ಮಕ್ಕಳ ದಿನಾಚರಣೆ ವಿಶೇಷ
ಇಂದು ಮಕ್ಕಳ ದಿನಾಚರಣೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಗಿರಬೇಕು? ಹೇಗಿರಬಾರದು ಎಂಬುದನ್ನು ವಿಶಿಷ್ಟವಾಗಿ ಬರೆಯುತ್ತಾ ಶಿಕ್ಷಕರನ್ನು ಸಂವೇದನಾಶೀಲ ಗೊಳಿಸುವ ಪ್ರಯತ್ನ ಮಾಡಿದ್ದಾರೆ ಶಿಕ್ಷಕಿ ವೇದಾ ಆಠವಳೆ. ಈ ಲೇಖನದೊಂದಿಗೆ ಎಲ್ಲ ಮಕ್ಕಳಿಗೆ ಕನ್ನಡ ಪ್ಲಾನೆಟ್ ಜಾಲತಾಣದ ಪ್ರೀತಿಯ ಶುಭಾಶಯಗಳು.
ಶನಿವಾರದ ಆ ದಿನ. ಮಕ್ಕಳಿಗೆ ರಜೆ, ಶಿಕ್ಷಕರಿಗೆ ಶಾಲೆಯ ಕೆಲಸವಿರುವ ಪುಣ್ಯ ದಿನ. ಖಾಲಿ ತರಗತಿಯ ಮೌನದ ನಡುವೆ ಕೂತು ಬರೆಯುವ ಕೆಲಸದಲ್ಲಿ ಮಗ್ನಳಾಗಿದ್ದೆ. ಇದ್ದಕ್ಕಿದ್ದಂತೆ ಏನೋ ಗುಸು ಗುಸು ಸದ್ದು ಕೇಳಿಸಿತು. ತಲೆ ಎತ್ತಿ ನೋಡಿದರೆ ಯಾರೋ ಅಪರಿಚಿತರು ಕೂತಿದ್ದಾರೆ. ಏನಿದು?! ಇವರ್ಯಾರು!!? ಎಂದರೆಕ್ಷಣ ಗಾಬರಿಯಾಯಿತು. ಒಬ್ಬಿಬ್ಬರಲ್ಲ ಹತ್ತು ಜನರಿದ್ದಾರೆ. ತಟ್ಟನೆ ಎದ್ದು ನಿಂತ ನನ್ನನ್ನು ನೋಡಿ, ಅವರುಗಳು ಸರಸರನೆ ಮುಂದೆ ಬಂದು “ನಾವ್ಯಾರು ನೆನಪಿದೆಯೇ?” ಎನ್ನುತ್ತಾ ನಗೆ ಬೀರಿದರು. ಗಮನವಿಟ್ಟು ನೋಡಿದರೆ ಎಲ್ಲರೂ ನನ್ನ ಹಳೆಯ ವಿದ್ಯಾರ್ಥಿಗಳು.
ಏನು ನೀವಿಲ್ಲಿ? ಎಂದೆ.
ಟೀಚರ್ …ನಿಮಗೇನೋ ಹೇಳುವುದಿತ್ತು ಅದಕ್ಕೆ ಎಲ್ಲರೂ ಜೊತೆಯಾಗಿ ಬಂದೆವು ಎಂದರು.
ಅದೇನು ಹೇಳಿ ಕೇಳುವೆ ಅಂದೆ.
ಹರ್ಷಿತಾ – ನಾನಾಗ 9ನೇ ಕ್ಲಾಸು. ಒಮ್ಮೆ ನೀವು ತರಗತಿಗೆ ಪ್ರವೇಶಿಸುವಾಗ ನಾನು ಕಾರ್ತಿಕನ ಜೊತೆ ಮಾತನಾಡುತ್ತಿದ್ದೆ. ನೀವು ಒಳಗೆ ಬಂದವರೇ ಕಣ್ಣು ಕೆಂಪಾಗಿಸಿಕೊಂಡು ಛೀ ..ಥೂ .. ಎನ್ನುತ್ತಾ ನಮಗೆ ಗೆಳೆತನಕ್ಕೆ ಮಿಗಿಲಾದ ಸಂಬಂಧವಿದೆ… ಎಂದೆಲ್ಲಾ ಏನೇನೋ ಅಂದಿರಿ. ನಿಮ್ಮ ಬಾಲ್ಯದ ದಿನಗಳಲ್ಲಿ ಹೀಗಿರಲಿಲ್ಲ.. ಗಂಡು ಹೆಣ್ಣು ಮಾತಾಡುವುದು ಬಿಡಿ, ಒಬ್ಬರನ್ನೊಬ್ಬರು ನೋಡುತ್ತಲೂ ಇರಲಿಲ್ಲ ಎಂದೆಲ್ಲ ಆದರ್ಶದ ಪಾಠ ಮಾಡಿದಿರಿ. ಟೀಚರ್.. ನಿಮ್ಮ ಕಾಲಕ್ಕೂ ಇಂದಿಗೂ ಮೂರು ದಶಕಗಳ ಅಂತರವಿದೆ. ಕಾಲದ ಜೊತೆ ಸಾಮಾಜಿಕ ನಿಯಮಗಳು ಬದಲಾಗುತ್ತವೆ. ಆದರೆ ನೀವ್ಯಾಕೆ ಬದಲಾಗಲಿಲ್ಲ? ಹಾಗೊಂದು ವೇಳೆ ನನ್ನದು ತಪ್ಪೇ ಆಗಿದ್ದರೂ, ಎಲ್ಲರ ಮುಂದೆ ದೂಷಿಸುವ ಬದಲು ನನ್ನನ್ನು ಹೊರಗಡೆ ಕರೆದು ಮಾತನಾಡಿಸಬಹುದಿತ್ತು. ನನ್ನ ಹದಿಹರೆಯದ ನಡವಳಿಕೆಯನ್ನು ತಿದ್ದಬಹುದಿತ್ತು ಅಲ್ಲವೇ ?
ಆದಿತ್ಯ: ಟೀಚರ್, ನಾನಾಗ ಆರನೇ ತರಗತಿಯಲ್ಲಿದ್ದೆ. ಒಂದು ದಿನ ನೋಟ್ ಪುಸ್ತಕವನ್ನು ಮನೆಯಲ್ಲೇ ಮರೆತು ಬಂದಿದ್ದೆ. ನೀವು ಅಷ್ಟಕ್ಕೇನೆ ಕೆಟ್ಟದಾಗಿ ಬೈದು ತರಗತಿಯಿಂದ ಹೊರಗೆ ಕಳಿಸಿದಿರಿ. ಅದರಿಂದ ನನಗೆ ಮತ್ತು ನಿಮಗೆ ಏನಾದರೂ ಉಪಯೋಗವಾಯಿತೇ?
ಹೊರಗೆ ನಿಂತಿದ್ದ ಅಷ್ಟೂ ಹೊತ್ತು ನಾನು ಅತ್ತಿತ್ತ ನೋಡುತ್ತಾ ಸಮಯ ಕಳೆದೆ. ಅದರ ಬದಲು ನನಗೆ ಬೇರೆ ಪುಸ್ತಕದ ಹಾಳೆಯಲ್ಲಿ ಆ ದಿನದ ಪಾಠ ಬರೆದುಕೊಳ್ಳಲು ಹೇಳಬಹುದಿತ್ತು ನೀವು….. ಅದನ್ನು ನಾನು ಮರುದಿನ ನೋಟು ಪುಸ್ತಕದಲ್ಲಿ ಬರೆದು ತರುತ್ತಿದ್ದೆ ಅಥವಾ ಆ ಹಾಳೆಯನ್ನೇ ಅಂಟಿಸುತ್ತಿದ್ದೆ. ಮರೆತದ್ದು ನನ್ನ ತಪ್ಪು ನಿಜ. ಆದರೆ ತಪ್ಪನ್ನು ಒಪ್ಪು ಮಾಡಲು ಅನೇಕ ದಾರಿಗಳಿದ್ದವು ಅಲ್ಲವೇ?
ಸುನಯನಾ : ನಾನಾಗ ಎಂಟನೇ ತರಗತಿಯಲ್ಲಿದ್ದೆ. ಒಮ್ಮೆ ನೀವು ಪಾಠ ಮಾಡುವಾಗ ತೂಕಡಿಸುತ್ತಿದ್ದೆ. ಹಿಂದಿನ ರಾತ್ರಿ ಏನೋ ಕಾರಣದಿಂದ ಸರಿಯಾಗಿ ನಿದ್ದೆ ಬಂದಿರಲಿಲ್ಲ. ನೀವು ನನ್ನನ್ನು ಎದ್ದು ನಿಲ್ಲಲು ಹೇಳಿ, ಎಲ್ಲರೆದುರು ಗೇಲಿ ಮಾಡಿದಿರಿ. ಆಲಸಿ, ನಿಷ್ಪ್ರಯೋಜಕಿ ಎಂದೆಲ್ಲ ಬೈದಿರಿ. ಅದರ ಬದಲು ತೂಕಡಿಕೆಗೆ ಕಾರಣವನ್ನು ಕೇಳಬಹುದಿತ್ತು. ಮುಖ ತೊಳೆದುಕೊಂಡು ಬಾ… ಸ್ವಲ್ಪ ಹಗುರವೆನಿಸುತ್ತದೆ.. ಇಂದು ಸಂಜೆ ಮನೆಗೆ ಹೋಗಿ ಬೇಗ ಮಲಗುವಿಯಂತೆ ಎಂದು ಹೇಳಬಹುದಿತ್ತು ಅಲ್ಲವೇ?….
ಚಿರಾಗ್ -ಟೀಚರ್… ನಾನು 10ನೇ ತರಗತಿಯಲ್ಲಿದ್ದಾಗ ಒಂದು ದಿನ ನಿಮ್ಮ ಪಾಠದ ನಡುವೆ ಫಕ್ಕನೆ ನಗು ಬಂತು. ಬೆಂಚಿನ ಹಿಂದಿನಿಂದ ಕೇಳುತ್ತಿದ್ದ ಪೆನ್ನಿನ ಕಿಟಿ.. ಕಿಟಿ.. ಶಬ್ದದ ಜೊತೆಗೆ ಏನೋ ತಮಾಷೆ ಮಾತು ಕೇಳುವಾಗ ನಗು ಬಂದಿತ್ತು.. ಅಷ್ಟಕ್ಕೆ ನೀವು ತಾಳ್ಮೆ ಕಳೆದುಕೊಂಡು ನನ್ನನ್ನು ಹೀಯಾಳಿಸಿದಿರಿ.. ಅವಾಚ್ಯ ಶಬ್ದಗಳಿಂದ ಮೂದಲಿಸಿದಿರಿ. ಟೀಚರ್.. ತರಗತಿಯಲ್ಲಿ ಕೊಂಚ ನಕ್ಕರೆ ಅದು ಘೋರ ಅಪರಾಧವೇ?? ಇದೊಂದು ಮಕ್ಕಳ ಚೇಷ್ಟೆ.. ಎನ್ನುತ್ತಾ ಆ ವಿಷಯವನ್ನು ಅಲ್ಲೇ ಬಿಟ್ಟು ಪಾಠ ಮುಂದುವರಿಸಬಹುದಿತ್ತು ಅಲ್ಲವೇ?
ರೋಷನ್ – ಟೀಚರ್…ನೀವು ಯಾಕೆ ಯಾವಾಗಲೂ ದನಿ ಎತ್ತರಿಸಿ ಮಾತನಾಡುತ್ತಿದ್ರಿ? ಆಗ ನಿಮಗಿಂತ ದೊಡ್ಡ ದನಿಯಲ್ಲಿ ಮಾತಾಡಬೇಕು ಎಂಬ ವಿಕೃತ ಆಸೆಯಾಗುತ್ತಿತ್ತು ನಮಗೆ. ತರಗತಿಯನ್ನು ಹೆದರಿಸಿ -ಕಿರುಚಿ -ಬೈದು ಎಂದಿಗೂ ಗೆಲ್ಲಲಾರಿರಿ… ಇಷ್ಟೊಂದು ವರ್ಷ ಶಿಕ್ಷಕವೃತ್ತಿಯಲ್ಲಿ ಕಳೆದರೂ ಇವೆಲ್ಲ ಯಾಕೆ ನಿಮಗೆ ಅರಿವಾಗಲಿಲ್ಲ? ಹೀಗೆ ದಿನವೂ ತಾಳ್ಮೆಗೆಟ್ಟರೆ ನಿಮ್ಮ ಆರೋಗ್ಯ ಏನಾಗಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ನನಗೆ ನಿಂತಲ್ಲೇ ಎಲ್ಲವೂ ಗರಗರನೆ ಸುತ್ತಿದಂತೆ ಅನಿಸಿತು. ಅಲ್ಲಿದ್ದ ಇತರರೂ ಗಹಗಹಿಸುತ್ತ ಒಂದೇ ಸಮನೆ ಏನೇನೋ ಆರೋಪಗಳನ್ನು ಹೇರಲಾರಂಭಿಸಿದರು.
ಆದರೆ… ಆದರೆ… ನಾನು ಯಾವತ್ತೂ ಹೀಗಿರಲಿಲ್ಲ… ಯಾವತ್ತೂ ಇಂಥ ನೀಚ ವರ್ತನೆಯನ್ನು ಮಕ್ಕಳ ಮೇಲೆ ತೋರಿಸಲಿಲ್ಲ… ಇವರ್ಯಾಕೆ ನನ್ನನ್ನು ದೂರುತ್ತಿದ್ದಾರೆ???…ಯಾರೋ ಬೇರೆ ಶಿಕ್ಷಕರ ನಡವಳಿಕೆಯನ್ನು ನನ್ನ ಮೇಲೆ ಆರೋಪಿಸುತ್ತಿದ್ದಾರೆ…. ಯಾಕೆ ? ಯಾಕೆ ?
ಶಿಕ್ಷಕರು ಹೇಗಿರಬೇಕು ಎಂದು ನೀವು ಹೇಳುತ್ತಿರುವುದೆಲ್ಲವೂ ನಿಜವೇ … ನಾನು ಹಾಗೇ ಇದ್ದೆ.. ..ಈಗಲೂ ಇದ್ದೇನೆ ಕೂಡ.. ಎನ್ನುತ್ತಾ ಜೋರಾಗಿ ಅಳಲಾರಂಭಿಸಿದೆ..
ಅಲಾರ್ಮು ಟಿಣೀಈಈ ..ಟಿನಣೀಈಈ .. ಟಿನ್ ಟಿನಣೀಈಈ… ಟಿನಣೀಈಈ…ಎನ್ನುತ್ತಾ ಕರ್ಕಶವಾಗಿ ಶಬ್ದ ಮಾಡುತ್ತ ನನ್ನನ್ನು ಈ ಲೋಕಕ್ಕೆ ತಂದಿತು. ಕನಸೊ.. ನನಸೋ.. ನಿಜವೋ.. ಸುಳ್ಳೋ.. ನಾನು ಅವಳೋ .. ಅವಳಲ್ಲವೋ ಎಂಬ ಗೊಂದಲಗಳನ್ನು ಕೊಡಹಿ ಎದ್ದೆ.
ವೇದಾ ಆಠವಳೆ , ಬೆಂಗಳೂರು
ಶಿಕ್ಷಕರು
ಇದನ್ನೂ ಓದಿ- ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಆನಂದ