Saturday, July 27, 2024

ಅಸಮಾನತೆಯ ಗಾಯಗಳಿಗೆ ಅಕ್ಷರ ಔಷಧಿ ಹುಡುಕಿದ ಯುವ ಕವಿಮಿತ್ರ ಲಕ್ಕೂರು ಆನಂದ

Most read

ಪ್ರತಿಭಾನ್ವಿತ ಕವಿ, ವಿಮರ್ಶಕ, ಅನುವಾದಕ, ಸೃಜನಶೀಲ ಯುವ ಬರಹಗಾರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಲಕ್ಕೂರು ಆನಂದ ನಿಧನ ಹೊಂದಿದ್ದಾರೆ. ಅಗಲಿದ ಚೇತನಕ್ಕೆ ಶಶಿಕಾಂತ ಯಡಹಳ್ಳಿಯವರು ಬರೆದ ನುಡಿನಮನ ಇಲ್ಲಿದೆ.

ಯುವ ಕವಿ ಲಕ್ಕೂರ್ ಆನಂದನ ಅಕಾಲಿಕ ಅಗಲಿಕೆ ನಿಜಕ್ಕೂ ನಿರ್ವಾತ ಸೃಷ್ಟಿಸುವಂತಹುದು. ಅಂತಹ ವಿಚಾರವಂತ ವ್ಯಕ್ತಿ ಕಾವ್ಯ ಕೃಷಿ ಮಾಡುತ್ತಾ, ಇನ್ನಷ್ಟು ವೈಚಾರಿಕ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬದುಕಬೇಕಿತ್ತು. ಆದರೆ ಅಂತಹ ಪ್ರತಿಭೆಯನ್ನು ಉಳಿಸಿಕೊಳ್ಳುವ ಯೋಗ್ಯತೆ ಈ ನಮ್ಮ  ಸಮಾಜಕ್ಕೆ ಇರಲಿಲ್ಲ. ಕವಿ ಪೂರ್ಣಾವಧಿ ಬದುಕಲಿಲ್ಲ. ಸಾವಿಗಾಗಿಯೇ ಕಾಯುತ್ತಿದ್ದಂತೆ ಬದುಕುತ್ತಿದ್ದ ಕವಿ ಆನಂದ  ಮೇ 20 ರಂದು ಕಾಲವಶನಾದ.

ಹೌದು.. ಆತ ಕುಡಿತಕ್ಕೆ ದಾಸನಾಗಿದ್ದ, ಅರಾಜಕ ಬದುಕನ್ನು ರೂಢಿಸಿಕೊಂಡಿದ್ದ, ವಿಕ್ಷಿಪ್ತ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದ, ತನಗನ್ನಿಸಿದ ಹಾಗೆ ಜೀವಿಸುತ್ತಿದ್ದ. ಆದರೆ ಇದೆಲ್ಲದಕ್ಕೂ ಅವನೇ ಕಾರಣವೆಂದು ತೀರ್ಮಾನಕ್ಕೆ ಬರುವುದು ಆತುರದ ನಿರ್ಣಯವಾಗುತ್ತದೆ. ಯಾಕೆಂದರೆ ಯಾವುದೇ ವ್ಯಕ್ತಿ ಕುಡಿತದ ಸೆಳೆತಕ್ಕೆ ಒಳಗಾಗುತ್ತಾನೆಂದರೆ ಅದರ ಹಿಂದೆ ಈ ಸಮಾಜ ಅಡಿಗಡಿಗೆ ಒಡ್ಡುವ ಸವಾಲುಗಳು, ಕೊಡಮಾಡುವ ನೋವುಗಳು, ಸಹಿಸಲಾಗದ ಅಪಮಾನಗಳೂ ಕಾರಣವಾಗಿರುತ್ತದೆ. ಕವಿಯ ಕಾವ್ಯವನ್ನು ಅನುಭವಿಸುವ ನಾವು ಆತನ ದಿನನಿತ್ಯದ ಜೀವನದ ಜಂಜಾಟಗಳಿಗೆ ಎಂದೂ ಕಿವಿಯಾಗುವುದಿಲ್ಲ. ಅಕಾಲಿಕವಾಗಿ ಕಾಲವಾದಾಗ ಕರುಣೆ ತೋರುವವರಿಗೆ ಆತನ ಬದುಕಿನ ಸಂಕಷ್ಟಗಳ ಅರಿವಿರುವುದಿಲ್ಲ. ಕಂಫರ್ಟ್ ಜೋನ್ ಕವಿ ಸಾಹಿತಿಗಳಿಗಂತೂ ಆನಂದನಂತವರ ಬಾಧೆ ಬವಣೆ ಅರ್ಥವಾಗುವುದಿಲ್ಲ.

ನಾಲ್ಕು ವರ್ಷಗಳ ಹಿಂದೆ ಅದೊಂದು ಮಧ್ಯರಾತ್ರಿ ಫೋನ್ ಮಾಡಿದ ಆನಂದ ತನ್ನೆಲ್ಲಾ ದುಗುಡ ದುಮ್ಮಾನಗಳನ್ನು ಎಳೆಎಳೆಯಾಗಿ ಬಿಚ್ಚಿಡ ತೊಡಗಿದ. “ಬೆಂಗಳೂರಿಗೆ ಬಂದುಬಿಡು ಎಲ್ಲಿಯಾದರೂ ಒಂದು ನೌಕರಿಗೆ ವ್ಯವಸ್ಥೆ ಮಾಡುವೆ” ಎಂದು ಹೇಳಿದೆ. “ಯಾವನಿಗೆ ಬೇಕು ಸರ್ ಗುಲಾಮಗಿರಿ ಕೆಲಸ.. ನನ್ನಿಷ್ಟದಂತೆ ನಾನಿರುವುದೇ ನನಗಿಷ್ಟ” ಎಂದು ನಿರಾಕರಿಸಿದ. ಆ ನಂತರವೂ ಹಲವಾರು ಬಾರಿ ನನ್ನ ಲೇಖನ ಓದಿ ಹೊತ್ತುಗೊತ್ತಿಲ್ಲದ ಸಮಯದಲ್ಲಿ ಕಾಲ್ ಮಾಡಿ ತನ್ನ ಮೆಚ್ಚುಗೆ ಸೂಚಿಸುವ ನೆಪದಲ್ಲಿ ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದ. ಅಮಲಿನಲ್ಲೂ ಅರಿವು ಮೂಡಿಸುವ ನುಡಿಗಳನ್ನಾಡುತ್ತಿದ್ದ.

ಯಾರಿಗೂ ಸುಲಭಕ್ಕೆ ಅರ್ಥವಾಗದ ಇಂತಹ ವಿಕ್ಷಿಪ್ತ ವ್ಯಕ್ತಿಗಳು ಇರುವುದೇ ಹೀಗೆ. ಅವರನ್ನು ಅರಿಯಲು ಹೋದಷ್ಟೂ ಜಾರಿಕೊಳ್ಳುತ್ತಾ ದೂರಾಗುತ್ತಾರೆ. ಎಂದೂ ನಿಂತ ನೀರಾಗ ಬಯಸದೇ ಅಂತರಗಂಗೆಯಾಗಿ ಹರಿಯುವ ನದಿಯಾಗುತ್ತಾರೆ. ಯಾವುದೋ ಒಂದು ಚೌಕಟ್ಟಿನಲ್ಲಿ ಬಂಧಿಸಲು ಬಯಸಿದಷ್ಟೂ ಅದರಿಂದ ಬಿಡುಗಡೆಗೆ ಹಾತೊರೆಯುತ್ತಾರೆ. ನಾಗರೀಕ ಸಮಾಜದೊಳಗಿನ ಅಸಮಾನತೆಯ ವೃಣಗಳಿಗೆ ಅಕ್ಷರಗಳಲ್ಲಿ ಔಷಧಿ ಹುಡುಕುತ್ತಲೇ ಕೆಲವೊಮ್ಮೆ ತಾವೇ ರೋಗಗ್ರಸ್ತರೂ ಆಗುತ್ತಾರೆ.

ಲಕ್ಕೂರಿನ ಆನಂದ ಎಂದೂ ಆನಂದವಾಗಿರದ ಅತೃಪ್ತ ಆತ್ಮದಂತಿದ್ದ. ಆ ಅತೃಪ್ತಿಯೇ ಆತನ ಕಾವ್ಯದ ಶಕ್ತಿಯಾಗಿತ್ತು. ಬದುಕಿನ ತಲ್ಲಣ ತಳಮಳಗಳೇ ಕಾವ್ಯದ ರೂಪ ಪಡೆಯುತ್ತಿದ್ದವು. ಸಾಂಪ್ರದಾಯಿಕ ಕಾವ್ಯಲೋಕದ ಪ್ರಾಸಬಂಧಗಳ ಮೀರಿದ ಆತನ ಕವಿತೆಗಳು ಅತ್ಯಂತ ಸರಳ ನಿರೂಪಣೆಯಲ್ಲಿ ಓದುಗರ ಮನ ಮುಟ್ಟುವಂತದ್ದಾಗಿದ್ದವು. ಎಷ್ಟೋ ಕವಿತೆಗಳಲ್ಲಿ ಓದುಗರಿಗೆ ಅವರ ಅಂತರಂಗವನ್ನೇ ತೆರೆದಿಟ್ಟಂತೆ ಭಾಸವಾಗುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಅನುಭವಗಳಿಗೆ ಮುಖಾಮುಖಿಯಾದ ಈ ಕವಿಮಿತ್ರ ನ ವಿಭಿನ್ನ ಆಲೋಚನೆಗಳು ಅಚ್ಚರಿದಾಯಕವಾಗಿದ್ದವು. ಆತನ ಕಾವ್ಯ ಕಟ್ಟುವಿಕೆಯೂ ಸಹ ಭಿನ್ನ ಅನುಭವವನ್ನು ಕಟ್ಟಿಕೊಟ್ಟಿದ್ದವು. 

ಎಲ್ಲರಂತಲ್ಲದ ಆನಂದನ ಬದುಕು. ಬಡತನದಲ್ಲಿ ನರಳಿದಷ್ಟೂ ಆತನ ಕಾವ್ಯ ಶ್ರೀಮಂತಿಕೆಯಿಂದ ನಳನಳಿಸುತ್ತಿತ್ತು. ಹಣತೆಯ ಬತ್ತಿಯಂತೆ ತನ್ನನ್ನು ತಾನು ಸುಟ್ಟುಕೊಂಡು ಕಾವ್ಯದ ಬೆಳಕನ್ನು ಕಟ್ಟಿ ಕೊಟ್ಟ ಈ ಕವಿ ತನ್ನ ಹಣತೆ ಉರಿಯಲು ಎಣ್ಣೆಯ ಬದಲು ಸರಾಯಿಯನ್ನೇ ಬಳಸಿದ್ದು ಆತನ ದುರಂತ ಅಂತ್ಯಕ್ಕೆ ಕಾರಣವಾಗಿದ್ದು ಸತ್ಯ.

ಈ ಕವಿಮಿತ್ರ ಪ್ರೀತಿಯಿಂದ ಕಳಿಸಿದ್ದ ಆತನ ಕವಿತೆಯ ಸಂಕಲನ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಹಾಗಾಗಿ ಪತ್ರಕರ್ತರಾದ ಬಿ.ಎಂ.ಬಷೀರ್ ರವರು ತಮ್ಮ ಫೆಸ್ಬುಕ್ ನಲ್ಲಿ ಹಾಕಿದ್ದ ಲಕ್ಕೂರು ಆನಂದರ ಕವಿತೆಯನ್ನು ಕಾಪಿ ಪೇಸ್ಟ್ ಮಾಡಿದ್ದೇನೆ. ಆತನ ಕಾವ್ಯ ಶೈಲಿ ಹಾಗೂ ಕವಿತೆ ಕಟ್ಟುವ ಒಂದು ಮಾದರಿಯಾಗಿ ಈ ಕವಿತೆ ಮೂಡಿ ಬಂದಿದೆ. 

ಕೊನೆಯ ಸಾರಿ

ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:
ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ

ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,

ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…
ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?

ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!
ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.

ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!

ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಪ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ..

(ಲಕ್ಕೂರ್ ಆನಂದ್)

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article