Saturday, December 7, 2024

ಪ್ರಜಾಸಂಭ್ರಮ-2024 | ತುಮಕೂರು ಕ್ಷೇತ್ರ: ಯಾರಿಗೂ ನಿಷ್ಠರಲ್ಲದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮಣೆ ಹಾಕುವುದೇ?

Most read

ಲೋಕಸಭಾ ಚುನಾವಣೆ – 2024 (Lok Sabha Elections – 2024) ಹತ್ತಿರವಾಗುತ್ತಿರುವಂತೆ, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಬಾರಿಯ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯ. ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದೊಡ್ಡ ಸವಾಲು. ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿ ಮಾಡಲು ಹೊರಟಿರುವ ಬಿಜೆಪಿಯವರಿಗೆ ಕಳೆದ ಬಾರಿಯಂತೆಯೇ ಅದ್ಭುತ ಜಯ ಗಳಿಸುವ ಉಮೇದು. ಜೆಡಿಎಸ್ ಪಕ್ಷ ಈಗ ಬಿಜೆಪಿಯ ಜೊತೆಗಾರ, ಆದರೂ ಅದು ತನ್ನ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ದಾಳಗಳನ್ನು ಉರುಳಿಸಲಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ( Tumkur constituency) ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಈ ಬಾರಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂಬ ಮಾತಿತ್ತು. ಅದಕ್ಕೆ ತಕ್ಕಂತೆ ಪ್ರಖರ ವಾಗ್ಮಿ, ಕುರುಬ ಸಮುದಾಯದ ನಿಕೇತ್ ರಾಜ್ ಮೌರ್ಯ ಅವರ ಹೆಸರೇ ಚಲಾವಣೆಯಲ್ಲಿತ್ತು. ಕಾಂಗ್ರೆಸ್ ನ ಎಲ್ಲ ಹಿರಿಯ ಮುಖಂಡರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ನಿಕೇತ್ ರಾಜ್ ತುಮಕೂರು ಜಿಲ್ಲೆಯವರೇ ಆಗಿರುವುದರಿಂದ ಜನರ ನಾಡಿಮಿಡಿತವೂ ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಆದರೆ ಈಗ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಸೇರುವ ಪ್ರಯತ್ನ ಆರಂಭಿಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಹೊಸ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ.

ಹಾಗೆ ನೋಡಿದರೆ ಡಾ.ಜಿ.ಪರಮೇಶ್ವರ್ (G Parameshwar), ಪಕ್ಷ ಸೇರುವುದಾದರೆ ಟಿಕೆಟ್ ಕೊಡಬೇಕು ಎಂದು ಕೇಳುವಂತಿಲ್ಲ ಎಂದು ಮುದ್ದಹನುಮೇಗೌಡರಿಗೆ ಹೇಳಿದ್ದಾರೆ. ಆದರೆ ವಿಷಯ ಅಷ್ಟು ಸರಳವಾಗಿ ಇದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಗೆ ಬರಲು ಮುದ್ದಹನುಮೇಗೌಡರಿಗೆ ಕರೆದವರೇ ಸ್ವಭಾವತಃ ಹಠಮಾರಿಯಾದ ಕೆ.ಎನ್.ರಾಜಣ್ಣ (KN Rajanna). ಹೀಗಾಗಿ ಟಿಕೆಟ್ ದೊರೆಯುವ ಭರವಸೆಯಿಂದಲೇ ಮುದ್ದಹನುಮೇಗೌಡರು (SP Muddahanumegowda) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಗುಸುಗುಸು ಹರಡಿದೆ. ಜಿ.ಪರಮೇಶ್ವರ್ ಅವರೊಂದಿಗೆ ಮುದ್ದಹನುಮೇಗೌಡ ಅವರ ಸಂಬಂಧ ತೀರಾ ಹೇಳಿಕೊಳ್ಳುವಂತೇನೂ ಇಲ್ಲ. ಹಿಂದೆ ಜಿ‌.ಪರಮೇಶ್ವರ್ ವಿರುದ್ಧ ಮುದ್ದಹನುಮೇಗೌಡರು ತೀರಾ ಕಟುವಾಗಿ ಟೀಕಿಸಿದ್ದಿದೆ. ಈ ಬಾರಿ ಕೊರಟಗೆರೆಯಲ್ಲಿ ತಮ್ಮ ಪರವಾಗಿ ಅತಿಹೆಚ್ಚು ಓಡಾಡಿ, ಭಾಷಣ ಮಾಡಿ ಜನರನ್ನು ಸೆಳೆಯಲು ಯಶಸ್ವಿಯಾದ ನಿಕೇತ್ ರಾಜ್ ಮೌರ್ಯ ಅವರನ್ನು ಜಿ.ಪರಮೇಶ್ವರ್ ಅವರು ಬಿಟ್ಟುಕೊಡಲು ಸಾಧ್ಯವೇ? ಹೀಗಾಗಿಯೇ ಬರುವುದಿದ್ದರೆ ಬೇಷರತ್ ಆಗಿ ಪಕ್ಷಕ್ಕೆ ಬನ್ನಿ ಎಂದು ಮುದ್ದಹನುಮೇಗೌಡರಿಗೆ ಅವರು ಸೂಚಿಸಿರಬಹುದು.

