್ರಜ್ಞರ ಪರಿಶ್ರಮ ಸಾರ್ಥಕವಾಗಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ-ವಿಜ್ಞಾನ ಮತ್ತು ಜಾನಪದ ಕಲೆಗಳ ಅಪೂರ್ವ ಸಂಗಮ | ಆಲ್ಬರ್ಟ್ ಸೇಬಿನ್ ಮತ್ತು ದರೋಜಿ ಈರಮ್ಮ