ಕೆ.ಆರ್.ನಗರ: ಪುತ್ರ ಪ್ರಜ್ವಲ್ ಕಾಮಕಾಂಡದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.
ಸಂತ್ರಸ್ಥೆಯ ಪುತ್ರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ ಐಆರ್ ದಾಖಲಾಗಿದೆ.
ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇ.ಆರ್.ನಗರ ಪೊಲೀಸರು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಜಾಮೀನು ರಹಿತ ಪ್ರಕರಣವಾದ್ದರಿಂದ ಎಚ್.ಡಿ.ರೇವಣ್ಣ ಕೂಡ ಬಂಧನಕ್ಕೆ ಒಳಗಾಗುವ ಸಾಧ್ಯೆ ಇದೆ.
ಬಂಧನ ಭೀತಿಗೆ ಸಿಲುಕಿರುವ ರೇವಣ್ಣ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣದ ಪ್ರಕರಣದಲ್ಲಿ ದೂರು ನೀಡಿದ್ದ ಸಂತ್ರಸ್ತೆ ಅಪಹರಣವಾಗಿದ್ದು ಆಕೆಯನ್ನು ರೇವಣ್ಣ ಕುಟುಂಬವೇ ಅಪಹರಿಸಿದೆ ಎಂದು ಸಂತ್ರಸ್ತೆಯ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಮುಕ ಪ್ರಜ್ವಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಕೆ.ಆರ್ ನಗರದ ಸಂತ್ರಸ್ತ ಮಹಿಳೆ ಮಾಜಿ ಸಚಿವ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಇದೀಗ, ಆಕೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಮಗ ರಾಜು ಎಂಬವರು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏಪ್ರಿಲ್ 29ರಂದು ಮನೆಗೆ ಬಂದಿದ್ದ ಎಚ್.ಡಿ.ರೇವಣ್ಣ ಅವರ ಸಹಚರ ಸತೀಶ್ ಬಾಬಣ್ಣ ಎಂಬಾತ ‘ರೇವಣ್ಣ ಅವರು ನಿಮ್ಮನ್ನ ಬರಲು ಹೇಳಿದ್ದಾರೆಂದು’ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಸಂತ್ರಸ್ತೆಯ ಮಗ ದೂರಿನಲ್ಲಿ ವಿವರಿಸಿದ್ಧಾರೆ.