ರಾಜಕಾರಣದಲ್ಲಿ ಅತಿಹೆಚ್ಚು ಬಳಕೆಯಾಗುವ ಪದ ನಿಷ್ಠೆ. ನೀವು ಪಕ್ಷಕ್ಕೆ ನಿಷ್ಠರಾಗಬೇಕು, ನಾಯಕರಿಗೆ ನಿಷ್ಠರಾಗಿಬೇಕು, ಹಾಗಿದ್ದರೆ ಮಾತ್ರ ರಾಜಕಾರಣದಲ್ಲಿ ಅವಕಾಶಗಳು ಲಭಿಸುತ್ತವೆ. ಆದರೆ ಮುದ್ದಹನುಮೇಗೌಡರು ಒಂದಾದ ಮೇಲೊಂದರಂತೆ ಪಕ್ಷ ಬದಲಿಸಿದವರು. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಭ್ಯರ್ಥಿಯಾದರು‌. ಮುನಿಸಿಕೊಂಡ ಮುದ್ದಹನುಮೇಗೌಡ ಬಿಜೆಪಿ ಸೇರಿದರು. ಬಿಜೆಪಿಗೂ ಅವರು ನಿಷ್ಠರಾಗಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಮನೆ ತಟ್ಟುತ್ತಿದ್ದಾರೆ.

ಈ ಬಾರಿ ತು‌ಮಕೂರು ಲೋಕಸಭಾ ಕಣ ಸಾಕಷ್ಟು ರಂಗೇರಲಿದೆ. ಇಲ್ಲಿ ಯಾವಾಗಲೂ ಪಕ್ಷಕ್ಕಿಂತ ಜಾತಿಯೇ ಪ್ರಧಾನ ಪಾತ್ರ ವಹಿಸುತ್ತದೆ. ನೇರವಾಗಿ ಒಕ್ಕಲಿಗ ಮತ್ತು ಲಿಂಗಾಯಿತ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತದೆ‌. ಲಿಂಗಾಯಿತರು ಚುನಾವಣೆ ಸಂದರ್ಭದಲ್ಲಿ ಒಂದಾಗುವಷ್ಟು ಒಕ್ಕಲಿಗರು ಒಂದಾಗುವುದಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಲಿಂಗಾಯಿತರ ಕೈ ಮೇಲಾಗುತ್ತ ಬಂದಿದೆ. ಆದರೆ ವಿಶೇಷವೆಂದರೆ ಇಲ್ಲಿ ಒಕ್ಕಲಿಗ-ಲಿಂಗಾಯಿತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಹಿಂದುಳಿದ ಸಮುದಾಯದವರು. ಈ ತೃತೀಯ ಶಕ್ತಿ ನಿಜಕ್ಕೂ ಒಂದಾದರೆ ಗೆಲುವು ನಿಶ್ಚಿತ. ಈ ಪ್ರಯೋಗ ಹಿಂದೆ 1996ರಲ್ಲಿ ನಡೆದಿತ್ತು. ಆಗ ಜನತಾ ದಳದಿಂದ ಕುರುಬ ಸಮುದಾಯದ ಸಿ.ಎನ್.ಭಾಸ್ಕರಪ್ಪ ಗೆದ್ದುಬೀಗಿದ್ದರು.

