ಕಲಬುರಗಿ: ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರು ಇಂದು ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಕುರಿತು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರ ದೇಶದ ಹಿತದೃಷ್ಟಿಯಿಂದ ಯಾವುದೇ ಕ್ರಮ ಅಥವಾ ನಿರ್ಧಾರ ಕೈಗೊಂಡರೂ ನಾವು ಬೆಂಬಲಿಸುತ್ತೇವೆ. ಆದರೆ ಅವರು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಕೇವಲ ರಾಜಕೀಯ ಭಾಷಣ ಮಾಡಿಕೊಂಡು ಕಾಲಹರಣ ಮಾಡಿದರೆ ಪ್ರಯೋಜನವಿಲ್ಲ. ನಮ್ಮ ದೇಶದವರನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಆಗಬಾರದು. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಬೆಂಬಲ ಕೊಟ್ಟಿದ್ದೇವೆ. ದೇಶದ ಹಿತದೃಷ್ಟಿಯಿಂದ ಯಾವುದೇ ಕ್ರಮ ಕೈಗೊಂಡರೂ ಬೆಂಬಲ ಇದ್ದೇ ಇರುತ್ತದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಪಹಲ್ಗಾಮ್ ದಾಳಿ ನಡೆದು ಹಲವು ದಿನಗಳೇ ಕಳೆದರೂ ಆ ದಾಳಿಯ ನಂತರದ ಪರಿಣಾಮಗಳನ್ನು ಎದುರಿಸಲು ಸರ್ಕಾರದಲ್ಲಿ ಯಾವುದೇ ಸ್ಪಷ್ಟ ಕಾರ್ಯತಂತ್ರ ಇರುವುದು ಕಂಡುಬರುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಶುಕ್ರವಾರ ಖರ್ಗೆ ಆಪಾದಿಸಿದ್ದರು. ಪಾಕಿಸ್ತಾನಕ್ಕೆ ಪಾಠ ಕಲಿಸಲು ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಒಂದು ರಾಷ್ಟ್ರವಾಗಿ ನಮ್ಮ ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಸಮಯ ಇದು. ಹೇಡಿತನದ ದಾಳಿಯ ಸೂತ್ರಧಾರಿಗಳು ಮತ್ತು ಅಪರಾಧಿಗಳು ತಮ್ಮ ಕ್ರಿಯೆಗಳಿಗೆ ಸಂಪೂರ್ಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು.
ಜಾತಿಗಣತಿ ಮಾಡಲು ಒತ್ತಾಯಿಸಿದಾಗ ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಈಗ ಅವರೇ, ಜಾತಿ ಮತ್ತು ಜನಗಣತಿ ಮಾಡಲು ಹೊರಟಿದ್ದಾರೆ. ಇದು ಬಿಹಾರ ಚುನಾವಣೆ ಗಿಮಿಕ್ ಇದ್ದರೂ ಇರಬಹುದು. ಆ ಕುರಿತು ಮಾತನಾಡುವುದಿಲ್ಲ. ಆದರೆ ದುರುದ್ದೇಶದಿಂದ ನಡೆದುಕೊಂಡರೆ ಸಹಿಸುವುದಿಲ್ಲ ಎಂದು ಖರ್ಗೆ ಖಡಕ್ ಎಚ್ಚರಿಕೆ ನೀಡಿದರು.