ಮೋಜಿನ ಜೀವನಕ್ಕೆ 1 ಲಕ್ಷರೂ. ಸಂಬಳದ ಕೆಲಸ ಬಿಟ್ಟು ಕಳ್ಳತನ ಮಾಡುತ್ತಿದ್ದ ಬಿ.ಟೆಕ್‌ ಪದವೀಧರ

Most read

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಬಿ.ಟೆಕ್ ಪದವೀಧರನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗಿನ ವಿರಾಜಪೇಟೆಯ ನೆಹರೂ ನಗರದ ನಿವಾಸಿ ರಿಚರ್ಡ್ ಬಂಧಿತ ಆರೋಪಿ. ಈತನಿಂದ ರೂ.13 ಲಕ್ಷ ಮೌಲ್ಯದ 134 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಚರ್ಡ್‌ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಸುಮಾರು 1 ಲಕ್ಷ ರೂ. ಸಂಬಳವಿತ್ತು. ಆದರೂ ದುರಾಸೆಯಿಂದ ಕೆಲಸ ಬಿಟ್ಟು ಕಳ್ಳತನ ಮಾಡುತ್ತಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರ್ಯಾಂಡೆಡ್ ವಸ್ತುಗಳನ್ನು ಧರಿಸುವ ಖಯಾಲಿ ಹೊಂದಿದ್ದ ಈತ ಸುಲಭವಾಗಿ ಹಣ ಗಳಿಸಲು ಹಾಗೂ ಮೋಜು ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ. ಗ್ರಾಹಕನ ಸೋಗಿನಲ್ಲಿ ಆರೋಪಿಯು ಭದ್ರತಾ ಸಿಬ್ಬಂದಿಗಳಿಲ್ಲದ ಚಿನ್ನಾಭರಣ ಅಂಗಡಿಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಖರೀದಿ ನೆಪದಲ್ಲಿ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ತೋರಿಸುವಂತೆ ಸಿಬ್ಬಂದಿಗೆ ಹೇಳುತ್ತಿದ್ದ. ಆಗ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ. ರಿಚರ್ಡ್‌ ವಿರುದ್ಧ ಕೇರಳದ ಕೊಟ್ಟಾಯಂ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article