ನಿಕೇತ್ ರಾಜ್ ಮೌರ್ಯ ಕೂಡ 1996ರ ಫಲಿತಾಂಶ ಮರುಕಳಿಸಬಹುದು ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಅವರ ನಿರೀಕ್ಷೆಗೂ ಅರ್ಥವಿದೆ. ತುಮಕೂರು ಕ್ಷೇತ್ರದಲ್ಲಿ ಒಂದೂವರೆಯಿಂದ ಎರಡು ಲಕ್ಷದಷ್ಟು ಕುರುಬ ಮತದಾರರಿದ್ದಾರೆ. ಕುರುಬ ಸಮುದಾಯ ಸಿದ್ಧರಾಮಯ್ಯ ಅವರ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸುವುದು ನಿಶ್ಚಿತ. ನಿಕೇತ್ ಸ್ಪರ್ಧಿಸಿದರೆ ಈ ಓಟ್ ಬ್ಯಾಂಕ್ ಇನ್ನಷ್ಟು ಗಟ್ಟಿಯಾಗುತ್ತದೆ. ಅದರ ಜೊತೆಗೆ ಅಲ್ಪಸಂಖ್ಯಾತರ ಮತಗಳು ಎಲ್ಲೂ ಚೆದುರುವ ಸಾಧ್ಯತೆ ಇಲ್ಲ. ತುಮಕೂರು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿರುವ ಇರುವ ಇತರ ಹಿಂದುಳಿದ ಜಾತಿಗಳ ಮತಗಳನ್ನು ಗಿಟ್ಟಿಸಿದರೆ ನಿಕೇತ್ ರಾಜ್ ಅವರಿಗೆ ಗೆಲುವ ಕಷ್ಟವಲ್ಲ. ಬಿಜೆಪಿಯಿಂದ ಲಿಂಗಾಯಿತ ಅಭ್ಯರ್ಥಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು. ಮೈತ್ರಿ ಸಂದರ್ಭದಲ್ಲಿ ಜೆಡಿಎಸ್ ಮತಗಳು ಮೈತ್ರಿ ಪಕ್ಷಕ್ಕಿಂತ ಎದುರಾಳಿ ಪಕ್ಷಕ್ಕೇ ಹೋದ ಉದಾಹರಣೆಗಳು ಹೆಚ್ಚು.

ನಿಕೇತ್ ರಾಜ್ ಮೌರ್ಯ ಅವರಿಗೆ ಇಷ್ಟೆಲ್ಲ ಅನುಕೂಲವಿದ್ದರೂ ಕಾಂಗ್ರೆಸ್ ಪಕ್ಷ ಯಾರಿಗೂ ನಿಷ್ಠರಲ್ಲದ ಮುದ್ದಹನುಮೇಗೌಡರನ್ನು ಕರೆತಂದು ಟಿಕೆಟ್ ನೀಡುವ ತಪ್ಪು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.

ಈ ನಡುವೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ತಮ್ಮ ಮಗ ಟಿ.ಜೆ.ಸಂಜಯ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದು ಸಫಲವಾಗುವ ಸಾಧ್ಯತೆಯೂ ಕಡಿಮೆ. ಮುದ್ದಹನುಮೇಗೌಡ, ನಿಕೇತ್ ರಾಜ್ ಮೌರ್ಯ (niketh raj mourya), ಟಿ.ಜೆ.ಸಂಜಯ್ ಮತ್ತು ತನ್ನದೇ ಯುವಕರ ಗುಂಪು ಕಟ್ಟಿಕೊಂಡು ಓಡಾಡುತ್ತಿರುವ ಒಕ್ಕಲಿಗ ಸಮಯದಾಯದ ಮುರುಳೀಧರ ಹಾಲಪ್ಪ ಅವರ ನಡುವೆ ಕಾಂಗ್ರೆಸ್ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದುನೋಡಬೇಕು.

ಈ ನಡುವೆ ಬಿಜೆಪಿಯಿಂದ ವಿ.ಸೋಮಣ್ಣ (v somanna) ಅಥವಾ ಜೆ.ಸಿ.ಮಾಧುಸ್ವಾಮಿ (jc madhuswamy) ನಡುವೆ ಒಬ್ಬರನ್ನು ಅಭ್ಯರ್ಥಿ ಮಾಡುವ ಸಾಧ್ಯತೆ ಇದೆ. ಹಾಲಿ ಸಂಸದ ಜಿ.ಎಸ್.ಬಸವರಾಜು (G S Basavaraju) ಅವರಿಗೆ ಈಗ ಇಳಿವಯಸ್ಸು. 84 ವರ್ಷದ ಬಸವರಾಜು ಅವರಿಗೆ ಇನ್ನೂ ರಾಜಕೀಯದ ದಾಹ ಇಳಿದಿಲ್ಲ. ಬಿಜೆಪಿಯಿಂದ ಟಿಕೆಟ್ ಕೊಡದೇ ಇದ್ದರೆ (ವಯಸ್ಸಿನ ಕಾರಣಕ್ಕೆ) ಬಸವರಾಜು ಅವರು ಕಾಂಗ್ರೆಸ್ ಕದ ತಟ್ಟಿದರೂ ಆಶ್ವರ್ಯವಿಲ್ಲ!

More articles

Latest article