ಮೈಸೂರು: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕಿದ್ದರೆ ಸಮುದಾಯದ ಎಲ್ಲ ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿತ್ತು. ಸಮುದಾಯದ ಜನಸಂಖ್ಯೆ ಶೇ 17ರಿಂದ 30ರಷ್ಟು ಆಗುತ್ತಿತ್ತು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದ್ದಾರೆ. ಇಲ್ಲಿನ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜಿರುವ ಮೂರು ದಿನಗಳ ‘ವೀರಶೈವ ಲಿಂಗಾಯತ ಬಿಸಿನೆಸ್ ಕಾಂಕ್ಲೇವ್’ನಲ್ಲಿ ಮಾತನಾಡಿದರು.
ಮೀಸಲಾತಿ ಕಾರಣಕ್ಕಾಗಿ ಲಿಂಗಾಯತ ಉಪ್ಪಾರ, ಕುಂಬಾರ, ಕುರುಬ, ಹಡಪದ, ಬಣಜಿಗ, ಗಾಣಿಗ, ಸಾದರ, ರೆಡ್ಡಿ ಮೊದಲಾದ ಉಪ ಪಂಗಡಗಳು ಲಿಂಗಾಯತ ಬದಲು ಹಿಂದೂ ಎಂದೇ ಬರೆಸಿವೆ. ಹೀಗಾಗಿ ಜಾತಿಗಣತಿಯಲ್ಲಿ ಸಮುದಾಯದ ಉಪ ಪಂಗಡಗಳು ಹರಿದು ಹಂಚಿಹೋಗಿವೆ. ‘2 ‘ಎ’ ಮೀಸಲಾತಿಗಾಗಿ ಗಾಣಿಗ ಲಿಂಗಾಯತರು ಹಿಂದೂ ಗಾಣಿಗ ಎಂದೂ, 3 ‘ಎ’ ಮೀಸಲಿಗೆ ರೆಡ್ಡಿ ಲಿಂಗಾಯತರು ಹಿಂದೂ ರೆಡ್ಡಿ ಎಂದೇ ಬರೆಸಿದ್ದಾರೆ. ಅದನ್ನು ತಪ್ಪೆಂದು ಹೇಳುವುದಿಲ್ಲ. ಅವರಿಗೆ ಬೇಕಿರುವುದು ಶೈಕ್ಷಣಿಕ, ಉದ್ಯೋಗ ಮೀಸಲಾತಿ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಕ್ಕಿದ್ದರೆ ಈ ಎಲ್ಲ ಉಪ ಪಂಗಡಗಳಿಗೂ ನ್ಯಾಯ ಸಿಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸ್ವತಂತ್ರ ಧರ್ಮ ಹೋರಾಟವನ್ನು ವಿರೋಧಿಸಿದವರಿಗೆ ಈಗ ಅರ್ಥವಾಗಿದೆ. ವೀರಶೈವ ಮಹಾ ಅಧಿವೇಶನದಲ್ಲಿ ಕಾಶಿ ಸ್ವಾಮೀಜಿ ಅವರಿಗೂ ಇದನ್ನೇ ಹೇಳಿರುವೆ. ಸುತ್ತೂರು, ಸಿದ್ದಗಂಗೆ, ಗದಗ ಸೇರಿದಂತೆ ಎಲ್ಲ ಮಠಗಳ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಒಗ್ಗಟ್ಟಾಗಿದ್ದರೆ ಮಾತ್ರ ರಾಜಕೀಯ ಶಕ್ತಿಯಾಗಿ ಉಳಿಯುತ್ತೇವೆ. ಇಲ್ಲದಿದ್ದರೆ ನಿರಾಶರಾಗಿ ಹೋಗುತ್ತೇವೆ ಎಂದರು. 1871ರ ಮೈಸೂರು ರಾಜ್ಯದ ಜನಗಣತಿ ನೋಡಿದರೆ ಸ್ವತಂತ್ರ ಧರ್ಮದ ಇತಿಹಾಸ ಗೊತ್ತಾಗುತ್ತದೆ. ಹಿಂದೆ ಮಾಡಿದ ತಪ್ಪುಗಳನ್ನು ಮಾಡಬಾರದು’ ಎಂದು ಅಭಿಪ್ರಾಯಪಟ್ಟರು.