ಲಾಹೋರ್‌ಗೆ ಹೋಗಿ ಅಂದಿನ ಪ್ರಧಾನಿ ನವಾಜ್ ಶರೀಫ್ ಭೇಟಿ ಮಾಡಿದ್ದು ಏಕೆ?: ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್‌ ಸವಾಲು

Most read

ನವದೆಹಲಿ: 2008ರ ನವೆಂಬರ್‌ 26ರಂದು ಮುಂಬೈನಲ್ಲಿ ನಡೆದ ದಾಳಿಯ ನಂತರ ಒಬ್ಬ ಉಗ್ರನನ್ನು ಬಂಧಿಸಿ ಉಳಿದ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಆಗ ಇಡೀ ಜಗತ್ತು ಭಾರತದ ಕ್ರಮವನ್ನು ಬೆಂಬಲಿಸಿತ್ತು. ಆದರೆ ಪಹಲ್ಗಾಮ್‌ ದಾಳಿಯ ನಂತರ ಭಯೋತ್ಪಾದಕರು ಇನ್ನೂ ದೊಡ್ಡ ಸಂಖ್ಯೆಯಲ್ಲೇ ಉಳಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಬೆಂಬಲ ಕೋರಿ ವಿದೇಶಗಳಿಗೆ ನಿಯೋಗ ಕಳುಹಿಸಲು ಸಿದ್ಧತೆ ನಡೆಸಿದೆ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕೇಂದ್ರ ಸರ್ಕಾರವನ್ನು ಟೀಕಿಸಲು ಬಳಸುವ ಶಕ್ತಿಯನ್ನು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಹೇಳಿಕೆ ನೀಡಲು ಬಳಸಿ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಡಿರುವ ಟೀಕೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.

ಮೊಹಮ್ಮದ್‌ ಅಲಿ ಜಿನ್ನಾಗೆ ಕ್ಲೀನ್ ಚಿಟ್‌ ನೀಡಿದವರು ಹಾಗೂ ಹೊಗಳಿದವರು ಯಾರು? ಜಿನ್ನಾರನ್ನು ‘ಮಹಾನ್‌ ನಾಯಕ’ ಎಂದು ಜಸ್ವಂತ್ ಸಿಂಗ್ ಮತ್ತು ಎಲ್‌.ಕೆ. ಅಡ್ವಾಣಿ ಬಣ್ಣಿಸಿದ್ದೇಕೆ? ವಾಜಪೇಯಿ ಅವರು ಲಾಹೋರ್ ಯಾತ್ರೆ ನಡೆಸಿದ್ದು ಏಕೆ? ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ಭೇಟಿ ನೀಡಿ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನಿಶಾನ್ ಎ ಪಾಕಿಸ್ತಾನ್‌’ ಪ್ರದಾನ ಮಾಡಿದಾಗ ಮೊರಾರ್ಜಿ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅವರಲ್ಲವೇ? ಏ. 22ರ ಪಹಲ್ಗಾಮ್ ದಾಳಿ ನಡೆದು ತಿಂಗಳು ಕಳೆದರೂ ದಾಳಿಕೋರರನ್ನು ಏಕೆ ಬಂಧಿಸಿಲ್ಲ ಎಂದು ಜೈರಾಮ್ ಸರಣಿ ಪ್ರಶನೆಗಳನ್ನು ಕೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಭಯೋತ್ಪಾದಕರು ಏ. 22ರಂದು ದಾಳಿ ನಡೆಸಿ 26 ಪ್ರವಾಸಿಗರನ್ನು ಅವರ ಕುಟುಂಬ ಸದಸ್ಯರ ಎದುರೇ ಕೊಂದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿತ್ತು. ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಘರ್ಷ ಹಾಗೂ ಸೇನಾ ಸಂಘರ್ಷಗಳೂ ನಡೆಯುತ್ತಲೇ ಬಂದವು. ಮೇ 10ರಂದು ಕದನ ವಿರಾಮ ಘೋಷಣೆಯಾಗಿತ್ತು.

ಈ ಘಟನಾವಳಿಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ ಸಮರಕ್ಕೆ ಕಾರಣವಾಗಿವೆ. ವಿದೇಶಗಳಿಗೆ ಸಂಸದರ ನಿಯೋಗ ಕಳುಹಿಸಲು ಹಾಗೂ ತಮ್ಮ ಪಕ್ಷದ ಸಂಸದರ ಹೆಸರುಗಳನ್ನು ಶಿಫಾರಸು ಮಾಡಲು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾಂಗ್ರೆಸ್‌ಗೆ ಸೂಚಿಸಿತ್ತು. ಕಾಂಗ್ರೆಸ್ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌ ಮತ್ತು ರಾಜ್‌ ಬ್ರಾರ್‌ ಅವರ ಹೆಸರುಗಳನ್ನು ಶಿಪಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಹೆಸರುಗಳನ್ನು ಕೈಬಿಟ್ಟು, ಶಶಿ ತರೂರ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್‌ ಕೋಪಕ್ಕೆ ಕಾರಣವಾಗಿತ್ತು.

More articles

Latest article