ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 28 ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ. ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿದೆ.
ಟಿಆರ್‌ಎಫ್ ಎಂದರೆ ಏನು? ಇದರ ಮುಖ್ಯಸ್ಥ ಯಾರು?
2019ರ ಆಗಸ್ಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ರಚನೆಯಾಗಿದ್ದೇ ದಿ ರೆಸಿಸ್ಟೆನ್ಸ್ ಫ್ರಂಟ್. ಸಂಕ್ಷಿಪ್ತವಾಗಿ ಟಿ ಆರ್ ಎಫ್ ಎಂದು ಕರೆಯಲಾಗುತ್ತದೆ. ಲಷ್ಕರ್-ಎ-ತೈಬಾದ ಒಂದು ಶಾಖೆ ಎಂದು ನಂಬಲಾಗಿದೆ. ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಟಿ ಆರ್ ಎಫ್ ರಚನೆಯಾಗಿದೆ ಎಂದು ನಂಬಲಾಗಿದೆ.
ಅಕ್ಟೋಬರ್ 2019ರಲ್ಲಿ ಸ್ಥಾಪನೆಯಾದ ಈ ಗುಂಪನ್ನು ಶೇಖ್ ಸಜ್ಜದ್ ಗುಲ್ ಎಂಬಾತ ಸುಪ್ರೀಂ ಕಮಾಂಡರ್ ಆಗಿ ಮುನ್ನಡೆಸುತ್ತಿದ್ದಾನೆ. ಬಾಸಿತ್ ಅಹ್ಮದ್ ದಾರ್ ಎಂಬಾತ ಇದರ ಮುಖ್ಯ ಕಮಾಂಡರ್ ಆಗಿದ್ದಾನೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967ರ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ 2023ರ ಜನವರಿಯಲ್ಲಿ TRF ಮತ್ತು ಅದರ ಎಲ್ಲಾ ಸಹ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಟಿಸಿದೆ.