ಮರ್ಯಾದೆಗೇಡು ಕೊ*ಲೆಗೆ ಕಾನೂನಿನ ಕಡಿವಾಣ

ಮರ್ಯಾದೆ ಹ*ತ್ಯೆ ತಡೆಯಲು ಕರ್ನಾಟಕದಲ್ಲಿ ಕಠಿಣವಾದ ಪ್ರತ್ಯೇಕ ಕಾನೂನನ್ನು ಜಾರಿಗೆ ತರಬೇಕೆಂದು ಪ್ರಜ್ಞಾವಂತರು ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವೇ ಶುರುವಾಗಿತ್ತು. ಈ ಅಭಿಯಾನಕ್ಕೆ ಸಾವಿರಾರು ಜನ ಸ್ಪಂದಿಸಿದ್ದರು. ಪತ್ರಕರ್ತರು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಬೆಂಬಲಿಸಿದ್ದರು. ಜನರ ಒತ್ತಾಯಕ್ಕೆ ಸ್ಪಂದಿಸಿದ ಕರ್ನಾಟಕ ಸರಕಾರವು “ಇವ ನಮ್ಮವ, ಇವ ನಮ್ಮವ” ಹೆಸರಿನಲ್ಲಿ “ಕರ್ನಾಟಕ ವಿವಾಹ ಆಯ್ಕೆಯ ಸ್ವಾತಂತ್ರ್ಯ ಮತ್ತು ಗೌರವದ ಹೆಸರಿನ ಅಪರಾಧಗಳ ತಡೆ ಮತ್ತು ನಿಷೇಧ ಕಾಯ್ದೆ- 2026” ನ್ನು ಜಾರಿಗೊಳಿಸಲು ಡಿಸೆಂಬರ್ 12 ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಿದೆ –ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಡಿಸೆಂಬರ್ 2025, ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯ ಪಾಟೀಲ ಎಂಬ ಗರ್ಭಿಣಿ ಯುವತಿಯನ್ನು ಲಿಂಗಾಯತ ಕೋಮಿನ ಆಕೆಯ ತಂದೆ ಹಾಗೂ ಸಂಬಂಧಿಕರು ಹಾಡು ಹಗಲೇ ಹೊಡೆದು ಕೊಂದಿದ್ದರು. ದಲಿತ ಯುವಕ ವಿವೇಕಾನಂದನನ್ನು ಪ್ರೀತಿಸಿ ಮದುವೆಯಾಗಿದ್ದೇ ಆಕೆಯ ಹತ್ಯೆಗೆ ಕಾರಣ. ಈ ಅಮಾನವೀಯ ಪ್ರಕರಣ ನಾಡಿನಾದ್ಯಂತ ಸುದ್ದಿಯಾಗಿತ್ತು.

ಮಹಾರಾಷ್ಟ್ರದ ನಾದೆಂಡ್ ನಲ್ಲಿ 2025 ರಲ್ಲಿ ತಂದೆಯೇ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಕೊಂ*ದು ಬಾವಿಗೆ ಹಾಕಿದ್ದ. 2026 ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಶವಗಳು ನದಿ ದಡದಲ್ಲಿ ಪತ್ತೆಯಾಗಿದ್ದವು. ಯುವತಿಯ ಸಹೋದರರೇ ಕೊಲೆಪಾತಕರಾಗಿದ್ದರು.

ಮರ್ಯಾದೆ ಹೆಸರಲ್ಲಿ ನಡೆಯುವ ಇಂತಹ ಹಲವಾರು ಅಮಾನವೀಯ ದುರ್ಘಟನೆಗಳು ಜಾತಿ ತಾರತಮ್ಯದ ಕಾರಣಕ್ಕೆ ರಾಜ್ಯದಲ್ಲಿ ಅಷ್ಟೇ ಯಾಕೆ, ದೇಶಾದ್ಯಂತ ನಡೆದಿವೆ, ನಡೆಯುತ್ತಲೇ ಇರುತ್ತವೆ. ಇವೆಲ್ಲಾ ಜಾತಿ ಆಧಾರಿತ ಕ್ರೌರ್ಯಗಳು, ಜಾತಿ ಭಯೋತ್ಪಾದನೆಗಳು ಅಂದರೆ Cast Terrorism. ಇನ್ನೂ ನಿರ್ಧಿಷ್ಟವಾಗಿ ಹೇಳಬೇಕೆಂದರೆ ಮರ್ಯಾದೆಗೇಡು ಹತ್ಯೆಗಳು ಅಂದರೆ Honour Killing.

ಮಾನ್ಯಾ ಪಾಟೀಲ

2022-23 ರ ಅವಧಿಯಲ್ಲಿ ಕರ್ನಾಟಕದಲ್ಲಿ 12 ಮರ್ಯಾದೆಗೇಡು ಹತ್ಯೆಗಳು ದಾಖಲಾಗಿವೆ. ಕಳೆದ ಐದು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಆನರ್ ಕಿಲ್ಲಿಂಗ್ ಪ್ರಕರಣಗಳು ನಡೆದಿವೆ. ದೇಶಾದ್ಯಂತ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ರೀತಿಯ ಮರ್ಯಾದೆಗೇಡು ಹತ್ಯೆ ಇಂದು ನಿನ್ನೆಯದಲ್ಲ. ಮೊದಲಿನಿಂದಲೂ ನಡೆಯುತ್ತಲೇ ಇವೆ. 12 ನೇ ಶತಮಾನದಲ್ಲಿ  ಬಸವಣ್ಣನವರು ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಗೂ, ಸಮಗಾರ ಹರಳಯ್ಯನ ಮಗ ಶೀಲವಂತನಿಗೂ ಅಂತರ್ಜಾತಿ ವಿವಾಹ ಮಾಡಿಸಿದ್ದರು. ಇದರಿಂದಾಗಿ ಉಂಟಾದ ಸಂಘರ್ಷ ಕಲ್ಯಾಣವನ್ನೇ ನಾಶ ಮಾಡಿತು. ಸಾರ್ವಜನಿಕವಾಗಿ ಮರ್ಯಾದೆ ಹತ್ಯೆಯನ್ನು ಮಾಡಿಸಲಾಯ್ತು. ಅದೇ ಜಾತಿ ಕ್ರೌರ್ಯ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಅನ್ಯ ಜಾತಿಯವರನ್ನು ಪ್ರೀತಿಸುವುದೇ ದೊಡ್ಡ ಅಪರಾಧವಾಗಿದೆ. ಮದುವೆಯಾದರಂತೂ ಘನಘೋರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕಾನೂನು ವ್ಯಾಪ್ತಿ ಮೀರಿ ಹತ್ಯೆ ಮಾಡಲಾಗುತ್ತಿದೆ.

ಭಾರತದಲ್ಲಿ ಮರ್ಯಾದೆಗೇಡು ಹತ್ಯೆ ನಿಷೇಧಕ್ಕೆ ಕಾನೂನು ಇಲ್ಲವಾಗಿದೆ. ಇವುಗಳನ್ನೂ ಸಹ IPC 302 ರ ಸಾಮಾನ್ಯ ಹತ್ಯೆ ಪ್ರಕರಣಗಳ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮರ್ಯಾದೆ ಹತ್ಯೆಗಳಿಗೆ ಪ್ರತ್ಯೇಕ ಕಾಯಿದೆ ರೂಪಿಸಲು ಶಿಫಾರಸ್ಸು ಮಾಡಿದೆ. ಆದರೆ ಜಾತಿ ವರ್ಣ ವ್ಯವಸ್ಥೆಯ ಪರವಾಗಿರುವ ಕೇಂದ್ರ ಸರಕಾರ ಇಂತಹುದೊಂದು ಕಾಯಿದೆ ತರಲು ಆಸಕ್ತಿಯನ್ನು ತೋರುತ್ತಿಲ್ಲ. ತಂದಿದ್ದೇ ಆದರೆ ಉತ್ತರ ಭಾರತದ ಗ್ರಾಮ ಗ್ರಾಮಗಳಲ್ಲಿ ಪ್ರಭಾವಶಾಲಿಯಾಗಿರುವ ಅನಧಿಕೃತ ಖಾಪ್ ಪಂಚಾಯತಿಗಳ ವಿರೋಧವನ್ನು ಸರಕಾರ ಎದುರಿಸಬೇಕಾಗುತ್ತದೆ. ಹೀಗಾಗಿ ಜಾತಿ ಎಂಬ ಜೇನಿನ ಗೂಡಿಗೆ ಗಾಯ ಮಾಡಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಆದರೆ ಕರ್ನಾಟಕ ಸರಕಾರ ಅಂತಹುದೊಂದು ಕಾಯಿದೆ ಜಾರಿಯ ಪ್ರಯತ್ನಕ್ಕೆ ಚಾಲನೆ ಕೊಟ್ಟಿದೆ. ಮರ್ಯಾದೆಹತ್ಯೆ ತಡೆಯಲು ಕರ್ನಾಟಕದಲ್ಲಿ ಕಠಿಣವಾದ ಪ್ರತ್ಯೇಕ ಕಾನೂನನ್ನು ಜಾರಿಗೆ ತರಬೇಕೆಂದು ಪ್ರಜ್ಞಾವಂತರು ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವೇ ಶುರುವಾಗಿತ್ತು. ಈ ಅಭಿಯಾನಕ್ಕೆ ಸಾವಿರಾರು ಜನ ಸ್ಪಂದಿಸಿದ್ದರು. ಪತ್ರಕರ್ತರು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಬೆಂಬಲಿಸಿದ್ದರು. ಮಾನ್ಯಾ ಹೆಸರಲ್ಲಿ ಉಗ್ರ ಶಿಕ್ಷೆಯ ಕಾಯ್ದೆಯನ್ನು ರೂಪಿಸಬೇಕೆಂಬ ಒತ್ತಾಯ ಕೇಳಿಬಂದಿತು.

