ಪಕ್ಷದೊಳಗಿನ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಕವಿತಾ ರೆಡ್ಡಿಗೆ ಕೆಪಿಸಿಸಿ ನೋಟಿಸ್

Most read

ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಅಸಮಾನತೆ ಬಗ್ಗೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಕವಿತಾ ರೆಡ್ಡಿಗೆ ನೋಟಿಸ್‌ ನೀಡಿದೆ.

ಈ ಕುರಿತು ನೋಟಿಸ್‌ ಹೊರಡಿಸಿರುವ ಕೆಪಿಸಿಸಿ ಚೇರ್ಮನ್‌ ರೆಹಮಾನ್‌ ಖಾನ್, ʼಪಕ್ಷದ ನಿರ್ಣಯಗಳ ಮತ್ತು ಆಯ್ಕೆಗಳ ವಿಚಾರದಲ್ಲಿ ಪ್ರತೀ ಭಾರಿ ಕೂಡ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಾ ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿರುವ ಬಗ್ಗೆ ನಿಮ್ಮ ಮೇಲೆ ಕೆಪಿಸಿಸಿಗೆ ಹಲವು ದೂರುಗಳು ಬಂದಿರುತ್ತವೆ. ಈ ಹಿಂದೆಯೂ ಕೂಡ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಾಗ ತಮಗೆ ನೋಟಿಸ್ ನೀಡಲಾಗಿತ್ತು ಮತ್ತು ಮೌಖಿಕವಾಗಿ ಇನ್ನು ಮುಂದೆ ಈ ರೀತಿಯಾಗಿ ಬಹಿರಂಗವಾಗಿ ಹೇಳಿಕೆಯನ್ನು ನೀಡಬಾರದೆಂದು ಸಲಹೆ ನೀಡಲಾಗಿತ್ತು.  ಆದರೆ, ತಾವು ಪದೇ ಪದೇ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ಹಾಗು ಬರಹಗಳನ್ನು ಬರೆಯುವುದನ್ನು ಮುಂದುವರೆಸಿದ್ದು,  ತಮ್ಮನ್ನು ಪಕ್ಷದಿಂದ ಯಾಕೆ ಉಚ್ಚಾಟಣೆ ಮಾಡಬಾರದೆಂಬುದರ ಬಗ್ಗೆ ತಮ್ಮ ವಿವರಣೆಯನ್ನು ಕೆಪಿಸಿಸಿ ಶಿಸ್ತು ಸಮಿತಿಯು ಬಯಸುತ್ತದೆ, ತಾವು ಈ ನೋಟಿಸು ತಲುಪಿದ 7 ದಿನಗಳಲ್ಲಿ ತಮ್ಮ ವಿವರಣೆಯನ್ನು ಕೆಪಿಸಿಸಿ ಶಿಸ್ತು ಸಮಿತಿಗೆ ನೀಡಬೇಕೆಂದು ಈ ಮೂಲಕ ಸೂಚಿಸಲಾಗಿದೆʼ ಎಂದು ತಿಳಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿಗೆ ಪ್ರಾಮುಖ್ಯತೆ ಕೊಟ್ಟಿದ್ದನ್ನು ಕವಿತಾ ರೆಡ್ಡಿ ಇತ್ತೀಚೆಗೆ ಖಂಡಿಸಿದ್ದರು. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಹಾಗೂ ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಈ ನಡುವೆ ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಗೇ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿ, ಇದಕ್ಕೆ ಸಂಬಂಧಿಸಿದಂತೆ ಒಂದು ಪಟ್ಟಿ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್‌ನಲ್ಲಿ ಮೇಲ್ಜಾತಿಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ, ಈ ಮೂಲಕ ಪಕ್ಷದಲ್ಲಿ ಸಾಮಾಜಿಕ ನ್ಯಾಯವನ್ನು ಪಾಲನೆ ಮಾಡಿಲ್ಲ ಎಂದು ಎಂದು ಕವಿತಾ ರೆಡ್ಡಿ ಅಸಮಾಧಾನ ಹೊರಹಾಕಿದ್ದರು.

ಈ ಹಿನ್ನಲೆಯಲ್ಲಿ ಕೆಪಿಸಿಸಿ ನೀಡಿರುವ ನೋಟಿಸ್‌ ಗಮನ ಸೆಳೆದಿದೆ.

More articles

Latest article