ಗೃಹಲಕ್ಷ್ಮೀ ಯೋಜನೆ ಕುರಿತು ಬಿಜೆಪಿ ಅಪಪ್ರಚಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಂಡನೆ

Most read

ಜತ್ (ಮಹಾರಾಷ್ಟ್ರ) : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆ ಕುರಿತು ಮಹಾರಾಷ್ಟ್ರದಲ್ಲಿ ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದ್ದು, ಯಾರೂ ಕಿವಿಗೊಡಬಾರದು. ನಿರಂತರವಾಗಿ 14 ತಿಂಗಳಿನಿಂದ ರಾಜ್ಯದ ಮಹಿಳೆಯರಿಗೆ ಅತ್ಯಂತ ವ್ಯವಸ್ಥಿತವಾಗಿ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಸಲಾಗುತ್ತಿದೆ ಎಂದು ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜತ್ ವಿಧಾನಸಭಾ ಕ್ಷೇತ್ರದ ಉಮದಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಭಾಗವಹಿಸಿ ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಮಸಿಂಹ ಬಾಳಾಸೋ ಸಾವಂತ್ ಅವರ ಪರವಾಗಿ ಸಚಿವರು ಮಾತನಾಡುತ್ತಿದ್ದರು.

ಗೃಹಲಕ್ಷ್ಮೀ ಯೋಜನೆ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಮಹಾರಾಷ್ಟ್ರ ಬಿಜೆಪಿ ನೀಡಿದ್ದ ಸುಳ್ಳು ಜಾಹಿರಾತನ್ನೂ ನೋಡಿದ್ದೇನೆ. ಈವರೆಗೆ 30 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ನಾವು ಕರ್ನಾಟಕದ ಮಹಿಳೆಯರಿಗೆ ನೀಡಿದ್ದೇವೆ. ಕಳೆದ 14 ತಿಂಗಳಿನಿಂದ ನಿರಂತರವಾಗಿ ಯೋಜನೆ ನಡೆಯುತ್ತಿದೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದರು.

ಇಲ್ಲಿಯ ಸರಕಾರ ಭಾವನೆಗಳ ಮೇಲೆ ಆಟ ಆಡಲು ಮುಂದಾಗಿದೆ. ನಾವು ಬದುಕಿನ ಮೇಲೆ ಆಡಳಿತ ನಡೆಸುತ್ತೇವೆ. ಇಲ್ಲಿನ ಅಭ್ಯರ್ಥಿ ವಿಕ್ರಮ ಸಿಂಹ್ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದವರು. ಅತ್ಯುತ್ತಮ ಕೆಲಸ ಮಾಡುವ ಮನೋಭಾವ ಉಳ್ಳವರು. ಈ ಹಿಂದೆ ವಿಧಾನಸಭೆಯಲ್ಲಿ ಒಮ್ಮೆ ಸೋತರೂ ಜನಸೇವೆ ನಿಲ್ಲಿಸಲಿಲ್ಲ. ಜನಸಂಪರ್ಕ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.

ನನ್ನ ಕ್ಷೇತ್ರದಲ್ಲಿ ನನ್ನ ಜಾತಿಯಾದ ಲಿಂಗಾಯತರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಮರಾಠಿ ಭಾಷಿಕರೇ ದೊಡ್ಡ ಪ್ರಮಾಣದಲ್ಲಿದ್ದಾರೆ. ಆದರೂ ನನ್ನನ್ನು 56 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಜಾತಿ ರಾಜಕಾರಣ ಎಲ್ಲೂ ಇಲ್ಲ. ಎಲ್ಲವೂ ಸುಳ್ಳು. ಎಲ್ಲ ಜಾತಿಯವರು ಒಂದಾಗಿದ್ದೇವೆ. ಬಾಬಾಸಾಹೇಬ ಅಂಬೇಡ್ಕರ್, ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜ ಅವರ ತತ್ವಗಳ ಮೇಲೆ ನಡೆಯುತ್ತಿದ್ದೇವೆ ಎಂದು ಅವರು ಪ್ರತಿಪಾದಿಸಿದರು.

ಈ ಭಾಗದಲ್ಲಿ ಕನ್ನಡಿಗರು ದೊಡ್ಡ ಸಖ್ಯೆಯಲ್ಲಿದ್ದಾರೆ. ನನಗೂ ಈ ಭಾಗಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕರ್ನಾಟಕ ಸರಕಾರ ಅಗತ್ಯ ನೆರವು ನೀಡಲಿದೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ, ಮರಾಠಿ ವಾಕ್ ಚಾತುರ್ಯಕ್ಕೆ ಅಲ್ಲಿನ ಜನ ಚಪ್ಪಾಳೆಗಳ ಸುರಿಮಳೆಗೈದರು. ಈ ವೇಳೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ವಿಠ್ಠಲ ಕಟ್ಲಗೊಂಡ, ನಾನಾ ಶಿಂಧೆ, ಚನ್ನಪ್ಪ ಹೊರ್ತಿಕರ್, ರೇಷ್ಮಾ ಹೊರ್ತಿಕರ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

More articles

Latest article