ಜನರ ಒತ್ತಾಯಕ್ಕೆ ಸ್ಪಂದಿಸಿದ ಕರ್ನಾಟಕ ಸರಕಾರ “ಇವ ನಮ್ಮವ, ಇವ ನಮ್ಮವ” ಹೆಸರಿನಲ್ಲಿ “ಕರ್ನಾಟಕ ವಿವಾಹ ಆಯ್ಕೆಯ ಸ್ವಾತಂತ್ರ್ಯ ಮತ್ತು ಗೌರವದ ಹೆಸರಿನ ಅಪರಾಧಗಳ ತಡೆ ಮತ್ತು ನಿಷೇಧ ಕಾಯ್ದೆ- 2026” ನ್ನು ಜಾರಿಗೊಳಿಸಲು ಡಿಸೆಂಬರ 12 ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಿದೆ. ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಈ ವಿಧೇಯಕ ಮಂಡಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ, ಅಂತರ್ ಜಾತಿ ವಿವಾಹ ಕಾರಣಕ್ಕೆ ಮಾಡಲಾಗುವ ಹಲ್ಲೆ, ಹತ್ಯೆ, ಜಾತಿ ದ್ವೇಷ ನಿಯಂತ್ರಿಸಲು ಈ ಕಾಯಿದೆ ನೆರವಾಗಬಲ್ಲುದು.

ಇವ ನಮ್ಮವ, ಇವ ನಮ್ಮವ ವಿಧೇಯಕ-2026 ರ ಉದ್ದೇಶಗಳು

* ಮರ್ಯಾದೆಗೇಡು ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವುದು.

* ಅಂತರ್ಜಾತಿ ವಿವಾಹಗಳಿಗೆ ಜೀವ ಬೆದರಿಕೆ ಇರುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ಒದಗಿಸುವುದು.

* ಮರ್ಯಾದೆಗೇಡು ಹತ್ಯೆ ಮಾಡಿದ ಅಪರಾಧಿಗಳಿಗೆ ಕನಿಷ್ಟ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸುವುದು.

* ಅಂತರ್ಜಾತಿ ವಿವಾಹಿತರ ಮೇಲೆ ಹಲ್ಲೆ ಮಾಡಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ.

* ವಿವಾಹದ ಆಮಿಷವೊಡ್ಡಿ ಜಾತಿಯ ಕಾರಣ ನೀಡಿ ವಂಚಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಶಿಕ್ಷೆ ನೀಡುವುದು.

* ಅಂತರ್ಜಾತಿ ವಿವಾಹಿತ ಸಂತ್ರಸ್ತ ಜೋಡಿಗೆ ಸರಕಾರವೇ ಕಾನೂನಾತ್ಮಕ ರಕ್ಷಣೆ, ಪುನರ್ವಸತಿ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಿ ಅವರ ಗೌರವವನ್ನು ಎತ್ತಿ ಹಿಡಿಯುವುದು.

* ವಿವಾಹದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಆಯ್ಕೆಯ ಸ್ವಾತಂತ್ರ್ಯವನ್ನು ಒದಗಿಸುವುದು, ಜಾತಿ ಆಧಾರಿತ ಅಪರಾಧಗಳನ್ನು ನಿಯಂತ್ರಿಸಲು, ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು.

* ಭಾರತೀಯ ಸಂವಿಧಾನದ ಅನುಚ್ಚೇದ 14, 15, 19 ಹಾಗೂ 21 ರ ಅಡಿಯಲ್ಲಿ ಭದ್ರಪಡಿಸಿರುವ ಸಮಾನತೆ, ಸ್ವಾತಂತ್ರ್ಯ, ಸಮಾನ ಗೌರವ, ವೈಯಕ್ತಿಕ ಸ್ವಾಯತ್ತತೆ ಹಕ್ಕುಗಳ ಉಲ್ಲಂಘನೆಯನ್ನು ಕಾನೂನಾತ್ಮಕವಾಗಿ ನಿರ್ಬಂಧಿಸಲು.

ಈ ಮೇಲೆ ತಿಳಿಸಲಾದ ಉದ್ದೇಶಕ್ಕಾಗಿ ಈ ಪ್ರತ್ಯೇಕ ಮಸೂದೆಯನ್ನು ರೂಪಿಸಲಾಗಿದ್ದು, ಈ ಕಾಯ್ದೆಯ ಅನುಷ್ಠಾನಕ್ಕೆ ವಿಶೇಷ ನ್ಯಾಯಾಲಯಗಳ ರಚನೆ, ಸಹಾಯವಾಣಿಗಳ ಸ್ಥಾಪನೆ ಹಾಗೂ ಪ್ರತ್ಯೇಕ ಪೊಲೀಸ್ ಠಾಣಾ ಘಟಕಗಳನ್ನು ಆರಂಭಿಸುವ ಉದ್ದೇಶವನ್ನೂ ಈ ಮಸೂದೆ ಒಳಗೊಂಡಿದೆ ಹಾಗೂ ಇವುಗಳ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನವನ್ನೂ ಸರಕಾರ ಮೀಸಲಿಡುತ್ತಿದ್ದು, ಅಂತರ್ಜಾತಿ ವಿವಾಹಿತರಿಗೆ ಭದ್ರತೆ ಒದಗಿಸುವುದೇ ಈ ಉದ್ದೇಶಿತ ಕಾಯಿದೆಯ ಗುರಿಯಾಗಿದೆ.

ಇಂತಹುದೊಂದು ಕಾಯಿದೆ ಬೇಕಾಗಿದೆ. ಜಾತಿ ವ್ಯವಸ್ಥೆಯ ತಾರತಮ್ಯ ಹೋಗಲಾಡಿಸಲು ಅಂತರ್ಜಾತೀಯ ವಿವಾಹಗಳು ಅಗತ್ಯವಾಗಿವೆ. ಅಂತರ್ಜಾತಿ ವಿವಾಹವಾದವರಿಗೆ ಜಾತಿವಾದಿಗಳಿಂದಾಗುವ ಅಪಾಯಗಳಿಂದ ರಕ್ಷಣೆಯನ್ನು ಸರಕಾರ ಕೊಡಲೇಬೇಕಿದೆ. ಆದರೆ ಈ ದೇಶದ ಜಾತಿ ವ್ಯವಸ್ಥೆ ಕಾಯಿದೆ ಕಾನೂನುಗಳನ್ನೂ ಮೀರಿದ್ದಾಗಿದೆ, ಸಂವಿಧಾನದ ನೀತಿ ನಿಯಮಗಳಿಗೂ ಜಾತಿಯೆಂಬುದು ಸವಾಲು ಒಡ್ಡುವಂತಿದೆ. ಜಾತಿಯಾಧಾರಿತ ನಿಂದನೆ, ಕ್ರೌರ್ಯ, ಹಲ್ಲೆ, ಹತ್ಯೆಗಳು ದಿನನಿತ್ಯದ ವಿದ್ಯಮಾನಗಳಾಗಿವೆ. ಇಂತಹ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಕೇವಲ ಕಾನೂನುಗಳನ್ನು ಜಾರಿ ಮಾಡುವುದರಿಂದ ಜಾತಿ ತಾರತಮ್ಯ ಹಿಂಸೆಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ.  ಎಲ್ಲಿಯವರೆಗೆ ಜನರಲ್ಲಿ ಜಾಗೃತಿ ಮೂಡುವುದಿಲ್ಲವೋ, ಎಲ್ಲಿಯವರೆಗೆ ಸಮಾಜದಲ್ಲಿ ಜ್ಯಾತ್ಯಾತೀತತೆ ಮನೋಭಾವ ಬೆಳೆಯುವುದಿಲ್ಲವೋ, ಎಲ್ಲಿಯವರೆಗೆ ಜಾತಿಯ ಮಿತಿಗಳ ಮೀರಿ ಪ್ರತಿಯೊಬ್ಬರಿಗೂ ಸಂಗಾತಿ ಆಯ್ಕೆಯ ಸ್ವಾತಂತ್ರ್ಯ ಸಿಕ್ಕುವುದಿಲ್ಲವೋ ಅಲ್ಲಿಯವರೆಗೂ ಅಮಾನವೀಯ ಮರ್ಯಾದೆ ಹತ್ಯೆಗಳನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ಸಾಧ್ಯವಾದಷ್ಟೂ ಒಂದಿಷ್ಟು ನಿಯಂತ್ರಣವಾದರೂ ಆಗುತ್ತದಲ್ಲಾ ಎಂದು ಕೊಳ್ಳಬಹುದಾದರೂ ಶಿಕ್ಷೆಗೆ ಹೆದರಿ ಅಪರಾಧಗಳ ಸಂಖ್ಯೆ ಕಡಿಮೆಯಂತೂ ಆಗುತ್ತಿಲ್ಲ.

ಇಷ್ಟಕ್ಕೂ ಮರ್ತಾದಾಹತ್ಯೆ ಮಾಡಿದ ಜಾತಿವಾದಿಗಳಿಗೆ 5 ವರ್ಷಗಳ ಜೈಲು ಶಿಕ್ಷೆ ಅತೀ ಕಡಿಮೆಯಾಯ್ತು. ಜೀವಾವಧಿ ಶಿಕ್ಷೆಯನ್ನು ನಿಗದಿ ಪಡಿಸಬೇಕಿತ್ತು. ಜಾತಿ ಶ್ರೇಷ್ಠತೆಯ ಕಾರಣಕ್ಕೆ ಬಾಳಿ ಬದುಕಬೇಕಾದ ಜೀವಗಳನ್ನು ಹತ್ಯೆ ಮಾಡುವ ಅಕ್ಷಮ್ಯ ಅಪರಾಧಕ್ಕೆ ಗರಿಷ್ಠ ಶಿಕ್ಷೆಯನ್ನೇ ಕನಿಷ್ಟವಾಗಿಸಬೇಕು.

ಮುಖ್ಯಮಂತ್ರಿಗಳಿಗೆ ಕಾಯಿದೆ ರೂಪಿಸಲು ಮನವಿ

ಈ ಪ್ರಸ್ತಾಪಿತ ಮಸೂದೆ ಇನ್ನೂ ಕಾಯಿದೆಯಾಗಿ ಜಾರಿಯಾಗಿಲ್ಲ. ಉಭಯ ಸದನಗಳು ಒಪ್ಪಿ, ರಾಜ್ಯಪಾಲರು ಸಹಿ ಹಾಕಿದ ಮೇಲೆಯೇ ಕಾಯ್ದೆಯಾಗಿ ಜಾರಿಯಾಗುತ್ತದೆ. ಆದರೆ ಮನುವಾದಿ ಮನಸ್ಥಿತಿಯ ಶಕ್ತಿಗಳು ಅಧಿವೇಶನದಲ್ಲಿ ವಿರೋಧ ವ್ಯಕ್ತಪಡಿಸುವುದಂತೂ ಗ್ಯಾರಂಟಿ. ಇನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಹಿಡನ್ ಅಜೆಂಡಾ ಮಾಡಿಕೊಂಡಿರುವ ಮನುವಾದಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ರಾಜ್ಯಪಾಲರು ಅಷ್ಟು ಸುಲಭವಾಗಿ ಮಸೂದೆಗೆ ಸಹಿ ಹಾಕುವ ಸಾಧ್ಯತೆಗಳೂ ಇಲ್ಲ.

ಇದು ಕೇವಲ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಕೊಡುವ ಕಾಯ್ದೆಯ ಮಾತಾಯಿತು. ಆದರೆ ಅಂತರ್ ಧರ್ಮೀಯ ವಿವಾಹಗಳಿಗೆ ರಕ್ಷಣೆ ಕೊಡುವುದನ್ನೂ ಯಾಕೆ ಈ “ಇವ ನಮ್ಮವ” ಮಸೂದೆಯಲ್ಲಿ ಸೇರಿಸಬಾರದು?. ಅಂತರ್ಜಾತಿಗಿಂತಲೂ ಅಂತರ್‌ಧರ್ಮೀಯ ವಿವಾಹ ಸಂಘರ್ಷಗಳೇ ಅತಿಯಾಗಿವೆ. ಅದಕ್ಕೆ ಲವ್ ಜಿಹಾದ್ ಎಂದು ಕರೆಯುವ ಕೋಮುವಾದಿಗಳು ಹಾಗೂ ಎಲ್ಲಾ ಧರ್ಮದೊಳಗಿನ ಸಂಪ್ರದಾಯವಾದಿ ಪುರೋಹಿತಶಾಹಿಗಳು ಅಂತರ್‌ಧರ್ಮೀಯ ವಿವಾಹಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅನ್ಯ ಕೋಮಿನ ಯುವಕ ಯುವತಿಯರು ಕೂತು ನಿಂತು ಮಾತಾಡಿದರೇ ಹಲ್ಲೆ ಮಾಡುವ ಹಿಂದೂ ಮುಸ್ಲಿಂ ಧರ್ಮೀಯ ಉಗ್ರಪಡೆಗಳು ವಿವಾಹವಾಗಲು ಬಿಡುತ್ತಾರೆಯೇ?

ಮೊನಾಲಿಸಾ ಎನ್ನುವ ಕುಂಭಮೇಳದ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಕೇರಳದಲ್ಲಿ ಮದುವೆಯಾಗಿದ್ದಕ್ಕೆ ಹಿಂದುತ್ವವಾದಿಗಳಿಂದ ಅಪಸ್ವರ ಕೇಳಿಬರುತ್ತಿದೆ. ದೇಶದಲ್ಲಿ ಕೋಮುದ್ವೇಷ ಅಸಹನೆ ಉಲ್ಬಣವಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಎರಡು ಕೋಮಿನ ಯುವಕ ಯುವತಿ ವಿರೋಧವಿಲ್ಲದೇ ಮದುವೆಯಾಗುವುದು ಅಸಾಧ್ಯ ಎಂಬಂತಾಗಿದೆ.

ಪ್ರೀತಿಗೆ ಜಾತಿ ಧರ್ಮಗಳ ಕಟ್ಟುಪಾಡುಗಳಿರಬಾರದು. ಸಂಗಾತಿಯ ಆಯ್ಕೆ ಸ್ವಾತಂತ್ರ್ಯದಲ್ಲಿ ಜಾತಿ ಧರ್ಮ ಅಡ್ಡ ಬರಬಾರದು. ಹಾಗೇನಾದರೂ ಆದರೆ ಅದಕ್ಕೆ ಜ್ಯಾತ್ಯತೀತ ಧರ್ಮನಿರಪೇಕ್ಷ  ಸಂವಿಧಾನದ ರಕ್ಷಣೆ ಕೊಡಬೇಕು. ಈಗ ಪ್ರಸ್ತಾಪಿತ ‘ಇವ ನಮ್ಮವ’ ಕಾಯಿದೆಯನ್ನು ಅಂತರ್ಜಾತಿಯ ವಿವಾಹಗಳ ರಕ್ಷಣೆ ಜೊತೆಗೆ ಧರ್ಮಾಂತರ ದಾಂಪತ್ಯಗಳ ಸಂರಕ್ಷಣೆಗೂ ವಿಸ್ತರಿಸಿದರೆ ದೇಶಕ್ಕೆ ಮಾದರಿಯಾಗ ಬಹುದಾಗಿದೆ. ಪ್ರೀತಿಸಿ ಮದುವೆಯಾಗುವವರಿಗೆ ಆತ್ಮ ಸ್ಥೈರ್ಯ ತುಂಬ ಬಹುದಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- http://ಮರ್ಯಾದಾಗೇಡು ಹತ್ಯೆ ನಿಗ್ರಹಿಸಲು “ಮಾನ್ಯಾ ಕಾಯ್ದೆ” ಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ https://kannadaplanet.com/appeal-to-chief-minister-demanding-manya-act-to-curb-the-honour-killing/

More articles

Latest article

Most read