ಬೆಂಗಳೂರು: ಮೊಬೈಲ್ ನಲ್ಲಿ ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕೇರಳ ತ್ರಿಶೂರ್ ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ತ್ರಿಶೂರ್ ನ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಬಂಧಿತ ಆರೋಪಿ. ಲೈಂಗಿಕ ಕಿರುಕುಳ ದಾಖಲಾಗುತ್ತಿದ್ದಂತೆ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ನಗರದ ಮಹಿಳೆಯೊಬ್ಬರು ತನಗೆ ಮಾಟಮಂತ್ರ ಮಾಡಿಸಿದ್ದಾರೆಂದು ಭಯಪಟ್ಟುಕೊಂಡು ಪರಿಹಾರಕ್ಕೆ ಪೆರಿಗೊಟ್ಟುಕ್ಕಾರ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಅರುಣ್ ಪರಿಚಯವಾಗಿತ್ತು. ರೂ. 24,000 ಕೊಟ್ಟರೆ ಪೂಜೆ ಮಾಡುವುದಾಗಿ ಅರುಣ್ ತಿಳಿಸಿದ್ದ.
ನಂತರ ಮಹಿಳೆಯ ಮೊಬೈಲ್ ನಂಬರ್ ಪಡೆದು ತಾನು ಹೇಳಿದ ದಿನ ಬರುವಂತೆ ಸೂಚಿಸಿದ್ದ. ಇದಾದ ಬಳಿಕ ಮಹಿಳೆಗೆ ತಡರಾತ್ರಿಯಲ್ಲಿ ವಾಟ್ಸಾಪ್ ಕರೆ ಮಾಡಿ ತೊಂದರೆ ನೀಡುತ್ತಿದ್ದ. ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡಿ ನೀನೂ ಬೆತ್ತಲಾಗಬೇಕು ಎಂದು ಪೀಡಿಸುತ್ತಿದ್ದ.
ಮಹಿಳೆ ಇದನ್ನು ನಿರಾಕರಿಸಿದಾಗ ಬೆತ್ತಲಾಗದಿದ್ದರೆ ಮರುಪೂಜೆ ಮಾಡಿ ನಿನ್ನ ಮಕ್ಕಳು ಸಾಯುವ ಹಾಗೆ ಪೂಜೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅರ್ಚಕನ ಬೆದರಿಕೆಯಿಂದ ಕಂಗಾಲಾದ ಮಹಿಳೆ ಬೆತ್ತಲಾಗಿದ್ದಳು. ಬಳಿಕ ಬೆತ್ತಲೆ ಆಗಿರುವದನ್ನು ಅರ್ಚಕ ಅರುಣ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವಿಡಿಯೋ ಇಟ್ಟುಕೊಂಡು ಕರೆದಾಗಲೆಲ್ಲ ಕೇರಳಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಅರ್ಚಕ ಅರುಣ್ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅರುಣ್ ನನ್ನು ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.